Advertisement
ಬಿಜೆಪಿ ಬಯಸಿದಂತೆ ಮಾತನಾಡಲಾಗದುಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಪತ್ತೆ ವಿಚಾರದಲ್ಲಿ ನನಗೆ ಗೊತ್ತಾದ ಮಾಹಿತಿ ಪ್ರಕಾರವೇ ಮಾತನಾಡಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಬುಧವಾರ ಪಕ್ಷದ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಹೇಳಿದ್ದಿಷ್ಟು:
Related Articles
Advertisement
* ನನ್ನ ಹೇಳಿಕೆಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಸಚಿವ ಸುರೇಶ್‌ಕುಮಾರ್ ಸೇರಿದಂತೆ ಬಿಜೆಪಿ ನಾಯಕರು ನನ್ನನ್ನು ದೇಶದ್ರೋಹಿ, ಪಾಕಿಸ್ತಾನದ ಅಳಿಯ ಎಂದೆಲ್ಲಾ ಮಾತನಾಡಿದ್ದಾರೆ. ಪಾಕಿಸ್ತಾನಕ್ಕೆ ಸೀರೆ ತೆಗೆದುಕೊಂಡು ನೆಂಟಸ್ತನ ಮಾಡಲು ಹೋಗಿದ್ದು ಯಾರು ಎಂಬುದು ಜಗತ್ತಿಗೆ ಗೊತ್ತಿದೆ. ಇವರಿಂದ ನಾನು ದೇಶಭಕ್ತಿ, ಸಂಸ್ಕೃತಿ ಕಲಿಯಬೇಕಿಲ್ಲ.
* ಸಚಿವ ಸೋಮಣ್ಣ ಅವರು ದೇವೇಗೌಡರು ಕುಮಾರಸ್ವಾಮಿಗೆ ಸರಿಯಾಗಿ ಟ್ರೈನಿಂಗ್ ಕೊಟ್ಟಿಲ್ಲ ಎಂದಿದ್ದಾರೆ. ಹೌದು, ದೇವೇಗೌಡರು ನನಗೆ ಮನೆಹಾಳು ಮಾಡುವ ಟ್ರೈನಿಂಗ್ ಕೊಟ್ಟಿಲ್ಲ. ನಮ್ಮ ಪಕ್ಷದಲ್ಲೇ ಇದ್ದ ಯತ್ನಾಳ್ ಅವರ ಮಾತು ಗಮನಿಸಿದ್ದೇನೆ. ಆ ಮನುಷ್ಯ ಇಲ್ಲಿದ್ದಾಗ ಯಡಿ ಯೂರಪ್ಪ, ಶೋಭಾ ಕರಂದ್ಲಾಜೆ ಬಗ್ಗೆ ಏನೆಲ್ಲಾ ಮಾತನಾಡಿದ್ದ ಎಂಬ ಕ್ಯಾಸೆಟ್ ನನ್ನ ಹತ್ತಿರ ಇದೆ.
* ರಾಜ್ಯದಲ್ಲಿ ಬಿಜೆಪಿಗೆ ಶಕ್ತಿ ಬಂದ ನಂತರ ಹಾಗೂ ಸರ್ಕಾರ ರಚನೆಯಾದ ನಂತರ ಕಾನೂನು ಸುವ್ಯವಸ್ಥೆಗೆ ಧಕ್ಕೆ ಹಾಗೂ ಕೋಮು ಸಾಮರಸ್ಯ ಹಾಳು ಮಾಡುವ ಕೃತ್ಯಗಳು ನಡೆಯುತ್ತಿದೆ. ಈ ಹಿಂದೆ ರಾಮನಗರ, ಚನ್ನಪಟ್ಟಣದಲ್ಲಿ ನಡೆದ ಘಟನೆಗಳಿಂದ ವೀರೇಂದ್ರ ಪಾಟೀಲ್ ಅವರು ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡ ಉದಾಹರಣೆ ಇದೆ.
* ನಾನು ಎರಡು ಬಾರಿ ಮುಖ್ಯಮಂತ್ರಿಯಾಗಿ ಕೆಲಸ ಮಾಡಿದ್ದೇನೆ. ಸ್ಫೋಟಕ ಪತ್ತೆ ವಿಚಾರಕ್ಕೆ ಸಂಬಂಧಿಸಿದಂತೆ ನಾನು ನನ್ನದೇ ಆದ ಮೂಲ ಗಳಿಂದ ಸಂಗ್ರಹಿಸಿದ ಮಾಹಿತಿ ಆಧಾರದಲ್ಲೇ ನಾನು ಹೇಳಿಕೆ ನೀಡಿದ್ದೆ. ಅದಕ್ಕೆ ನಾನು ಈಗಲೂ ಬದ್ಧ. ಆದಿತ್ಯರಾವ್ ಶರಣಾಗತಿಗೆ ಮೊದಲು ಏನಾಯಿತು ಎಂಬುದು ನನಗೆ ಗೊತ್ತಿದೆ.
* ರಾಜ್ಯದಲ್ಲಿ ಸಮರ್ಥ ಪೊಲೀಸ್ ಅಧಿಕಾರಿಗಳಿದ್ದಾರೆ. ಆದರೆ, ಕೆಲವರು ಬಿಜೆಪಿ ನಾಯಕರು ಹಾಗೂ ಸರ್ಕಾರ ನಡೆಸುತ್ತಿರು ವವರನ್ನು ಮೆಚ್ಚಿಸಲು ಇಲಾಖೆಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಬಿಜೆಪಿ ನಾಯಕರು ಹೇಳಿದಂತೆ ಕುಣಿಯುತ್ತಿದ್ದಾರೆ.
ಕುಮಾರಸ್ವಾಮಿ ಕರ್ನಾಟಕದ ಓವೈಸಿವಿಜಯಪುರ: ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನೀಡಿರುವ ಹೇಳಿಕೆಗೆ ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಕುಮಾರಸ್ವಾಮಿ ವಿರುದ್ಧದ ಯತ್ನಾಳರ ಟೀಕಾಪ್ರಹಾರ ಹೀಗಿದೆ: * ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆಯಾದ ಪ್ರಕರಣವನ್ನು ಅಣಕು ಪ್ರದರ್ಶನ ಎಂದು ಗೇಲಿ ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿಯವರು, ಕರ್ನಾಟಕದ ಓವೈಸಿ ಆಗಲು ಹೊರಟಿದ್ದಾರೆ. ಮಾನಸಿಕ ಸ್ಥಿಮಿತ ಕಳೆದುಕೊಂಡಿರುವ ಅವರಿಗೆ ಸರ್ಕಾರವೇ ಚಿಕಿತ್ಸೆ ಕೊಡಿಸುವ ಕೆಲಸ ಮಾಡಬೇಕು. * ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿ ಉನ್ನತ ಸ್ಥಾನದಲ್ಲಿದ್ದ ವ್ಯಕ್ತಿ, ಅಧಿಕಾರ ಇಲ್ಲದ ಸಂದರ್ಭದಲ್ಲಿ ರಾಜ್ಯದ ಪೊಲೀಸರ ಕುರಿತು ಮನ ಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿ ಹಾಗೂ ನಾಚಿಗೇಡಿನಿಂದ ಕೂಡಿದೆ. * ಅವರ ಜೀವನ ಹಾಗೂ ರಾಜಕೀಯ ಸ್ಥಿತಿ ಅಣಕು ಪರಿಸ್ಥಿತಿಗೆ ತಲುಪಿದೆ. ಹೀಗಾಗಿ, ಮಾನಸಿಕ ಸ್ಥಿತಿ ಕಳೆದುಕೊಂಡಿರುವ ಅವರು, ನಾಗರಿಕರಿಗೆ ರಕ್ಷಣೆ ನೀಡುವ ಪೊಲೀಸರು, ದೇಶ ಕಾಯುವ ಸೈನಿಕರ ಕುರಿತು ಹಗುರವಾಗಿ ಮಾತನಾಡುವ ಮಟ್ಟಕ್ಕೆ ತಲುಪಿದ್ದಾರೆ. * ಪೌರತ್ವ ಕಾಯ್ದೆ ವಿರೋಧಿಸಿ ಕಲಬುರಗಿಯಲ್ಲಿ ಜರುಗಿದ ಸಮಾವೇಶದಲ್ಲಿ ಎಚ್.ಡಿ.ಕುಮಾರಸ್ವಾಮಿಯವರು ಪಾಕಿಸ್ತಾನ ರಾಜಕೀಯ ನಾಯಕರಂತೆ ಮಾತನಾಡಿದ್ದಾರೆ. ದಾವುದ್ ಇಬ್ರಾಹಿಂ ತಮ್ಮ ಇಮ್ರಾನ್ ಖಾನ್, ಇಮ್ರಾನ್ ಖಾನ್ ತಮ್ಮ ರಾಹುಲ್ ಗಾಂಧಿ, ಇಮ್ರಾನ್ ಖಾನ್ ಅಳಿಯ ಕುಮಾರಸ್ವಾಮಿ ಎಂಬಂತೆ ಅವರು ಮಾತನಾಡಿದ್ದಾರೆ. * ಪ್ರಧಾನಿ ಮೋದಿ ಕುಟುಂಬದ ಕುರಿತು ಮಾಜಿ ಸಚಿವ ಸಿ.ಎಂ.ಇಬ್ರಾಹಿಂ ಕೂಡ ಕೀಳುಮಟ್ಟದಲ್ಲಿ ಮಾತನಾಡಿದ್ದಾರೆ. ಮೋದಿ ಅವರ ತಂದೆಯ ಬರ್ತ್ ಸರ್ಟಿಫಿಕೇಟ್ ಮೋದಿ ಬಳಿ ಇಲ್ಲ ಎನ್ನುವ ಮೂಲಕ ಕೀಳಾಗಿ ಮಾತನಾಡಿದ್ದಾರೆ. ಮೋದಿ ತಂದೆಯ ದಾಖಲೆ ಕೇಳುವ ಇಬ್ರಾಹಿಂಗೆ ತಮ್ಮ ಮುತ್ತಜ್ಜ ಯಾರೆಂದು ಗೊತ್ತಿದ್ದರೆ ಹೇಳಲಿ. * ಬಾಂಬ್ ಪತ್ತೆ ವಿಚಾರದಲ್ಲಿ ಗೃಹ ಇಲಾಖೆ ಹಾಗೂ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸಿದ್ದಾರೆ. ಬಾಂಬ್ ಇರಿಸಿದ ಆರೋಪಿ ಆದಿತ್ಯರಾವ್ ಶಂಕಿತ ಬ್ಲಾಕ್ ಮೇಲರ್ ಹಾಗೂ ಮಾನಸಿಕ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾನೆ. ಆದರೆ, ಪ್ರಕರಣದ ತನಿಖೆ ವಿಷಯದಲ್ಲಿ ಪೊಲೀಸ್ ಇಲಾಖೆ ಉತ್ತಮವಾಗಿ ಕೆಲಸ ಮಾಡುತ್ತಿದೆ. ಕುಮಾರಸ್ವಾಮಿ ಹಾಗೂ ಕಾಂಗ್ರೆಸ್‌ನವರು ಅಲ್ಪಸಂಖ್ಯಾತರ ಓಲೈಕೆಗೆ ಪೈಪೋಟಿ ನಡೆಸಿದ್ದಾರೆ. ರಾಜಕೀಯ ಮಾಡುವ ಭರಾಟೆಯಲ್ಲಿ ದೇಶದ್ರೋಹಿ ಕೃತ್ಯಗಳಿಗೆ ಪ್ರಚೋದನೆ ನೀಡಬಾರದು. ಜವಾಬ್ದಾರಿಯುತವಾಗಿ ವರ್ತಿಸಬೇಕು.
-ಬಸವರಾಜ ಬೊಮ್ಮಾಯಿ, ಗೃಹ ಸಚಿವ ಮಂಗಳೂರು ಬಾಂಬ್ ಪೊಲೀಸರು ನಡೆಸಿದ ಅಣಕು ಪ್ರದರ್ಶನ ಎಂಬ ಕುಮಾರಸ್ವಾಮಿ ಹೇಳಿಕೆ ಖಂಡನೀಯ. ಯಾರ್ಯಾರಿಗೆ ಎಲ್ಲೆಲ್ಲಿ ಬಾಂಬ್ ಫಿಕ್ಸ್ ಮಾಡ ಬೇಕೆಂಬುದನ್ನು ಚೆನ್ನಾಗಿ ತಿಳಿದಿರುವ ಅವರು, ಇಂತಹ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು.
-ವಿ.ಸುನಿಲ್ ಕುಮಾರ್, ಮುಖ್ಯ ಸಚೇತಕ