ಕೊರಟಗೆರೆ: ತಾಪಂ ಉಪಾಧ್ಯಕ್ಷ ಟಿ.ಎಚ್.ವೆಂಕಟಪ್ಪ ಕೊರಟಗೆರೆ ತಾಪಂ ಪ್ರಭಾರ ಅಧ್ಯಕ್ಷರಾಗಿ ತಾಪಂ ಇಒ ಶಿವಪ್ರಕಾಶ್ ಸಮ್ಮುಖದಲ್ಲಿ ನಾಜೀಮಾಬಿ ಅವರಿಂದ ಅಧಿಕಾರ ಸ್ವೀಕರಿಸಿದರು. ಕಾಂಗ್ರೆಸ್ ಪಕ್ಷದ ತೀರ್ಮಾನದಂತೆ 10 ತಿಂಗಳು ಕೊರಟಗೆರೆ ತಾಪಂ ಅಧ್ಯಕ್ಷರಾಗಿದ್ದ ನಾಜೀಮಾಬಿ ರಾಜೀನಾಮೆ ನೀಡಿದ ಹಿನ್ನೆಲೆ ತುಮಕೂರು ಜಿಲ್ಲಾಧಿಕಾರಿ ಜೂ.15ರಂದು ಅಂಗೀಕಾರವಾದ ನಂತರ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಪ್ರಭಾರ ಅಧ್ಯಕ್ಷರಾಗಿ ವೆಂಕಟಪ್ಪ ಮುಂದುವರಿದಿದ್ದಾರೆ.
ಕೊರಟಗೆರೆ ತಾಲೂಕಿನಲ್ಲಿ ಒಟ್ಟು 15 ತಾಪಂ ಕ್ಷೇತ್ರಗಳಿವೆ. 9 ಕ್ಷೇತ್ರದಲ್ಲಿ ಗೆದ್ದಿರುವ ಕಾಂಗ್ರೆಸ್ ಸ್ಪಷ್ಟ ಬಹುಮತದಿಂದ ಅಧಿಕಾರದ ಗದ್ದುಗೆ ಹಿಡಿದು ಮೊದಲ ಬಾರಿಗೆ ಕೋಳಾಲ ಹೋಬಳಿಯಿಂದ ಕೆಂಪಣ್ಣ 3 ವರ್ಷ ಅಧ್ಯಕ್ಷ ಮತ್ತು ಉಪಾಧ್ಯಕ್ಷೆಯಾಗಿ ಹುಲಿಕುಂಟೆ ನರಸಮ್ಮ ಆಯ್ಕೆಯಾಗಿದ್ದರು. ಕೆಂಪಣ್ಣನ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಹೊಳವನಹಳ್ಳಿ ಕ್ಷೇತ್ರದ ನಾಜೀಮಾಬಿ ಅಧ್ಯಕ್ಷೆ
ಮತ್ತು ಅಕ್ಕಿರಾಂಪುರ ಕ್ಷೇತ್ರದ ವೆಂಕಟಪ್ಪ ಉಪಾಧ್ಯಕ್ಷರಾಗಿ ಗದ್ದುಗೆ ಅಲಂಕರಿಸಿದ್ದರು. ಮಾಜಿ ಡಿಸಿಎಂ ಡಾ.ಜಿ. ಪರಮೇಶ್ವರ್ ಸೂಚನೆಯಿಂ ದ 10 ತಿಂಗಳ ಅವಧಿಗೆ ಅಧಿಕಾರ ನಡೆಸಿದ ನಾಜೀಮಾಬಿ ಕಳೆದ ವಾರವಷ್ಟೇ ರಾಜೀನಾಮೆ ನೀಡಿದ್ದಾರೆ. ಮುಂದಿನ 11 ತಿಂಗಳ ಅವಧಿಗೆ ತಾಪಂ ಅಧ್ಯಕ್ಷ ಸ್ಥಾನ ಚನ್ನರಾಯನದುರ್ಗ ಹೋಬಳಿಗೆ ಸಿಗುವ ಭರವಸೆ ಮೂಡಿದೆ. ಅದರಲ್ಲಿ ತೋವಿನಕೆರೆ ಜ್ಯೋತಿ, ಕುರಂಕೋಟೆ ಶ್ಯಾಮಲಾ, ಬುಕ್ಕಾಪಟ್ಟಣ ಸುಮಾ ನಡುವೆ ಪೈಪೋಟಿ ಏರ್ಪಡಿದ್ದು ತಾಪಂನ ಅಧ್ಯಕ್ಷೆಯಾಗುವ ಕನಸಿನ ಜೊತೆ ನಾನಾ ರೀತಿಯ ಕಸರತ್ತು ಮಾಡುತ್ತಿದ್ದಾರೆ.
ಪ್ರಸ್ತುತ ಕೊರಟಗೆರೆ ತಾಪಂ ಪ್ರಭಾರ ಅಧ್ಯಕ್ಷ ವೆಂಕಟಪ್ಪ ಉಪಾಧ್ಯಕ್ಷ ಮುಂದಿನ ಅವಧಿಗೂ ಉಪಾಧ್ಯಕ್ಷರಾಗಿ ಮುಂದುವರಿಯುತ್ತಾರೆ. ಪ್ರತಿ ಬಾರಿಯ ಆಯ್ಕೆಯಲ್ಲಿಯೂ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ ಲಕೋಟೆ ತಂತ್ರದ ಮೂಲಕ ಸೂಚಿಸುವ ಹೆಸರೇ ಅಂತಿಮವಾಗಲಿದೆ. ಈ ಬಾರಿಯೂ ತಾಪಂ ಅಧ್ಯಕ್ಷರ ಆಯ್ಕೆ ಕುತೂಹಲ ಮೂಡಿಸಿದೆ.