ಬೆಳ್ತಂಗಡಿ: ಭಾರತೀಯತೆಯ ಸಂಸ್ಕೃತಿ ಜೀವನದ ಪ್ರತಿಯೊಂದರಲ್ಲೂ ಹಾಸುಹೊಕ್ಕಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಜೈನರ ಸಿದ್ಧಾಂತ, ಪದ್ಧತಿ ಎಲ್ಲೆಡೆ ಹಂಚಿಹೋಗಿದೆ. ದ.ಕ. ಜಿಲ್ಲೆಯಲ್ಲಿ ನೋಡಿದಾಗ ಪ್ರಭಾವಶಾಲಿಗಳಾಗಿ ವ್ಯಾಪಾರ ಮತ್ತು ವ್ಯವಹಾರ ಕೇಂದ್ರಿತವಾಗಿಸಿ ಗುರು ಸ್ಥಾನ ಮತ್ತು ರಾಜರ ಸ್ಥಾನದಲ್ಲಿ ಸಮಾಜವನ್ನು ಬೆಳೆಸಿದ್ದಾರೆ. ಒಟ್ಟಾರೆ ಈ ನಾಡಿಗೆ ಅನೇಕ ಸತ್ ಸಂಪ್ರದಾಯಗಳು ಬರುವಲ್ಲಿ ಜೈನರು ಮತ್ತು ಅವರ ಸಂಪ್ರದಾಯದ ಐತಿಹಾಸಿಕ ಕೊಡುಗೆಯಿದೆ ಎಂದು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಬಣ್ಣಿಸಿದರು.
ವೇಣೂರು ಫಲ್ಗುಣಿ ತಟದಲ್ಲಿ ವಿರಾಜಮಾನನಾಗಿರುವ ಭಗವಾನ್ ಶ್ರೀ ಬಾಹುಬಲಿ ಸ್ವಾಮಿಗೆ ಫೆ. 22 ರಿಂದ ಮಾ. 1ರ ವರೆಗೆ ನೆರವೇರಿದ ಮಸ್ತಾಕಾಭೀಷೇಕದ ಕೊನೆಯ ದಿನ ಭರತೇಶ ಸಭಾಭವನದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿ ವೇಣೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿರುವುದು ನನ್ನ ಪುಣ್ಯದ ಕ್ಷಣ. ಇಲ್ಲಿನ ಪೂರ್ವಸಿದ್ಧತೆಯಿಂದ ಅಜಿಲರ ಶ್ರಮದಿಂದ ಉತ್ತಮವಾಗಿ ಮೂಡಿಬಂದಿದೆ ಎಂದರು.
ಭಾವನೆಯಿಂದ ಬಾಹುಬಲಿಯಾಗಿ
ಅಧ್ಯಕ್ಷತೆ ವಹಿಸಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಮಾತನಾಡಿ, ಅಲ್ಪಸಂಖ್ಯಾಕರಾದ ನಮಗೆ ಜೀವನದ ಆದರ್ಶದಿಂದ ಗೌರವ ಸಿಗುತ್ತದೆ. ಆ ಗೌರವವನ್ನು ಉಳಿಸಿಕೊಳ್ಳುವುದು ನಮ್ಮ ಕರ್ತವ್ಯ. ಅದಕ್ಕಾಗಿ ಶಾಂತಿ, ತಾಳ್ಮೆ ಅನುಕರಿಸುವ ಮೂಲಕ ಭಾವನೆಯಿಂದ ಬಾಹುಬಲಿಯಾಗಬೇಕು ಎಂದರು.
ಮರೆಯಲಾರದ ಕ್ಷಣ
ಯುಗಳ ಮುನಿಶ್ರೀಗಳಾದ ಪರಮಪೂಜ್ಯ ಅಮೋಘಕೀರ್ತಿ ಮಹಾರಾಜರು ಮಂಗಲಪ್ರವಚನ ನೀಡಿ, ಎಲ್ಲರಲ್ಲೂ ಕಾಮ, ಕ್ರೋಧ, ಮಧ, ಮತ್ಸರಗಳಿವೆ. ಆದರೆ ಎಲ್ಲರಲ್ಲೂ ಬಾಹುಬಲಿಯಾಗುವ ಶಕ್ತಿಯೂ ಇದೆ. ಆದರೆ ಇನ್ನೊಬ್ಬರ ಬಗ್ಗೆ ಕೆಟ್ಟದನ್ನು ಚಿಂತಿಸುವುದನ್ನು ಬಿಟ್ಟಲ್ಲಿ ಸೂರ್ಯ ಚಂದ್ರರಂತೆ ತೇಜಸ್ಸು ಜೀವನ ನಿಮ್ಮದಾಗಲಿದೆ. ವೇಣೂರು ಪರಂಪರೆಯ ಐತಿಹಾಸಿಕ ರಾತ್ರಿಯ ಮಜ್ಜನವಾಗಿ ಮೂಡಿಬಂದಿದೆ. ಜೀವನದಲ್ಲಿ ಎಂದೂ ಮರೆಯದ ಕ್ಷಣ ನನ್ನದಾಗಿದೆ ಎಂದರು.
ಯುಗಳ ಮುನಿ ಅಮರಕೀರ್ತಿ ಮುನಿಮಹಾರಾಜರು ಆಶೀರ್ವಚನ ನೀಡಿದರು. ಮೂಡುಬಿದಿರೆ ಜೈನ ಮಠದ ಭಟ್ಟಾರಕ ಚಾರುಕೀರ್ತಿ ಸ್ವಾಮೀಜಿ ಮಾತನಾಡಿ, ದಾನಕ್ಕೆ ಧರ್ಮಸ್ಥಳ, ದಯೆಗೆ ಮುನಿಗಳು ಹಾಗೂ ಧರ್ಮಕ್ಕೆ ಶಾಸ್ತ್ರ ಪ್ರೇರಕ ಹಾಗೂ ಮಾರ್ಗದರ್ಶಿಯಾಗಿದೆ. ಈ ಮೂರನ್ನು ಕಾಣಲು ಮಹಾಮಸ್ತಕಾಭಿಷೇಕಕ್ಕೆ ಬರಬೇಕು ಎಂದರು.
ಕ್ಷೇತ್ರಕ್ಕೆ ನೆರವಾದವರಿಗೆ ಗೌರವ
ಕ್ಷೇತ್ರಕ್ಕೆ ವಿವಿಧ ರೀತಿಯಲ್ಲಿ ಕೊಡುಗೆ ನೀಡಿದ ಯೋಜನೆ ಮತ್ತು ಸಾಂಖ್ಯಿಕ ಸಚಿವ ಡಿ.ಸುಧಾಕರ್, ಅಟ್ಟಳಿಗೆ ಹಾಗೂ ಎಂಜಿನಿಯರಿಂಗ್ ವಿಭಾಗದಲ್ಲಿ ಸೇವೆ ಸಲ್ಲಿಸಿದ ಉದ್ಯಮಿಗಳಾದ ಸನತ್ ಕುಮಾರ್, ಅನಿಲ್ ಹೆಗ್ಡೆ, ಮಹಾ ಪದ್ಮಪ್ರಸಾದ್, ಮಹಾವೀರ ಪ್ರಸಾದ್, ರವೀಂದ್ರ ಪಾಟೀಲ್ ನಾಸಿಕ್, ಎಂಜಿನಿಯರ್ ಸಂದೀಪ್ ಜೈನ್ ಅವರನ್ನು ಗೌರವಿಸಲಾಯಿತು.
ಮಹಾಮಸ್ತಕಾಭಿಷೇಕ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಡಾ| ಪದ್ಮಪ್ರಸಾದ ಅಜಿಲರನ್ನು ಹಾಗೂ ಪ್ರಧಾನ ಕಾರ್ಯದರ್ಶಿ ಪ್ರವೀಣಚಂದ್ರ ಜೈನ್ ಅವರನ್ನು ಡಾ| ಹೆಗ್ಗಡೆಯವರು ಸಮ್ಮಾನಿಸಿದರು.
ವಿಧಾನ ಪರಿಷತ್ ಸದಸ್ಯರಾದ ಕೆ. ಹರೀಶ್ ಕುಮಾರ್, ಪ್ರತಾಪಸಿಂಹ ನಾಯಕ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಎಸ್ .ಡಿ.ಎಂ.ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಡಿ.ಹಷೇಂದ್ರ ಕುಮಾರ್, ಡಿ. ಸುರೇಂದ್ರ ಕುಮಾರ್, ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ| ಎಂ.ಎನ್. ರಾಜೇಂದ್ರಕುಮಾರ್, ಸಮಿತಿ ಕೋಶಾಧಿಕಾರಿ ಜಯರಾಜ ಕಂಬಳಿ ಉಪಸ್ಥಿತರಿದ್ದರು.
ಡಾ| ಪದ್ಮಪ್ರಸಾದ ಅಜಿಲ ಸ್ವಾಗತಿಸಿದರು. ಕಾರ್ಯದರ್ಶಿ ವಿ.ಪ್ರವೀಣ್ ಕುಮಾರ್ ಇಂದ್ರ ವಂದಿಸಿದರು. ಅಜಿತ್ ಕುಮಾರ್ ಕೊಕ್ರಾಡಿ ನಿರ್ವಹಿಸಿದರು.
ಮುನಿಗಳ ವಿಹಾರ ಇಂದಿನಿಂದ
ಇಂದು ಮಾ. 2ರಂದು ಬೆಳಗ್ಗೆ 6.30ಕ್ಕೆ ಯುಗಳ ಮುನಿಗಳು ವಿಹಾರ ಆರಂಭಿಸಿ ವಾಮದಪದವು, ಬಿ.ಸಿ.ರೋಡ್ ಮೂಲಕ ಮಂಗಳೂರಿಗೆ ತೆರಳಲಿದ್ದಾರೆ.
ಧನ್ಯತೆ ಮೂಡಿದೆ: ಡಾ| ಹೆಗ್ಗಡೆ ವೇಣೂರು ಮಹಾಮಸ್ತಕಾಭಿಷೇಕ ಸಮಿತಿಯು, ಉತ್ಸಾಹ ಮತ್ತು ಉದ್ವೇಗದೊಂದಿಗೆ ಬ್ಯಾಂಕ್ ಖಾತೆಯಲ್ಲಿ 6 ಲಕ್ಷ ಮೊತ್ತದಿಂದ ಮಜ್ಜನ ಸಿದ್ಧತೆಗೆ ಮುಂದಾಗಿತ್ತು. ಸರಕಾರದ ನೆರವಿನಿಂದ, ದಾನಿಗಳಿಂದ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ. ಯುಗಳ ಮುನಿವರ್ಯರ ಮಾರ್ಗದರ್ಶನದಿಂದ ನಿರ್ವಿಘ್ನದಿಂದ ನೆರವೇರಿರುವುದು ನಾಡಿಗೆ ಸಂತಸ ತಂದಿದೆ. ಶಕ್ತಿ, ಯುಕ್ತಿ, ಭಕ್ತಿಯೊಡಗೂಡಿ ಪೀಳಿಗೆಯಿಂದ ಪೀಳಿಗೆಗೆ ಮಹಾಮಸ್ತಕಾಭಿಷೇಕದ ಪ್ರಭೆ ಬೆಳೆಯಲಿ ಎಂದು ಡಾ| ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಭಕ್ತಿ ಶ್ರದ್ಧೆಯ ಅಮೃತ ದ್ರವ್ಯಕ್ಕೆ ಮೈಯೊಡ್ಡಿದ ಭಗವಾನ್ ಬಾಹುಬಲಿ
12 ವರ್ಷಗಳಿಗೊಮ್ಮೆ ನೆರವೇರುವ ಭಗವಾನ್ ಬಾಹುಬಲಿ ಸ್ವಾಮಿಯ ಮಹಾಮಜ್ಜನದ ಭವ್ಯ ಕ್ಷಣಕ್ಕೆ ಸಾಕ್ಷಿಯಾದ ವೇಣೂರು ಫಲ್ಗುಣಿ ತಟದಲ್ಲಿ ಶನಿವಾರ ಈ ಶತಮಾನದ ಮೂರನೇ ಮಜ್ಜನದ ಸಮಾಪನದ ಮಂಗಲ ಪರ್ವಕ್ಕೆ ಸಾಕ್ಷಿಯಾಯಿತು. ವೇಣೂರು ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯಿಂದ ನೆರವೇರಿದ 1008 ಕಲಷಾಭಿಷೇಕವು ಯುಗಪರಂಪರೆಗೆ ಭಕ್ತಿಯ ರಸವನ್ನು ದಾಟಿಸಿತು.
ಬೆಳಗ್ಗೆ 9ಕ್ಕೆ ನಿತ್ಯ ವಿಧಿ ಸಹಿತ ಸಿದ್ಧಚಕ್ರ ಯಂತ್ರರಾಧನಾ ವಿಧಾನ, ಬೆಳಗ್ಗೆ 10.15ರಿಂದ ಅಗ್ನಿತ್ರಯಾರ್ಚನಾ ಪೂರ್ವಕ ನಿರ್ವಾಣ ಕಲ್ಯಾಣ, ಅಗ್ರೋದಕ ಮೆರವಣಿಗೆ ನಡೆದು ಸಂಜೆ 4ರಿಂದ ಮಹಾ ಮಸ್ತಕಾಭಿಷೇಕ ಮಹೋತ್ಸವ, ಮಹಾಪೂಜೆ, ಸಂಘಪೂಜೆ, ಮಹಾಮಂಗಳಾರತಿ, ಕುಂಕುಮೋತ್ಸವ, ಅವಭೃಥ ಸ್ನಾನ, ಧ್ವಜಾವರೋಹಣ, ತೋರಣ ವಿಸರ್ಜನೆ, ಮತ್ತು ಕಂಕಣ ವಿಸರ್ಜನೆಯೊಂದಿಗೆ ಭಕ್ತರ ಭಕ್ತಿ, ಶ್ರದ್ಧೆಯ ಅಮೃತ ದ್ರವ್ಯ ಸಿಂಚನಕ್ಕೆ ಭಗವಾನ್ ಬಾಹುಬಲಿ ಮೈಯೊಡ್ಡಿದನು.