Advertisement

ಸತೀಶ್‌, ರಾಹುಲ್‌ ಬಂಗಾರದ ಹುಡುಗರು

06:05 AM Apr 08, 2018 | |

ಗೋಲ್ಡ್‌ ಕೋಸ್ಟ್‌: ವೇಟ್‌ಲಿಫ್ಟಿಂಗ್‌ನಲ್ಲಿ ಭಾರತ ಚಿನ್ನದ ಪದಕ ಬೇಟೆಯನ್ನು ಮುಂದುವರಿಸಿದೆ. ಹಾಲಿ ಚಾಂಪಿಯನ್‌ ಸತೀಶ್‌ ಶಿವಲಿಂಗಂ 77 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ. ಜತೆಗೆ ವೆಂಕಟ್‌ ರಾಹುಲ್‌ ರಾಗಾಲ 85 ಕೆ.ಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದುಕೊಂಡಿದ್ದಾರೆ. ಇದರೊಂದಿಗೆ ಒಟ್ಟಾರೆ ಭಾರತ ಕಾಮನ್‌ವೆಲ್ತ್‌ ಗೇಮ್ಸ್‌ ವೇಟ್‌ಲಿಫ್ಟಿಂಗ್‌ನಲ್ಲಿ ಗೆದ್ದ ಚಿನ್ನದ ಪದಕ ಸಂಖ್ಯೆಯನ್ನು 4ಕ್ಕೆ ಏರಿಸಿಕೊಂಡಿದೆ. ಅಷ್ಟೇ ಅಲ್ಲ ಭಾರತ ಗೆದ್ದಿರುವ ಎಲ್ಲ ಪದಕಗಳು ಕೂಡ ವೇಟ್‌ಲಿಫ್ಟಿಂಗ್‌ನಲ್ಲೇ ಬಂದಿದೆ ಎನ್ನುವುದು ವಿಶೇಷ.

Advertisement

25 ವರ್ಷದ ಸತೀಶ್‌ ಒಟ್ಟಾರೆ 317 ಕೆ.ಜಿ (144 ಕೆ.ಜಿ ಪ್ಲಸ್‌ 173 ಕೆ.ಜಿ) ಎತ್ತಿದ್ದಾರೆ. ಕ್ಲೀನ್‌ ಹಾಗೂ ಜೆರ್ಕ್‌ನಲ್ಲಿ ಅವರು ಗಮನಾರ್ಹ ಪ್ರದರ್ಶನ ನೀಡಿ ಪದಕವನ್ನು ತನ್ನದಾಗಿಸಿಕೊಂಡರು. ಒಲಿವರ್‌ ಒಟ್ಟಾರೆ 312 ಕೆ.ಜಿ ಎತ್ತಿ  ಬೆಳ್ಳಿ ಪದಕ ಪಡೆದರು. ಈ ವೇಳೆ ಒಲಿವರ್‌ ಪ್ರಬಲ ಪೈಪೋಟಿ ನೀಡಿದ್ದರು. ಅವರ ಎರಡು ಪ್ರಯತ್ನ ವಿಫ‌ಲವಾದವು. ಹೀಗಾಗಿ ಅವರು ಚಿನ್ನದ ಪದಕ ಕಳೆದುಕೊಳ್ಳಬೇಕಾಯಿತು. ಆಸ್ಟ್ರೇಲಿಯಾದ ಫ್ರಾಂಕೋಯಿಸ್‌ ಎಟೌಂಡಿ ಒಟ್ಟು 305 ಕೆ.ಜಿ ಎತ್ತಿ ಕಂಚಿನ ಪದಕ ಪಡೆದರು. ಗಾಯದ ಹೊರತಾಗಿಯೂ ಆಸ್ಟ್ರೇಲಿಯಾದ ಸ್ಪರ್ಧಿ ಕಂಚು ಗೆದ್ದಿದ್ದು ವಿಶೇಷ.

ಸತೀಶ್‌ಗೆ 2ನೇ ಕಾಮನ್‌ವೆಲ್ತ್‌ ಚಿನ್ನ: ಸತೀಶ್‌ಗೆ ಕಾಮನ್‌ವೆಲ್ತ್‌ ವೇಟ್‌ಲಿಫ್ಟಿಂಗ್‌ನಲ್ಲಿ ದೊರಕಿದೆ 2ನೇ ಚಿನ್ನದ ಪದಕವಾಗಿದೆ. 2014ರಲ್ಲಿ ನಡೆದಿದ್ದ ಕಾಮನ್‌ವೆಲ್ತ್‌ ಗೇಮ್ಸ್‌ ಕೂಟದಲ್ಲಿ ಸತೀಶ್‌ 149 ಕೆ.ಜಿ ಸ್ನ್ಯಾಚ್‌, 179 ಕೆ.ಜಿ ಕ್ಲೀನ್‌ ಹಾಗೂ ಜೆರ್ಕ್‌ ಸೇರಿದಂತೆ ಒಟ್ಟಾರೆ 328 ಕೆ.ಜಿ ಎತ್ತಿ ಚಿನ್ನದ ಪದಕ ಗೆದ್ದಿದ್ದನ್ನು ಇಲ್ಲಿ ಸರಿಸಬಹುದು.

ತೊಡೆ ನೋವಿಗೂ ಬಾಗದೇ
ಪದಕ ಗೆದ್ದ ತಮಿಳುನಾಡಿನ ಸಾಧಕ

ತಮಿಳುನಾಡು ಮೂಲದ ಸತೀಶ್‌ ಶಿವಲಿಂಗಂ ಕೆಲವು ದಿನಗಳಿಂದ ಬೆನ್ನು ನೋವಿನಿಂದ ಬಳಲುತ್ತಿದ್ದರು. ಸ್ವತಃ ಕೂಟದಲ್ಲಿ ಪದಕ ಗೆಲ್ಲುವ ಬಗ್ಗೆ ಸತೀಶ್‌ಗೆ ಖಚಿತತೆ ಇರಲಿಲ್ಲ. ಕುಳಿತುಕೊಳ್ಳುವಾಗ ಸಹಿಸಿಕೊಳ್ಳಲಾಗದ ನೋವು ಕಾಣಿಸಿಕೊಳ್ಳುತ್ತಿತ್ತು. ಈ ವೇಳೆ ಪ್ರತಿಯೊಬ್ಬರು ನನ್ನ ಬಗ್ಗೆ ಕಾಳಜಿ ತೋರುತ್ತಿದ್ದರು. ಧೈರ್ಯ ತುಂಬುತ್ತಿದ್ದರು. ಪದಕ ಗೆಲ್ಲುವಷ್ಟು ಕಠಿಣ  ತರಬೇತಿ ನಡೆಸಿ ಪರಿಶ್ರಮ ಹಾಕಲು ನನ್ನಿಂದ ಸಾಧ್ಯವಾಗಿರಲಿಲ್ಲ. ನನ್ನ ದೇಹ ಇದಕ್ಕೆ ಸ್ಪಂದನೆಯನ್ನೂ ನೀಡುತ್ತಿರಲಿಲ್ಲ. ಹೀಗಿರುವಾಗ ಪದಕ ಗೆಲ್ಲುತ್ತೇನೆ ಎನ್ನುವ ಭರವಸೆಯನ್ನು ಇಟ್ಟುಕೊಂಡಿರಲಿಲ್ಲ. ಕೊನೆಗೆ ಪದಕ ಗೆದ್ದಿರುವುದು ನೆಮ್ಮದಿ ತಂದಿದೆ. ಮುಂದೆ ಏಷ್ಯಾಡ್‌ ಚಾಂಪಿಯನ್‌ಶಿಪ್‌ ನಡೆಯಲಿದ್ದು ಅಲ್ಲಿಯೂ ಪದಕ ಗೆಲ್ಲಲಿದ್ದೇನೆ ಎಂದು ಸತೀಶ್‌ ವಿಶ್ವಾಸ ವ್ಯಕ್ತಪಡಿಸಿದರು.

ತೀವ್ರ ತೊಡೆ ನೋವು ಇದ್ದಿದ್ದರಿಂದ ಪದಕ ಗೆಲ್ಲುವ ಬಗ್ಗೆ ಯಾವುದೇ ನಂಬಿಕೆಯಿರಲಿಲ್ಲ. ರಾಷ್ಟ್ರೀಯ ಕೂಟದಲ್ಲಿ 194 ಕೆಜಿ ಭಾರ ಎತ್ತಿದ ನಂತರ ಈ ನೋವು ಶುರುವಾಗಿತ್ತು. ನನಗೆ ಫಿಟ್ನೆಸ್ ಕೊರತೆಯಿದ್ದರೂ ಪದಕ ಗೆದ್ದಿದ್ದು ಬಹಳ ಸಂತೋಷ ನೀಡಿದೆ.
– ಸತೀಶ್‌ ಶಿವಲಿಂಗಂ,
ಚಿನ್ನ ವಿಜೇತ

Advertisement

21ರ ವೆಂಕಟ್‌ ರಾಹುಲ್‌ಗೆ ಕೈಹಿಡಿದ ಅದೃಷ್ಟ,ಒಲಿದ ಪದಕ
21ರ ಹರೆಯದ ವೆಂಕಟ ರಾಹುಲ್‌ ರಾಗಾಲ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತಕ್ಕೆ 4ನೇ ಸ್ವರ್ಣ ಪದಕ ತಂದಿತ್ತ ಹಿರಿಮೆಗೆ ಪಾತ್ರರಾದರು. ಸತೀಶ್‌ ಶಿವಲಿಂಗಂ ಅವರ ಸಾಧನೆಯ ಬಳಿಕ 85 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿದ ರಾಹುಲ್‌ ಅದೃಷ್ಟದ ಬೆಂಬಲದಿಂದ ಮೊದಲ ಗೇಮ್ಸ್‌ ಪದಕವನ್ನು ತಮ್ಮದಾಗಿಸಿಕೊಂಡರು.

ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ರಾಹುಲ್‌, 85 ಕೆಜಿ ಸ್ಪರ್ಧೆಯಲ್ಲಿ ಒಟ್ಟು 338 ಕೆಜಿ ಭಾರ ಎತ್ತಿದರು (151+187). ಪ್ರತಿಸ್ಪರ್ಧಿ, ಸಮೋವಾದ ಡಾನ್‌ ಒಪೆಲೋಜ್‌ 331 ಕೆಜಿಯೊಂದಿಗೆ ದ್ವಿತೀಯ ಸ್ಥಾನಿಯಾದರು (151+180). ಇಬ್ಬರೂ ಕೊನೆಯ ಕ್ಲೀನ್‌ ಆ್ಯಂಡ್‌ ಜರ್ಕ್‌ನಲ್ಲಿ 191 ಕೆಜಿ ಎತ್ತುವ ಗುರಿ ಹಾಕಿಕೊಂಡರು; ಆದರೆ ಇಬ್ಬರೂ ಇದರಲ್ಲಿ ವಿಫ‌ಲರಾದರು. ಆದರೆ ಒಪೆಲೋಜ್‌ 2ನೇ ಪ್ರಯತ್ನದಲ್ಲಿ 188 ಕೆಜಿ ಭಾರ ನಿಭಾಯಿಸುವಲ್ಲಿ ವಿಫ‌ಲರಾದ್ದರಿಂದ ರಾಹುಲ್‌ಗೆ ಬಂಗಾರದ ಹಾದಿ ಸುಗಮಗೊಂಡಿತು. ಒಂದು ವೇಳೆ ಒಪೆಲೋಜ್‌ ಕೊನೆಯ  ಲಿಫ್ಟ್ನಲ್ಲಿ ಯಶಸ್ವಿಯಾಗಿದ್ದೇ ಆದಲ್ಲಿ ರಾಹುಲ್‌ ಬೆಳ್ಳಿ ಪದಕಕ್ಕೆ ತೃಪ್ತಿಪಡಬೇಕಿತ್ತು. ರಾಹುಲ್‌ ಆಗಲೇ 3ನೇ ಪ್ರಯತ್ನದಲ್ಲಿ ವಿಫ‌ಲರಾಗಿದ್ದರು. ಕಾಮನ್ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ ರಾಹುಲ್‌ ಒಟ್ಟು 351 ಕೆಜಿ ಭಾರ ಎತ್ತುವಲ್ಲಿ ಯಶಸ್ವಿಯಾಗಿದ್ದರು (156+195).

ಟಾಪ್‌-10 ಪದಕ ಪಟ್ಟಿ
ದೇಶ    ಚಿನ್ನ    ಬೆಳ್ಳಿ    ಕಂಚು    ಒಟ್ಟು
1.ಆಸ್ಟ್ರೇಲಿಯ    17    16    17    50
2.ಇಂಗ್ಲೆಂಡ್‌    14    11    4    29
3.ಕೆನಡಾ    5    5    6    16
4.ಭಾರತ    4    1    1    6
5.ಸ್ಕಾಟ್ಲೆಂಡ್‌    3    5    6    14
6.ದಕ್ಷಿಣ ಆಫ್ರಿಕಾ    3    0    3    6
7.ವೇಲ್ಸ್‌    2    3    0    5
8.ಮಲೇಶ್ಯ    2    0    1    3
9.ನ್ಯೂಜಿಲ್ಯಾಂಡ್‌    1    3    5    9
10.ಬರ್ಮುಡಾ    1    0    0    1

Advertisement

Udayavani is now on Telegram. Click here to join our channel and stay updated with the latest news.

Next