Advertisement

ಬಹುಭಾಷಾ, ಅಭಿಜಾತ ನಟ ಓಂ ಪುರಿ ಹೃದಯಾಘಾತದಿಂದ ವಿಧಿವಶ 

10:11 AM Jan 06, 2017 | |

ಮುಂಬಯಿ : ಭಾರತೀಯ ಚಲನಚಿತ್ರರಂಗದ ಮೇರು ನಟ ಓಂ ಪುರಿ ಅವರು ಶುಕ್ರವಾರ ಬೆಳಗ್ಗೆ ಇಹಲೋಕ ತ್ಯಜಿಸಿದ್ದಾರೆ. ಅವರಿಗೆ 66 ವರ್ಷ ಪ್ರಾಯವಾಗಿತ್ತು. 

Advertisement

ಸ್ವಗೃಹದಲ್ಲಿ  ಹೃದಯಾಘಾತದಿಂದ ಓಂ ಪುರಿ ಅವರು ನಿಧನ ಹೊಂದಿದ್ದಾರೆ ಎಂದು ವರದಿಯಾಗಿದೆ. ಹಿರಿಯ ನಟನ ನಿಧನಕ್ಕೆ ಬಾಲಿವುಡ್‌ನ‌ ಗಣ್ಯರು,ರಾಜಕೀಯ ರಂಗದ ಗಣ್ಯರು ಸೇರಿದಂತೆ ಅಪಾರ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. 

ಹರಿಯಾಣಾದ ಅಂಬಾಲಾದಲ್ಲಿ 18 ಅಕ್ಟೋಬರ್‌ 1950ರಲ್ಲಿ ಜನಿಸಿದ ಓಂ ಪುರಿ ಬಹಭಾಷಾ ನಟರಾಗಿ ಪ್ರಖ್ಯಾತಿ ಗಳಿಸಿದ್ದರು. ಇವರು ಭಾರತೀಯ ಹಲವು ಭಾಷಾ ಹಾಗೂ ಹಲವು ಕಲಾತ್ಮಕ ಚಲನಚಿತ್ರಗಳಲ್ಲಿಯೂ ನಟಿಸಿ ತಾನೊಬ್ಬ ಅತ್ಯದ್ಭುತ ನಟ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಬ್ರಿಟಿಷ್‌ ಹಾಗೂ ಅಮೆರಿಕನ್‌ ಚಲನಚಿತ್ರಗಳಲ್ಲಿಯೂ ಸಹ ಇವರ ಹೆಸರು ಕಾಣಿಸಿಕೊಂಡಿತ್ತು. ಇವರಿಗೆ ಗೌರವಾನ್ವಿತ ಓಬಿಎ (ಆರ್ಡರ್ ಆಫ್ ಬ್ರಿಟಿಶ್ ಎಂಪಾಯರ್ ಪದವಿ)  ಲಭಿಸಿದೆ.

ತಮ್ಮ ಜೀವನದ ಆರಂಭಿಕ ವರ್ಷಗಳನ್ನು, ಪಂಜಾಬ್ ರಾಜ್ಯದ ಪಟಿಯಾಲಾ ಜಿಲ್ಲೆಯ ಸನೌರ್‌ನಲ್ಲಿದ್ದ ತಮ್ಮ ಸೋದರಮಾವನವರೊಂದಿಗೆ ಕಳೆದರು. ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ಶಿಕ್ಷಣ ಸಂಸ್ಥೆಯಿಂದ ಅವರು ಪದವಿ ಪಡೆದರು. ರಾಷ್ಟ್ರೀಯ ನಾಟಕ ಶಾಲೆಯಿಂದ 1973ರಲ್ಲಿ ತೇರ್ಗಡೆಯಾಗಿದ್ದರು. ಅಲ್ಲಿ  ಮೇರು  ನಟ ನಸೀರುದ್ದೀನ್‌ ಷಾ ಇವರ ಸಹಪಾಠಿಯಾಗಿದ್ದರು. 1976 ರಲ್ಲಿ  ಮರಾಠಿ ಚಿತ್ರ ಘಾಷಿರಾಮ್ ಕೋತ್ವಾಲ್ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. 

ಪಂಜಾಬಿ ಚಲನಚಿತ್ರಗಳಲ್ಲಿಯೂ ಸಕ್ರಿಯರಾಗಿದ್ದ ಪುರಿ  1980ರ ದಶಕದಲ್ಲಿ ಬಹಳಷ್ಟು ಯಶಸ್ವಿಯಾದ ಛನ್‌ ಪರದೇಸಿ (1980) ಮತ್ತು ಲಾಂಗ್‌ ದಾ ಲಿಷ್ಕಾರಾ (1986) ಎಂಬ ಎರಡು ಪಂಜಾಬಿ ಚಲನಚಿತ್ರಗಳಲ್ಲಿ ನಟಿಸಿದ್ದರು. ಹತ್ತೊಂಬತ್ತು ವರ್ಷಗಳ ನಂತರ, 2005ರಲ್ಲಿ ಬಾಘಿ ಎಂಬ ಚಲನಚಿತ್ರದಲ್ಲಿ ನಟಿಸುವುದರೊಂದಿಗೆ ಪುರಿ ಪಂಜಾಬಿ ಚಲನಚಿತ್ರರಂಗಕ್ಕೆ ಮರಳಿದ್ದರು. ಗುರುದಾಸ್‌ ಮಾನ್‌ ನಿರ್ದೇಶನದ, 2008ರಲ್ಲಿ ತೆರೆಕಂಡ ಯಾರಿಯಾನ್ ‌ ಎಂಬ ಇನ್ನೊಂದು ಪಂಜಾಬಿ ಚಲನಚಿತ್ರದಲ್ಲಿ ಓಂ ಪುರಿ ನಟಿಸಿದ್ದಾರೆ.

Advertisement

 ಹಲವು ವಿಶಿಷ್ಟ ಪಾತ್ರಗಳಲ್ಲಿ ನಟಿಸಿ ಪ್ರಶಂಸೆ ಗಳಿಸಿರುವ  ಓಂ ಪುರಿ  ಆಕ್ರೋಶ್‌ (1980) ಚಲನಚಿತ್ರದಲ್ಲಿ ಅವರದ್ದು ಶೋಷಣೆಗೊಳಗಾದ ಬುಡಕಟ್ಟು ಜನಾಂಗದವರ ಪಾತ್ರ,ಅಲ್ಲಿ  ಯಾವ ಸಂಭಾಷಣೆಯೂ ಇರಲಿಲ್ಲ, ಕೇವಲ ಹಿನ್ನಲೆಯಲ್ಲಿ ತೋರಿಸುವ ಗತಿಸಿದ ಕಥಾಸರಣಿಯಲ್ಲಿ ಮಾತ್ರ ಅವರ ಪಾತ್ರವಿತ್ತು. ಡಿಸ್ಕೊ ಡ್ಯಾನ್ಸರ್‌ (1982) ಚಲನಚಿತ್ರದಲ್ಲಿ ನಾಯಕ ಮಿಥುನ್ ಚಕ್ರವರ್ತಿಯ ಪಾತ್ರವಾಗಿದ್ದ ‘ಜಿಮ್ಮಿ’ಯ ಮ್ಯಾನೇಜರ್‌ ಪಾತ್ರ ನಿರ್ವಹಿಸಿದ್ದರು. ಅದೇ ವರ್ಷ ಬಿಡುಗಡೆಯಾದ ಅರ್ಧ್‌ ಸತ್ಯ ದಲ್ಲಿ, ಜೀವನ ಪರ್ಯಂತ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಶೋಷಣೆಯ ವಿರುದ್ಧ ರೊಚ್ಚಿಗೆದ್ದ ಕೋಪಿಷ್ಟ ಪೊಲೀಸ್‌ ಅಧಿಕಾರಿ ಪಾತ್ರದಲ್ಲಿ ನಟಿಸಿದ್ದಕ್ಕೆ ಓಂ ಪುರಿಗೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ  ಲಭಿಸಿತ್ತು. ಮಾಚಿಸ್‌ (1996) ಚಲನಚಿತ್ರದಲ್ಲಿ ಸಿಖ್‌ ಉಗ್ರವಾದಿಗಳ ನಾಯಕನ ಪಾತ್ರ, 1997ರಲ್ಲಿ ಬಿಡುಗಡೆಯಾದ ವಾಣಿಜ್ಯ ಚಲನಚಿತ್ರ ಗುಪ್ತ್‌ ನಲ್ಲಿ ಪುನಃ ಪೊಲೀಸ್‌ ಅಧಿಕಾರಿಯ ಪಾತ್ರ,  ಧೂಪ್‌ (2003)ನಲ್ಲಿ ವೀರಮರಣ ಹೊಂದಿದ ಸೈನಿಕನೊಬ್ಬನ ಧೀಮಂತ ತಂದೆಯ ಪಾತ್ರದಲ್ಲಿ ಓಂ ಪುರಿ ಮಿಂಚಿದ್ದರು.

ಕನ್ನಡದಲ್ಲೂ ನಟನೆ

ತಬ್ಬಲಿ ನೀನಾದೆ ಮಗನೇ ಚಿತ್ರದ ಮೂಲಕ ಕನ್ನಡ ಚಲನಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಓಂಪುರಿ ಅವರು 
1999ರಲ್ಲಿ ಬಿಡುಗಡೆಯಾಗಿದ್ದ ಶಿವರಾಜಕುಮಾರ್‌ ಅಭಿನಯದ  ಎಕೆ 47 ಚಲನಚಿತ್ರದಲ್ಲಿ ಭೂಗತ ಪಾತಕಿಗಳಿಂದ ನಗರವನ್ನು ಸುರಕ್ಷಿತವಾಗಿರಿಸಲು ಶತಪ್ರಯತ್ನ ಮಾಡುವ ಒಬ್ಬ ಕಟ್ಟುನಿಟ್ಟಾದ ಪೊಲೀಸ್‌ ಅಧಿಕಾರಿಯ ಪಾತ್ರದಲ್ಲಿ ಓಂ ಪುರಿ ನಟಿಸಿ ಕನ್ನಡ ಚಿತ್ರಪ್ರೇಮಿಗಳ ಪ್ರಶಂಸೆ ಗಳಿಸಿದ್ದರು. ದರ್ಶನ್ ಅಭಿನಯದ ಧೃವ, ಸಂತೆಯಲ್ಲಿ ನಿಂತ ಕಬೀರ, ಟೈಗರ್ ಮೊದಲಾದ ಚಿತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು.  ಕನ್ನಡದಲ್ಲಿ ನೀಡಬೇಕಾದ ಸಂಭಾಷಣೆಗಳಿಗೆ ಸ್ವತಃ ಅವರೇ ಕಂಠದಾನ ಮಾಡಿರುವುದು ವಿಶೇಷ. 

ಅಮರೀಶ್‌ ಪುರಿ ಸಹೋದರ ಅಲ್ಲ! 
ದಿವಂಗತ ನಟ ಅಮರೀಶ್‌ ಪುರಿ, ಓಂ ಪುರಿಯವರ ಸಹೋದರ ಎಂಬುದು ವ್ಯಾಪಕ ತಪ್ಪು ತಿಳುವಳಿಕೆಯಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next