Advertisement

ವೇಣೂರು: ಜಾಗವಿದ್ದರೂ ಸ್ವಂತ ಕಚೇರಿ ಇಲ್ಲ

06:49 PM Dec 13, 2021 | Team Udayavani |

ವೇಣೂರು: ಗ್ರಾಮೀಣ ಪ್ರದೇಶದ ಜನರಿಗೆ ಹೆಚ್ಚು ತೊಂದರೆ ಯಾಗದಂತೆ ಅಲ್ಲಿಯೇ ಸೇವೆ ಲಭ್ಯ ವಾಗಬೇಕೆಂಬ ಕನಸಿನಲ್ಲಿ 34 ವರ್ಷಗಳ ಹಿಂದೆ ಆರಂಭವಾದ ವೇಣೂರು ಹೋಬಳಿ ಕೇಂದ್ರದಲ್ಲಿ ಈಗ ಅವುಗಳೆಲ್ಲ ಮರೀಚಿಕೆಯಾಗಿವೆ. 30 ಗ್ರಾಮಗಳ ಭಾರ ಹೊತ್ತಿರುವ ಹೋಬಳಿ ಕೇಂದ್ರ ಇನ್ನೂ ಬಾಡಿಗೆ ಕೊಠಡಿಯಲ್ಲಿದ್ದು, ಮಳೆಯಿಂದ ಸೋರುವ ನೀರಿನಿಂದ ಕಡತ ಸಂರಕ್ಷಣೆಯೇ ದೊಡ್ಡ ಸವಾಲಾಗಿದೆ.

Advertisement

ನಾಡಕಚೇರಿಯಲ್ಲಿ ದ್ವಿತೀಯ ದರ್ಜೆ ಸಹಾಯಕ, ಡಿ ಗ್ರೂಪ್‌, ಟೈಪಿಸ್ಟ್‌ ಹುದ್ದೆ ಖಾಲಿ ಇದೆ. ಹೀಗಾಗಿ ಸಕಾಲದಲ್ಲಿ ಸೇವೆ ಎಂಬುದು ದೂರದ ಮಾತಾಗಿದೆ. ಕಾರಣ ಕೇಳಿದರೆ ಸಿಬಂದಿ ಇಲ್ಲ ಎನ್ನುವ ಉತ್ತರ ಬರುತ್ತಿದೆ. ನಾಡಕಚೇರಿಯಲ್ಲಿ ಪ್ರಸ್ತುತ ಉಪ ತಹಶೀಲ್ದಾರ್‌, ಕಂದಾಯ ನಿರೀಕ್ಷಕರು, ಗ್ರಾಮಕರಣಿಕ ಹಾಗೂ ಇಬ್ಬರು ಗ್ರಾಮ ಸಹಾಯಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಮಾಸಾಶನಗಳು, ಜಾತಿ-ಆದಾಯ ಪ್ರಮಾಣಪತ್ರಗಳ ಸಹಿತ ಪ್ರಾಕೃತಿಕ ವಿಕೋಪದಡಿ ಪರಿಹಾರ ಹೀಗೆ ಹತ್ತಾರು ಸಮಸ್ಯೆಗಳನ್ನು ಹೋಬಳಿ ಮಟ್ಟದ ಜನರು ಹೊತ್ತು ತರುತ್ತಿದ್ದು, ನಾಡಕಚೇರಿಯ ಅವ್ಯವಸ್ಥೆಯಿಂದಾಗಿ ಸಮರ್ಪಕ ಸೇವೆ ಸಿಗುತ್ತಿಲ್ಲ.

ಸೋರುವ ಕೊಠಡಿ
ಬಾಡಿಗೆ ಕೋಣೆಯಲ್ಲಿರುವ ನಾಡ ಕಚೇರಿಯ ಮಹಡಿ ಸೋರುತ್ತಿದ್ದು, ಹೋಬಳಿ ವ್ಯಾಪ್ತಿಯ ಕಡತಗಳನ್ನು ಮಳೆ ಗಾಲದಲ್ಲಿ ಶೇಖರಿಸಿಡುವುದೇ ಸಿಬಂದಿಗೆ ತಲೆನೋವಾಗಿದೆ.

ಕಟ್ಟಡ ರಚನೆಗೆ ಸರ್ವೇ
ಬಾಡಿಗೆ ಕೋಣೆಯಲ್ಲಿ 1987ರಲ್ಲಿ ಆರಂಭಗೊಂಡ ನಾಡಕಚೇರಿಗೆ ಇನ್ನೂ ಸ್ವಂತ ಕಟ್ಟಡ ಭಾಗ್ಯ ಒದಗಿ ಬಂದಿಲ್ಲ. ಕಂದಾಯ ಇಲಾಖೆಗೆ ಸಂಬಂ ಧಿಸಿ 40 ಸೆಂಟ್ಸ್‌ ಜಾಗವಿದ್ದು, ಕಟ್ಟಡ ರಚನೆಗೆ ಸರ್ವೇ ಕಾರ್ಯ ನಡೆದಿದೆ. ಗ್ರಾ.ಪಂ.ಗೆ ಸಂಬಂಧಿತ ಕಟ್ಟಡದಲ್ಲಿರುವ ನೆಮ್ಮದಿ ಕೇಂದ್ರ, ಗ್ರಾಮಲೆಕ್ಕಾಧಿಕಾರಿಗಳ ಕಚೇರಿ ಸಹಿತ ಪಂಚಾಯತ್‌ ಆಡಳಿತ ಕಚೇರಿಗಳೂ ಒಂದೇ ಸೂರಿನಡಿ ಒಂದೇ ಕಟ್ಟಡದಲ್ಲಿ ಸೇವೆ ಲಭಿಸಬೇಕೆಂಬ ಬೇಡಿಕೆ ಜನರದ್ದು. ಹೀಗಾಗಿ ನೂತನ ಕಟ್ಟಡವನ್ನು ಮಿನಿ ವಿಧಾನ ಸೌಧದ ರೂಪದಲ್ಲಿ ನಿರ್ಮಿಸಬೇಕೆನ್ನುವುದು ಇಲ್ಲಿನ ಜನರ ಬೇಡಿಕೆಯಾಗಿದೆ.

Advertisement

ವಿವಿಧ ಕಚೇರಿಗಳು
ವಲಯ ಅರಣ್ಯ ಕಚೇರಿ, ಮೆಸ್ಕಾಂ ಇಲಾಖೆ, ಅಂಚೆ ಕಚೇರಿ, ಉಪ ಆರೋಗ್ಯ ಕೇಂದ್ರಗಳು, ರಾಷ್ಟ್ರೀಕೃತ ಬ್ಯಾಂಕ್‌, ಸಹಕಾರಿ ಸಂಘಗಳು, ಧಾರ್ಮಿಕ ಕೇಂದ್ರಗಳು ಸೇರಿದಂತೆ ವಿವಿಧ ಕಚೇರಿಗಳು ವೇಣೂರು ಹೋಬಳಿಯ ವ್ಯಾಪ್ತಿಯಲ್ಲಿದೆ. ರಾಜ್ಯದ ಪ್ರವಾಸಿ ತಾಣಗಳಲ್ಲಿ ಗುರುತಿಸಿಕೊಂಡಿರುವ ಐತಿಹಾಸಿಕ ಶ್ರೀ ಬಾಹುಬಲಿ ಮೂರ್ತಿಯ ವಿಗ್ರಹ ವೇಣೂರಿನಲ್ಲಿದೆ.

ಡಿಜಿಟಲೀಕರಣ ಇಲ್ಲ
ಕಡತಗಳನ್ನು ಡಿಜಿಟಲೀಕರಣ ಗೊಳಿಸುವ ವ್ಯವಸ್ಥೆ ಬಿಟ್ಟು ಬಿಡಿ. ಕೇವಲ ಕಡತಗಳನ್ನು ಎಂಟ್ರಿ ಮಾಡಲೂ ಇಲ್ಲಿ ಒಂದೇ ಒಂದು ಕಂಪ್ಯೂಟರ್‌ ವ್ಯವಸ್ಥೆ ಇಲ್ಲ. ಬಟ್ಟೆಗಳಲ್ಲಿ ಸುತ್ತಿರುವ ಕಡತಗಳನ್ನು ಸಂರಕ್ಷಿಸಿ ಮುಂದಿನ ಪೀಳಿಗೆಗೆ ಲಭ್ಯವಾಗಿಸುವ ನಿಟ್ಟಿನಲ್ಲಿ ಯಾವುದೇ ಕ್ರಮ ನಡೆದಿಲ್ಲ.

ನೂರಾರು ಕಡತ ಹೊಂದಿರುವ ವೇಣೂರು ನಾಡಕಚೇರಿಯಲ್ಲಿ ಸುರಕ್ಷಿತ ಕಪಾಟಿನ ವ್ಯವಸ್ಥೆಯೂ ಇಲ್ಲ. ಪೀಠೊಪಕರಣಗಳ ಬಗ್ಗೆ ಕೇಳುವಂತಿಲ್ಲ.

ಗ್ರಾಮಲೆಕ್ಕಿಗರಿಗೂ ಕಚೇರಿ ಇಲ್ಲ
ವೇಣೂರು ಭಾಗದ ಗ್ರಾಮಲೆಕ್ಕಿಗರಿಗೆ ಕಚೇರಿ ಇಲ್ಲ. ಗ್ರಾಮ ಪಂಚಾಯತ್‌ನ ಇಂದೋ, ನಾಳೆಯೋ ಮುರಿದು ಬೀಳುವ ಸ್ಥಿತಿಯಲ್ಲಿರುವ ಕಟ್ಟಡ ದಲ್ಲಿ ಗ್ರಾಮಲೆಕ್ಕಿಗರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇಲ್ಲೂ ಕಡತಗಳ ರಕ್ಷಣೆಯೇ ಸವಾಲಿನ ಕೆಲಸ.

ಹೋಬಳಿ ಗ್ರಾಮಗಳು
ವೇಣೂರು, ಬಜಿರೆ, ಕರಿಮಣೇಲು, ಮೂಡುಕೋಡಿ, ಆರಂಬೋಡಿ, ಗುಂಡೂರಿ, ಹೊಸಂಗಡಿ, ಬಡಕೋಡಿ, ಕಾಶಿಪಟ್ಣ, ಮರೋಡಿ, ಪೆರಾಡಿ, ಅಂಡಿಂಜೆ, ಕೊಕ್ರಾಡಿ, ಸಾವ್ಯ, ನಾರಾವಿ, ಕುತ್ಲೂರು, ಸುಲ್ಕೇರಿ, ಕುದ್ಯಾಡಿ, ನಾವರ, ಪಿಲ್ಯ, ಬಡಗಕಾರಂದೂರು, ಶಿರ್ಲಾಲು, ಸುಲ್ಕೇರಿಮೊಗ್ರು, ಕರಂಬಾರು, ಬಳಂಜ, ತೆಂಕಕಾರಂದೂರು, ನಾಲ್ಕೂರು, ಕುಕ್ಕೇಡಿ, ನಿಟ್ಟಡೆ.

ಹೊಸ ನಾಡಕಚೇರಿ ಕಟ್ಟಡಕ್ಕೆ ಈಗಾಗಲೇ 17.50 ಲಕ್ಷ ರೂ. ಮಂಜೂರುಗೊಂಡಿದ್ದು, ಕೊಠಡಿಗಳ ಸಮಸ್ಯೆಗೆ ಶೀಘ್ರವೇ ಮುಕ್ತಿ ಸಿಗಲಿದೆ.
-ಮಹೇಶ್‌ ಜೆ., ತಹಶೀಲ್ದಾರರು ಬೆಳ್ತಂಗಡಿ

ಕಂದಾಯ ಇಲಾಖೆಯ ಎಲ್ಲ ಸೇವೆಗಳು ಒಂದೇ ಕಡೆ ಲಭಿಸುವಂತಾಗಬೇಕು. ಹೋಬಳಿ ಕೇಂದ್ರದ ಕಚೇರಿ ಮೇಲ್ದರ್ಜೆಗೇರಬೇಕು
-ಅನೂಪ್‌ ಪಾಯಸ್‌, ಮೂಡುಕೋಡಿ

-ಪದ್ಮನಾಭ ವೇಣೂರು

Advertisement

Udayavani is now on Telegram. Click here to join our channel and stay updated with the latest news.

Next