ನವದೆಹಲಿ:ಕೋವಿಡ್ 19 ಸೋಂಕಿಗೆ ಮರಾಠಿ ಚಿತ್ರರಂಗದ ಪ್ರಸಿದ್ಧ ನಟಿ ಆಶಾಲತಾ ವಾಬ್ಗಾಂವ್ ಕರ್ (79ವರ್ಷ) ಸತಾರಾ ಆಸ್ಪತ್ರೆಯಲ್ಲಿ ಮಂಗಳವಾರ ವಿಧಿವಶರಾಗಿರುವುದಾಗಿ ವರದಿ ತಿಳಿಸಿದೆ.
ಐಎಎನ್ ಎಸ್ ನ್ಯೂಸ್ ಏಜೆನ್ಸಿ ವರದಿ ಪ್ರಕಾರ, ಕೋವಿಡ್ 19 ಸೋಂಕಿಗೆ ಚಿಕಿತ್ಸೆ ನೀಡಲು ಕಳೆದ ವಾರಾಂತ್ಯದಲ್ಲಿ ನಟಿ ಆಶಾಲತಾ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ವಿವರಿಸಿದೆ.
ಗೋವಾದಲ್ಲಿ ಜನಿಸಿದ್ದ ಆಶಾಲತಾ ಅವರು ಟೆಲಿವಿಷನ್ ಸೀರಿಯಲ್ ನ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಸಂದರ್ಭದಲ್ಲಿ ಕೋವಿಡ್ 19 ಸೋಂಕು ತಗುಲಿತ್ತು ಎಂದು ವರದಿ ವಿವರಿಸಿದೆ.
ನಟಿ ರೇಣುಕಾ ಶಾಹಾನೆ ಟ್ವೀಟರ್ ನಲ್ಲಿ ನಟಿ ಆಶಾಲತಾ ಅವರಿಗೆ ಗೌರವ ಸಲ್ಲಿಸಿದ್ದಾರೆ. ಇಂದು ತುಂಬಾ ಒತ್ತಡದ ದಿನವಾಗಿದೆ. ಕೋವಿಡ್ 19 ಸೋಂಕು ತುಂಬಾ ಸುಂದರವಾದ ಜೀವವನ್ನು ಕಸಿದುಕೊಂಡುಬಿಟ್ಟಿದೆ. ತುಂಬಾ ಸ್ನೇಹಪರ, ಸೂಕ್ಷ್ಮ ಹಾಗೂ ದೊಡ್ಡ ನಟಿಯಾಗಿದ್ದಾರೆ. ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಹಾರೈಸುತ್ತೇನೆ ಎಂಬುದಾಗಿ ರೇಣುಕಾ ಮರಾಠಿಯಲ್ಲಿ ಟ್ವೀಟ್ ಮಾಡಿದ್ದಾರೆ.
ಹಿರಿಯ ನಟಿ ಆಶಾಲತಾ ಅವರ ನಿಧನಕ್ಕೆ ಗೋವಾ ಮಾಜಿ ಮುಖ್ಯಮಂತ್ರಿ ದಿಗಂಬರ್ ಕಾಮತ್ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. ಗೋವಾ ಮೂಲದ ನಟಿ ಆಶಾಲತಾ ವಾಬ್ಗಾಂವ್ ಕರ್ ಅವರ ನಿಧನ ತುಂಬಲಾರದ ನಷ್ಟವಾಗಿದೆ. ರಂಗಭೂಮಿ ಹಾಗೂ ಚಿತ್ರರಂಗದಲ್ಲಿನ ಅವರ ಅದ್ಭುತ ನಟನೆ ಮುಂದಿನ ಪೀಳಿಗೆಗೆ ಮಾದರಿಯಾಗಲಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.