“ನನ್ ಮಗಂದ್… ನನ್ ಎಕ್ಕಡ…’ – ಹೀಗೆ ಮಾತ್ ಮಾತಿಗೂ ಡೈಲಾಗ್ ಹೇಳಿ ಎಲ್ಲೆಡೆ ಜೋರು ಸುದ್ದಿಯಾಗಿದ್ದ ಹುಚ್ಚವೆಂಕಟ್, ಯಾಕೆ ಹಾಗೆ ಹೇಳುತ್ತಿದ್ದರು, ಹಾಗೆಲ್ಲ ವರ್ತಿಸುತ್ತಿದ್ದದ್ದು ಯಾಕೆ ಎಂಬುದಕ್ಕೆ ರಿಲೀಸ್ ಆಗುತ್ತಿರುವ ಅವರ “ಪೊರ್ಕಿ ಹುಚ್ಚ ವೆಂಕಟ್’ ಚಿತ್ರದಲ್ಲಿ ಉತ್ತರ ಕೊಟ್ಟಿದ್ದಾರಂತೆ. ಈ ವಾರ ಬಿಡುಗಡೆಯಾಗುತ್ತಿರುವ ಈ ಚಿತ್ರ ಮಾಡಿದ್ದು, ಅವರ ತಾಯಿ, ತಂದೆಗಂತೆ.
ಅವರ ತಾಯಿ ಯಾವಾಗಲೂ ಅವರನ್ನು “ಪೊರ್ಕಿ’ ಎನ್ನುತ್ತಿದ್ದರಿಂದ, ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾಗಿ ಹೇಳುತ್ತಾರೆ ವೆಂಕಟ್. ಹುಚ್ಚ ವೆಂಕಟ್ ಈ ಚಿತ್ರ ಮಾಡೋಕೆ ತುಂಬಾನೇ ಕಷ್ಟಪಟ್ಟಿದ್ದಾರೆ. ಅವರೇ ಹೇಳುವಂತೆ, ಬೇರೆ ಸಿನಿಮಾಗಳಲ್ಲಿ ಅತಿಥಿಯಾಗಿ ನಟಿಸಿದ್ದು, ರಿಯಾಲಿಟಿ ಷೋಗಳಲ್ಲಿ ಕಾಣಿಸಿಕೊಂಡಿದ್ದು, ಅದೆಲ್ಲದ್ದರಿಂದ ಬಂದಂತಹ ಹಣವನ್ನೆಲ್ಲಾ ಈ ಚಿತ್ರಕ್ಕೆ ಸುರಿದು ಸಿನಿಮಾ ಮಾಡಿದ್ದಾರಂತೆ.
ಈಗ ಅವರು “ಸೂಪರ್‌ಜೋಡಿ’ ರಿಯಾಲಿಟಿ ಷೋನಲ್ಲಿ ಫಿನಾಲೆಗೆ ಎಂಟ್ರಿಯಾದ ಖುಷಿಯಲ್ಲಿದ್ದಾರೆ. ಎಲ್ಲರೂ ಹುಚ್ಚವೆಂಕಟ್ ಯಾಕೆ ಹಾಗೆ ಮಾಡ್ತಾನೆ ಅನ್ನುವ ಪ್ರಶ್ನೆ ಕಾಡಬಹುದು. ಅದಕ್ಕೆ ಈ ಚಿತ್ರದಲ್ಲಿ ಉತ್ತರ ಸಿಗಲಿದೆ ಎಂಬುದು ಅವರ ಮಾತು. ಅವರಿಲ್ಲಿ ಹಾಡೊಂದನ್ನು ಹಾಡಿದ್ದಾರೆ. ಡುಯೆಟ್ ಹಾಡೂ ಇದೆ. ಆದರೆ, ನಾಯಕಿಯನ್ನು ಸ್ಪರ್ಶಿಸದೆಯೇ ನಟಿಸಿದ್ದಾರಂತೆ. ಅವರು ಯಾವ ನಾಯಕಿಯನ್ನೂ ಹಾಡಲ್ಲಿ ಮುಟ್ಟೋದಿಲ್ಲವಂತೆ.
ಅವರು ಮುಟ್ಟುವುದಾದರೆ ಅದು ಅವರು ಪ್ರೀತಿಸುವ ಹುಡುಗಿಯನ್ನು ಮಾತ್ರವಂತೆ! ಅದೇನೆ ಇರಲಿ, ವೆಂಕಟ್ ಈ ಚಿತ್ರದ ಮೇಲೆ ಬಹಳ ನಂಬಿಕೆ ಇಟ್ಟಿದ್ದಾರಂತೆ. ಚಿತ್ರ ನೋಡಿದವರೆಲ್ಲರಿಗೂ ಇಷ್ಟವಾಗುತ್ತೆ ಎಂಬ ವಿಶ್ವಾಸ ಅವರದು. ಇನ್ನು, ವೆಂಕಟ್ ಅವರು ಮನೆಯವರನ್ನು ಪ್ರೀತಿಸುವುದಕ್ಕಿಂತ ಹೆಚ್ಚಾಗಿ ಸಮಾಜವನ್ನು ಪ್ರೀತಿಸಿದ್ದಾರಂತೆ. ಅದಕ್ಕೆ ಕಾರಣ, ಹಸಿವು ಎಂಬುದು ಅವರ ಮಾತು. ಅವರಿಗೆ ಮೊದ ಮೊದಲು ಹಸಿವು ಹೇಗಿರುತ್ತೆ ಅನ್ನೋದು ಗೊತ್ತಿರಲಿಲ್ಲವಂತೆ.
ಒಂದು ದಿನ ಏನನ್ನೂ ಸೇವಿಸದೆ ಇರುವಾಗ, ಹಸಿವಿನ ಅರಿವಾಯಿತಂತೆ. ಆಗಿನಿಂದ ಅವರ ಸೇನೆ ಮೂಲಕ ಸಾಧ್ಯವಾದಷ್ಟು ಹಸಿದವರಿಗೆ ಅನ್ನ ಹಾಕುವ ಕೆಲಸ ಮಾಡುತ್ತಿದ್ದಾರಂತೆ. ಇನ್ನು ಈ ಚಿತ್ರಕ್ಕೆ ಚವ್ಹಾಣ್ ಕ್ಯಾಮೆರಾ ಹಿಡಿದಿದ್ದಾರೆ. ಅವರಿಗೆ ಇದು ವೆಂಕಟ್ ಜತೆ ಮೂರನೇ ಸಿನಿಮಾವಂತೆ. ಇನ್ನು, ಚಿತ್ರದಲ್ಲಿ ರಚನಾ ಮತ್ತು ಸೌಮ್ಯ ನಾಯಕಿಯರಾಗಿ ನಟಿಸಿದ್ದಾರೆ. ಉಳಿದಂತೆ ಜೈ ಜಗದೀಶ್, ಕೀರ್ತಿರಾಜ್ ಇತರರು ಚಿತ್ರದಲ್ಲಿದ್ದಾರೆ.