Advertisement

ಯುವರಾಜನಿಗಾಗಿ 12 ಕಿ.ಮೀ. ದೂರ ಕ್ರಮಿಸುವ ಶಿಕ್ಷಕ

08:30 AM Mar 26, 2018 | Team Udayavani |

ಪುಣೆ: ಆ ಗ್ರಾಮದ ಹೆಸರು ಚಾಂದರ್‌. ಪುಣೆಯಿಂದ 100 ಕಿ.ಮೀ. ದೂರವಿದೆ. ಅರುವತ್ತು ಮಂದಿ ಇರುವ ಈ ಗ್ರಾಮದಲ್ಲಿ ಸರಕಾರಿ ಶಾಲೆಯೊಂದಿದೆ. ಇದರಲ್ಲೇನು ವಿಶೇಷ ಅಂತೀರಾ? ಕಳೆದ ಎರಡು ವರ್ಷಗಳಿಂದ ಈ ಶಾಲೆಯಲ್ಲಿರುವುದು ಒಬ್ಬನೇ ಒಬ್ಬ ವಿದ್ಯಾರ್ಥಿ. ಈ ಏಕೈಕ ವಿದ್ಯಾರ್ಥಿಗೆ ಪಾಠ ಮಾಡಲೆಂದು ಶಿಕ್ಷಕ ರಜನಿಕಾಂತ್‌ ಮೆಂಧೆ (29) ಎಂಟು ವರ್ಷಗಳಿಂದ ಬೈಕ್‌ನಲ್ಲಿ ಭೋರ್‌ ಎಂಬ ಪಟ್ಟಣದಿಂದ 12 ಕಿ.ಮೀ. ದೂರ ಪ್ರಯಾಣಿಸುತ್ತಿದ್ದಾರೆ. ಅಲ್ಲಿಗೆ ತಲುಪಬೇಕಾದರೆ ಕೆಲವೊಂದು ಕಡೆಗಳಲ್ಲಿ 400 ಮೀಟರ್‌ ಕಡಿದಾದ ಪ್ರಪಾತ ಕೂಡ ಇದೆ.

Advertisement

ಪ್ರತಿ ದಿನವೂ ಶಾಲೆಗೆ ಬಂದ ಬಳಿಕ ಶಿಕ್ಷಕನಿಗೊಂದು ಕೆಲಸ ಕಟ್ಟಿಟ್ಟ ಬುತ್ತಿ. ಅದೇನೆಂದರೆ, ಅಲ್ಲಿನ ಏಕೈಕ ವಿದ್ಯಾರ್ಥಿಯಾಗಿರುವ ಯುವರಾಜ್‌ ಸಂಗಲೆ (8)ಗಾಗಿ ಶೋಧ ಕಾರ್ಯ ನಡೆಸುವುದು. ಏಕೆಂದರೆ, ಕೆಲವೊಮ್ಮೆ ಆತ ಮರದಲ್ಲಿಯೋ, ಮನೆಯಲ್ಲಿಯೋ ಅಡಗಿ ಕುಳಿತಿರುತ್ತಾನೆ. ಆತನ ಮನವೊಲಿಸಿ ಶಾಲೆಗೆ ಕರೆತರಬೇಕು. ಅವನಿಗೆ ಶಾಲೆಯಲ್ಲಿ ಯಾರೊಬ್ಬರೂ ಸ್ನೇಹಿತರಿಲ್ಲ. ಹಾಗಾಗಿ ಅವನಿಗೂ ಶಾಲೆಗೆ ಬರಲು ಬೇಸರ. 1985ರಲ್ಲಿ ಈ ಗ್ರಾಮದಲ್ಲಿ ಶಾಲೆ ನಿರ್ಮಿಸಿದ ವೇಳೆಯಲ್ಲಿ 12 ಮಂದಿ ವಿದ್ಯಾರ್ಥಿಗಳಿದ್ದರು. ಶಾಲೆ ನಿರ್ಮಾಣವಾದ ದಿನಗಳಲ್ಲಿ ಅದಕ್ಕೆ ಆವರಣದ ಗೋಡೆಗಳೂ ಇರಲಿಲ್ಲ.

ಕರ್ನಾಟಕದ ಖಾನಾಪುರದ ಶಿಕ್ಷಕರು: ಸರಕಾರಿ ಶಾಲೆಯಲ್ಲಿ ಕೆಲಸ ಮಾಡಿ ವರ್ಗಾವಣೆಯಾಗಬೇಕಾದರೆ ಐದು ವರ್ಷಗಳು ಕಳೆಯಬೇಕು. ಅದೂ ಮತ್ತೂಂದು ಕಡೆ ಹುದ್ದೆ ಖಾಲಿ ಇದ್ದರೆ ಮಾತ್ರ. ಮನೋಜ್‌ ಅಂದ್ಯುರೆ ಎಂಬವರು ಸಮೀಪದ ಶಾಲೆಯಲ್ಲಿ ಕಲಿಸುತ್ತಿದ್ದಾರೆ. ಅವರೂ ಬೇರೆಡೆಗೆ ವರ್ಗಾವಣೆ ಬಯಸುತ್ತಿದ್ದಾರೆ. ಅವರ ಶಾಲೆಯಲ್ಲಿ 9 ಮಂದಿ ಕಲಿಯುತ್ತಿದ್ದಾರೆ. ಅಂದ ಹಾಗೆ ಅಂದ್ಯುರೆ ಮತ್ತು ರಜನಿಕಾಂತ್‌ ಮೆಂಧೆ ಅವರ ಕುಟುಂಬಗಳು ಕರ್ನಾಟಕದ ಖಾನಾಪುರದಲ್ಲಿ ನೆಲೆಸಿವೆ.

ಮೂಲಸೌಲಭ್ಯ ಸಮಸ್ಯೆ ಸರಮಾಲೆ
ಇದಿಷ್ಟು ಶಾಲೆಯ ಕತೆಯಾದರೆ, ಇನ್ನು ಆ ಗ್ರಾಮದಲ್ಲೂ ಮೂಲ ಸೌಕರ್ಯಗಳು ಇಲ್ಲ. ಎನ್‌ಸಿಪಿ ನಾಯಕಿ ಶರದ್‌ ಪವಾರ್‌ ಪುತ್ರಿ ಸುಪ್ರಿಯಾ ಸುಳೆ ಪ್ರತಿನಿಧಿಸುವ ಕ್ಷೇತ್ರವಿದು. ಇಲ್ಲಿಗೆ ಸರಕಾರಿ ಅಧಿಕಾರಿಗಳು ಬಂದಿದ್ದಾರೆಯೇ ಎಂದು ಪ್ರಶ್ನಿಸಿದರೆ, ಎರಡು ವರ್ಷಗಳ ಹಿಂದೆ ಪಲ್ಸ್‌ ಪೋಲಿಯೋ ಅಭಿಯಾನಕ್ಕಾಗಿ ಬಂದಿದ್ದರಷ್ಟೇ ಎಂದು ಹೇಳುತ್ತಾರೆ ಸ್ಥಳೀಯರು. ಆರೋಗ್ಯ ಸ್ಥಿತಿ ವಿಷಮಿಸಿದರೆ ಸಾವು ಕಟ್ಟಿಟ್ಟ ಬುತ್ತಿ. ಇತ್ತೀಚೆಗೆಷ್ಟೇ ಗ್ರಾಮದಲ್ಲಿ ಜ್ವರದಿಂದ ಬಳಲುತ್ತಿದ್ದ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿಯೇ ಅಸುನೀಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next