Advertisement

ಸಫಾಯಿಗಳ ಕರ್ಮ ಕೇಳಿದ ವೆಂಕಟೇಶ!

01:32 PM Sep 16, 2017 | |

ಹುಬ್ಬಳ್ಳಿ: ಕಿಮ್ಸ್‌ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಸಫಾಯಿ ಕರ್ಮಚಾರಿಗಳಿಗೆ ನೀಡುತ್ತಿರುವ ವೇತನ, ಪಿಎಫ್ ಹಾಗೂ ಇಎಸ್‌ಐ ಸೌಲಭ್ಯಗಳ ಕುರಿತು ದಾಖಲೆ ಪೂರೈಸದ ಹಿನ್ನೆಲೆಯಲ್ಲಿ ಕಿಮ್ಸ್‌ ಅಧಿಕಾರಿಗಳನ್ನು ಹಾಗೂ ಸಿಬ್ಬಂದಿಯನ್ನು ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ವೆಂಕಟೇಶ ತೀವ್ರ ತರಾಟೆಗೆ ತೆಗೆದುಕೊಂಡರು. ಸಫಾಯಿ ಕರ್ಮಚಾರಿಗಳಿಗೆ ವಂಚನೆ ಮಾಡುತ್ತಿದ್ದು, ಈ ಕುರಿತು ಸಂಪೂರ್ಣ ತನಿಖೆ ಮಾಡಿ ಆಯೋಗಕ್ಕೆ ವರದಿ ನೀಡುವಂತೆ ಕಾರ್ಮಿಕ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. 

Advertisement

ಕಿಮ್ಸ್‌ ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುವ ಸಫಾಯಿ ಕರ್ಮಚಾರಗಳಿಗೆ ನೀಡುತ್ತಿರುವ ವೇತನ, ಸೌಲಭ್ಯಗಳ ಕುರಿತು ಆಯೋಗದ ಅಧ್ಯಕ್ಷ ವೆಂಕಟೇಶ ಹಾಗೂ ಸದಸ್ಯ ಗೋಕುಲ್‌ ನಾರಾಯಣಸ್ವಾಮಿ ಅವರು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕಾರ್ಮಿಕರೊಂದಿಗೆ ಚರ್ಚಿಸಿದರು. ವೇತನ, ಕೆಲಸದ ಸಮಯ, ಇತರೆ ಸೌಲಭ್ಯಗಳ ಕುರಿತು ಮಾಹಿತಿ ಪಡೆದರು. ನಂತರ ಆಸ್ಪತ್ರೆಯ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿದರು. 

ದಾಖಲೆ ನೀಡಲಿಲ್ಲ: ಗುತ್ತಿಗೆ ಆಧಾರದ ಮೇಲೆ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕರೆಯಿಸಿ ವೇತನ ಹಾಗೂ ಇತರೆ ಸೌಲಭ್ಯದ ಬಗ್ಗೆ ಸಭೆಯಲ್ಲಿ ಪ್ರಶ್ನಿಸಿದರು. ಕಳೆದ 18 ವರ್ಷಗಳಿಂದ ಕೆಲಸ ಮಾಡುತ್ತಿರುವ ಕಾರ್ಮಿಕರೊಬ್ಬರು ಪಿಎಫ್ ಬಗ್ಗೆ ಯಾವುದು ಗೊತ್ತಿಲ್ಲ. ಪಿಎಫ್ ನಂಬರ್‌ ಕೊಟ್ಟಿಲ್ಲ ಎಂದರು. ಬಟ್ಟೆ, ಬೂಟ್‌ ಸೇರಿದಂತೆ ಯಾವುದೇ ಲಭ್ಯ ನೀಡುತ್ತಿಲ್ಲ.

ವೇತನ ನೀಡಿದ ನಂತರ 300 ನಮ್ಮಿಂದ ಪಡೆಯುತ್ತಾರೆ ಎಂದು ಸಭೆಯಲ್ಲಿ ಇನ್ನೊಬ್ಬ ಕಾರ್ಮಿಕರು ಬಹಿರಂಗ ಪಡಿಸಿದರು. ಇದರಿಂದ ಮತ್ತಷ್ಟು ಕೆಂಡಾಮೆಂಡಲವಾದ ಅಧ್ಯಕ್ಷ, ಕೂಡಲೇ ಸಫಾಯಿ ಕರ್ಮಚಾರಿಗಳ ವೇತನ ಹಾಗೂ ಪಿಎಫ್ ತುಂಬುತ್ತಿರುವ ಬಗ್ಗೆ ದಾಖಲೆ ನೀಡುವಂತೆ ಅಧಿಕಾರಿಗಳನ್ನು ಕೇಳಿದರು. ಆದರೆ ಸಭೆ ಮುಗಿಯುವವರೆಗೂ ಯಾವುದೇ ದಾಖಲೆ ನೀಡಲಿಲ್ಲ.  

ದೌರ್ಜನ್ಯ ಪ್ರಕರಣಕ್ಕೆ ಸೂಚನೆ: ಸರ್ಕಾರದ ನಿಮಯಗಳನ್ನು ಸಂಪೂರ್ಣ ಗಾಳಿಗೆ ತೂರಿದ್ದಾರೆ. ಕನಿಷ್ಠ ವೇತನ ಕೂಡ ಪಾವತಿ ಮಾಡುತ್ತಿಲ್ಲ. ಪಿಎಫ್ ಇಲ್ಲ, ಸೌಲಭ್ಯವಂತೂ ಕೇಳುವಂತಿಲ್ಲ. ಕಿಮ್ಸ್‌ ಅಧಿಕಾರಿಗಳು ಹೇಳುವ ಪ್ರಕಾರ 5278 ರೂ. ಪ್ರತಿ ವೇತನ ನೀಡುತ್ತಿದ್ದು, ಕಾರ್ಮಿಕರಿಗೆ 4000 ರೂ. ಕೊಡುತ್ತಿದ್ದಾರೆ. 1278 ರೂ. ಕಡಿಮೆ ನೀಡುವ ಮೂಲಕ ಕಾರ್ಮಿಕರನ್ನು ವಂಚಿಸಲಾಗುತ್ತಿದೆ.

Advertisement

ಹೀಗಾಗಿ ಎಲ್ಲ ಸಫಾಯಿ ಕಾರ್ಮಚಾರಿಗಳ ಜಾತಿ ಪ್ರಮಾಣ ಪತ್ರ ಪಡೆದು ಅಧಿಕಾರಿಗಳು ಹಾಗೂ ಗುತ್ತಿಗೆದಾರರ ಮೇಲೆ ಎಸ್ಸಿ ಹಾಗೂ ಎಸ್ಟಿ ದೌರ್ಜನ್ಯದಡಿ ಪ್ರಕರಣ ದಾಖಲಿಸಬೇಕು. ಕನಿಷ್ಠ ವೇತನ ನೀಡದಿರುವುದು ದಾಖಲೆಯಿಂದ ಗೊತ್ತಾಗಿದೆ. ಕೂಡಲೇ ಕಾರ್ಮಿಕರ ಕಾನೂನಿನ ಪ್ರಕಾರ ಕ್ರಮಕೈಗೊಳ್ಳುವಂತೆ ಸೂಚಿಸಿದರು.  

ಅಧಿಕಾರಿಗಳಿಗೆ ನೋಟಿಸ್‌: ಆಸ್ಪತ್ರೆಯಲ್ಲಿ ಕಾರ್ಮಿಕ ಕಾನೂನು ಪಾಲನೆ ಮಾಡುತ್ತಿದ್ದಾರೆಯೇ, ಸಫಾಯಿ ಕಾರ್ಮಚಾರಿಗಳ ಸ್ಥಿತಿಗತಿಗಳ ಬಗ್ಗೆ ಕಾಲಕಾಲಕ್ಕೆ ಕಾರ್ಮಿಕ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಪರಿಶೀಲನೆ ಮಾಡಿ ಅಗತ್ಯ ಕ್ರಮ ಕೈಗೊಳ್ಳುವ ಕುರಿತು ಸೂಚನೆ ನೀಡಬೇಕು. ಒಂದು ವೇಳೆ ಪಾಲನೆ ಮಾಡದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾಗಿತ್ತು.

ಅಂತಹ ಯಾವುದೇ ಕಾರ್ಯಗಳು ಎರಡು ಇಲಾಖೆಯ ಅಧಿಕಾರಿಗಳಿಂದ ನಡೆದಿಲ್ಲ. ಇವರಿಗೂ ಕೂಡ ಜಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ನೋಟಿಸ್‌ ನೀಡುತ್ತೇವೆ ಎಂದು ಅಧ್ಯಕ್ಷ ವೆಂಕಟೇಶ್ವರ ಸ್ಪಷ್ಟಪಡಿಸಿದರು. ದಾಖಲೆ ಹಾಗೂ ಸರಿಯದ ಮಾಹಿತಿ ನೀಡದ ಕುರಿತು ಕಿಮ್ಸ್‌ ಆಡಳಿತಧಿಕಾರಿ ಬಸವರಾಜ ಸೋಮಣ್ಣವರ ಮಾತನಾಡಿ, ಕಳೆದ ನಾಲ್ಕು ದಿನಗಳ ಹಿಂದೆ ಆಡಳಿತಾಧಿಕಾರಿಯಾಗಿ ಬಂದಿದ್ದೇನೆ.

ಇರುವ ನ್ಯೂನ್ಯತೆಗಳನ್ನು ಸರಿಪಡಿಸುತ್ತೇನೆ. ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುವ ಭರವಸೆ ನೀಡಿದ ಕಾರಣ ಆಯೋಗದ ಅಧ್ಯಕ್ಷ ವೆಂಕಟೇಶ ಒಂದು ವಾರದ ಗಡುವು ನೀಡಿದರು. ಕಿಮ್ಸ್‌ ನಿರ್ದೇಶಕ ಡಾ| ದತ್ತಾತ್ರೇಯ ಬಂಟ್‌, ಕಾರ್ಮಿಕ ಉಪ ಆಯುಕ್ತರಾದ ಮೀನಾ ಪಾಟೀಲ್‌, ಕಿಮ್ಸ್‌ ಪ್ರಭಾರ ವೈದ್ಯಕೀಯ ಅಧೀಕ್ಷಕ ಡಾ| ರಾಮಲಿಂಗಪ್ಪ, ಪಾಲಿಕೆ ಪಾಲಿಕೆ ಹೆಚ್ಚುವರಿ ಆಯಕ್ತ ಅಜೀಜ್‌ ದೇಸಾಯಿ, ಗೋಕುಲ್‌ ನಾರಾಯಣಸ್ವಾಮಿ ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next