ಬಸವನಬಾಗೇವಾಡಿ: ರಾಜ್ಯ ಸರಕಾರದ ಮಹತ್ವಾಕಾಂಶದ ಯೋಜನೆಯಾದ ಇಂದಿರಾ ಕ್ಯಾಂಟೀನ್ ಭಾಗ್ಯ ಪಟ್ಟಣದಲ್ಲಿ ಶೀಘ್ರದಲ್ಲೇ ಆರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ ತಿಳಿಸಿದರು.
ಗುರುವಾರ ಪಟ್ಟಣದಲ್ಲಿ ಸ್ಥಳ ಪರಿಶೀಲನೆ ನಡೆಸಿದ ನಂತರ ಮಾತನಾಡಿದ ಅವರು, ಬಸ್ ನಿಲ್ದಾಣ ಪಕ್ಕದಲ್ಲಿರುವ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಜಾಗೆಯಲ್ಲಿ ಸುಮಾರು 60 ಅಡಿ ಅಗಲ, 70 ಅಡಿ ಉದ್ದದ ಸ್ಥಳದಲ್ಲಿ ಜಿಲ್ಲಾಡಳಿತ, ತಾಲೂಕಾಡಳಿತ ಮತ್ತು ಪುರಸಭೆ ಇಲಾಖೆ ಅವರು ಇಂದಿರಾ ಕ್ಯಾಂಟೀನ್ ನಿರ್ಮಾಣ ಮತ್ತು ಊಟ,
ಉಪಾಹಾರದ ವ್ಯವಸ್ಥೆ ವಹಿಸಿಕೊಂಡಿದ್ದಾರೆ.
ಪುರಸಭೆ ಅವರು ಕುಡಿಯುವ ನೀರು, ವಿದ್ಯುತ್, ಸಿ.ಸಿ. ಕ್ಯಾಮೆರಾ, ಕಾವಲುಗಾರ, ಇಂದಿರಾ ಕ್ಯಾಂಟೀನ್‌ದ ಸುತ್ತಲು ತಡಗೊಡೆ ನಿರ್ಮಾಣದ ವ್ಯವಸ್ಥೆ ವಹಿಸಿಕೊಂಡಿದೆ. ಜಿಲ್ಲಾಡಳಿತ ಇಂದಿರಾ ಕ್ಯಾಂಟೀನ್‌ದ ನಿರ್ಮಾಣ, ಊಟ ಮತ್ತು ಉಪಾಹಾರದ ಸಾಮಗ್ರಿಗಳು ಮತ್ತು ಅಡುಗೆ ತಯಾರಿಸುವ ವ್ಯವಸ್ಥೆ ವಹಿಸಿಕೊಂಡಿದ್ದಾರೆ. ಶೀಘ್ರದಲ್ಲೇ ಇಂದಿರಾ ಕ್ಯಾಂಟೀನ್ ಆರಂಭವಾಗಲಿದೆ. ಪ್ರತಿದಿನ ಬೆಳಿಗ್ಗೆ 5 ರೂ.ಗೆ ಉಪಾಹಾರ, 10 ರೂ.ದಲ್ಲಿ ಮಧ್ಯಾಹ್ನ ಮತ್ತು ಸಂಜೆ ಊಟ ನೀಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಕೂಡಲಸಂಗಮ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಮಾದೇವ ಮುರಗಿ, ತಹಶೀಲ್ದಾರ್ ಎಂ.ಎನ್. ಚೋರಗಸ್ತಿ, ಪುರಸಭೆ ಮುಖ್ಯಾಧಿಕಾರಿ ಬಿ.ಎ. ಸೌದಾಗರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣ ಪಟ್ಟಣಶೆಟ್ಟಿ, ಪುರಸಭೆ ಸದಸ್ಯರಾದ ಬಸುರಾಜ ತುಂಬಗಿ, ನಜೀರ ಗಣಿ, ಮುತ್ತು ಉಕ್ಕಲಿ ಇದ್ದರು.