ನಾಗಮಂಗಲ: ತಾಲೂಕಿನ ದೇವಲಾಪುರ ಹೋಬಳಿಯ ದಂಡಿಗನಹಳ್ಳಿ ಸಮೀಪದಲ್ಲಿರುವ ಎಚ್.ಎನ್.ಕಾವಲ್ ಸ.ನಂ.126ರ ಅರಣ್ಯ ಪ್ರದೇಶದ ಮಧ್ಯ ಭಾಗದಲ್ಲಿ ಹಲವು ದಶಕಗಳಿಂದ ನಿರ್ವಹಣೆಯಿಲ್ಲದೇ ಕಾಡಿನಲ್ಲಿ ಅವಿತು ಹೋಗಿದ್ದ ವಿಜಯನಗರದ ಅರಸರ ಕಾಲದ ಶ್ರೀ ವೆಂಕಟರಮಣಸ್ವಾಮಿ ಪುರಾತನ ದೇವಾಲಯ, ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಜನರ ಸ್ವಪ್ರೇರಣೆ, ಇಚ್ಛಾಶಕ್ತಿ ಯಿಂದಾಗಿ ಜೀವಕಳೆ ಪಡೆದುಕೊಂಡು ಲೋಕಾರ್ಪಣೆಗೆ ಸಿದ್ಧಗೊಂಡಿದೆ.
ಇಂದು ಲೋಕಾರ್ಪಣೆ: ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ದೇವಸ್ಥಾನವು ಪುನರ್ ಪ್ರತಿಷ್ಠಾಪನೆ ಜೀರ್ಣೋದ್ಧಾರ ಮಹಾಕುಂಭಾಭಿಷೇಕದೊಂದಿಗೆ ನ.11ರಂದು ಲೋಕಾರ್ಪಣೆಗೊಳ್ಳಲಿದ್ದು, ಮಂಗಳವಾರ ಮತ್ತು ಬುಧವಾರ ವಿವಿಧ ಬಗೆಯ ಹೋಮ ಹವನಾದಿ ಪೂಜಾ ಕೈಂಕರ್ಯ ಸೇರಿದಂತೆ ನವರತ್ನ ಪಂಚಲೋಹದೊಂದಿಗೆ ಯಂತ್ರ ಚಕ್ರ ಸ್ಥಾಪನೆ, ಪಿಂಡಿಕಾಸ್ಥಾಪನೆ ಹಾಗೂ ನೂತನ ವಿಗ್ರಹ ಪ್ರತಿಷ್ಠಾಪನೆ, ಅಷ್ಟಬಂಧನ ಕ್ರಿಯೆ ನಡೆಯಲಿದೆ.
ಇದನ್ನೂ ಓದಿ:- ಬಿಟ್‌ಕಾಯಿನ್ ವಿಚಾರವಾಗಿ ವಿಪಕ್ಷಗಳಿಂದ ಗಾಳಿಯಲ್ಲಿ ಗುಂಡು ಹೊಡೆದಂತೆ ಆರೋಪ:ಬಿ.ವೈ.ರಾಘವೇಂದ್ರ
ಗುರುವಾರ ಬೆಳಗ್ಗೆ ಚತುರ್ವೇದ ಪಾರಾಯಣ, ಗಣಪತಿ ಪೂಜೆ ಸೇರಿದಂತೆ ಹೋಮ ಹವನಾದಿ ಪಂಚಾಮೃತಾಭಿಷೇಕ. ಮಹಾಕುಂಭಾಭಿಷೇಕದೊಂದಿಗೆ ದೇವಸ್ಥಾನ ಲೋಕಾರ್ಪಣೆಗೊಳ್ಳಲಿದೆ. ತಾಲೂಕಿನ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ಮತ್ತು ಶಿವಮೊಗ್ಗದ ಮತ್ತೂರು ಸಂಸ್ಕೃತ ಗ್ರಾಮದ ಅದ್ವಯಾನಂದೇಂದ್ರ ಸರಸ್ವತಿ ಸ್ವಾಮೀಜಿ ಮಾರ್ಗದರ್ಶನದಲ್ಲಿ ಶ್ರೀರಂಗಪಟ್ಟಣದ ವೇ.ಬ್ರ.ಡಾ.ಭಾನುಪ್ರಕಾಶ್‌ಶರ್ಮಾ ನೇತೃತ್ವದ ಪುರೋಹಿತರ ತಂಡ ಮೂರು ದಿನಗಳ ಪೂಜಾ ಕೈಂಕರ್ಯ ನೆರವೇರಿಸಲಿದ್ದು, ಗುರುವಾರ ಮಧ್ಯಾಹ್ನ 1ಗಂಟೆಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ.