ನಟ, ನಿರ್ದೇಶಕ, ನಿರ್ಮಾಪಕ ವೆಂಕಟ್ ಈಗ ಇನ್ನೊಂದು ಸುದ್ದಿಯಲ್ಲಿದ್ದಾರೆ! ಅರೆ, ಮತ್ಯಾರ ಮೇಲೆ ಕೈ ಮಾಡಿ ಸುದ್ದಿಯಾಗಿದ್ದಾರೆ ಅಂತೆಲ್ಲಾ ಕಲ್ಪನೆ ಬೇಡ. ವಿಷಯವಿಷ್ಟೇ. ವೆಂಕಟ್ ಈಗ ಹೊಸದೊಂದು ರಾಜಕೀಯ ಪಕ್ಷ ಕಟ್ಟುತ್ತಿದ್ದಾರೆ. ಮುಂಬರುವ ಚುನಾವಣೆಯಲ್ಲಿ ಆ ಪಕ್ಷದ ಕಾರ್ಯಕರ್ತರನ್ನೇ ಸ್ಪರ್ಧಿಗಳನ್ನಾಗಿಸಲು ತಯಾರಿ ನಡೆಸುತ್ತಿದ್ದಾರೆ. ಹೌದು, ಈ ಮಾತು ಸುಳ್ಳಲ್ಲ. ದೇವರಾಣೆಗೂ ವೆಂಕಟ್ ಅವರ ಬಾಯಲ್ಲೇ ಬಂದ ಸತ್ಯವಿದು.
ಹುಚ್ಚ ವೆಂಕಟ್ ಸೇನೆಗೆ ನಾಲ್ಕು ವರ್ಷ ಪೂರ್ಣಗೊಂಡಿದೆ. ಆ ಖುಷಿಯಲ್ಲಿ ವೆಂಕಟ್ ಈಗ ಸೇನೆ ಹುಡುಗರನ್ನೊಳಗೊಂಡ “ಹುಚ್ಚ ವೆಂಕಟ್ ಪಾರ್ಟಿ’ ಎಂದು ನಾಮಕರಣ ಮಾಡಿ ಇಷ್ಟರಲ್ಲೇ ಚುನಾವಣೆಗೂ ಸ್ಪರ್ಧಿಸಲು ರೆಡಿಯಾಗಿದ್ದಾರೆ. 2018 ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಅವರ ಪಾರ್ಟಿಯೂ ಸ್ಪರ್ಧಿಸಲಿದೆ. ವೆಂಕಟ್ ಪರ ಕೆಲಸ ಮಾಡುವ ಹುಡುಗರನ್ನೇ ಆಯ್ಕೆ ಮಾಡಿ, ಪ್ರತಿ ಕ್ಷೇತ್ರದಲ್ಲೂ ಸ್ಪರ್ಧಿಯನ್ನಾಗಿಸಲಿದ್ದಾರೆ.
ಅವರನ್ನು ಗೆಲ್ಲಿಸುವ ಜವಾಬ್ದಾರಿ ಹೊತ್ತಿರುವ ವೆಂಕಟ್, ರಾಜ್ಯದೆಲ್ಲೆಡೆ ಸಂಚರಿಸಿ ಪಕ್ಷ ಸಂಘಟನೆ ಮಾಡಲಿದ್ದಾರಂತೆ. ಆದರೆ, ಅವರು ಮಾತ್ರ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂಬುದು ಸ್ಪಷ್ಟ. ಅವರ ಸೇನೆ ಹುಡುಗರು ಸ್ಪರ್ಧಿಗಳಾಗಲಿದ್ದು, ಯಾರು ಸ್ಪರ್ಧೆಗೆ ನಿಲ್ಲುತ್ತಾರೋ ಅವರೇ ತಮ್ಮ ಚುನಾವಣೆಯ ಖರ್ಚು ವೆಚ್ಚಗಳನ್ನು ನೋಡಿಕೊಳ್ಳಬೇಕು ಎಂಬುದು ವೆಂಕಟ್ ಮಾತು. ಆದರೆ, ಅವರ ಪಾಲಿಸಿಯನ್ನೇ ಎಲ್ಲರೂ ಫಾಲೋ ಮಾಡಬೇಕೆಂಬುದು ಅವರ ಉದ್ದೇಶ.
ಅವರಿಗೆ ಒಂದೇ ಒಂದು ಸ್ಥಾನ ಗೆದ್ದರೂ ಪಕ್ಷ ಕಟ್ಟಿದ್ದಕ್ಕೂ ಸಾರ್ಥಕವಂತೆ. ಹಾಗೊಂದು ವೇಳೆ ಚುನಾವಣೆಯಲ್ಲಿ ಸೋತರೆ, ಅದು ಬದಲಾವಣೆ ಮಾಡಿಕೊಳ್ಳಲು ಸಿಕ್ಕ ಅವಕಾಶ ಎಂದು ಭಾವಿಸಲಿದ್ದಾರಂತೆ. ಮುಂದಿನ ಒಂದು ತಿಂಗಳಲ್ಲಿ “ಹುಚ್ಚ ವೆಂಕಟ್ ಪಾರ್ಟಿ’ ಎಂದು ನಾಮಕರಣ ಮಾಡಿ ಮುಂದಿನ ಚುನಾವಣೆಗೆ ತಯಾರು ಮಾಡಿಕೊಳ್ಳಲಿದ್ದಾರಂತೆ. ಅಂತೂ ರಾಜಕೀಯಕ್ಕೂ ಎಂಟ್ರಿ ಕೊಡುವ ಮನಸ್ಸು ಮಾಡಿರುವ ಹುಚ್ಚವೆಂಕಟ್, ತಮ್ಮ ಮದುವೆ ಬಗ್ಗೆಯೂ ಮನಸ್ಸು ಮಾಡಿದ್ದಾರೆ.
ಅವರು ಮದುವೆ ಆಗುವುದು ಪಕ್ಕಾ ಅಂತ ಸ್ಪಷ್ಟಪಡಿಸಿದ್ದು, ಈಗಾಗಲೇ ಒಂದು ಹುಡುಗಿಯನ್ನು ನೋಡಿದ್ದು, ಅವರನ್ನೇ ಮದುವೆ ಮಾಡಿಕೊಳ್ಳಲಿದ್ದಾರಂತೆ. ಇನ್ನೂ ಒಂದೂವರೆ ವರ್ಷದವರೆಗೆ ಮದುವೆ ಸುದ್ದಿ ಇಲ್ಲ. ಅಲ್ಲಿಯವರೆಗೆ ಪ್ರೀತಿ ಮಾಡಿಕಂಡಿದ್ದು, ಆ ಬಳಿಕ ಮದುವೆ ಬಗ್ಗೆ ಯೋಚನೆ ಮಾಡಲಿದ್ದಾರಂತೆ. ಇನ್ನು, ಅವರ “ಪೊರ್ಕಿ ಹುಚ್ಚ ವೆಂಕಟ್’ಗೆ ಯು/ಎ ಸಟಿಫಿಕೆಟ್ ಸಿಕ್ಕಿದ್ದು, ಶೀಘ್ರವೇ ಬಿಡುಗಡೆ ಮಾಡಲಿದ್ದಾರಂತೆ.
ಸಿನಿಮಾದಲ್ಲಿ ಪ್ರೀತಿ, ತಾಯಿ ಸೆಂಟಿಮೆಂಟ್, ವಿಷ್ಣುವರ್ಧನ್ ಅವರ ತತ್ವಾದರ್ಶಗಳು, ರೈತಪರ ಕಾಳಜಿ, ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ಆಗಬೇಕು, ಐಟಂ ಸಾಂಗ್ ಬ್ಯಾನ್ ಮಾಡಬೇಕು ಎಂಬ ವಿಷಯಗಳಿವೆಯಂತೆ. ಇಷ್ಟು ದಿನ ಅವರು “ನನ್ ಮಗಂದ್’, “ನನ್ ಎಕ್ಕಡ’ ಅಂತ ಯಾಕೆ ಹೇಳುತ್ತಿದ್ದರು ಎಂಬುದಕ್ಕೆ ಈ ಚಿತ್ರದಲ್ಲಿ ಉತ್ತರ ಕೊಟ್ಟಿದ್ದಾರಂತೆ. ಅಂದಹಾಗೆ, ವೆಂಕಟ್‌ಗೆ ಈ ಚಿತ್ರದಲ್ಲಿ ಸೌಮ್ಯ ಮತ್ತು ರಚನಾ ಎಂಬ ನಾಯಕಿಯರಿದ್ದಾರೆ.