Advertisement

ಮಕಳ ಕರೆದೊಯ್ಯುವ ವಾಹನಗಳು ಶಾಲೆ ಆವರಣಕ್ಕೆ ತೆರಳಲು ವ್ಯವಸ್ಥೆ 

10:19 AM Mar 24, 2018 | Team Udayavani |

ಮಹಾನಗರ: ನಗರದಲ್ಲಿ ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಬೆಳಗ್ಗಿನ ಹೊತ್ತು ಸಂಬಂಧಪಟ್ಟ ಶಿಕ್ಷಣ ಸಂಸ್ಥೆಯ ಒಳಗೆ ಹೋಗಿ ಮಕ್ಕಳನ್ನು ಇಳಿಸಲು ಮತ್ತು ಸಂಜೆ ಅಲ್ಲಿಂದಲೇ ಹತ್ತಿಸಿಕೊಳ್ಳುವ ವ್ಯವಸ್ಥೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಜಾರಿಗೊಳಿಸಲು ಉದ್ದೇಶಿಸಲಾಗಿದ್ದು, ಈ ಬಗ್ಗೆ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಪ್ರತಿನಿಧಿಗಳ ಸಭೆಯನ್ನು ಶೀಘ್ರ ನಡೆಸಲಾಗುವುದು ಎಂದು ಡಿಸಿಪಿ ಉಮಾ ಪ್ರಶಾಂತ್‌ ಅವರು ತಿಳಿಸಿದರು.

Advertisement

ನಗರ ಪೊಲಿಸ್‌ ಆಯುಕ್ತರ ಕಚೇರಿಯಲ್ಲಿ ಶುಕ್ರವಾರ ನಡೆದ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ ಸಂಚಾರ ವ್ಯವಸ್ಥೆ ಬಗ್ಗೆ ಬಂದ ದೂರುಗಳನ್ನು ಸ್ವೀಕರಿಸಿ ಅವರು ಮಾತನಾಡಿದರು. ಶಾಲಾ ಮಕ್ಕಳನ್ನು ಕರೆದೊಯ್ಯುವ ವಾಹನಗಳು ಶಿಕ್ಷಣ ಸಂಸ್ಥೆಯ ಬಳಿ ಮುಖ್ಯ ರಸ್ತೆಯಲ್ಲಿಯೇ ನಿಲ್ಲಿಸಿ ಮಕ್ಕಳನ್ನು ಇಳಿಸುವ ಮತ್ತು ಹತ್ತಿಸುವುದರಿಂದ ಬೆಳಗ್ಗೆ ಮತ್ತು ಸಂಜೆ ರಸ್ತೆಗಳಲ್ಲಿ ಟ್ರಾಫಿಕ್‌ ಜಾಂ ಉಂಟಾಗುತ್ತಿದೆ. 

ಹಲವಾರು ಮಂದಿ ಮಕ್ಕಳಿಗೂ ಸಕಾಲದಲ್ಲಿ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ. ವಾಹನಗಳು ಶಾಲಾ ಆವರಣದ ಒಳಗೆ ಹೋಗುವಂತಾದರೆ ಸಾರ್ವಜನಿಕ ರಸ್ತೆಯಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಬಹುದು ಎಂಬ ಸಲಹೆ ಸಾರ್ವಜನಿಕರಿಂದ ಕೇಳಿ ಬಂತು. ಕೆಲವು ವರ್ಷಗಳ ಹಿಂದೆ ಎಲ್ಲ ಶಾಲಾ ಆಡಳಿತ ಮಂಡಳಿಗಳ ಪ್ರತಿನಿಧಿಗಳ ಸಭೆಯನ್ನು ಜಿಲ್ಲಾಧಿಕಾರಿಗಳು ನಡೆಸಿ ಇದೇ ವಿಚಾರವಾಗಿ ಚರ್ಚಿಸಿದ ಬಗ್ಗೆ ಎಸಿಪಿ ಮಂಜುನಾಥ ಶೆಟ್ಟಿ ಅವರು ಸ್ಮರಿಸಿದರು.

ಶಬ್ದ ಮಾಲಿನ್ಯ: ದೂರು
ಬೆಸೆಂಟ್‌ ಮಹಿಳಾ ಕಾಲೇಜಿನ ಆಡಿ ಟೋರಿಯಂನಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ಸಾರ್ವಜನಿಕರೊಬ್ಬರು ದೂರು ನೀಡಿದರು. ಈ ಬಗ್ಗೆ ಕಾಲೇಜಿನ ಆಡಳಿತ ಮಂಡಳಿಗೆ ನೋಟಿಸ್‌ ಜಾರಿ ಮಾಡಲಾಗುವುದು ಎಂದು ಡಿಸಿಪಿ ಹನುಮಂತರಾಯ ತಿಳಿಸಿದರು.

ಕೊಟ್ಟಾರ ಚೌಕಿ ಜಂಕ್ಷನ್‌ನಲ್ಲಿ ಆಗಿಂದಾಗ್ಗೆ ಟ್ರಾಫಿಕ್‌ ಸಮಸ್ಯೆ ತಲೆದೋರುತ್ತಿದ್ದು, ಕೆಲವೊಮ್ಮೆ ಬಲ ಬದಿಯಿಂದ ವಾಹನಗಳು ಸಂಚರಿಸಿ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗುತ್ತಿದೆ ಎಂಬ ದೂರಿಗೆ ಸ್ಪಂದಿಸಿದ ಡಿಸಿಪಿ ಈ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು.

Advertisement

ಓವರ್‌ಸ್ಪೀಡ್‌ ಬಗ್ಗೆ ತಪಾಸಣೆ
ತೊಕ್ಕೊಟು ಓವರ್‌ ಬ್ರಿಜ್‌ ಬಳಿ ವಾಹನಗಳು ವೇಗವಾಗಿ ಸಂಚರಿಸುತ್ತಿದ್ದು, ರಸ್ತೆ ದಾಟಲು ಕಷ್ಟವಾಗುತ್ತಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಡಿಸಿಪಿ ಹನುಮಂತರಾಯ ಅವರು ಈ ಬಗ್ಗೆ ಓವರ್‌ಸ್ಪೀಡ್‌ ಬಗ್ಗೆ ತಪಾಸಣೆ ನಡೆಸಲಾಗುವುದು ಎಂದು ತಿಳಿಸಿದರು.

ಪರಿಹಾರ ಸಿಕ್ಕಿಲ್ಲ
ಕುಲಶೇಖರ ಪ್ರದೇಶದಲ್ಲಿ ಖಾಸಗಿ ಬಸ್‌ನವರು ಅನಾವಶ್ಯಕವಾಗಿ ಕರ್ಕಶ ಹಾರ್ನ್ ಹಾಕಿ ಶಬ್ದ ಮಾಲಿನ್ಯ ಉಂಟು ಮಾಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ದೂರು ನೀಡಿದರು. ತಾನು ಈ ಹಿಂದೆ ಇದೇ ವಿಚಾರವಾಗಿ ಎರಡು ಬಾರಿ ದೂರು ನೀಡಿದರೂ ಸಮಸ್ಯೆಗೆ ಪರಿಹಾರ ಸಿಕ್ಕಿಲ್ಲ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ಡಿಸಿಪಿ ಉಮಾ ಪ್ರಶಾಂತ್‌, ಈ ಬಗ್ಗೆ ತಪಾಸಣೆ ನಡೆಸಿ ಸಂಬಂಧ ಪಟ್ಟ ಬಸ್‌ಗಳ ಚಾಲಕರ ವಿರುದ್ಧ ಪ್ರಕರಣ ದಾಖಲಿಸಲಾಗುವುದು ಎಂದರು.

ಇದು 76ನೇ ಫೋನ್‌ ಇನ್‌ ಕಾರ್ಯಕ್ರಮವಾಗಿದ್ದು, ಒಟ್ಟು 24 ಕರೆಗಳು ಬಂದವು. ಎಸಿಪಿ ಮಂಜುನಾಥ ಶೆಟ್ಟಿ , ಟ್ರಾಫಿಕ್‌ ಪೊಲೀಸ್‌ ಇನ್‌ಸ್ಪೆಕ್ಟರ್‌ ಗಳಾದ ಅಮಾನುಲ್ಲಾ, ಕುಮಾರ ಸ್ವಾಮಿ ಮತ್ತು ಸುನಿಲ್‌ ಕುಮಾರ್‌, ಸಬ್‌ ಇನ್‌ ಸ್ಪಕ್ಟರ್‌ ಚಂದ್ರ, ಎಎಸ್‌ಐ ಯೂಸುಫ್‌, ಹೆಡ್‌ಕಾನ್‌ಸ್ಟೇಬಲ್‌ ಪುರುಷೋತ್ತಮ, ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಅವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next