ವೇಣೂರು: ಉರುಳಿಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಚಿರತೆಯೊಂದು ಪಂಪ್ ಶೆಡ್‌ನೊಳಗೆ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕರಿಮಣೇಲು ಗ್ರಾಮದಲ್ಲಿ ಗುರುವಾರ ಸಂಭವಿಸಿದೆ. ಪಂಪ್‌ಶೆಡ್‌ನೊಳಗಿದ್ದ ಚಿರತೆಯನ್ನು ಹಿಡಿಯಲು ವೇಣೂರು ಅರಣ್ಯ ಅಧಿಕಾರಿಗಳು ಸ್ಥಳೀಯರ ಸಹಕಾರ ದೊಂದಿಗೆ ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ಕಾರ್ಯಾಚರಣೆ ನಡೆಸಿದ್ದು, ಆದರೆ ಶೆಡ್‌ನ ಬಾಗಿಲು ತೆರೆದು ನೋಡಿದಾಗ ಚಿರತೆ ಮೃತಪಟ್ಟಿರುವುದು ಕಂಡುಬಂತು.
ಘಟನೆ ವಿವರ
ಕರಿಮಣೇಲು ಗ್ರಾಮದ ಮಲ್ಲರಬೆಟ್ಟು ವಾಸುದೇವ ನಾಯ್ಕ ಮತ್ತು ನರಸಿಂಹ ನಾಯ್ಕ ಅವರಿಗೆ ಸೇರಿದ ಜಾಗದ ಫಲ್ಗುಣಿ ನದಿ ತಟದಲ್ಲಿ ಪಂಪ್‌ಶೆಡ್‌ನಲ್ಲಿ ಘಟನೆ ಸಂಭವಿಸಿದೆ. ಎಂದಿನಂತೆ ಗುರುವಾರ ಬೆಳಗ್ಗೆ 8 ಗಂಟೆಗೆ ನರಸಿಂಹ ನಾಯ್ಕರು ಪಂಪ್ ಚಾಲು ಮಾಡಲೆಂದು ಶೆಡ್‌ಗೆ ಬಂದಾಗ ಚಿರತೆಯನ್ನು ಕಂಡು ಓಡಿ ಹೋದರು.
ತತ್‌ಕ್ಷಣ ವೇಣೂರು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದ್ದು, ಅಧಿಕಾರಿಗಳು ಆಗಮಿಸಿ ಬಾಗಿಲು ಮುಚ್ಚಿ ದ್ದಾರೆ. ನಾರಾವಿ ಪರಿಸರದಲ್ಲಿ ಇಡಲಾಗಿದ್ದ ಬೋನನ್ನು ತಂದು ಪಂಪ್‌ಶೆಡ್ ಮುಂಭಾಗಕ್ಕೆ ಅಳವಡಿಸಲಾಯಿತು. ಬಳಿಕ ಸೂಕ್ಷ್ಮವಾಗಿ ಗಮನಿಸಿದಾಗ ಚಿರತೆ ಮೃತಪಟ್ಟಿರುವುದು ತಿಳಿಯಿತು. ಗಾಯವಾದ ಭಾಗ ಕೊಳೆತಿದ್ದು, ಬುಧವಾರವೇ ಪಂಪ್‌ಶೆಡ್‌ನೊಳಗೆ ಬಿದ್ದಿರಬೇಕೆಂದು ಶಂಕಿಸಲಾಗಿದೆ. ಜ. 20ರಂದು ಗುಂಡೂರಿ ಗ್ರಾಮದಲ್ಲಿ ಚಿರತೆಯೊಂದು ಉರುಳಿಗೆ ಬಿದ್ದು ತಪ್ಪಿಸಿಕೊಂಡಿದ್ದು, ಅದೇ ಚಿರತೆ ಇದಾಗಿರಬೇಕೆಂದು ಗ್ರಾಮಸ್ಥರು ಶಂಕಿಸಿದ್ದಾರೆ.
ಮರಣೋತ್ತರ ಪರೀಕ್ಷೆ ವರದಿ ಬಳಿಕ ಕ್ರಮ
ಚಿರತೆ ಉರುಳಿನಿಂದ ಗಾಯಗೊಂಡಿರುವುದು ಮೇಲ್ನೋಟಕ್ಕೆ ಗೋಚರವಾಗಿದೆ. ಉರುಳಿಡುವುದು ಶಿಕ್ಷಾರ್ಹ ಅಪರಾಧ ವಾಗಿದ್ದು, ಮರಣೋತ್ತರ ಪರೀಕ್ಷೆ ವರದಿ ಬಂದ ಬಳಿಕ ತನಿಖೆ ನಡೆಸಿ ಉರುಳಿಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತೇವೆ.
ಪ್ರಶಾಂತ್ ಕುಮಾರ್ ಪೈ ಅರಣ್ಯಾಧಿಕಾರಿ ವೇಣೂರು ವಲಯ