ಬೆಂಗಳೂರು: ಮಹಾತ್ಮ ಗಾಂಧೀಜಿಯವರ ವಿಚಾರಗಳನ್ನು ನಾವು ಪಾಲಿಸಬೇಕು. ಆದರೆ ಬಹಳ ವಿಚಾರಗಳನ್ನು ಪಾಲಿಸಲು ಸಾಧ್ಯವಿಲ್ಲ. ನಾವು ಬಹಳ ಕೆಟ್ಟು ಹೋಗಿದ್ದೇವೆ. ಕೆಲ ವಿಚಾರಗಳನ್ನದರೂ ಪಾಲಿಸಬೇಕು. ಅದೇ ನಾವು ಅವರಿಗೆ ಕೊಡುವ ಗೌರವ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಕೆಪಿಸಿಸಿ ಕಚೇರಿಯಲ್ಲಿ ಇಂದು ಆಯೋಜಿಸಿದ್ದ ಹುತಾತ್ಮರ ದಿನಾಚರಣೆಯಲ್ಲಿ ಅವರು ಭಾಗವಹಿಸಿ ಮಹಾತ್ಮ ಗಾಂಧೀಜಿಯವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರು ಹಾಜರಿದ್ದರು.
ಇದನ್ನೂ ಓದಿ:ಮೈಸೂರಿನಲ್ಲಿ ನಡೆದಿದ್ದು ಅಭಿವೃದ್ದಿ ಚರ್ಚೆಯಷ್ಟೇ; ಸಂಸದ-ಶಾಸಕರ ಜಟಾಪಟಿಗೆ ಸಿಎಂ ಸಮರ್ಥನೆ
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, “ಗಾಂಧೀಜಿಯವರು ಸ್ವಾತಂತ್ರ ಪೂರ್ವ ಮತ್ತು ಬಳಿಕ ಕೊಮು ಗಲಭೆಯಾದ ಕಡೆ ಹೋಗಿ ಜನರನ್ನು ನಿಯಂತ್ರಣ ಮಾಡುತ್ತಿದ್ದರು. ಅದೇ ಅವರ ಸಾವಿಗೆ ಕಾರಣವಾಗಿತ್ತು. ನಾಥೋರಾಮ್ ಗೂಡ್ಸೆ ಹಿಂದೂ ಮತಾಂಧನಾಗಿದ್ದ. ಹೀಗಾಗಿಯೇ ಅವರನ್ನು ಸಾಯಿಸಿದ್ದು, ಸಾಯುವಾಗಲೂ ಸಹ ಹೇ ರಾಮ್ ಎಂದು ಹೇಳಿದರು. ಹಿಂದೂ ಅಲ್ಲದೇ ಬೇರೆಯಾರದರೂ ಗಾಂಧಿಯವರನ್ನು ಸಾಯಿಸಿದ್ದರೆ ದೇಶದಲ್ಲಿ ಪರಿಸ್ಥಿತಿ ಏನಾಗುತ್ತಿತ್ತೆಂದು ಊಹೆ ಮಾಡಲು ಆಗುತ್ತಿರಲಿಲ್ಲ ಎಂದರು.
ಮುಸ್ಲಿಂರು ದೇಶ ಬಿಡುವುದನ್ನು ಗಾಂಧೀಜಿ ತಡೆದರು. ಇಡೀ ಪ್ರಪಂಚ ಗೌರವವಾಗಿ ಕಾಣುವ ವ್ಯಕ್ತಿ ಇದ್ದರೆ ಅದು ಮಹಾತ್ಮ ಗಾಂಧಿ ಮಾತ್ರ. ಮಹಾತ್ಮ ಎಂದು ಕರೆಯುವುದು ಗಾಂಧಿಗೆ ಮಾತ್ರ ಎಂದು ಸಿದ್ದರಾಮಯ್ಯ ಹೇಳಿದರು.