ಮಂಗಳೂರು: ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ 100ನೇ ವರ್ಷದ ಶಾರದಾ ಮಹೋತ್ಸವದಲ್ಲಿ ಪೂಜಿಸಲ್ಪಟ್ಟ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆ ಗುರುವಾರ ರಾತ್ರಿ ಶ್ರದ್ಧಾಭಕ್ತಿಯಿಂದ ನೆರವೇರಿತು.
ಸರಸ್ವತಿ ಕಲಾ ಮಂಟಪದಲ್ಲಿ ಬೆಳಗ್ಗಿನಿಂದ ಸೇವಾರೂಪ ದಲ್ಲಿ ಪ್ರತೀ ವರ್ಷದಂತೆ ಶಾರದಾ ಹುಲಿವೇಷದಾರಿಗಳಿಂದ ಹುಲಿವೇಷ ಕುಣಿತ ನಡೆಯಿತು. ರಾತ್ರಿ ಮಹಾ ಮಂಗಳಾ ರತಿ ಆಗಿ, ಶ್ರೀ ವೆಂಕಟರಮಣ ದೇವರ ಪ್ರದಕ್ಷಿಣೆ ನಡೆಯಿತು. ಬಳಿಕ ಶ್ರೀ ಶಾರದಾ ಮಾತೆಯ ವಿಸರ್ಜನಾ ಶೋಭಾಯಾತ್ರೆಯು ಉತ್ಸವ ಸ್ಥಾನದಿಂದ ಹೊರಟಿತು.
ಶ್ರೀ ಮಹಾಮಾಯಿ ದೇವಸ್ಥಾನ, ಗದ್ದೆಕೇರಿ, ಕೆನರಾ ಹೈಸ್ಕೂಲ್ ಹಿಂಬದಿ ರಸ್ತೆಯಿಂದ ನವಭಾರತ ವೃತ್ತ, ಅಮ್ಮೆಂ ಬಳ ಸುಬ್ಬರಾವ್ ಪೈ ರಸ್ತೆ, ಡೊಂಗರಕೇರಿ, ನ್ಯೂಚಿತ್ರಾ ಟಾಕೀಸ್, ಬಸವನ ಗುಡಿ, ಚಾಮರಗಲ್ಲಿ, ರಥಬೀದಿಯಾಗಿ ಶ್ರೀ ಮಹಾಮಾಯಾ ತೀರ್ಥದಲ್ಲಿ ವಿಸರ್ಜನೆ ನಡೆಯಿತು.
ಸ್ವಯಂಸೇವಕರು ಭುಜ ಸೇವೆಯ ಮೂಲಕ ಶ್ರೀ ಮಾತೆಯ ವಿಗ್ರಹದ ಶೋಭಾಯಾತ್ರೆಯಲ್ಲಿ ಪಾಲ್ಗೊಂ ಡರು. ವಿವಿಧ ವೇಷಧಾರಿಗಳಿಂದ ವಿಶೇಷ ಟ್ಯಾಬ್ಲೋಗಳು, ಹರಕೆಯ ಶಾರದಾ ಹುಲಿವೇಷದ ಟ್ಯಾಬ್ಲೋಗಳು ಜನಾಕರ್ಷಣೆಯ ಕೇಂದ್ರವಾಗಿದ್ದವು.
ರಥಬೀದಿಯಲ್ಲಿರುವ ಶ್ರೀ ವೆಂಕಟರಮಣ ದೇವಸ್ಥಾನದ ಶ್ರೀ ಆಚಾರ್ಯರ ಮಠದ ವಸಂತ ಮಂಟಪದಲ್ಲಿ ಕಳೆದ ಒಂದು ಶತಮಾನಗಳಿಂದ ಪೂಜಿಸಿ ಬಂದಿರುವ ಮಂಗಳೂರು ಶ್ರೀ ಶಾರದಾ ಮಹೋತ್ಸವಕ್ಕೆ ಈ ವರ್ಷ ಶತಮಾನೋತ್ಸವದ ಸಂಭ್ರಮವಾಗಿತ್ತು. 10 ದಿನಗಳ ಪರ್ಯಂತ ಶ್ರೀ ಮಾತೆಯ ವಿಗ್ರಹಕ್ಕೆ ವಿವಿಧ ದೇವಿಯ ಅವತಾರಗಳ ಅಲಂಕಾರಗಳು ನಡೆದವು. ಸಹಸ್ರಾರು ಕುಂಕುಮಾರ್ಚನೆ ಸೇವೆ, ರಂಗ ಪೂಜೆ, ಸಹಸ್ರ ಚಂಡಿಕಾ ಮಹಾಯಾಗ, ಮಕ್ಕಳಿಗೆ ವಿದ್ಯಾರಂಭ ನೆರವೇರಿವೆ.
ಶ್ರೀ ಶಾರದಾ ಮಹೋತ್ಸವ ಸಮಿತಿ ಅಧ್ಯಕ್ಷ ಡಾ| ಉಮಾನಂದ ಮಲ್ಯ, ಕಾರ್ಯದರ್ಶಿ ಅಡಿಗೆ ಬಾಲಕೃಷ್ಣ ಶೆಣೈ, ಶತಮಾನೋತ್ಸವ ಸಮಿತಿಯ ಪದಾಧಿಕಾರಿಗಳು, ಆಚಾರ್ಯ ಮಠದ ಪಂಡಿತ್ ನರಸಿಂಹ ಆಚಾರ್ಯ, ಶ್ರೀ ವೆಂಕಟರಮಣ ದೇಗುಲದ ಮೊಕ್ತೇಸರರಾದ ಸಾಹುಕಾರ್ ಕಿರಣ್ ಪೈ, ಸತೀಶ್ ಪ್ರಭು, ಗಣೇಶ್ ಕಾಮತ್ ಉಪಸ್ಥಿತರಿದ್ದರು.