ಹೊಸದಿಲ್ಲಿ : ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಪ್ರಿಯರಂಜನ್ ದಾಸ್ ಮುನ್ಶಿ ಅವರು ಎಂಟು ವರ್ಷಗಳ ಕಾಲ ಕೋಮಾದಲ್ಲಿದ್ದು ಇಂದು ಸೋಮವಾರ ತಮ್ಮ 72ರ ಹರೆಯದಲ್ಲಿ ನಿಧನ ಹೊಂದಿದರು.
ಮಾಜಿ ಸಂಸದ ಮತ್ತು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ದಾಸ್ ಮುನ್ಶಿ ಅವರಿಗೆ ಎಂಟು ವರ್ಷಗಳ ಹಿಂದೆ ಸ್ಟ್ರೋಕ್ ಮತ್ತು ಪ್ಯಾರಾಲಿಟಿಕ್ ಅಟ್ಯಾಕ್ ಆಗಿತ್ತು.
ದಾಸ್ ಮುನ್ಶಿ ಅವರು ಪಶ್ಚಿಮ ಬಂಗಾಲದ ರಾಯಗಂಜ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಅವರು 1970 ರಿಂದ 1971ರ ವರೆಗೆ ಪಶ್ಚಿಮ ಬಂಗಾಲ ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು.
ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಆಡಳಿತೆಯಲ್ಲಿ ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿದ್ದ ದಾಸ್ ಮುನ್ಶಿ ಅವರು ಅಶ್ಲೀಲ ಹೂರಣ ಹೊಂದಿವೆ ಎಂಬ ಕಾರಣಕ್ಕೆ ಎಎಕ್ಸ್‌ಎನ್ ಮತ್ತು ಫ್ಯಾಶನ್ ಟಿವಿ ಸೇರಿದಂತೆ ಪಾಶ್ಚಾತ್ಯ ಟಿವಿ ಜಾಲವನ್ನು ನಿಷೇಧಿಸಿದ್ದರು.
ದಾಸ್ ಮುನ್ಶಿ ಅವರು ಪತ್ನಿ ದೀಪಾ ದಾಸ್ ಮುನ್ಶಿ (ಇವರು ಕೂಡ ಕಾಂಗ್ರೆಸ್ ನಾಯಕಿ ಮತ್ತು ಮಾಜಿ ಸಚಿವೆ) ಮತ್ತು ಪುತ್ರ ಪ್ರಿಯದೀಪ್ ದಾಸ್ ಮುನ್ಶಿ ಅವರನ್ನು ಅಗಲಿದ್ದಾರೆ.