ಬೆಂಗಳೂರು: ಸಮನ್ವಯ ಸಮಿತಿ ಸಭೆಯಲ್ಲಿ ಪಾಲ್ಗೊಳ್ಳಲು ನಗರಕ್ಕೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ.ವೇಣುಗೋಪಾಲ್ ಶನಿವಾರ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು.
ಕಾವೇರಿ ನಿವಾಸಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಜತೆ ಆಗಮಿಸಿದ್ದ ವೇಣು ಗೋಪಾಲ್, ಸಿದ್ದರಾಮಯ್ಯ ಜತೆ ಅರ್ಧ ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ನಡೆಸಿದರು.
ಈ ಸಂದರ್ಭದಲ್ಲಿ ಧರ್ಮಸ್ಥಳದ ಶಾಂತಿವನದಲ್ಲಿ ಲೋಕಾಭಿರಾಮವಾಗಿ ಮಾತನಾಡಿದ್ದ ದೃಶ್ಯಗಳ ವಿಡಿಯೋ ವೈರಲ್ ಆದ ಬಗ್ಗೆಯೂ ಪ್ರಸ್ತಾಪವಾಗಿ, ನಾನು ಬೇರೆಯೇ ಅರ್ಥದಲ್ಲಿ ಹೇಳಿದ್ದೆ. ಮಾತು ತುಂಡರಿಸಲಾಗಿದೆ ಎಂದು ಸಮಜಾಯಿಷಿ ನೀಡಿದರು ಎನ್ನಲಾಗಿದೆ.
ಸಮ್ಮಿಶ್ರ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದರೂ ಕಾಂಗ್ರೆಸ್ ಅಸ್ತಿತ್ವ ಉಳಿಯಬೇಕು. ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರಿಗೂ ನಮ್ಮ ಸರ್ಕಾರ ಎಂಬ ವಿಶ್ವಾಸ ಮೂಡಬೇಕು ಎಂಬುದಷ್ಟೇ ನನ್ನ ಕಾಳಜಿ. ಕಾಂಗ್ರೆಸ್ ಪಕ್ಷದ್ದೂ ಸರ್ಕಾರವಾದ್ದರಿಂದ ನಾವು ಈಗಾಗಲೇ ಮಂಡಿಸಿರುವ ಬಜೆಟ್‌ಗೆ ಹೊಸ ಅಂಶ ಸೇರಿಸಿ ಹೊಸ ಬಜೆಟ್ ಬೇಡ ಎಂದಷ್ಟೇ ಹೇಳಿದ್ದೆ. ಆದರೆ,ಸಮ್ಮಿಶ್ರ ಸರ್ಕಾರಕ್ಕೆ ನನ್ನ ವಿರೋಧ ಎಂಬುದು ಕೇವಲ ಸೃಷ್ಟಿ. ನಮ್ಮ ಪಕ್ಷದ ಕೆಲವು ನಾಯಕರೇ ಈ ರೀತಿ ಹೈಕಮಾಂಡ್ ಮುಂದೆ ಬಿಂಬಿಸಲು ಪ್ರಯತ್ನಿಸುತ್ತಿದ್ದಾರೆ. ಇದು ನನಗೆ ಬೇಸರ ತರಿಸಿದೆ ಎಂದು ಹೇಳಿದರು ಎಂದು ಹೇಳಲಾಗಿದೆ.
ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಮಾಧಾನಪಡಿಸಿದ ವೇಣುಗೋಪಾಲ್, ನಿಮ್ಮ ನಾಯಕತ್ವದಲ್ಲೇ ರಾಜ್ಯದಲ್ಲಿ ಪಕ್ಷ ಸಂಘಟನೆಯಾಗಲಿದೆ. ನಿಮ್ಮನ್ನು ನಿರ್ಲಕ್ಷ್ಯ ಮಾಡುವ ಅಥವಾ ದೂರ ಇಡುವ ಪ್ರಶ್ನೆಯೇ ಇಲ್ಲ. ಸೋನಿಯಾಗಾಂಧಿ ಹಾಗೂ ರಾಹುಲ್ ಗಾಂಧಿ ಸಹ ನಿಮ್ಮ ಮೇಲೆ ವಿಶ್ವಾಸ ಇಟ್ಟಿದ್ದಾರೆ ಎಂದು ಹೇಳಿದರು ಎನ್ನಲಾಗಿದೆ.
ಸಚಿವ ಡಿ.ಕೆ.ಶಿವಕುಮಾರ್ ಸಹ ವೇಣು ಗೋಪಾಲ್ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ನಂತರ ಡಿಸಿಎಂ ಪರಮೇಶ್ವರ್,ದಿನೇಶ್ ಗುಂಡೂರಾವ್ ಸೇರಿ ರಾಜ್ಯದ ಮುಖಂಡರ ಜತೆ ವೇಣುಗೋಪಾಲ್ ಖಾಸಗಿ ಹೋಟೆಲ್‌ನಲ್ಲಿ ಮಾತುಕತೆ ನಡೆಸಿದರು ಎಂದು ಹೇಳಲಾಗಿದೆ.
ಎಂ.ಬಿ.ಪಾಟೀಲ್ ಭೇಟಿ: ಎಂ.ಬಿ.ಪಾಟೀಲ್ ಸಹ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದರು. ಎರಡನೇ ಹಂತದ ಸಂಪುಟ ವಿಸ್ತರಣೆಯಲ್ಲಿ ತಮಗೆ ಹಾಗೂ ತಮ್ಮ ಜತೆ ಇರುವ ಶಾಸಕರಿಗೆ ಸಚಿವ ಸಂಪುಟದಲ್ಲಿ ಅವ
ಕಾಶ ಕೊಡಿಸುವಂತೆ ಹೈಕಮಾಂಡ್ ಮೇಲೆ ಒತ್ತಡ ತರಬೇಕು ಎಂದು ಕೋರಿದರು.