ಸುರಪುರ: ಗ್ರಾಮಕ್ಕೆ ಸ್ವಾಗತಿಸುತ್ತಿರುವ ತಿಪ್ಪಿ-ಗುಂಡಿಗಳು.. ರಸ್ತೆ ಎರಡೂ ಬದಿಯಲ್ಲಿ ಬರ್ಹಿದೆಸೆ.. ಶಾಲೆ ಪಕ್ಕದಲ್ಲಿಯೇ ಬಯಲು ಶೌಚ.. ಚರಂಡಿ ಇಲ್ಲದೆ ರಸ್ತೆ ಮೇಲೆ ಹರಿಯುತ್ತಿರುವ ಬಚ್ಚಲ ನೀರು.. ತಗ್ಗು ಗುಂಡಿಗಳಲ್ಲಿ ಅಲ್ಲಲ್ಲಿ ನಿಂತಿರುವ ಮಲೀನ ನೀರು.. ಇದು ಯಾವುದೇ ಕಥೆಯಲ್ಲ. ನಿರ್ಮಲ ಭಾರತ ಯೋಜನೆಯಡಿ ರಾಷ್ಟ್ರಪ್ರಶಸ್ತಿ ಪಡೆದ ತಾಲೂಕಿನ ರತ್ತಾಳ ಗ್ರಾಮದ ದುಸ್ಥಿತಿ.
ದೇವಿಕೇರಿ ಗ್ರಾಪಂ ವ್ಯಾಪ್ತಿಗೊಳಪಡುವ ರತ್ತಾಳ ಗ್ರಾಮ ನಗರದಿಂದ ಅಣತಿ ದೂರದಲ್ಲಿದ್ದು, ಈ ಗ್ರಾಮಕ್ಕೆ ಒಮ್ಮೆ ಭೇಟಿ ನೀಡಿದರೆ ಇವುಗಳ ದರ್ಶನವಾಗುತ್ತದೆ. 5 ಸಾವಿರ ಜನಸಂಖ್ಯೆ ಹೊಂದಿರುವ ಈ ಗ್ರಾಮದಲ್ಲಿ 5 ನೂರಕ್ಕೂ ಮೇಲ್ಪಟ್ಟು ಮನೆಗಳಿವೆ. 2200 ಮತದಾರರಿದ್ದು, 7 ಜನ ಗ್ರಾಪಂ ಸದಸರನ್ನು ಹೊಂದಿದೆ. ಆದರೆ ಮೂಲ ಸೌಲಭ್ಯಗಳ ಕೊರತೆಯಿಂದ ಗ್ರಾಮ ಸೊರಗಿ ಹೋಗಿದೆ.
ಗ್ರಾಮಕ್ಕೆ ಮೂಗು ಮುಚ್ಚಿಕೊಂಡು ಹೋಗಬೇಕು. ಗ್ರಾಮದಲ್ಲಿ ಎಲ್ಲಿಯೂ ಚರಂಡಿಗಳ ವ್ಯವಸ್ಥೆ ಇಲ್ಲ. ಬಚ್ಚಲ ನೀರು ರಸ್ತೆ ಮೇಲೆ ಹರಿಯುತ್ತಿದೆ. ಅಲ್ಲಲ್ಲಿ ತಗ್ಗು-ಗುಂಡಿಗಳಲ್ಲಿ ಮಲೀನ ನೀರು ನಿಂತು ರಸ್ತೆಯಲ್ಲ ಕೊಚ್ಚೆಯಾಗಿದೆ. ಸ್ವಚ್ಛತೆಗೆ ಆದ್ಯತೆ ಕೊಡುತ್ತಿಲ್ಲ. ನಾವೆಷ್ಟೇ ಹೇಳಿದರೂ ತಿಪ್ಪಿ ಗುಂಡಿ ತೆಗೆಯುತ್ತಿಲ್ಲ. ಬರ್ಹಿದೆಸೆ ಬಿಡುತ್ತಿಲ್ಲ. ಸಂಜೆ ಮತ್ತು ಬೆಳಿಗ್ಗೆ ಮನೆ ಹೊರ ಹೋಗಲು ನಾಚಿಕೆ ಎನಿಸುತ್ತಿದೆ. ನಮ್ಮ ಸ್ಥಿತಿ ದೇವರೇ ಬಲ್ಲ ಎಂದು ಗ್ರಾಮದ ಪ್ರಜ್ಞಾವಂತ ನಾಗರೆಡ್ಡಿ ಯಾದಗಿರಿ ಬೇಸರ ವ್ಯಕ್ತಪಡಿಸುತ್ತಾರೆ.
ಬೇಕಾಬಿಟ್ಟಿ ಸಿಸಿ ರಸ್ತೆ
ಗ್ರಾಮದಲ್ಲಿ ಬೇಕಾಬಿಟ್ಟಿಯಾಗಿ ಸಿಸಿ ರಸ್ತೆಯನ್ನು ನಿರ್ಮಿಸಿದ್ದಾರೆ. ಎಲ್ಲಿಯೂ ಚರಂಡಿ ನಿರ್ಮಿಸಿಲ್ಲ. ಸಮತಟ್ಟಾಗಿ ಹಾಕಿಲ್ಲ. ಎಲ್ಲೆಂದರಲ್ಲಿ ತಗ್ಗು ಗುಂಡಿಗಳು ಬಿದ್ದಿವೆ. ಮಲೀನ ನೀರು ನಿಂತು ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಈ ಬಗ್ಗೆ ಮನವಿ ಮಾಡಿದರೂ ಗ್ರಾಪಂ ಕ್ಯಾರೆ ಎನುತ್ತಿಲ್ಲ. ಗ್ರಾಮದ ರಸ್ತೆ ಬದಿಯ ಜಾಲಿ ಕಂಟಿ ತೆರವುಗೊಳಿಸುತ್ತಿಲ್ಲ. ಯಾವುದೇ ಅಭಿವೃದ್ಧಿ ಕೆಲಸ ಮಾಡಿಲ್ಲ. ದಾಖಲೆಗಳಲ್ಲಿ ಅಭಿವೃದ್ಧಿ ತೋರಿಸಿ ಸದಸ್ಯರು, ಅಧಿಕಾರಿಗಳು ಸರಕಾರದ ಅನುದಾನ ದುರುಪಯೋಗ ಪಡೆದಿದ್ದಾರೆಂದು ಗ್ರಾಮದ ಮುಖಂಡ ಯಲ್ಲಪ್ಪ ಗಢಧರ ದೂರುತ್ತಾರೆ.
ಇದನ್ನೂ ಓದಿ: ಪಕ್ಷ ನಿರ್ಧರಿಸಿದರೆ ವಿಧಾನಸಭೆಗೆ ಸ್ಪರ್ಧೆ:ಸಿಎಂ ಯೋಗಿ ಆದಿತ್ಯನಾಥ್
ಸ್ವಚ್ಛ ಭಾರತ ಯೋಜನೆ ವಿಫಲ
ಸ್ವಚ್ಛ ಭಾರತ ಯೋಜನೆಯಡಿ ಮನೆಗೊಂದು ಶೌಚಾಲಯ ನಿರ್ಮಿಸಲಾಗಿದೆ ಎಂದು ಅಧಿಕಾರಿಗಳು ಸರಕಾರಕ್ಕೆ ಮಾಹಿತಿ ನೀಡಿದ್ದಾರೆ. ಆದರೆ ಗ್ರಾಮದ ಅನೇಕ ಮನೆಗಳಲ್ಲಿ ಶೌಚಾಲಯವಿಲ್ಲ. ಕಾಟಾಚಾರಕ್ಕೆ ಎನ್ನುವಂತೆ ಕೆಲವರು ಕಟ್ಟಿಕೊಂಡಿದ್ದರೂ ಬಳಸುತ್ತಿಲ್ಲ. ನಿರ್ಮಲ ಗ್ರಾಮ ಯೋಜನೆಗೆ ಈ ಗ್ರಾಮ ಆಯ್ಕೆಯಾಗಿತ್ತು. ಮನೆಗೊಂದು ಶೌಚಾಲಯ ನಿರ್ಮಿಸಿದ ರಾಜ್ಯದ ಮೊದಲ ಗ್ರಾಮ ಎಂದು ಗುರುತಿಸಿ 2010ರಲ್ಲಿ ಗ್ರಾಪಂಗೆ ರಾಷ್ಟ್ರ ಪ್ರಶಸ್ತಿಯೂ ಬಂದಿದೆ. ಪ್ರಶಸ್ತಿ ಪಡೆದ ಗ್ರಾಮ ಎಂದು ಹೇಳಿಕೊಳ್ಳಲು ನಮಗೆ ನಾಚಿಕೆಯಾಗುತ್ತಿದೆ. ಸರಕಾರ ಈಗಲಾದರೂ ಎಚ್ಚೆತ್ತುಕೊಳ್ಳಬೇಕು. ಕೇವಲ ದಾಖಲೆ ನೋಡಿ ಪ್ರಶಸ್ತಿ ಕೊಡುವ ಕೆಟ್ಟ ಚಾಳಿ ಕೈ ಬಿಡಬೇಕು. ಮಹಿಳಾ ಶೌಚಾಲಯ, ಚರಂಡಿ ಸಿಸಿ ರಸ್ತೆ ನಿರ್ಮಿಸಿ ಕೊಡಬೇಕೆಂದು ಗ್ರಾಪಂ ಮಾಜಿ ಅಧ್ಯಕ್ಷ ದೇವಪ್ಪ ರತ್ತಾಳ ಒತ್ತಾಯಿಸಿದ್ದಾರೆ.
-ಸಿದ್ದಯ್ಯ ಪಾಟೀಲ