Advertisement

‘ನನ್ನ ಪಾತ್ರಗಳನ್ನು ಹೊಸ ಎತ್ತರಕ್ಕೆ ಒಯ್ದಿದ್ದೇ SPB ಅವರ ಧ್ವನಿ’: ಹಿರಿಯ ನಟ ಅನಂತ್ ಕಂಬನಿ

05:01 PM Sep 25, 2020 | Hari Prasad |

ಬೆಂಗಳೂರು: ಬಹುಭಾಷಾ ಹಿನ್ನಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ನಿಧನಕ್ಕೆ ಭಾರತೀಯ ಚಿತ್ರರಂಗವೇ ಕಂಬನಿ ಮಿಡಿಯುತ್ತಿದೆ.

Advertisement

ಕನ್ನಡದಲ್ಲೂ ಎಸ್.ಪಿ.ಬಿ. ಅವರು ಎರಡು ತಲೆಮಾರಿನ ನಾಯಕ ನಟರ ಚಿತ್ರಗಳಲ್ಲಿ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಅವರಲ್ಲಿ, ಡಾ. ವಿಷ್ಣುವರ್ಧನ್, ಅಂಬರೀಷ್, ಶಂಕರ್ ನಾಗ್, ಜೈ ಜಗದೀಶ್, ಅಶೋಕ್, ಶ್ರೀನಾಥ್ ಮತ್ತು ರವಿಚಂದ್ರನ್ ಅವರು ನಟಿಸಿರುವ ಬಹುತೇಕ ಎಲ್ಲಾ ಚಿತ್ರಗಳ ಹಾಡುಗಳಲ್ಲೂ ಎಸ್.ಪಿ.ಬಿ. ಧ್ವನಿಯಿದೆ. ಮತ್ತು ಅವುಗಳಲ್ಲಿ ಹೆಚ್ಚಿನ ಎಲ್ಲಾ ಗೀತೆಗಳು ಇಂದಿಗೂ ಅಜರಾಮರ.

ಆದರೆ ಆ ಸಾಲಿನ ಹಿರಿಯ ನಟರಲ್ಲಿ ಬಾಲು ಅವರ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಳ್ಳಲು ವಿಷ್ಣು, ಅಂಬರೀಷ್ ಮತ್ತು ಶಂಕರ್ ನಾಗ್ ನಮ್ಮ ಜೊತೆಗೆ ಇಂದು ಇಲ್ಲ. ಇದೀಗ ಎಸ್.ಪಿ.ಬಿ ಮತ್ತು ತಮ್ಮ ನಡುವಿನ ಒಡನಾಟವನ್ನು ಹಿರಿಯ ನಟ ಅನಂತ್ ನಾಗ್ ಅವರು ‘ಉದಯವಾಣಿ’ ಜೊತೆ ದೂರವಾಣಿ ಸಂಭಾಷಣೆ ಮೂಲಕ ಹಂಚಿಕೊಂಡಿದ್ದಾರೆ. ಅದರ ಅಕ್ಷರ ರೂಪ ಇಲ್ಲಿದೆ.

ಇದನ್ನೂ ಓದಿ: ಫಲಿಸದ ಅಭಿಮಾನಿಗಳ ಹಾರೈಕೆ ; ಗಾನ ನಿಧಿ ಎಸ್.ಪಿ. ಬಾಲಸುಬ್ರಮಣ್ಯಂ ಸ್ವರ ಲೀನ

Advertisement

‘‘ಹಂಸಗೀತೆ’ ಎಂಬ ಕಲಾತ್ಮಕ ಚಿತ್ರದ ಮೂಲಕ ನಾನು ಚಂದನವನಕ್ಕೆ ಎಂಟ್ರಿ ಪಡೆದುಕೊಂಡೆ. ಆ ಚಿತ್ರದಲ್ಲಿ ಖ್ಯಾತ ಗಾಯಕ ಬಾಲಮುರಳೀಕೃಷ್ಣ ಅವರು ಹಾಡಿದ್ದರು.

ಬಳಿಕ ಕಮರ್ಷಿಯಲ್ ಚಿತ್ರವೆಂಬ ನೆಲೆಯಲ್ಲಿ ನಾನು ನಟಿಸಿದ್ದು ವೈ ಆರ್ ಸ್ವಾಮಿ ನಿರ್ದೇಶನದ ‘ದೇವರ ಕಣ್ಣು’ ಸಿನೆಮಾದಲ್ಲಿ. ಆ ಚಿತ್ರದ ‘ನಿನ್ನ ನೀನು ಮರೆತರೇನು ಸುಖವಿದೆ’ ಹಾಡನ್ನು ಎಸ್.ಪಿ.ಬಿ. ಅವರು ನನ್ನ ಪಾತ್ರಕ್ಕೆ ಹಾಡಿದ್ದರು. ಆ ಹಾಡು ಇವತ್ತಿಗೂ ಜನರ ಬಾಯಲ್ಲಿ ಗುನುಗುವಂತಹ ಗೀತೆಯಾಗಿ ಉಳಿದುಬಿಟ್ಟಿದೆ.’

‘ಆದರೆ, ಅಂದು ನನಗೆ ಈ ಹಾಡನ್ನು ಹಾಡಿದ ಗಾಯಕರ ಪರಿಚಯವಿರಲಿಲ್ಲ. ಆಮೇಲೆ ತಿಳಿಯಿತು ಚಿತ್ರದಲ್ಲಿನ ನನ್ನ ಪಾತ್ರಕ್ಕೆ ಧ್ವನಿಯಾಗಿದ್ದು ದಕ್ಷಿಣ ಭಾರತ ಚಿತ್ರರಂಗದಲ್ಲಿ ಹೆಸರು ಮಾಡುತ್ತಿರುವ ಹಿನ್ನಲೆ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ಎಂದು..’

ಇದನ್ನೂ ಓದಿಎಸ್‍ಪಿಬಿ ಎಂಬ ಸ್ವರ ಮಾಣಿಕ್ಯ: ಹರಿಕಥೆ ದಾಸರ ಮಗ ಗಾನ ಸರಸ್ವತಿಯ ದಾಸನಾದ ಹಿನ್ನಲೆ

ಆ ಬಳಿಕ ದೊರೆ – ಭಗವಾನ್ ನಿರ್ದೇಶನದ ‘ಬಯಲು ದಾರಿ’ ಚಿತ್ರಕ್ಕಾಗಿ ‘ಎಲ್ಲಿರುವೆ ಮನವ ಕಾಡುವ ರೂಪಸಿಯೇ…’, ‘ಕನಸಲೂ ನೀನೆ ಮನಸಲೂ ನೀನೆ ನನ್ನಾಣೆ, ನಿನ್ನಾಣೆ…’ ಎಂಬೆರಡು ಗೀತೆಗಳನ್ನು ಬಾಲು ಹಾಡಿದ್ದರು. ಮತ್ತು ಆ ಎರಡೂ ಹಾಡುಗಳ ಜನಪ್ರಿಯತೆಯ ಕುರಿತಾಗಿಯೂ ನಾನು ನಿಮಗೇನು ವಿಶೇಷವಾಗಿ ಹೇಳಬೇಕಾಗಿಲ್ಲ. ಅಂತಹ ಖ್ಯಾತಿಯನ್ನು ಆ ಗೀತೆ ಇಂದು ಪಡೆದುಕೊಂಡಿದೆ.’

‘ಆ ಬಳಿಕ ವಿಜಯ್ ರೆಡ್ಡಿ ನಿರ್ದೇಶನದ ‘ನಾ ನಿನ್ನ ಬಿಡಲಾರೆ’ ಚಿತ್ರದಲ್ಲೂ ನನ್ನ ಮತ್ತು ಎಸ್.ಪಿ.ಬಿ. ಕಾಂಬಿನೇಷನ್ ಸಕ್ಸಸ್ ಆಯಿತು. ಆಮೇಲೆ ತೆಲುಗಿನಲ್ಲಿ ನಾನು ನಟಿಸಿದ್ದ ‘ಪ್ರೇಮ ಲೇಖಲು’ ಸಿನೆಮಾದಲ್ಲೂ ಎಸ್.ಪಿ.ಬಿಯವರೇ ಹಾಡಿದ್ದರು.’

ಇದನ್ನೂ ಓದಿ: ‘ಪ್ರೇಮದ ಹೂಗಾರ ಈ ಹಾಡುಗಾರ… ಹೂ ನೀಡುತಾನೆ.. ಮುಳು ಬೇಡುತಾನೆ..’: ಹೋಗಿ ಬನ್ನಿ SPB

‘16 ಭಾಷೆಗಳಲ್ಲಿ 40 ಸಾವಿರ ಹಾಡುಗಳನ್ನು ಹಾಡಿದ್ದರೆಂದರೆ ಎಂತಹ ಅಸಾಮಾನ್ಯ ಗಾಯಕ ಎಂಬ ಕಲ್ಪನೆ ಬರುತ್ತೆ ನಮಗೆ. ಎಸ್.ಪಿ. ಅವರ ಹಾಡುಗಳು ನನ್ನ ಪಾತ್ರಗಳನ್ನು ಒಂದು ಹೊಸ ಎತ್ತರಕ್ಕೆ ಒಯ್ಯುವ ಮತ್ತು ಅದಕ್ಕೆ ಇನ್ನಷ್ಟು ವಿಸ್ತಾರವನ್ನು ಕೊಡುವ ರೀತಿಯಲ್ಲಿ ಮೂಡಿಬರುತ್ತಿತ್ತು.’

‘ಹಾಗೆ, ಎಸ್.ಪಿ.ಬಿ. ಅವರು ನನ್ನ ‘ಬಯಲು ದಾರಿ’ ಚಿತ್ರದಿಂದಲೇ ನನ್ನ ಸ್ವರಕ್ಕೆ ಅನುಗುಣವಾಗಿ ಅಥವಾ ಅದೇ ರೀತಿಯಲ್ಲಿ ಹಾಡುತ್ತಿದ್ರು. ಅದು ಎಸ್.ಪಿ.ಬಿ. ಅವರಲ್ಲಿದ್ದ ಒಂದು ವಿಶೇಷ ಗುಣ. ಇದಕ್ಕೆ ‘giving an introduction to his voice’ ಅಂತ ಹೇಳ್ತಾರೆ. ಅದು ಜನರಿಗೆ ಆಪ್ಯಾಯಮಾನವಾಯ್ತು.’

‘ನಮ್ಮ ಪರಿಚಯ ಆಗಿದ್ದು ತೆಲುಗಿನ ‘ಪ್ರೇಮ ಲೇಖಲು’ ಚಿತ್ರದ ಸಂದರ್ಭದಲ್ಲೇ. ಅಲ್ಲಿಯವರೆಗೆ ನನಗೆ ಅವರ ಬಗ್ಗೆ ಕೇಳಿ ಗೊತ್ತಿತ್ತಷ್ಟೇ, ಮುಖತಃ ಭೇಟಿಯಾಗಿರಲಿಲ್ಲ. ಆ ಸಂದರ್ಭದಲ್ಲಿ ಅಲ್ಲಿಗೆ ಹಿರಿಯ ಗಾಯಕ ಪಿ.ಬಿ. ಶ್ರೀನಿವಾಸ್ ಅವರು ಬಂದಿದ್ರು. ಆಗ ಎಸ್.ಪಿ. ಅವರು ಶ್ರಿನಿವಾಸ್ ಕಾಲಿಗೆ ನಮಸ್ಕಾರ ಮಾಡುತ್ತಾರೆ ಮತ್ತು ನನಗೂ ಪಿಬಿಎಸ್ ಅವರಿಗೆ ನಮಸ್ಕಾರ ಮಾಡುವಂತೆ ಸೂಚನೆ ನೀಡುತ್ತಾರೆ.

ನಾನು ಪಿಬಿಎಸ್ ಬಗ್ಗೆ ಕೇಳಿದ್ದೆ ಆದ್ರೆ ಇವರೇ ಅವರು ಅಂತ ಗೊತ್ತಿರ್ಲಿಲ್ಲ. ಆಗ ನಾನು ಎಸ್.ಪಿ ಅವರ ಸೂಚನೆಯಂತೆ ಪಿಬಿಎಸ್ ಅವರಿಗೆ ನಮಸ್ಕರಿಸಿದೆ.’

‘ಆಗ ಎಸ್.ಪಿ.ಬಿ. ನನಗೆ ಕಿವಿಯಲ್ಲಿ ಹೇಳ್ತಾರೆ, ‘ನಾನು ನಿನಗಿಂತ ಎರಡು ವರ್ಷ ದೊಡ್ಡವನು, ಹಾಗಾಗಿ ನಾನು ನಮಸ್ಕಾರ ಮಾಡುವಾಗ ನೀನೂ ಮಾಡ್ಬೇಕು’ ಅಂತ. ಆ ಘಟನೆ ನನಗೆ ಇನ್ನೂ ಚೆನ್ನಾಗಿ ನೆನಪಿದೆ.

‘ಆ ದಿನ ನಾನು ಅವರ ಕಾರ್ಯವೈಖರಿ ನೋಡಿ ಚಕಿತಗೊಂಡಿದ್ದೆ. ಒಂದರ ಮೇಲೊಂದು ಹಾಡು ರೆಕಾರ್ಡಿಂಗ್ ಮಾಡ್ತಾನೆ ಇದ್ರು. ಎಲ್ಲಿಯವರೆಗೆ ಅಂದ್ರೆ ಅವರಿಗೆ ಊಟಕ್ಕೂ ಸಮಯ ಸಿಕ್ಕಿರ್ಲಿಲ್ಲ. ಆ ದಿನ ಎಸ್.ಪಿ.ಬಿ. ಸಾಯಂಕಾಲದವರೆಗೂ ಊಟ ಮಾಡಿರ್ಲಿಲ್ಲ. ಅಷ್ಟು ಬ್ಯುಸಿ ಗಾಯಕ ಆಗಿದ್ರು ಅವರು.’

‘ಆ ಕಾಲದಲ್ಲಿ ಎಸ್.ಪಿ.ಬಿ ಅವರ ರೆಕಾರ್ಡಿಂಗ್ ಶೆಡ್ಯೂಲ್ ಹೇಗಿರ್ತಿತ್ತು ಅಂದ್ರೆ ಅವರು ಒಮ್ಮೆ ಬೆಂಗಳೂರಿಗೆ ಬಂದ್ರೆ ಹತ್ತಾರು ಸಿನೆಮಾಗಳ ಹಾಡುಗಳನ್ನು ಒಮ್ಮೆಲೇ ರೆಕಾರ್ಡ್ ಮಾಡಿಕೊಟ್ಟು ಹೋಗೋರು. ಹಾಗೇ ತೆಲುಗಿನಲ್ಲಿ, ತಮಿಳಿನಲ್ಲೂ ನಡೀತಾ ಇತ್ತು.’

‘ಆ ಶೆಡ್ಯೂಲನ್ನು ನಾನು ಕಣ್ಣಾರೆ ನೋಡಿದ್ದೇನೆ. ಅದೊಂದು ದಿನ ನನಗೆ ಚಿತ್ರದ ಶೂಟಿಂಗ್ ಇರ್ಲಿಲ್ಲ. ಹೇಗೂ ಎಸ್.ಪಿ.ಬಿ ಪರಿಚಯ ಆಗಿದ್ರಲ್ಲಾ. ಆ ದಿನ ಅವರೊಂದಿಗೆ ನಾನು ಕಳೆಯುವ ನಿರ್ಧಾರ ಮಾಡಿ ಅವರ ಹತ್ತಿರ ಕೇಳಿಕೊಂಡಾಗ ಸಂತೋಷದಿಂದಲೇ ಒಪ್ಪಿಕೊಳ್ತಾರೆ.’

‘ಆ ದಿನ ನಾನು ಅವರ ಕಾರ್ಯವೈಖರಿ ನೋಡಿ ಚಕಿತಗೊಂಡಿದ್ದೆ. ಒಂದರ ಮೇಲೊಂದು ಹಾಡು ರೆಕಾರ್ಡಿಂಗ್ ಮಾಡ್ತಾನೆ ಇದ್ರು. ಎಲ್ಲಿಯವರೆಗೆ ಅಂದ್ರೆ ಅವರಿಗೆ ಊಟಕ್ಕೂ ಸಮಯ ಸಿಕ್ಕಿರ್ಲಿಲ್ಲ. ಆ ದಿನ ಎಸ್.ಪಿ.ಬಿ. ಸಾಯಂಕಾಲದವರೆಗೂ ಊಟ ಮಾಡಿರ್ಲಿಲ್ಲ. ಅಷ್ಟು ಬ್ಯುಸಿ ಗಾಯಕ ಆಗಿದ್ರು ಅವರು.’

ಅಂತಹ ಒಬ್ಬ ಮಹಾನ್ ಗಾಯಕನನ್ನು ನಾವು ಇವತ್ತು ಕಳೆದುಕೊಂಡಿದ್ದೇವೆ, ತುಂಬಾ ಬೇಸರವಾಗ್ತದೆ. ನಮ್ಮೆಲ್ಲರ ಪ್ರಾರ್ಥನೆಗಳನ್ನು ಭಗವಂತ ವ್ಯರ್ಥ ಮಾಡಿಬಿಟ್ನಾ ಅಂತ ನೋವಾಗ್ತದೆ. ಹತ್ತಿರ ಹತ್ತಿರ ಸುಮಾರು ನೂರು ಹಾಡುಗಳನ್ನು ನನ್ನ ಚಿತ್ರಗಳಿಗೆ ಅವರು ಹಾಡಿದ್ದಾರೆ. ನನ್ನ ಚಿತ್ರಗಳು ಯಶಸ್ವಿಯಾಗುವುದರಲ್ಲಿ ಅವರ ಕೊಡುಗೆ ಬಹಳಷ್ಟಿದೆ ಎಂಬುದನ್ನು ನಾನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲೇಬೇಕು.’

‘ಎಸ್.ಪಿ.ಬಿ.ಯವರಂತಹ ಅಸಾಮಾನ್ಯ ಗಾಯಕರು ಇನ್ನೊಬ್ಬರು ಬರ್ಲಿಕ್ಕೆ ಸಾಧ್ಯವೇ ಇಲ್ಲ. 40 ಸಾವಿರ ಹಾಡುಗಳನ್ನು ಹಾಡಿದ್ದಾರೆ, ಆದರೂ ಆ ವ್ಯಕ್ತಿಯಲ್ಲಿ ಎಂತಹ ನಮ್ರತೆ ಇತ್ತು. ಅವರು ನಿಜವಾಗಿಯೂ ಅಜಾತ ಶತ್ರುವೇ ಆಗಿ ಬಾಳಿ ಬದುಕಿದವರು.’

‘ಎದೆ ತುಂಬಿ ಹಾಡುವೆನು…’ ಟಿವಿ ಕಾರ್ಯಕ್ರಮದಲ್ಲಿ ಅವರೊಂದಿಗೆ ವೇದಿಕೆ ಹಂಚಿಕೊಳ‍್ಳುವ ಅವಕಾಶ ನನಗೆ ಸಿಕ್ಕಿತ್ತು. ಅಲ್ಲಿ ಅವರು ಹೊಸ ಪ್ರತಿಭೆಗಳನ್ನು ಉತ್ತೇಜಿಸುವ ರೀತಿಯನ್ನು ನಾನು ಕಣ್ಣಾರೆ ಕಂಡು ಖುಷಿಪಟ್ಟಿದ್ದೇನೆ. ನಾನು ನಟಿಸಿದ್ದ ‘ನಾನೇನೂ ಮಾಡ್ಲಿಲ್ಲ’ ಸಿನೇಮಾದಲ್ಲಿ ಅವರು ಹಾಡಿದ್ದರು. ಅದು ಅವರು ನನ್ನ ಚಿತ್ರಕ್ಕೆ ಕೊನೆಯದಾಗಿ ಹಾಡಿದ್ದಾಗಿತ್ತು. ಆ ಬಳಿಕ ಕೆಲವು ಕಡೆ ಸಿಕ್ಕಾಗ ಭೇಟಿಯಾಗಿದ್ದಿದೆ.’ ಎಂದು ಹಿರಿಯ ನಟ ತಮ್ಮ ಮತ್ತು ಎಸ್.ಪಿ.ಬಿ ಒಡನಾಟವನ್ನು ನೆನಪಿಸಿಕೊಂಡರು.

– ರವಿಪ್ರಕಾಶ್

ನಿರೂಪಣೆ: ಹರಿ

ಇದನ್ನೂ ಓದಿ: ಸರಳತೆಯಲ್ಲಿ ಇಂದಿನ ಕಲಾವಿದರಿಗೆ ಎಸ್ ಪಿಬಿ ಮಾದರಿ: ಗುರುಕಿರಣ್ ನೆನಪಿಸಿಕೊಂಡಂತೆ…

ಇದನ್ನೂ ಓದಿ: ಕನ್ನಡ ಹಾಡುಗಳು ಅಂದರೆ ಎಸ್‌ಪಿಬಿ ಎನ್ನುವಷ್ಟು ಹುಚ್ಚು ಹಿಡಿಸಿದ್ದ ಅವರೂಪದ ಗಾಯಕ: ಕವಿರಾಜ್

ಇದನ್ನೂ ಓದಿ: ಸಂಗೀತ ಮೂಲಕ ಹಿಮೋಫಿಲಿಯಾ ಪೀಡಿತರ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಎಸ್ ಪಿಬಿ

Advertisement

Udayavani is now on Telegram. Click here to join our channel and stay updated with the latest news.

Next