ಬೆಂಗಳೂರು: ಲಾಕ್‌ಡೌನ್ ಕಳೆದ ಕೆಲದಿನಗಳಿಂದ ಕೊಂಚ ಸಡಿಲಿಕೆಯಾಗಿದೆ. ಇದರಿಂದ ವಾಹನಗಳ ಸಂಚಾರ ಅಲ್ಲಲ್ಲಿ ಶುರುವಾಗಿದೆ. ಆದರೆ, ಖಾಲಿ ರಸ್ತೆಗಳಿರುವುದರಿಂದ ಅವುಗಳ ವೇಗ ಎಂದಿಗಿಂತ ಹೆಚ್ಚಾಗಿದ್ದು, ಇದು ಪ್ರಾಣಿ-ಪಕ್ಷಿಗಳ ಪ್ರಾಣಕ್ಕೆ ಎರವಾಗುತ್ತಿದೆ. ನಗರ ವ್ಯಾಪ್ತಿಯ ಬಹುತೇಕ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿ, ಏಕಪಥ ಸಂಚಾರಕ್ಕೆ ಅವಕಾಶ ಡಿಕೊಡಲಾಗಿದೆ. ಒಂದೆಡೆ ದೈತ್ಯರಸ್ತೆಗಳು, ಅವುಗಳಲ್ಲಿ ಓಡಾಡುವ ವಾಹನಗಳ ಸಂಖ್ಯೆ ವಿರಳ. ತಡೆಯುವವರೂ ಇಲ್ಲ. ಈ ಮಧ್ಯೆ ಬೀದಿನಾಯಿಗಳು ರಸ್ತೆ ದಾಟುವಾಗ, ರಸ್ತೆ ಬದಿಯಲ್ಲಿ ಮಲಗಿದಾಗ ಶರವೇಗದಲ್ಲಿ ಬರುವ ವಾಹನಗಳಿಗೆ ಬಲಿಯಾಗುತ್ತಿರುವುದು ಇತ್ತೀಚೆಗೆ ಹೆಚ್ಚಾಗಿ ಕಂಡುಬರುತ್ತಿದೆ. ಮುಖ್ಯ ಮತ್ತು ಉಪ ರಸ್ತೆಗಳಲ್ಲಿ ವಾಹನ ಸಂಚಾರ ಕಡಿಮೆ ಇರುವುದರಿಂದ ಬಹುತೇಕ ಬೀದಿನಾಯಿಗಳು ರಸ್ತೆಯ ಮಧ್ಯೆಯೇ ಮಲಗಿರುತ್ತವೆ. ಅತಿವೇಗದಲ್ಲಿ ವಾಹನ ಚಲಾಯಿಸಿಕೊಂಡು ಹೋಗುವವರು ಇದಾವುದನ್ನೂ ಲೆಕ್ಕಿಸುವುದಿಲ್ಲ. ಬೀದಿನಾಯಿಗಳು ಬಲಿಯಾದರೂ ಕೇಳುವವರು ಇಲ್ಲ. ಲಾಕ್‌ಡೌನ್ ಅವಧಿಯಲ್ಲಿ ಸಂಚಾರ ನಿಯಮ ಸಡಿಲಿಕೆ ಆಗಿರುವುದರಿಂದ ಬೀದಿ ನಾಯಿಗಳಿಗೆ ಅಪಘಾತವು ಹೆಚ್ಚಾಗಿರುವ ಸಾಧ್ಯತೆಯಿದೆ ಎಂದು ವೀ ಸೇವ್ ಅನಿಮಲ್ ಸಂಸ್ಥೆಯ ಸಂಸ್ಥಾಪಕ ಪ್ರವೀಣ್ ಕಳವಳ ವ್ಯಕ್ತಪಡಿಸಿದ್ದಾರೆ.
ಒಂದೆಡೆ ಬೀದಿನಾಯಿಗಳಿಗೆ ಸಮರ್ಪಕ ಆಹಾರ ಸಿಗುತ್ತಿಲ್ಲ. ಮತ್ತೂಂದೆಡೆ ಈ ವಾಹನಗಳು ಬಲಿ ತೆಗೆದುಕೊಳ್ಳುತ್ತಿರುವುದು ತುಂಬಾ ಬೇಸರದ ಸಂಗತಿ. ಹೆದ್ದಾರಿಗಳಲ್ಲಿ ವಾಹನ ಸಂಚಾರ ಕಡಿಮೆ ಇರುವುದರಿಂದ ರಾತ್ರಿವೇಳೆ ರಸ್ತೆಯ ಮಧ್ಯದಲ್ಲೇ ಮಲಗಿರುತ್ತವೆ. ಟ್ರಕ್ ಹಾಗೂ ಇತರೆ ಭಾರೀ ವಾಹನ ಚಾಲಕರು ಇದನ್ನೆಲ್ಲ ಗಮನಿಸದೆ ನಾಯಿಗಳ ಮೇಲೆ ವಾಹನ ಹರಿಸುತ್ತಾರೆ. ಬೀದಿ ನಾಯಿಗಳನ್ನು ರಸ್ತೆ ಅಪಘಾತದಿಂದ ತಪ್ಪಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಆಮೆಗಳಿಗೂ ಅಪಾಯ: ನಗರದಲ್ಲಿ ಒಂದೇ ದಿನ ಸಾಕಷ್ಟು ಮಳೆ ಬಂದಿರುವುದರಿಂದ ಉತ್ತರಹಳ್ಳಿ, ವಿದ್ಯಾರಣ್ಯಪುರ ಮೊದಲಾದ ಭಾಗದಲ್ಲಿ ಆಮೆಗಳು ರಸ್ತೆಗೆ ಬರುವುದು ಹೆಚ್ಚಾಗಿದೆ. ಒಂದೇ ದಿನದಲ್ಲಿ ಈ ರೀತಿಯ ಆರು ಆಮೆಗಳನ್ನು ಸಂರಕ್ಷಿಸಿದ್ದೇವೆ. ರಸ್ತೆಗೆ ಬರುವ ಆಮೆಗಳಿಗೆ ಅಪಾಯ ಹೆಚ್ಚಿರುತ್ತದೆ. ರಾತ್ರಿ ಹೊತ್ತಿನಲ್ಲಿ ಇವುಗಳ ಇರುವಿಕೆ ಕಾಣುವುದಿಲ್ಲ. ಹೀಗಾಗಿ ವಾಹನಗಳು ಹರಿದುಹೋಗುವ ಸಾಧ್ಯತೆ ಹೆಚ್ಚು ಇದೆ ಎಂದು ಬಿಬಿಎಂಪಿ ವನ್ಯಜೀವಿ ವಿಭಾಗದ ಪ್ರಸನ್ನ ಮಾಹಿತಿ ನೀಡಿದರು. ಒಟ್ಟಾರೆ ಲಾಕ್‌ಡೌನ್‌ನಿಂದ ವನ್ಯಜೀವಿಗಳು ನೆಮ್ಮದಿಯಾಗಿವೆ. ಲಾಕ್‌ಡೌನ್ ಮೊದಲು ವನ್ಯಜೀವಿಗಳಿಗೆ ಸಂಬಂಧಿಸಿದಂತೆ ದಿನಕ್ಕೆ 60ಕ್ಕೂ ಅಧಿಕ ಕರೆಗಳು ಬರುತ್ತಿದ್ದವು. ಈಗ ಅದು 10-12ಕ್ಕೆ ಇಳಿದಿದೆ. ಹೀಗಾಗಿ ವನ್ಯಜೀವಿಗಳು ಸ್ವಲ್ಪ ಮಟ್ಟಿಗೆ ಆರಾಮವಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಪ್ರಸನ್ನ ಹೇಳಿದರು.
ಪಾರಿವಾಳಕ್ಕೂ ಆಪತ್ತು
ಆಹಾರಕ್ಕಾಗಿ ಪಾರಿವಾಳಗಳು ಅತ್ತಿಂದಿತ್ತ ಅಲೆ ದಾಡುತ್ತಿರುತ್ತವೆ. ವಾಹನ ಸಂಚಾರ ಕಡಿಮೆ ಇರುವುದರಿಂದ ರಸ್ತೆಯ ಮೇಲೆ ಕುಳಿತುಕೊಂಡಿರುತ್ತವೆ. ಅಥವಾ ತುಂಬಾ ಎತ್ತರದಲ್ಲಿ ಹಾರಾಟ ನಡೆಸುವುದಿಲ್ಲ. ಈ ಸಂದರ್ಭದಲ್ಲಿ ವೇಗವಾಗಿ ಬರುವ ವಾಹನಗಳಿಗೆ ಡಿಕ್ಕಿ ಹೊಡೆದು ಸಾವನ್ನಪ್ಪುತ್ತಿರುವ ವರದಿಗಳು ಆಗುತ್ತಿವೆ. ಕಳೆದ ಒಂದು ವಾರದಲ್ಲಿ 110ಕ್ಕೂ ಅಧಿಕ ಪಾರಿವಾಳ
ಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿವೆ ಎಂದು ವೀ ಸೇವ್ ಅನಿಮಲ್ ಸಂಸ್ಥೆಯ ಸಂಸ್ಥಾಪಕ ಪ್ರವೀಣ್ ಬೇಸರ ವ್ಯಕ್ತಪಡಿಸಿದರು.
ಬೀದಿ ನಾಯಿ ಸೇರಿದಂತೆ ಪ್ರಾಣಿಗಳ ರಕ್ಷಣೆಗಾಗಿ ಬಿಬಿಎಂಪಿ ವಿಪತ್ತು ಪರಿಹಾರ ನಿಧಿಯಿಂದ 15ಲಕ್ಷ ರೂ. ಮೀಸಲಿಡಲಾಗಿದೆ. ಈವರೆಗೆ ಬೇಗೂರು ಭಾಗದಲ್ಲಿ ಬೀದಿನಾಯಿಗೆ ಅಪಘಾತ
ಆಗಿರುವ ವರದಿ ಬಂದಿದೆ. ಅವುಗಳ ಆರೈಕೆಯನ್ನು ಸ್ವಯಂಸೇವಾ ಸಂಸ್ಥೆಗಳ ಸಹಯೋಗದೊಂದಿಗೆ ಮಾಡುತ್ತಿದ್ದೇವೆ.
●ಡಾ.ಎಸ್. ಶಿವಕುಮಾರ್, ಬಿಬಿಎಂಪಿ, ಪಶುಸಂಗೋಪನೆ ವಿಭಾಗದ ನಿರ್ದೇಶಕ
ರಾಜು ಖಾರ್ವಿ ಕೊಡೇರಿ