Advertisement

ಪೊಲೀಸ್‌ ಠಾಣೆ ಪರಿಸರದಲ್ಲಿ ತುಕ್ಕು ಹಿಡಿಯುತ್ತಿರುವ ವಾಹನಗಳು

03:45 AM Jul 02, 2017 | Harsha Rao |

ಕಾಸರಗೋಡು: ನರಗದ ಪ್ರಮುಖ ಪೊಲೀಸ್‌ ಠಾಣೆಗಳಲ್ಲೊಂದಾದ ಬ್ಯಾಂಕ್‌ ರಸ್ತೆಯಲ್ಲಿರುವ ಪೊಲೀಸ್‌ ಠಾಣೆಯ ಪರಿಸರದಲ್ಲಿ ವಿವಿಧ ಪ್ರಕರಣಗಳಲ್ಲಿ ವಶಪಡಿಸಿಕೊಂಡು ಇರಿಸಿರುವ ವಾಹನಗಳು ತುಕ್ಕು ಹಿಡಿದು ಲಕ್ಷಾಂತರ ರೂಪಾಯಿ ನಷ್ಟವಾಗುತ್ತಿದೆ. ಅವುಗಳಲ್ಲಿ ಮರಳು ಸಾಗಾಟದ ವಾಹನಗಳೇ ಅಧಿಕವಾಗಿವೆ. ದಾಖಲೆ ಪತ್ರಗಳಿಲ್ಲದೆ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನಗಳೂ ಇಲ್ಲಿ ತುಂಬಿಕೊಂಡಿವೆ.

Advertisement

ಕಾಸರಗೋಡು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಸಾಗಿಸುತ್ತಿದ್ದ ಅಕ್ರಮ ಮರಳು ದಂಧೆಯ ವಾಹನಗಳಲ್ಲಿ ಬಹುತೇಕ ಠಾಣೆ ಪರಿಸರದಲ್ಲಿ ಇರಿಸಲಾಗಿದ್ದು, ವಾಹನವನ್ನು ಕೊಂಡೊಯ್ಯದೆ ಇರುವುದರಿಂದ ತುಕ್ಕು ಹಿಡಿದು ನಾಶವಾಗುತ್ತಿದೆ. ಹಲವು ವಾಹನಗಳ ಬಿಡಿ ಭಾಗಗಳು ತುಕ್ಕು ಹಿಡಿದು ಚಲಾಯಿಸಲು ಸಾಧ್ಯವಿಲ್ಲದಂತಾಗಿದೆ. ಮಂಗಳೂರಿನಿಂದ ಕೇರಳಕ್ಕೆ ಮರಳು ಸಾಗಿಸುತ್ತಿದ್ದ ಹಲವು ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ಅವುಗಳಲ್ಲಿ ಬಹುತೇಕ ವಾಹನಗಳನ್ನು  ಪೊಲೀಸ್‌ ಠಾಣೆ ಪರಿಸರದಲ್ಲಿ ನಿಲ್ಲಿಸಲಾಗಿದೆ. ಹಲವು ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತಿದ್ದು, ಠಾಣೆ ಪರಿಸರದಲ್ಲಿ ಇನ್ನು ವಾಹನ ನಿಲ್ಲಿಸಲು ಸ್ಥಳವಿಲ್ಲ ಎಂಬಂತಾಗಿದೆ. ಪೊಲೀಸ್‌ ಠಾಣೆಯ ವಾಹನಗಳನ್ನೂ ಇರಿಸಲು ಸ್ಥಳವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಹಲವು ವಾಹನಗಳ ಟಯರ್‌ಗಳು, ಬಿಡಿ ಭಾಗಗಳು ಹಾನಿಗೀಡಾಗಿದೆ. ಇದರಿಂದಾಗಿ ಲಕ್ಷಾಂತರ ರೂಪಾಯಿ ನಾಶನಷ್ಟವಾಗಿದೆ. ಹಲವು ವಾಹನಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿರುವುದರಿಂದ ತೀರ್ಪು ಬಾರದೆ ವಾಹನವನ್ನು ಕೊಂಡೊಯ್ಯುವಂತಿಲ್ಲ ಎಂಬ ಸ್ಥಿತಿಯಲ್ಲಿದೆ. ಹಲವು ವರ್ಷಗಳಿಂದ ವಾಹನಗಳು ಇಲ್ಲಿ ಮಳೆ ಬಿಸಿಲೆನ್ನದೆ ಎಲ್ಲದಕ್ಕೂ ಎದೆಯೊಡ್ಡಿ ನಿಂತಿದ್ದು ತುಕ್ಕು ಹಿಡಿದು ನಾಶದತ್ತ ಸರಿದಿವೆೆ. ಠಾಣೆ ಪರಿಸರದಲ್ಲಿ ವಾಹನಗಳನ್ನು ನಿಲ್ಲಿಸಿರುವುದರಿಂದ ಸೊಳ್ಳೆ ಉತ್ಪಾದನೆ ಕೇಂದ್ರವಾಗಿಯೂ ಬದಲಾಗುತ್ತಿದೆ. ವಾಹನಗಳಲ್ಲಿ ನೀರು ನಿಂತು ಸೊಳ್ಳೆಗಳಿಗೆ ಆಶ್ರಯತಾಣವಾಗುತ್ತಿದೆ.

ನಾಡಿನಾದ್ಯಂತ ಡೆಂಗ್ಯೂ ಮೊದಲಾದ ಮಾರಕ ಸಾಂಕ್ರಾಮಿಕ ರೋಗ ಹರಡುತ್ತಿರುವಾಗ ಕಾಸರಗೋಡು ಪೊಲೀಸ್‌ ಠಾಣೆ ಮತ್ತು ತಾಲೂಕು ಕಚೇರಿಯ ಪರಿಸರದಲ್ಲಿ ಹಲವು ವರ್ಷಗಳಿಂದ ತುಕ್ಕು ಹಿಡಿಯುತ್ತಿರುವ ವಾಹನಗಳು ಸೊಳ್ಳೆ ಕೇಂದ್ರವಾಗಿ ಬದಲಾಗಿದ್ದು, ಇನ್ನಷ್ಟು ರೋಗ ಹರಡುವ ಭೀತಿ ಆವರಿಸಿದೆ.

ತಾಲೂಕು ಕಚೇರಿ ಪರಿಸರ ಹಾಗು ಪೊಲೀಸ್‌ ಠಾಣೆ ಪರಿಸರದಲ್ಲಿ ನಿಲ್ಲಿಸಿರುವ ಅಕ್ರಮವಾಗಿ ಮರಳು ಸಾಗಿಸುತ್ತಿದ್ದಾಗ ವಶಪಡಿಸಿಕೊಂಡ ವಾಹನಗಳು ಸೊಳ್ಳೆ ಉತ್ಪಾದನೆ ಕೇಂದ್ರವಾಗಿ ಬದಲಾಗಿದೆ. ದೊಡ್ಡ ಲಾರಿಗಳ ಸಹಿತ ತಾಲೂಕು ಕಚೇರಿ ಪರಿಸರದಲ್ಲೇ ಹಲವು ವರ್ಷಗಳಿಂದ ತುಕ್ಕು ಹಿಡಿದು ನಾಶಗೊಳ್ಳುತ್ತಿವೆ. ವಾಹನಗಳ ಮೇಲೆ ಕಾಡು ಬೆಳೆದು ಬೃಹತ್‌ ಮರಗಳಾಗಿ ಮಾರ್ಪಾಡುಗೊಂಡಿವೆ. ವಾಹನಗಳೊಳಗೆ ಕಟ್ಟಿ ನಿಲ್ಲುವ ನೀರಿನಲ್ಲಿ ಸೊಳ್ಳೆಗಳು ಮೊಟ್ಟೆಯಿಟ್ಟು ಸಂತಾನ ಉತ್ಪತ್ತಿಯಾಗುತ್ತಿದೆ. ಪೊಲೀಸ್‌ ಠಾಣೆ ಪರಿಸರದಲ್ಲೂ ಇದೇ ಪರಿಸ್ಥಿತಿಯಿದೆ.

Advertisement

ಪೊಲೀಸರು ವಶಪಡಿಸಿಕೊಂಡ ವಾಹನಗಳನ್ನು ಕೊಂಡೊ ಯ್ಯಲು ದಂಡ ಪಾವತಿಸದಿರುವುದರಿಂದ ವಾಹನಗಳನ್ನು ಇಲ್ಲಿ ನಿಲ್ಲಿಸಬೇಕಾಗಿ ಬಂದಿದೆ. ವಶಪಡಿಸಿಕೊಂಡಿರುವ ಹಲವು ವಾಹನಗಳ ಟಯರ್‌ ಹಾಗು ಬಿಡಿ ಭಾಗಗಳು ಕಳವಾಗಿವೆ. ಇದೀಗ ಕಾಸರಗೋಡು ಪೊಲೀಸ್‌ ಠಾಣೆ ಮತ್ತು ತಾಲೂಕು ಕಚೇರಿ ಪರಿಸರ ಅಧಿಕಾರಿಗಳ ವತಿಯಿಂದ ಸೊಳ್ಳೆ ಉತ್ಪಾದನೆ ಕೇಂದ್ರಗಳಾಗಿ ಮಾರ್ಪಾಡುಗೊಂಡಿದೆ. ಆರೋಗ್ಯ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.  ಕಾಸರಗೋಡು ಜಿಲ್ಲೆಯಲ್ಲಿ ಪ್ರತೀ ವರ್ಷದಂತೆ ಈ ವರ್ಷವೂ ಸಾಂಕ್ರಾಮಿಕ ರೋಗ ಹರಡುತ್ತಿದ್ದು ಅಲ್ಲಲ್ಲಿ ತ್ಯಾಜ್ಯ ರಾಶಿ ಬಿದ್ದಿರುವುದರಿಂದ ಆತಂಕ ಇನ್ನಷ್ಟು ಬಿಗಡಾಯಿಸಲು ಕಾರಣವಾಗಿದೆ. ಹೀಗಿದ್ದರೂ ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸಿಲ್ಲ ಎಂಬುದಾಗಿ ಸಾರ್ವತ್ರಿಕವಾಗಿ ಆರೋಪ ಕೇಳಿ ಬರುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next