Advertisement

ಜಿಲ್ಲಾಧಿಕಾರಿಗಳಿಂದ ಮತ ಎಣಿಕೆ ಕೇಂದ್ರದ ಪರಿಶೀಲನೆ

03:12 PM Apr 13, 2018 | Team Udayavani |

ಕಲಬುರಗಿ: ವಿಧಾನಸಭೆ ಚುನಾವಣೆಯ ಮತ ಎಣಿಕೆಗಾಗಿ ಗುಲಬರ್ಗಾ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡಲಾಗಿದ್ದು, ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ ಗುಲಬರ್ಗಾ ವಿಶ್ವವಿದ್ಯಾಲಯದ ವಿವಿಧ ವಿಭಾಗಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

Advertisement

ಗುಲಬರ್ಗಾ ವಿಶ್ವವಿದ್ಯಾಲಯದ ಗಣಿತ ವಿಭಾಗದಲ್ಲಿ ಅಫಜಲಪುರ, ಸಸ್ಯಶಾಸ್ತ್ರ ವಿಭಾಗದಲ್ಲಿ ಚಿಂಚೋಳಿ, ಒಳಾಂಗಣ ಕ್ರೀಡಾಂಗಣದಲ್ಲಿ ಚಿತ್ತಾಪುರ ಮತ್ತು ಸೇಡಂ, ಕನ್ನಡ ವಿಭಾಗದಲ್ಲಿ ಗುಲಬರ್ಗಾ ಉತ್ತರ ಮತ್ತು ದಕ್ಷಿಣ, ಪರೀಕ್ಷಾಂಗ ವಿಭಾಗದಲ್ಲಿ ಗುಲಬರ್ಗಾಗ್ರಾಮೀಣ ಮತ್ತು ಜೇವರ್ಗಿ ಹಾಗೂ ಪರೀಕ್ಷಾ·ಭವನದಲ್ಲಿ ಆಳಂದ ಮತಕ್ಷೇತ್ರದ ಮತ ಎಣಿಕೆ ಮಾಡಲು ಮತ ಎಣಿಕಾ ಕೇಂದ್ರಗಳನ್ನು ಸ್ಥಾಪಿಸಲು ಮಾರ್ಗದರ್ಶನ ನೀಡಿದರು.

ಪ್ರಾಣಿಶಾಸ್ತ್ರ ವಿಭಾಗದಲ್ಲಿ ಮಾಧ್ಯಮ ಕೇಂದ್ರವನ್ನು ಸ್ಥಾಪಿಸಿ ಮಾಧ್ಯಮದವರಿಗೆ ಮತ ಎಣಿಕೆಯ ಪ್ರತಿ ಸುತ್ತಿನ ಫಲಿತಾಂಶ ಹಾಗೂ ರಾಜ್ಯದ ಫಲಿತಾಂಶ ಲಭ್ಯವಾಗುವಂತೆ ವ್ಯವಸ್ಥೆ ಮಾಡಲು ತಿಳಿಸಿದರು. ಮಾಧ್ಯಮ ಕೇಂದ್ರದಲ್ಲಿ ಗಣಕಯಂತ್ರಗಳನ್ನು, ಇಂಟರ್‌ನೆಟ್‌ ಸೌಲಭ್ಯ ಹಾಗೂ ವೈ.ಫೈ. ಸೌಲಭ್ಯ ಕಲ್ಪಿಸಲು ತಿಳಿಸಿದರು. 

ಮತ ಎಣಿಕಾ ಕೇಂದ್ರದಲ್ಲಿ ಸೂಕ್ತ ಬ್ಯಾರಿಕೇಡಿಂಗ್‌ ವ್ಯವಸ್ಥೆ ಕಲ್ಪಿಸಿ ಕೌಂಟಿಂಗ್‌ ಏಜೆಂಟ್‌ರಿಗೆ ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು. ಮತದಾನದ ನಂತರ ಎಲೆಕ್ಟ್ರಾನಿಕ್‌ ಮತಯಂತ್ರ ಹಾಗೂ ವಿ.ವಿ. ಪ್ಯಾಟ್‌ ಯಂತ್ರ ಸಂಗ್ರಹಿಸಲು ಪ್ರತಿ ಮತಕ್ಷೇತ್ರಗಳಿಗೆ ತಲಾ ಮೂರು ಭದ್ರ ಕೋಣೆಗಳನ್ನು ಗುರುತಿಸಲಾಗಿದ್ದು, ವಿವಿ ಪ್ಯಾಟ್‌ ಯಂತ್ರ ಸಹಿತ ಸಂಗ್ರಹಿಸಬೇಕಾಗಿರುವುದರಿಂದ ಹೆಚ್ಚಿನ ಸ್ಥಳಾವಕಾಶದ ಅವಶ್ಯಕತೆಯಿದೆ. 

ಈಗಾಗಲೇ ಗುರುತಿಸಿರುವ ಭದ್ರ ಕೋಣೆಗಳ ವಿಸ್ತೀರ್ಣ ಪರಿಶೀಲಿಸಿ ಎಲ್ಲ ಮತಯಂತ್ರಗಳನ್ನು ಸಂಗ್ರಹಿಸಲು ಬೇಕಾಗುವ ಭದ್ರ ಕೋಣೆಗಳ ವಿವರ ಸಲ್ಲಿಸಲು ಸೂಚಿಸಿದ ಜಿಲ್ಲಾಧಿಕಾರಿಗಳು ಪ್ರತಿಯೊಂದು ಮತ ಎಣಿಕೆ ಕೇಂದ್ರಗಳ ಹತ್ತಿರ ಅಗ್ನಿ ಶಾಮಕ ದಳ ಹಾಗೂ ಸೂಕ್ತ ಪೊಲೀಸ್‌
ಬಂದೋಬಸ್ತ್ ವ್ಯವಸ್ಥೆ ಮಾಡುವಂತೆ ತಿಳಿಸಿದರು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎನ್‌. ಶಶಿಕುಮಾರ ಮಾತನಾಡಿ, ಗುಲಬರ್ಗಾ ವಿಶ್ವವಿದ್ಯಾಲದ ಮುಖ್ಯ ಪ್ರವೇಶ ದ್ವಾರ ಹೊರತುಪಡಿಸಿ ಆವರಣ ಗೋಡೆಯ ಎಲ್ಲ ದ್ವಾರಗಳನ್ನು ಮುಚ್ಚಲಾಗುವುದು. 

ಮತ ಎಣಿಕೆ ಏಜೆಂಟರು ಮತ್ತು ಸಿಬ್ಬಂದಿಗಳಿಗೆ ಪಾಸುಗಳ ವ್ಯವಸ್ಥೆ ಮಾಡಿದ್ದಲ್ಲಿ ಅವರನ್ನು ಮತ ಎಣಿಕೆ ಕೇಂದ್ರಗಳಿಗೆ ಪ್ರವೇಶ ನೀಡಲು ಅನುಕೂಲವಾಗುವುದು. ವಿಶ್ವವಿದ್ಯಾಲಯದ ಮುಖ್ಯ ಪ್ರವೇಶ ದ್ವಾರದಿಂದ ಏಜೆಂಟರು ಮತ್ತು ಸಿಬ್ಬಂದಿಗಳಿಗೆ ಮತ ಎಣಿಕೆ ಕೇಂದ್ರಗಳಿಗೆ ಹೋಗಲು ಬಸ್ಸುಗಳ ವ್ಯವಸ್ಥೆ ಮಾಡಿದಲ್ಲಿ ಅನುಕೂಲವಾಗುವುದು ಎಂದರು.

ಹೆಚ್ಚುವರಿ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಪಾಲಿಕೆ ಆಯುಕ್ತ ಪಿ. ರಘುನಂದನಮೂರ್ತಿ, ಸಹಾಯಕ ಆಯುಕ್ತ ಎನ್‌.ಆರ್‌. ಉಮೇಶಚಂದ್ರ, ವಿಶ್ವವಿದ್ಯಾಲಯದ ಕುಲಸಚಿವ ಪ್ರೊ| ದಯಾನಂದ ಅಗಸರ್‌, ಚುನಾವಣಾ ತಹಶೀಲ್ದಾರ್‌ ಪ್ರಕಾಶ ಚಿಂಚೋಳಿಕರ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್‌ ಅಜೀಜುದ್ದೀನ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next