Advertisement

ಕೇಂದ್ರ ಬರ ಅಧ್ಯಯನ ತಂಡದಿಂದ ಪರಿಶೀಲನೆ

06:00 AM Nov 18, 2018 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರದ 10 ಮಂದಿ ಹಿರಿಯ ಅಧಿಕಾರಿಗಳ ತಂಡ ಶನಿವಾರ ರಾಜ್ಯಕ್ಕೆ ಆಗಮಿಸಿದ್ದು, ರಾಜ್ಯದ ಬರಪೀಡಿತ ಜಿಲ್ಲೆಗಳಲ್ಲಿ ಅಧ್ಯಯನ ಪ್ರವಾಸ ಕೈಗೊಂಡಿದೆ. 

Advertisement

ಮೂರು ದಿನಗಳ ಕಾಲ ರಾಜ್ಯದ ಬರಪೀಡಿತ ಜಿಲ್ಲೆಗಳ ಪ್ರವಾಸ ಕೈಗೊಳ್ಳಲಿರುವ ತಂಡ, ಸೋಮವಾರ ಬೆಂಗಳೂರಿನಲ್ಲಿ ರಾಜ್ಯ ಸರ್ಕಾರದ ಹಿರಿಯ ಅಧಿಕಾರಿಗಳ ಜತೆ ಸಭೆ ನಡೆಸಿ, ಬಳಿಕ ಕೇಂದ್ರಕ್ಕೆ ಅಧ್ಯಯನ ವರದಿ ಸಲ್ಲಿಸಲಿದೆ. 

ಕರ್ನಾಟಕದಲ್ಲಿನ ಬರ ಪರಿಸ್ಥಿತಿ ಬಗ್ಗೆ ರಾಜ್ಯ ಸರ್ಕಾರ ಅಕ್ಟೋಬರ್‌ನಲ್ಲಿ ಕೇಂದ್ರಕ್ಕೆ ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಮೂರು ತಂಡಗಳು ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡಿವೆ.

ಕೃಷಿ ಇಲಾಖೆ ಜಂಟಿ ಕಾರ್ಯದರ್ಶಿ ಅಮಿತಾಬ್‌ ಗೌತಮ್‌ ನೇತೃತ್ವದ ತಂಡ ಯಾದಗಿರಿ, ರಾಯಚೂರು ಜಿಲ್ಲೆಗಳಿಗೆ, ಡಾ.ಮಹೇಶ್‌ ನೇತೃತ್ವದ ತಂಡ ಧಾರವಾಡ, ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳಿಗೆ, ಮಾನಸ್‌ ಚೌಧರಿ ನೇತೃತ್ವದ ತಂಡ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಭೇಟಿ ನೀಡಿ, ಬರ ಪರಿಶೀಲನೆ ನಡೆಸಿತು.

ಶನಿವಾರ ಬೆಳಗ್ಗೆ ಬೆಂಗಳೂರಿನಿಂದ ಆಗಮಿಸಿದ ನೀತಿ ಆಯೋಗದ ಜಂಟಿ ಸಲಹೆಗಾರ ಮಾನಸ್‌ ಚೌಧರಿ ನೇತೃತ್ವದ ತಂಡ, ಕೋಲಾರ ಹೊರವಲಯದ ಬತ್ತಿದ ಅಮ್ಮೇರಹಳ್ಳಿ ಕೆರೆ ಮತ್ತು ಪಂಪ್‌ಹೌಸ್‌ಗಳ ವೀಕ್ಷಣೆ ನಡೆಸಿತು. ಬಳಿಕ, ಕೋಲಾರ ತಾಲೂಕಿನ ಛತ್ರಕೋಡಿಹಳ್ಳಿ, ಮುದುವತ್ತಿ, ಪರ್ಶ್ವಗಾನಹಳ್ಳಿ, ಮಾಲೂರು ತಾಲೂಕಿನ ಲಕ್ಷಿ$¾àಸಾಗರ ಹಾಗೂ ಬಂಗಾರಪೇಟೆ ತಾಲೂಕಿನ ಗೊಲ್ಲಹಳ್ಳಿ, ಸಿದ್ದನಹಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಬರದ ಅಧ್ಯಯನ ನಡೆಸಿತು. ಬಳಿಕ, ಕೋಲಾರದ ಜಿ.ಪಂ ಸಭಾಂಗಣದಲ್ಲಿ ಸಭೆ ನಡೆಸಿ, ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಅವರಿಂದ ಜಿಲ್ಲೆಯ ಬರ ಪರಿಸ್ಥಿತಿಯ ಸಮಗ್ರ ಮಾಹಿತಿ ಪಡೆಯಿತು. ಒಟ್ಟೂ 57.45 ಕೋಟಿ ರೂ.ಗಳ ಪರಿಹಾರಕ್ಕಾಗಿ ಜಿಲ್ಲಾಧಿಕಾರಿ ಮನವಿ ಸಲ್ಲಿಸಿದರು. ಬಳಿಕ, ತಂಡ ಚಿಕ್ಕಬಳ್ಳಾಪುರ ಜಿಲ್ಲೆಯ ಬರದ ಅಧ್ಯಯನ ನಡೆಸಿತು.

Advertisement

ಈ ಮಧ್ಯೆ, ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಜಂಟಿ ನಿರ್ದೇಶಕ ಅಮಿತಾಭ್‌ ಗೌತಮ್‌ ನೇತೃತ್ವದ ತಂಡ, ಯಾದಗಿರಿ ಜಿಲ್ಲೆಯ ದುಪ್ಪಲ್ಲಿ ಕೆರೆಯಲ್ಲಿ ಮಹಾತ್ಮಗಾಂಧಿ  ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿತು. ತಾಲೂಕಿನ ಕಿಲ್ಲನಕೇರಾ, ಶೆಟ್ಟಳ್ಳಿಯಲ್ಲಿ ಹತ್ತಿ ಬೆಳೆ, ಕೂಡಲೂರುನಲ್ಲಿ ತೊಗರಿ ಬೆಳೆಯನ್ನು ಪರಿಶೀಲಿಸಿತು. ಬಳಿಕ, ರಾಯಚೂರು ತಾಲೂಕಿನ ಏಗನೂರು, ಕುಕನೂರು, ಮರ್ಚೆಡ್‌ ಗ್ರಾಮಗಳಲ್ಲಿ ಅಧ್ಯಯನ ನಡೆಸಿತು. ಅಲ್ಲಿಂದ ಕಲ್ಲೂರು, ಮಾನ್ವಿಯಲ್ಲಿ ಅಧ್ಯಯನ ನಡೆಸಿದ ತಂಡ ಬಳ್ಳಾರಿಗೆ ತೆರಳಿತು.

ಇದೇ ವೇಳೆ, ಕೇಂದ್ರದ ಪಶು ಸಂಗೋಪನೆ ಇಲಾಖೆಯ ನಿರ್ದೇಶಕ ಡಾ. ಮಹೇಶ್‌, ಸಿಡಬುÉಸಿ ನಿರ್ದೇಶಕ ಒ.ಕೆ.ಆರ್‌.ರೆಡ್ಡಿ ಹಾಗೂ ಗ್ರಾಮೀಣ ಅಭಿವೃದ್ಧಿ ಇಲಾಖೆಯ ಕೆ.ನೀತಾ ತಾಹಿಲಿನಿ ಯು.ಎಸ್‌.ಅವರನ್ನೊಳಗೊಂಡ ಕೇಂದ್ರ ಬರ ಅಧ್ಯಯನ ತಂಡ, ಬೆಳಗಾವಿ ಜಿಲ್ಲೆಯ ರಾಮದುರ್ಗ, ಬಾಗಲಕೋಟೆ ಜಿಲ್ಲೆ ಬಾದಾಮಿ ತಾಲೂಕಿನ ಜಂಗವಾಡ ಗ್ರಾಮ, ಹವಳಖೋಡ ಗ್ರಾಮಗಳಿಗೆ ಭೇಟಿ ನೀಡಿತು.

ಬರ ಅಧ್ಯಯನ ತಂಡದೆದುರು ಅನ್ನದಾತರು ತಮ್ಮ ಅಳಲು ತೋಡಿಕೊಂಡರು. ಈ ವೇಳೆ, ರೈತರನ್ನುದ್ದೇಶಿಸಿ ಮಾತನಾಡಿದ ಅ ಧಿಕಾರಿಗಳು, ಯಾವ ಬೀಜ ಬಿತ್ತನೆ ಮಾಡಿದ್ದೀರಿ. ಬೇರೆ ಕಡೆ ಬೆಳೆ ಹೇಗಿದೆ. ಮಳೆ ಯಾವಾಗ ಬಂತು ಎಂಬಿತ್ಯಾದಿ ಮಾಹಿತಿ ಕೇಳಿದರು.

ನಾಳೆ ಬೆಂಗಳೂರಲ್ಲಿ ಸಭೆ:
ಈ ನಡುವೆ, ಯಾದಗಿರಿಯಲ್ಲಿ ಮಾತನಾಡಿದ ಅಮಿತಾಭ್‌ ಗೌತಮ್‌, ಬರ ಅಧ್ಯಯನದ ಬಳಿಕ ನ.19ರಂದು ಬೆಂಗಳೂರಿನಲ್ಲಿ ಸಭೆ ನಡೆಯಲಿದೆ. ರಾಜ್ಯದಲ್ಲಿ ಒಟ್ಟು ಹಾನಿಯಾಗಿರುವುದನ್ನು ಕ್ರೋಢೀಕರಿಸಿ ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ರಾಜ್ಯದ 24 ಜಿಲ್ಲೆಗಳಲ್ಲಿ ಬರದಿಂದ ಬೆಳೆ ಹಾನಿಯಾಗಿರುವ ಕುರಿತು ರಾಜ್ಯ ಸರ್ಕಾರ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದು, ಈ ನಿಟ್ಟಿನಲ್ಲಿ 3 ತಂಡ ರಚಿಸಿ ಪರಿಶೀಲನೆ ನಡೆಸಲಾಗುತ್ತಿದೆ. ರಾಜ್ಯದಲ್ಲಿ ಬರದಿಂದ ನಿತ್ಯ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂಬುದು ರಾಜ್ಯ ಸರ್ಕಾರಕ್ಕೆ ಸಂಬಂ ಧಿಸಿದ ವಿಚಾರ ಎಂದರು.

ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್‌ ನಿಯಮಾವಳಿ ಪ್ರಕಾರ ಬರ ಪ್ರಮಾಣ ದಾಖಲಿಸಲಾಗುವುದು. ಬಾಗಲಕೋಟೆ ಜಿಲ್ಲೆಯಲ್ಲಿ ಬರದ ಭೀಕರತೆ ಹೆಚ್ಚಿದ್ದು, ಮುಂಗಾರು ಹಂಗಾಮಿನ ಬೆಳೆ ಹಾನಿ ಕುರಿತು ಪರಿಶೀಲನೆ ನಡೆಸುತ್ತಿದ್ದೇವೆ. ನಮಗೆ ಒಂದು ವಾರಗಳ ಕಾಲಾವಕಾಶವಿದ್ದು, ಬಳಿಕ ಸಮಗ್ರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು.
– ಡಾ| ಮಹೇಶ, ಕೇಂದ್ರ ಬರ ಅಧ್ಯಯನ ತಂಡದ ಮುಖ್ಯಸ್ಥ.

Advertisement

Udayavani is now on Telegram. Click here to join our channel and stay updated with the latest news.

Next