Advertisement

ಟ್ರಂಪ್‌ ಇಳಿಸಲು ಲಡಾಖ್‌ ದಾಳ : ಅಮೆರಿಕ ಚುನಾವಣೆ ತನಕ ಭಾರತ ಗಡಿಯಲ್ಲಿ ಚೀನ ದುರಾಕ್ರಮಣ

02:52 AM Sep 07, 2020 | Hari Prasad |

ಹೊಸದಿಲ್ಲಿ: ಅಮೆರಿಕದಲ್ಲಿ ಅಸ್ತಿತ್ವದಲ್ಲಿರುವ ಬಲ ಪಂಥೀಯ ಡೊನಾಲ್ಡ್‌ ಟ್ರಂಪ್‌ ಸರಕಾರವನ್ನು ಉರುಳಿಸುವುದಕ್ಕೂ, ಲಡಾಖ್‌ ಸಂಘರ್ಷಕ್ಕೂ ಪರೋಕ್ಷ ಸಂಬಂ­ಧ­­ವಿದೆಯೇ? ‘ಹೌದು’ ಎನ್ನುತ್ತಿದ್ದಾರೆ ಚೀನ ವೀಕ್ಷಕರು.

Advertisement

ನವೆಂಬರ್‌ನ ಯುಎಸ್‌ ಅಧ್ಯಕ್ಷೀಯ ಚುನಾವಣೆಯವರೆಗೆ ಪಿಎಲ್‌ಎ ಭಾರತದ ಎಲ್‌ಎಸಿಯಲ್ಲಿ ಅತಿ­ಕ್ರಮಣ ನಾಟಕ ನಡೆಸುತ್ತಲೇ ಇರುತ್ತದೆ ಎನ್ನಲಾಗುತ್ತಿದೆ.

ಗಾಲ್ವಾನ್‌ನಿಂದ ಪ್ಯಾಂಗಾ­ಂಗ್‌ಗೆ ಶಿಫ್ಟ್ ಆದ ಬಿಕ್ಕಟ್ಟು, ನವೆಂಬರ್‌ ಒಳಗೆ ಮತ್ತೆ ಕೆಲವು ಪ್ರದೇಶಗಳನ್ನು ಆವರಿಸುವ ಸಾಧ್ಯತೆಯಿದೆ ಎಂದು ಚೀನ ವೀಕ್ಷಕರು ವಿಶ್ಲೇಷಿಸುತ್ತಿದ್ದಾರೆ.

ಭಾರತವೇಕೆ ಟಾರ್ಗೆಟ್‌?: ಯುಎಸ್‌ ಜತೆಗಿನ ನಿಕಟ ಸಂಬಂಧದಲ್ಲಿರುವ ಭಾರತ­ವನ್ನು ಸಂಕಷ್ಟಕ್ಕೆ ಸಿಲುಕಿಸಿ, ಡೊನಾಲ್ಡ್‌ ಟ್ರಂಪ್‌ ಅವರನ್ನು ಕೆಣಕುವುದೇ ಬೀಜಿಂಗ್‌ನ ಮುಖ್ಯ ಕಾರ್ಯತಂತ್ರವಾಗಿದೆ. ಟ್ರಂಪ್‌ರನ್ನು ಚುನಾವಣೆಯತ್ತ ಗಮನಹರಿ­ಸಲು ಬಿಡದೆ, ಮಿತ್ರರಾಷ್ಟ್ರಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ಜಾಗತಿಕವಾಗಿ ನಿರಂತರವಾಗಿ ತಲೆಕೆಡಿಸಿಕೊಳ್ಳುವಂತೆ ಮಾಡಲು ಡ್ರ್ಯಾಗನ್‌ ಕುತಂತ್ರ ರೂಪಿಸಿದೆ ಎಂದು ಅರ್ಥೈಸ­ಲಾಗುತ್ತಿದೆ.

ಚಳಿಗಾಲದಲ್ಲಿ ‘ಓಟ’: ಅಕ್ಟೋಬರ್‌ನ ಘೋರ ಚಳಿಗಾಲದಲ್ಲಿ ಪಿಎಲ್‌ಎ ಲಡಾಖ್‌ ಬದಿಯ ಎಲ್‌ಎಸಿಯಲ್ಲಿ ನಿಲ್ಲುವುದೇ ಅನುಮಾನ. ‘ಅಕ್ಟೋಬರ್‌ನ ಬದಲಾಗುವ ಹವಾಮಾನದಲ್ಲಿ ಎದುರಾಳಿಗಳಿಗಿಂತ ತಮ್ಮ ಜೀವವನ್ನು ತಾವು ರಕ್ಷಿಸಿಕೊಳ್ಳಲು ಇಲ್ಲಿ ಸೈನಿಕರು ಹೋರಾಡುತ್ತಾರೆ. ಅಮೆರಿಕ ಚುನಾ­ವ­ಣೆಯೂ ಇದೇ ವೇಳೆ ಇರುವುದ­ರಿಂದ ಚೀನದ ಉದ್ದೇಶ ಅಕ್ಟೋಬರ್‌ ವೇಳೆಗೆ ಸ್ಪಷ್ಟವಾಗಲಿದೆ’ ಎಂದು ಹಿರಿಯ ಸೇನಾಧಿಕಾರಿ­ಯೊಬ್ಬರು ತಿಳಿಸಿದ್ದಾರೆ.

Advertisement

ಮುಂದಿನ ವರ್ಷ ಚೀನೀ ಕಮ್ಯು­ನಿಸ್ಟ್‌ ಪಕ್ಷದ (ಸಿಸಿಪಿ) 100ನೇ ವರ್ಷಾ­ಚರಣೆ. ಇದರ ಭಾಗವಾಗಿಯೂ ಪಿಎಲ್‌ಎ ಲಡಾಖ್‌ನ ಅತಿಕ್ರಮಣಕ್ಕೆ ಮುಂದಾಗಿತ್ತು. ಆದರೆ, ಚೀನದ ಊಹೆಗೂ ನಿಲುಕದಂತೆ ಭಾರತ ಪ್ರತಿಯೇಟು ನೀಡಿರುವುದು ಬೀಜಿಂಗ್‌ನ ಲೆಕ್ಕಾಚಾರವನ್ನೆಲ್ಲ ಬುಡಮೇಲು ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಲೇಹ್‌ನಲ್ಲಿ ಕಟ್ಟೆಚ್ಚರ
ಲೇಹ್‌ ವಾಯುನೆಲೆಯಲ್ಲಿ ಪ್ರತಿ 2-3 ಗಂಟೆಗಳಿಗೊಮ್ಮೆ ಫೈಟರ್‌ ಜೆಟ್‌ಗಳು ಗರ್ಜನೆ ಆರಂಭಿಸಿವೆ. ಮುಂಚೂಣಿಯ ನೆಲೆಗಳಿಗೆ ಸೈನಿಕರನ್ನು, ಯುದ್ಧ ಸಾಮಗ್ರಿ ಸಾಗಾಟವನ್ನು ಐಎಎಫ್ ತೀವ್ರಗೊಳಿ­ಸಿದೆ. ಅಪಾಚೆ ಅಟ್ಯಾಕ್‌ ಚಾಪರ್ಸ್‌, ಚಿನೂಕ್‌ ಹೆವಿಲಿಫ್ಟ್ ಹೆಲಿಕಾಪ್ಟರ್‌ಗಳು ಲೇಹ್‌ ನೆತ್ತಿಗಳ ಮೇಲೆ ಗರ್ಜಿಸುತ್ತಾ, ಸೈನಿಕರ ನಿಯೋಜನೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ. ಎಲ್‌ಎಸಿ ಉದ್ದಕ್ಕೂ ವಾಯುಗಸ್ತು ಹೆಚ್ಚಿಸಿ, ಕಟ್ಟೆಚ್ಚರ ವಹಿಸಲಾಗಿದೆ ಎಂದು ಐಎಎಫ್ ಮೂಲಗಳು ತಿಳಿಸಿವೆ.

ಇರಾನ್‌ ಜತೆ ಮಾತುಕತೆ
ಇನ್ನೊಂದೆಡೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ರ ಇರಾನ್‌ ಪ್ರವಾಸ ಫ‌ಲಪ್ರದ ಕಂಡಂತಿದೆ. ‘ಟೆಹರಾನ್‌ನಲ್ಲಿ ಇರಾನಿನ ರಕ್ಷಣಾ ಮಂತ್ರಿ ಬ್ರಿಗೇಡಿಯರ್‌ ಜನರಲ್‌ ಅಮೀರ್‌ ಹತಾಮಿ ಅವರೊಂದಿಗೆ ಮಹತ್ವದ ಮಾತುಕತೆಗಳು ನಡೆದವು. ಅಫ್ಘಾನಿಸ್ಥಾನ ಸೇರಿದಂತೆ ಪ್ರಾದೇಶಿಕ ಭದ್ರತಾ ವಿಚಾರಗಳು, ದ್ವಿಪಕ್ಷೀಯ ಸಹಕಾರದ ವಿಷಯಗಳ ಬಗ್ಗೆ ಚರ್ಚಿಸಲಾಗಿದೆ’ ಎಂದು ಟ್ವೀಟ್‌ನಲ್ಲಿ ರಾಜನಾಥ್‌ ಸಿಂಗ್‌ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next