ನವದೆಹಲಿ: ಸತತ ಎರಡನೇ ದಿನವೂ ಭಾರೀ ಮಳೆ ಸುರಿದ ಪರಿಣಾಮ ಬುಧವಾರ(ಸೆಪ್ಟೆಂಬರ್ 01) ದೆಹಲಿ ಮತ್ತು ಗುರುಗ್ರಾಮ್ ನ ವಿವಿಧ ಪ್ರದೇಶಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಟ್ರಾಫಿಕ್ ಜಾಮ್ ನಿಂದ ಪರದಾಡುವಂತಾಗಿತ್ತು ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಇಸ್ಲಾಂ ವಿರೋಧಿಗಳಿಂದ ಕಾಶ್ಮೀರವನ್ನೂ ಸ್ವತಂತ್ರಗೊಳಿಸಿ: ತಾಲಿಬಾನ್ ಗೆ ಅಲ್ ಖೈದಾ
ಕಳೆದ 12 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ದೆಹಲಿಯಲ್ಲಿ ದಾಖಲೆ ಪ್ರಮಾಣದ ಮಳೆಯಾಗಿತ್ತು. ಕಳೆದ 24ಗಂಟೆಗಳಲ್ಲಿ 112.1 ಮಿಲಿ ಮೀಟರ್ ಮಳೆಯಾಗಿತ್ತು. ಗುರುಗ್ರಾಮ್ ನಲ್ಲಿ 64.2 ಮಿ.ಮೀಟರ್ ಮಳೆ ಸುರಿದಿತ್ತು ಎಂದು ಹವಾಮಾನ ಇಲಾಖೆ ತಿಳಿಸಿದೆ.
ದೆಹಲಿ ಹಾಗೂ ಗುರುಗ್ರಾಮಗಳಲ್ಲಿನ ಹಲವು ತಗ್ಗು ಪ್ರದೇಶಗಳು ಜಲಾವೃತಗೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿರುವುದಾಗಿ ವರದಿ ಹೇಳಿದೆ.
ಅಂಡರ್ ಪಾಸ್ ಗಳಲ್ಲಿ ನೀರು ತುಂಬಿಕೊಂಡಿದ್ದರಿಂದ ದೆಹಲಿ ಟ್ರಾಫಿಕ್ ಪೊಲೀಸರು ವಾಹನ ಸಂಚಾರಕ್ಕೆ ನಿರ್ಬಂಧ ವಿಧಿಸಿರುವುದಾಗಿ ವರದಿ ತಿಳಿಸಿದೆ. ಮಿಂಟೋ ಸೇತುವೆ, ಜನಪಥ್ ರಸ್ತೆ ಸುತ್ತಮುತ್ತಲಿನ ಲಜಪತ್ ನಗರ್ ಮೆಟ್ರೋ ನಿಲ್ದಾಣ, ಲಾಲ ಲಜಪತ್ ರಾಯ್ ಮಾರ್ಗ, ಅರಬಿಂದೋ ಮಾರ್ಗ ಸಮೀಪದ ಏಮ್ಸ್ ಮೇಲ್ಸೆತುವೆ ನೀರಿನಿಂದ ತುಂಬಿಕೊಂಡಿರುವುದಾಗಿ ಟ್ರಾಫಿಕ್ ಪೊಲೀಸರು ತಿಳಿಸಿರುವುದಾಗಿ ವರದಿ ವಿವರಿಸಿದೆ.
ಕರೋಲ್ ಬಾಗ್ ಪೊಲೀಸ್ ಠಾಣೆಯ ಹೊರಭಾಗ ಸಂಪೂರ್ಣ ನೀರಿನಿಂದ ಆವೃತ್ತವಾಗಿದೆ. ಸೆಪ್ಟೆಂಬರ್ ತಿಂಗಳ ಮೊದಲ ದಿನವೇ ದೆಹಲಿಯಲ್ಲಿ ದಾಖಲೆಯ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.