ಹೊಸದಿಲ್ಲಿ: ಹಿರಿಯ ಪತ್ರಕರ್ತ ಕುಲದೀಪ್ ನಯ್ಯರ್ ಅವರು ಗುರುವಾರ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು.
ವಾರ್ಧಕ್ಯದ ಕಾರಣದಿಂದ ತೀವ್ರವಾಗಿ ಬಳಲಿದ್ದ ನಯ್ಯರ್ ಅವರನ್ನು ದೆಹಲಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಇಹಲೋಕ ತ್ಯಜಿಸಿದ್ದಾರೆ ಎಂದು ತಿಳಿದು ಬಂದಿದೆ.
ಅತ್ಯುತ್ತಮ ಬರಹಗಾರರಾಗಿದ್ದ ಕುಲದೀಪ್ ನಯ್ಯರ್ ಅವರು ಮಾನವ ಹಕ್ಕುಗಳ ಹೋರಾಟಗಾರರಾಗಿದ್ದರು. ತುರ್ತು ಪರಿಸ್ಥಿತಿ ವೇಳೆ ಹೋರಾಟಕ್ಕಿಳಿದಿದ್ದ ಅವರು ಜೈಲು ಪಾಲಾಗಿದ್ದರು. ತುರ್ತು ಪರಿಸ್ಥಿತಿ ವೇಳೆ ಜೈಲು ಪಾಲಾಗಿದ್ದ ಮೊದಲ ಪತ್ರಕರ್ತ ಕುಲದೀಪ್ ಅವರಾಗಿದ್ದರು.
ನಾಮ ನಿರ್ದೇಶಿತ ಸದಸ್ಯರಾಗಿ ರಾಜ್ಯಸಭೆ ಪ್ರವೇಶಿಸಿದ್ದ ಅವರು ಇಂಗ್ಲೆಂಡ್‌ಗೆ ಭಾರತೀಯ ಹೈ ಕಮಿಷನರ್ ಆಗಿ ಕರ್ತವ್ಯ ನಿರ್ವಹಿಸಿದ್ದರು.
ಭಾರತ ಪಾಕ್ ಶಾಂತಿ ಸಂಬಂಧದ ಕುರಿತಾಗಿ ಆಸಕ್ತಿ ತಳೆದಿದ್ದ ನಯ್ಯರ್ ಅವರು, ಆತ್ಮಚರಿತ್ರೆ ‘ಬಿಯೊಂಡ್ ದಿ ಲೈನ್ಸ್’ ನಲ್ಲಿ ಪಾಕ್‌ನ ಅಣು ವಿಜ್ಞಾನಿ ಅಬ್ದುಲ್ ಖಾದಿರ್ ಖಾನ್ ಅವರೊಂದಿಗಿನ ಸಂದರ್ಶನ ಮತ್ತು ಪಾಕ್ ಮೊದಲು ಅಣ್ವಸ್ತ್ರ ಹೊಂದಿದ್ದ ವಿಷಯವನ್ನು ಬಹಿರಂಗ ಪಡಿಸಿದ್ದರು.
ಇಂದು ಮಧ್ಯಾಹ್ನ 1 ಗಂಟೆಗೆ ದೆಹಲಿಯ ಲೋಧಿ ರುದ್ರ ಭೂಮಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ.
ಕುಲದೀಪ್ ನಯ್ಯರ್ ಅವರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ಗಣ್ಯರು ಸಂತಾಪ ಸೂಚಿಸಿದ್ದಾರೆ.