ತಿರುವನಂತಪುರಂ: ಮಲಯಾಳಂ ಸಿನಿಮಾರಂಗದ ಹಿರಿಯ ನಟ ಮಾಮುಕ್ಕೋಯ ಜನರ ಸಮ್ಮುಖದಲ್ಲೇ ಕುಸಿದು ಬಿದ್ದಿರುವ ಘಟನೆ ಸೋಮವಾರ ಸಂಜೆ (ಎ.24 ರಂದು) ನಡೆದಿದೆ.
ಮಲಪ್ಪುರಂಗೆ ಫುಟ್ ಬಾಲ್ ಪಂದ್ಯಾಕೂಟವೊಂದನ್ನು ಉದ್ಘಾಟನೆ ಮಾಡಲು ಬಂದಿದ್ದ ವೇಳೆ ಈ ಘಟನೆ ನಡೆದಿದೆ. ಪಂದ್ಯವನ್ನು ಉದ್ಘಾಟನೆ ಮಾಡಿದ ನಟ ಮಾಮುಕ್ಕೋಯ ಅವರನ್ನು ನೋಡಲು, ಅವರೊಂದಿಗೆ ಸೆಲ್ಫಿ ತೆಗೆಯಲು ಜನ ಮುಗಿಬಿದ್ದಿದ್ದಾರೆ. ಈ ವೇಳೆ ಅವರು ಜನಸಂದಣಿಯ ನಡುವೆಯೇ ಕುಸಿದು ಬಿದ್ದಿದ್ದಾರೆ ಎಂದು ವರದಿ ತಿಳಿಸಿದೆ.
ಕೂಡಲೇ ಅವರನ್ನು ಕೋಝಿಕ್ಕೋಡ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದು ಬಂದಿದೆ.
ಸಿನಿಮಾರಂಗಕ್ಕೆ ಬರುವ ಮುನ್ನ ರಂಗಭೂಮಿ ಕಲಾವಿದರರಾಗಿದ್ದರು. 450 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಅವರು, ʼಪೆರುಮಝಕ್ಕಲಂʼ ಮತ್ತು ʼಇನ್ನತೆ ಚಿಂತ ವಿಷಯಂʼ ಚಿತ್ರಕ್ಕಾಗಿ ಎರಡು ಕೇರಳ ರಾಜ್ಯ ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ʼಫ್ಲಾಮೆನ್ ಇಮ್ ಪ್ಯಾರಡೀಸ್ʼ ಎಂಬ ಸ್ವಿಸ್ ಚಿತ್ರದಲ್ಲೂ ಅವರು ನಟಿಸಿದ್ದಾರೆ.
ಅವರಿಗೆ ಹೃದಯಾಘಾತವಾಗಿದೆ ಎಂದು ಸುದ್ದಿಗಳು ಹಬ್ಬಿತ್ತು. ಆದರೆ ಇದರ ಬಗ್ಗೆ ಅಧಿಕೃತವಾಗಿ ಏನೂ ತಿಳಿದುಬಂದಿಲ್ಲ.