Advertisement

ಹೆಲ್ಮೆಟ್‌ ತಲೆಗಷ್ಟೇ ಅಲ್ಲ.. ಕ್ರಿಕೆಟ್ ಹೆಲ್ಮೆಟ್ ಹಿಂದೆ ಹಲವು ರೋಚಕ ಸಂಗತಿ

04:35 PM Sep 04, 2020 | keerthan |

ಇಡೀ ಜಗತ್ತಿನಲ್ಲಿ ಮನುಷ್ಯನ ದೇಹವನ್ನೇ ಗುರಿಯಾಗಿಸಿಕೊಂಡು ಚೆಂಡು ಎಸೆಯುವ ಏಕೈಕ ಆಟವೆಂದರೆ ಬಹುಶಃ ಕ್ರಿಕೆಟ್‌ ಮಾತ್ರ! ಬೇರೆ ಯಾವ ಗೇಮ್‌ಗಳಲ್ಲಿಯೂ ಇಂತಹ ವಿಲಕ್ಷಣವನ್ನು ಕಾಣುವುದಿಲ್ಲ. ಫ‌ುಟ್ಬಾಲ್‌, ಹಾಕಿಯಲ್ಲೂ ಚೆಂಡು ಬಳಕೆಯಾಗುತ್ತದೆ. ಆದರೆ ಅದರ ಗಮ್ಯ ಗೋಲುಪೆಟ್ಟಿಗೆಯತ್ತ ಇರುತ್ತದೆ. ಟೆನಿಸ್‌, ವಾಲಿಬಾಲ್‌ನಲ್ಲಿ ಚೆಂಡನ್ನು ಆಟಗಾರನ ಪರಿಧಿಯಿಂದ ತಪ್ಪಿಸಿ ಪಾಯಿಂಟ್‌ ಗಳಿಸುವುದೇ ಆಗಿರುತ್ತದೆ. ಬಾಸ್ಕೆಟ್‌ಬಾಲ್‌ನಲ್ಲಿ ಆಟಗಾರರನ್ನು ತಪ್ಪಿಸಿ ಚೆಂಡನ್ನು ಬಾಸ್ಕೆಟ್‌ಗೆ ಸೇರಿಸುವುದೇ ಗುರಿಯಾಗಿರುತ್ತದೆ. ಆದರೆ ಕ್ರಿಕೆಟ್‌ ಹಾಗಲ್ಲ.

Advertisement

ಕ್ರೀಸ್‌ನಲ್ಲಿರುವ ಬ್ಯಾಟ್ಸ್‌ಮನ್‌ ತನ್ನ ಹಿಂದಿರುವ ಸ್ಟಂಪ್‌ಗಳನ್ನು ಕಾಪಾಡಲು ತನ್ನ ದೇಹವನ್ನೇ ಪಣಕ್ಕೊಡ್ಡುತ್ತಾನೆ. ಪ್ರತಿ ಗಂಟೆಗೆ 140-150 ಕಿ.ಮೀ ವೇಗದಲ್ಲಿ ಬರುವ ಚೆಂಡನ್ನು ಎದುರಿಸುತ್ತಾನೆ. ಅದಕ್ಕಾಗಿಯೇ ತಲೆಯಿಂದ ಕಾಲಿನವರೆಗೆ ರಕ್ಷಣಾ ಪರಿಕರಗಳ ಅಗತ್ಯವಿರುತ್ತದೆ. ಅದರಲ್ಲೂ ಹೆಲ್ಮೆಟ್‌ ಬಹುಮುಖ್ಯವಾದದ್ದು. ಇದೀಗ ಮತ್ತೂಮ್ಮೆ ಸುದ್ದಿಯಲ್ಲೂ ಇದೆ.

ಕಳೆದ ವರ್ಷ ನಡೆದ ಆ್ಯಷಸ್‌ ಸರಣಿಯ ಎರಡನೇ ಪಂದ್ಯದಲ್ಲಿ ಇಂಗ್ಲೆಂಡ್‌ ವೇಗಿ ಜೋಫ್ರಾ ಆರ್ಚರ್‌ ಬೌನ್ಸ್‌ರ್‌ ಒಂದು ಆಸ್ಟ್ರೇಲಿಯ ಬ್ಯಾಟ್ಸ್‌ಮನ್‌ ಸ್ಟೀವ್‌ ಸ್ಮಿತ್‌ ಅವರ ಕುತ್ತಿಗೆಗೆ ಅಪ್ಪಳಿಸಿತ್ತು. ಅವರು ಕುಸಿದು ಬಿದ್ದು ಕೆಲಕಾಲ ನೋವಿನಿಂದ ಒದ್ದಾಡಿದ್ದರು. ಆಗ ಇಡೀ ಕ್ರೀಡಾಂಗಣದಲ್ಲಿ ಆತಂಕದ ಛಾಯೆ ಆವರಿಸಿತ್ತು. ಸ್ವತಃ ಆರ್ಚರ್‌ ಕೂಡ ಬೇಗುದಿಗೆ ಒಳಗಾಗಿದ್ದರು. ಸ್ಮಿತ್ ಹೆಲ್ಮೆಟ್‌ ಧರಿಸಿದ್ದರು. ಆದರೆ, ಅದು ಕತ್ತಿನ ಕವಚ ಹೊಂದಿರುವಂತದ್ದಾಗಿರಲಿಲ್ಲ. ಇದರಿಂದಾಗಿ ಈಗ ನೆಟ್‌ಗಾರ್ಡ್‌ ಹೆಲ್ಮೆಟ್‌ ಬಳಸಬೇಕು ಎಂಬ ಒತ್ತಾಯ ಮುನ್ನೆಲೆಗೆ ಬಂದಿದೆ.

ಆದರೆ, ಬಿಸಿಸಿಐ (ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ) ಈ ತರಹದ ಹೆಲ್ಮೆಟ್‌ ಬಳಕೆಯನ್ನು ಆಟಗಾರರ ವಿವೇಚನೆಗೆ ಬಿಟ್ಟಿದೆ. ಏಕೆಂದರೆ, ನೆಕ್‌ ಗಾರ್ಡ್‌ ಕುತ್ತಿಗೆಯ ಬಳಿ ಆವರಿಸುತ್ತದೆ. ಇದರಿಂದ ಕಿರಿಕಿರಿಯಾಗುತ್ತದೆ ಎನ್ನುವುದು ಹಲವು ಆಟಗಾರರ ದೂರು.

Advertisement

ಆಸ್ಟ್ರೇಲಿಯ, ವೆಸ್ಟ್‌ ಇಂಡೀಸ್‌, ದಕ್ಷಿಣ ಆಫ್ರಿಕಾ ಮತ್ತು ಇಂಗ್ಲೆಂಡ್‌ ಪಿಚ್‌ಗಳಲ್ಲಿ ಆಡಲು ಹೋಗುವಾಗ ಇಂತಹ ಹೆಲ್ಮೆಟ್‌ ಬಳಕೆ ಸೂಕ್ತ ಎನ್ನುವ ಸಲಹೆಗಳೂ ಅಂತಾರಾಷ್ಟ್ರೀಯ ಮಟ್ಟದ ವೈದ್ಯಕೀಯ ಪರಿಣತರಿಂದ ಕೇಳಿಬರುತ್ತಿವೆ. ಏಕೆಂದರೆ, ಇಲ್ಲಿರುವ ಪಿಚ್‌ಗಳಲ್ಲಿ ಬೌನ್ಸರ್‌ ಎಸೆತಗಳ ದರ್ಬಾರು ಜೋರು. ಅದರಲ್ಲೂ ಆಸ್ಟ್ರೇಲಿಯ ಆಟಗಾರರು ಈ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ.

ಐದು ವರ್ಷಗಳ ಹಿಂದಷ್ಟೇ ತಮ್ಮ ಸಹ ಆಟಗಾರ ಫಿಲಿಪ್‌ ಹ್ಯೂಸ್‌ ಸಾವು ಅವರ ಮನದಲ್ಲಿದೆ. ಶೆಫಿ ಫೀಲ್ಡ್ ಟ್ರೋಫಿ ಕ್ರಿಕೆಟ್‌ ಟೂರ್ನಿಯಲ್ಲಿ ಆಡುತ್ತಿದ್ದ ಫಿಲಿಪ್‌ ಅವರ ಕುತ್ತಿಗೆಗೆ ಅಪ್ಪಳಿಸಿದ ಚೆಂಡು ಅವರ ಪ್ರಾಣವನ್ನೇ ಕಿತ್ತುಕೊಂಡಿತ್ತು. ಈ ಘಟನೆ ವೈದ್ಯರು ನೆಕ್ ಗಾರ್ಡ್‌ ಹೆಲ್ಮೆಟ್‌ ಬಳಕೆ ಕಡ್ಡಾಯಗೊಳಿಸುವಂತೆ ಒತ್ತಾಯಿಸು ತ್ತಿದ್ದಾರೆ.  ಬೇರೆ ಬೇರೆ ದೇಶಗಳಲ್ಲಿ ಕೆಲವು ಆಟಗಾರರು ಸ್ವಇಚ್ಚೆಯಿಂದ ಈ ಹೆಲ್ಮೆಟ್‌ ಬಳಸುತ್ತಿದ್ದಾರೆ. ಅದರಲ್ಲಿ ಭಾರತದ ಶಿಖರ್‌ ಧವನ್‌ ಕೂಡ ಒಬ್ಬರು. ಸ್ಮಿತ್‌ ಘಟನೆಯ ನಂತರ ಮತ್ತಷ್ಟು ಬ್ಯಾಟ್ಸ್‌ಮನ್‌ಗಳು ಇದನ್ನು ಧರಿಸುವ ಸಾಧ್ಯತೆ ಇದೆ.

ಮೂಗು ಮುರಿಯುವ ಹಳೆ ಚಟ

ಹೆಲ್ಮೆಟ್‌ ಧರಿಸಲು ಹಲವು ಕ್ರಿಕೆಟಿಗರಿಗೆ ಮೊದಲಿನಿಂದಲೂ ತಾತ್ಸಾರ ಭಾವ ಇದೆ. ಅದಕ್ಕೆ ಕಾರಣ ಗೊತ್ತಿಲ್ಲ. ಹಾಗೆ ನೋಡಿದರೆ ಚೆಂಡಿನಿಂದ ತಲೆಗೆ ಪೆಟ್ಟು ತಿಂದು ಸತ್ತ ದಾಖಲೆಗಳು 1870ರಿಂದಲೇ ಸಿಗುತ್ತವೆ. ಇಂಗ್ಲೆಂಡ್‌ನ‌ ಜಾರ್ಜ್‌ ಸಮ್ಮರ್ಸ್‌ ಅವರು ನಾಟಿಂಗ್‌ಹ್ಯಾಮ್‌ನಲ್ಲಿ ತಲೆಗೆ ಚೆಂಡು ಬಡಿದು ಸಾವನ್ನಪ್ಪಿದ್ದರು. 1883ರಲ್ಲಿ ಇಂಗ್ಲೆಂಡ್‌ನ‌ ಫ್ರೆಡ್ರಿಕ್‌ ರ್ಯಾಂಡಮ್‌ ಕೂಡ ಅದೇ ರೀತಿ ಸಾವನ್ನಪ್ಪಿದ್ದರು.

1998ರಲ್ಲಿ ಢಾಕಾದಲ್ಲಿ ನಡೆದಿದ್ದ ಪಂದ್ಯದಲ್ಲಿ ಸ್ಲಿಪ್‌ ಪಾಯಿಂಟ್‌ನಲ್ಲಿ ಫೀಲ್ಡಿಂಗ್‌ ಮಾಡುತ್ತಿದ್ದ ಭಾರತದ ರಮಣ್‌  ಲಾಂಬಾ ತಲೆಗೆ ಬಡಿದ ಚೆಂಡು ಅವರ ಜೀವ ನುಂಗಿತ್ತು. 2013ರಲ್ಲಿ ಡೆರಿನ್‌ ರಾಂಡಲ್‌ ಕೂಡ ಅಂತಹದ್ದೇ ದುರಂತ ಸಾವನ್ನಪ್ಪಿದ್ದರು. ಆದರೂ ಇನ್ನೂ ಹಲವು ಆಟಗಾರರು ಹೆಲ್ಮೆಟ್‌ ಬಳಕೆಯ ಕುರಿತು ತಾತ್ಸಾರ ಭಾವನೆ ಹೊಂದಿದ್ದಾರೆ. ಈಗಿನ ಕಾಲದಲ್ಲಿ ಅತ್ಯಂತ ನಾಜೂಕಾಗಿ ತಯಾರಿಸಿದ ಹೆಲ್ಮೆಟ್‌ಗಳು ಮಾರುಕಟ್ಟೆಯಲ್ಲಿವೆ. ಆದರೆ ದಶಕದ ಹಿಂದೆ ಹಾಗಿರಲಿಲ್ಲ.

1930ರಲ್ಲಿಯೇ ಇಂಗ್ಲೆಂಡ್‌ನ‌ ಪ್ಯಾಟ್ಸೆ ಹೆಂಡ್ರೆನ್‌ ತಾವೇ ವಿನ್ಯಾಸಗೊಳಿಸಿಕೊಂಡ ಹೆಲ್ಮೆಟ್‌ ಧರಿಸಿದ್ದರು. ಕ್ರಿಕೆಟ್‌ನಲ್ಲಿ ಇಂತಹ ಪ್ರಯತ್ನ ಆಗಲೇ ಮೊದಲು ಎನ್ನಲಾಗುತ್ತದೆ. ಆದರೆ ಅಧಿಕೃತವಾಗಿ ಹೆಲ್ಮೆಟ್‌ ಬಳಕ್ಕೆ ಕಂಡಿದ್ದು 1970ರ ನಂತರವೇ. ನಾಲ್ಕು ದಶಕಗಳಲ್ಲಿ ಹಲವು ಕ್ರಿಕೆಟಿಗರು ಈ ರೀತಿ ಹೆಲ್ಮೆಟ್‌ ಬಳಕೆಗೆ ಒಪ್ಪಿರಲಿಲ್ಲ.

ಆದರೆ ಯಾವಾಗ 70ರ ದಶಕದಲ್ಲಿ ವಿಂಡೀಸ್‌ ದೈತ್ಯ ಬೌಲರ್‌ಗಳ ಚೆಂಡುಗಳು ಪುಟಿದೆದ್ದು ತಲೆಯತ್ತ ನುಗ್ಗತೊಡಗಿದವೋ ಬ್ಯಾಟ್ಸ್‌ಮನ್‌ಗಳ ಎದೆ ಡವಗುಟ್ಟಿದವು. ಆಗ ಹೆಲ್ಮೆಟ್‌ ಧರಿಸಲು ಚಿತ್ತ ಹರಿಸಿದರು. 1977ರಲ್ಲಿ ವಿಶ್ವ ಸೀರಿಸ್‌ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ‌ ಡೆನಿಸ್‌ ಅಮಿಸ್‌ ತಾವೇ ವಿನ್ಯಾಸಗೊಳಿಸಿಕೊಂಡ ಹೆಲ್ಮೆಟ್‌ನೊಂದಿಗೆ ಕಣಕ್ಕಿಳಿದರು. ಪ್ರೇಕ್ಷಕರು ಅವರನ್ನು ವ್ಯಂಗ್ಯ ಮಾಡಿದರು. ಹೀಯಾಳಿಸಿದರು. ಆದರೆ ಅವರು ತಲೆಕೆಡಿಸಿಕೊಳ್ಳಲಿಲ್ಲ.

ದ್ವಿಚಕ್ರ ವಾಹನಗಳ ಸವಾರರ ಹೆಲ್ಮೆಟ್‌ ತಯಾರಿಸುವವರ ಬಳಿ ತೆರಳಿದೆ. ಲಘುತೂಕದ ಹೆಲ್ಮೆಟ್‌ ನಿರ್ಮಿಸಿಕೊಡುವಂತೆ ಕೇಳಿಕೊಂಡೆ. ಅವರೂ ಸ್ವಲ್ಪ ಪ್ರಯತ್ನಿಸಿ ಮಾಡಿಕೊಟ್ಟರು. ಧರಿಸಿದೆ’ ಎಂದು ಕೆಲವು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಡೆನಿಸ್‌ ನೆನಪಿಸಿಕೊಂಡಿದ್ದರು. 1978ರಲ್ಲಿ ಮೊದಲ ಬಾರಿಗೆ ಟೆಸ್ಟ್‌ ಕ್ರಿಕೆಟ್‌ನಲ್ಲಿ ಹೆಲ್ಮೆಟ್‌ ಪದಾರ್ಪಣೆ ಮಾಡಿತು. ವಿಂಡೀಸ್‌ ಎದುರಿನ ಟೆಸ್ಟ್‌ನಲ್ಲಿ ಆಸ್ಟ್ರೇಲಿಯದ ಗ್ರಹಾಂ ಚಾಲಪ್‌ ಹೆಲ್ಮೆಟ್‌ ಧಾರಣೆ ಮಾಡಿದ್ದರು. ಹಲವು ದಿಗ್ಗಜ ಕ್ರಿಕೆಟಿಗರು ತಮಗೆ ಸರಿಹೊಂದುವಂತಹ ಹೆಲ್ಮೆಟ್‌ಗಳನ್ನು ಸಿದ್ಧಪಡಿಸಿಕೊಂಡಿದ್ದರು. ಅದರಲ್ಲಿ ಇಂಗ್ಲೆಡ್‌ನ‌ ಮೈಕ್‌ ಬ್ರೇರ್ಲಿ ಮತ್ತು ಟೋನಿ ಗ್ರೇಗ್‌ ಪ್ರಮುಖರು.

ಭಾರತದ ಮಟ್ಟಿಗೆ ಸುನೀಲ್‌ ಗಾವಾಸ್ಕರ್‌ ಹೆಲ್ಮೆಟ್‌ ಬಳಕೆ ಆರಂಭಿಸಿದ ಮೊದಲಿಗರು. ಆದರೆ ಆಧುನಿಕ ಕ್ರಿಕೆಟ್‌ ಯುಗದಲ್ಲಿಯೂ ಹೆಲ್ಮೆಟ್‌ಗೆ ಮೂಗು ಮುರಿಯುವವರ ಸಂಖ್ಯೆ ಕಡಿಮೆ ಇರಲಿಲ್ಲ. ವಿಂಡೀಸ್‌ ತಂಡದ ದಿಗ್ಗಜ ಆಟಗಾರ ಸರ್‌ ವಿವಿಯನ್‌ ರಿಚರ್ಡ್ಸ್‌ ತಮ್ಮ ಇಡೀ ಕ್ರಿಕೆಟ್‌ ಜೀವನದಲ್ಲಿ ಹೆಲ್ಮೆಟ್‌ ಧರಿಸಲಿಲ್ಲ. ಅವರು 90ರ ದಶಕದಲ್ಲಿ ಆಡುವಾಗ ಬೇರೆ ದೇಶಗಳ ತಂಡಗಳಲ್ಲಿಯೂ ಯಮವೇಗದ ಬೌಲರ್ ಗಳು ಇದ್ದರು ಎನ್ನುವುದು ಇಲ್ಲಿ ಗಮನಾರ್ಹ. ಆದರೆ ಕೆಲವು ಕೆಟ್ಟ ಪ್ರಕರಣಗಳಿಂದಾಗಿ ಸ್ವಯಂ ನಿರ್ಮಿತ ಹೆಲ್ಮೆಟ್‌ಗಳನ್ನು ಕೈಬಿಡಲಾಯಿತು. ಐಸಿಸಿಯ ನಿಯಮದ ಪ್ರಕಾರವೇ ತಯಾರಿಸಲು ಆರಂಭಿಸಲಾಯಿತು. ಶಾರ್ಟ್‌ ಲೆಗ್‌, ಸ್ಲಿಪ್‌ ಪಾಯಿಂಟ್‌ ಫೀಲ್ಡರ್‌ಗಳಿಗೂ ಹೆಲ್ಮೆಟ್‌ ಮತ್ತು ಪ್ಯಾಡ್‌ ಧರಿಸುವುದು ಕಡ್ಡಾಯಗೊಳಿಸಲಾಯಿತು.

ಇದೀಗ ಮುಂದುವರಿದ ಭಾಗ. ಹೆಲ್ಮೆಟ್‌ ಭಾಗವನ್ನು ತುಸು ವಿಸ್ತರಿಸಿ ಕುತ್ತಿಗೆಯವರೆಗೂ ರಕ್ಷಣೆ ಒದಗಿಸುವತ್ತ ಚಿತ್ತ ಇದೆ. ಟಿ20, ಏಕದಿನ ಮತ್ತು ಟೆಸ್ಟ್‌ಗಳಲ್ಲಿ ಇಂದು ಬ್ಯಾಟಿಂಗ್‌ ವಿಧಾನಗಳು ಬದಲಾಗುತ್ತಿವೆ. ಅದಕ್ಕೆ ತಕ್ಕಂತೆ ಬೌಲರ್ ಗಳು ಶಸ್ತ್ರಗಳನ್ನು ಸಿದ್ಧಗೊಳಿಸಿಕೊಂಡಿದ್ದಾರೆ. ಆಟದ ಜತೆಗೆ ರಕ್ಷಣೆಗೆ ಒತ್ತು ಕೊಡುವುದು ಕೂಡ ಆದ್ಯತೆಯ ಭಾಗವಾಗುತ್ತಿದೆ. ಐಸಿಸಿ ನೆಕ್‌ಕವರ್‌ ಹೆಲ್ಮೆಟ್‌ಳನ್ನು ಕಡ್ಡಾಯಗೊಳಿಸುವ ದಿನ ದೂರವಿಲ್ಲ.

ಬ್ಯಾಟ್‌ ಬಡಿದು ಸಾವು

ಅಂದು 1924ರ ಆಗಸ್ಟ್‌ 28. ಹಾರ್ಸೆಟೆಡ್‌ ಕೇನ್ಸ್‌ನಲ್ಲಿ ಕ್ರಿಕೆಟ್‌ ಪಂದ್ಯ ನಡೆದಿತ್ತು. ಇಂಗ್ಲೆಂಡ್‌ನ‌ ಬ್ಯಾಟ್ಸ್‌ಮನ್‌ ಅರ್ಮಾನ್‌ ಡ್ಯಾರ್ಡ ದುರಂತ ಸಾವನ್ನಪ್ಪಿದ್ದರು.  ಆದರೆ ಅವರು ಸತ್ತಿದ್ದು ಬ್ಯಾಟ್‌ ತಲೆಗೆ ಬಡಿದು. ಚೆಂಡಲ್ಲ!

ಅಭಿ

Advertisement

Udayavani is now on Telegram. Click here to join our channel and stay updated with the latest news.

Next