ಅಹಮದಾಬಾದ್: ಕೋವಿಡ್ ಸೋಂಕಿಗೆ ತುತ್ತಾಗಿದ್ದ ಹಿರಿಯ ಗುಜರಾತಿ ಸ್ಟಾರ್ ನಟ, ರಾಜಕಾರಣಿ ನರೇಶ್ ಕನೋಡಿಯಾ(77ವರ್ಷ) ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ(ಅಕ್ಟೋಬರ್ 27, 2020) ವಿಧಿವಶರಾಗಿರುವುದಾಗಿ ಪಿಟಿಐ ವರದಿ ಮಾಡಿದೆ.
ಗುಜರಾತಿನ ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕನೋಡಿಯಾ ಅವರು ಅಕ್ಟೋಬರ್ 20 ದಾಖಲಾಗಿದ್ದು, ಬೈಪಾಸ್ ಸರ್ಜರಿಗೂ ಮುನ್ನ ನಡೆಸಿದ ಪರೀಕ್ಷೆಯಲ್ಲಿ ಕೋವಿಡ್ 19 ದೃಢಪಟ್ಟಿತ್ತು ಎಂದು ವಿಶ್ರಾಂತ ಆರೋಗ್ಯಾಧಿಕಾರಿ ಕೌಶಿಕ್ ಬಾರೋಟ್ ತಿಳಿಸಿದ್ದಾರೆ.
ಎರಡು ದಿನಗಳ ಮೊದಲು ನರೇಶ್ ಹಿರಿಯ ಅಣ್ಣ, ಗುಜರಾತಿ ಗಾಯಕ ಮಹೇಶ್ ಕನೋಡಿಯಾ ಅವರು ದೀರ್ಘಕಾಲದ ಅನಾರೋಗ್ಯದಿಂದ ನಿಧನರಾಗಿದ್ದರು ಎಂದು ವರದಿ ವಿವರಿಸಿದೆ.
ಹಲವು ದಶಕಗಳ ಕಾಲದ ಬೆಳ್ಳಿಪರದೆಯ ನಟನೆಯಲ್ಲಿ ನರೇಶ್ ಕನೋಡಿಯಾ ಸುಮಾರು 100 ಸಿನಿಮಾಗಳಲ್ಲಿ ಅಭಿನಯಿಸಿದ್ದು, ಸೂಪರ್ ಸ್ಟಾರ್ ಪಟ್ಟ ದಕ್ಕಿಸಿಕೊಂಡಿದ್ದರು. ಸಿನಿಮಾರಂಗದಿಂದ ರಾಜಕೀಯ ಕ್ಷೇತ್ರಕ್ಕೆ ಸೇರ್ಪಡೆಗೊಂಡಿದ್ದ ನರೇಶ್ ಅವರು ಕರ್ಜಾನ್ ಕ್ಷೇತ್ರದಿಂದ ಬಿಜೆಪಿ ಶಾಸಕರಾಗಿ ಆಯ್ಕೆಯಾಗಿದ್ದರು.
ಕನೋಡಿಯಾ ಸಹೋದರರು ಗುಜರಾತಿ ಸಿನಿಮಾರಂಗದಲ್ಲಿನ ಜನಪ್ರಿಯ ಜೋಡಿಯಾಗಿದ್ದರು. ಅಲ್ಲದೇ ಕನೋಡಿಯಾ ಸಹೋದರರು ಭಾರತ ಹಾಗೂ ವಿದೇಶಗಳಲ್ಲಿ ಹಲವಾರು ಕಾರ್ಯಕ್ರಮಗಳನ್ನು ನೀಡಿ ಜನರನ್ನು ರಂಜಿಸಿದ್ದರು.