Advertisement

ವಾಹನ ಸಂಚಾರ ಮಾರ್ಪಾಡು

11:37 AM May 05, 2018 | |

ಮಹಾನಗರ: ಪ್ರಧಾನಿ ಅವರ ಮಂಗಳೂರು ಭೇಟಿ ಕಾರ್ಯಕ್ರಮದ ನಿಮಿತ್ತ ಶನಿವಾರ ನಗರದಲ್ಲಿ ಸಂಚಾರ ಅಸ್ತವ್ಯಸ್ತಗೊಳ್ಳಲಿದ್ದು, ಈ ಸಂಬಂಧ ಪೊಲೀಸರು ಸುಗಮ ಸಂಚಾರ ವ್ಯವಸ್ಥೆಗೆ ಕೆಲವೊಂದು ಕ್ರಮಗಳನ್ನು ವಹಿಸಿದ್ದಾರೆ.

Advertisement

ಪ್ರಧಾನಿಗಳು ಸಂಜೆ 5.30ಕ್ಕೆ ಮಂಗಳೂರು ವಿಮಾನ ನಿಲ್ದಾಣದಿಂದ ನೆಹರೂ ಮೈದಾನಕ್ಕೆ ಆಗಮಿಸಲಿದ್ದು, ವಿವಿಐಪಿ ಭದ್ರತೆ ಮತ್ತು ಸುರಕ್ಷತೆಯ ಸಲುವಾಗಿ ಮಧ್ಯಾಹ್ನ 1 ಗಂಟೆಯಿಂದ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಲಾಗಿದೆ. 3 ಗಂಟೆ ಬಳಿಕ ಕೆಲವೊಂದು ರಸ್ತೆ ಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಿ ಮಂಗಳೂರು ಪೊಲೀಸ್‌ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಪಾರ್ಕಿಂಗ್‌ ಸ್ಥಳಗಳು
ಕಾರ್ಯಕ್ರಮದಲ್ಲಿ ಭಾಗವಹಿಸುವ ಕಾರ್ಯಕರ್ತರ ವಾಹನಗಳ ನಿಲುಗಡೆಗಾಗಿ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದ್ದು, ಮಧ್ಯಾಹ್ನ 1 ಗಂಟೆಯ ಬಳಿಕ ವಾಹನ ಸಂಚಾರದಲ್ಲಿ ತಾತ್ಕಾಲಿಕ ಮಾರ್ಪಾಡು ಮಾಡಲಾಗಿದೆ.

ಮೂಲ್ಕಿ, ಸುರತ್ಕಲ್‌, ಕೊಟ್ಟಾರ ಚೌಕಿ ಮುಖಾಂತರ ಪ್ರವೇಶಿಸುವ ಬಸ್ಸುಗಳಿಗೆ ಕರಾವಳಿ ಉತ್ಸವ ಮೈದಾನ್‌ ಮತ್ತು ಉರ್ವ ಮಾರ್ಕೆಟ್‌ ಮೈದಾನ್‌ನಲ್ಲಿ. ಮೂಲ್ಕಿ, ಸುರತ್ಕಲ್‌, ಕೊಟ್ಟಾರ ಕಡೆಯಿಂದ ಬರುವ ಕಾರುಗಳಿಗೆ ಡೊಂಗರಕೇರಿ ಕೆನರಾ ಹೈಸ್ಕೂಲ್‌ ಮೈದಾನ್‌; ಮೂಡಬಿದಿರೆ, ಬಜಪೆ, ಕಟೀಲು ಮಾರ್ಗವಾಗಿ ಬರುವ ಬಸ್ಸುಗಳಿಗೆ ಪದವು ಹೈಸ್ಕೂಲ್‌ ಮೈದಾನ ಹಾಗೂ ಈ ಮಾರ್ಗದಲ್ಲಿ ಬರುವ ಕಾರುಗಳಿಗೆ ರಾಮಕೃಷ್ಣ ಸ್ಕೂಲ್‌ ಗ್ರೌಂಡ್‌, ಬಂಟ್ಸ್‌ ಹಾಸ್ಟೆಲ್‌, ಕದ್ರಿ ಮಲ್ಲಿಕಟ್ಟೆ ಮೈದಾನದಲ್ಲಿ ವ್ಯವಸ್ಥೆ ಮಾಡಲಾಗಿದೆ. 

ಸುಳ್ಯ, ಪುತ್ತೂರು, ಮಡಿಕೇರಿ ಕಡೆಯಿಂದ ಪಂಪ್‌ ವೆಲ್‌ ಮುಖಾಂತರ ಪ್ರವೇಶಿಸುವ ವಾಹನಗಳಿಗೆ ಎಮ್ಮೆಕೆರೆ ಮೈದಾನದಲ್ಲಿ ಹಾಗೂ ಉಳ್ಳಾಲ, ಕೊಣಾಜೆ, ಕಾಸರಗೋಡು ಕಡೆಗಳಿಂದ ಜಪ್ಪಿನಮೊಗರು ಮುಖಾಂತರ ಪ್ರವೇಶಿಸುವ ಬಸ್ಸುಗಳಿಗೆ ಮೋರ್ಗನ್ಸ್‌ ಗೇಟ್‌ ಮೈದಾನದಲ್ಲಿ ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಲಾಗಿದೆ. ಮೂಲ್ಕಿ, ಸುರತ್ಕಲ್‌ ಮತ್ತು ಕೊಟ್ಟಾರ ಚೌಕಿ ಕಡೆಯಿಂದ ಬರುವ ಬಸ್ಸುಗಳಿಗೆ ಕೊಟ್ಟಾರ ಚೌಕಿ, ಉರ್ವ, ಲೇಡಿಹಿಲ್‌, ಲಾಲ್‌ಬಾಗ್‌, ಪಿವಿಎಸ್‌ ಮೂಲಕ ನವಭಾರತ್‌ಸರ್ಕಲ್‌ಗೆ ಬಂದು ಜನರನ್ನು ಇಳಿಸಿ ಪುನಃ ಕರಾವಳಿ ಮೈದಾನಕ್ಕೆ ಹೋಗಿ ವಾಹನ ನಿಲುಗಡೆ ಮಾಡುವುದು. ಈ ವಾಹನಗಳು ಮಧ್ಯಾಹ್ನ 3 ಗಂಟೆಯ ಒಳಗೆ ಬಂದು ನವಭಾರತ್‌ನಲ್ಲಿ ಇಳಿಸಿ ವಾಪಾಸ್ಸು ಹೋಗತಕ್ಕದ್ದು. 3 ಗಂಟೆಯ ಬಳಿಕ ಲೇಡಿಹಿಲ್‌ನಿಂದ ನವಭಾರತ್‌ ಸರ್ಕಲ್‌ ಕಡೆಗೆ ಪ್ರವೇಶವಿಲ್ಲ. ರಥಬೀದಿ ಕಡೆಗೆ ಎಲ್ಲ ವಾಹನ ನಿರ್ಬಂಧಿಸಲಾಗಿದೆ.

Advertisement

ಮೂಡಬಿದಿರೆ, ಬಜಪೆ, ಕಟೀಲ್‌ ಕಡೆಯಿಂದ ಬರುವ ಬಸ್ಸುಗಳು ನಂತೂರು, ಶಿವಭಾಗ್‌, ಮಲ್ಲಿಕಟ್ಟೆ ಮೂಲಕ ಬಂದು ಜನರನ್ನು ಇಳಿಸಿ ಪುನಃ ಪದವು ಸ್ಕೂಲ್‌ ಮೈದಾನಕ್ಕೆ ಹೋಗಿ ನಿಲುಗಡೆ ಮಾಡುವುದು. ಬೆಳ್ತಂಗಡಿ ಮತ್ತು ಬಂಟ್ವಾಳದಿಂದ ಪಂಪ್‌ವೆಲ್‌ಗೆ ಬರುವ ವಾಹನಗಳು ಕಂಕನಾಡಿ ಕೋಟಿಚೆನ್ನಯ ಸರ್ಕಲ್‌, ಮಂಗಳಾದೇವಿ ಕಡೆಗೆ ಬಂದು ಜನರನ್ನು ಇಳಿಸಿ ನಂತರ ವಾಮನ ನಾಯ್ಕ ಮೈದಾನ ನಂದಿಗುಡ್ಡೆಯಲ್ಲಿ ವಾಹನ ನಿಲುಗಡೆ ಮಾಡುವುದು.

ರಸ್ತೆ ಬದಿ ವಾಹನ ನಿಲುಗಡೆ ನಿಷೇಧ
ಪ್ರಧಾನಿ ಮೋದಿ ಸಂಚರಿಸುವ ವಿಮಾನ ನಿಲ್ದಾಣ- ಕೆಪಿಟಿ- ಬಟ್ಟಗುಡ್ಡ- ಕದ್ರಿ ಕಂಬ್ಳ – ಬಂಟ್ಸ್ ಹಾಸ್ಟೆಲ್‌- ಜ್ಯೋತಿ ಜಂಕ್ಷನ್‌- ಹಂಪನಕಟ್ಟೆ ನೆಹರು ಮೈದಾನದವರೆಗಿನ ರಸ್ತೆಯ ಎರಡೂ ಬದಿ ಹಾಗೂ ನೆಹರೂ ಮೈದಾನದ ಸುತ್ತಲಿನ 500 ಮೀ. ವ್ಯಾಪ್ತಿಯಲ್ಲಿ ಬೆಳಗ್ಗೆ 8ರಿಂದ ರಾತ್ರಿ 9 ಗಂಟೆ ವರೆಗೆ ವಾಹನ ನಿಲುಗಡೆಯನ್ನು ನಿಷೇಧಿಸಲಾಗಿದೆ.

ಎಲ್ಲೆಲ್ಲಿ ವಾಹನ ಸಂಚಾರ ನಿಷೇಧ?
ಲೇಡಿಹಿಲ್‌ ವೃತ್ತದಿಂದ ನವಭಾರತ್‌ ವೃತ್ತದ ಕಡೆಗೆ, ನಂತೂರಿನಿಂದ ಲೇಡಿಹಿಲ್‌ ವೃತ್ತದ ವರೆಗೆ, ನಂತೂರಿನಿಂದ ಮಲ್ಲಿಕಟ್ಟೆ ಕಡೆಗೆ, ಜ್ಯೋತಿ ಜಂಕ್ಷನ್‌ನಿಂದ (ಅಂಬೇಡ್ಕರ್‌ ವೃತ್ತ) ಬಂಟ್ಸ್‌ ಹಾಸ್ಟೆಲ್‌ ಕಡೆಗೆ ಮಧ್ಯಾಹ್ನ 3 ಗಂಟೆಯ ಬಳಿಕ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. 

ಪೊಲೀಸ್‌ ಬಂದೋಬಸ್ತು 
ಮೋದಿ ಭೇಟಿ ಕಾರ್ಯಕ್ರಮದ ಹಿನ್ನೆಲೆ ಬಿಗಿ ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಮಂಗಳೂರಿನ ಪೊಲೀಸರು, ಚುನಾವಣ ಕರ್ತವ್ಯಕ್ಕಾಗಿ ಬಂದಿರುವ ಪೊಲೀಸರು ಮತ್ತು ಅರೆ ಸೈನಿಕ ಪಡೆಯ ಹೊರತಾಗಿ 250ರಷ್ಟು ಹೆಚ್ಚುವರಿ ಪೊಲಿಸರನ್ನು ಹೊರ ಜಿಲ್ಲೆಗಳಿಂದ ಕರೆಸಲಾಗಿದೆ. ಅಲ್ಲದೆ ವಿವಿಐಪಿ ಭದ್ರತೆಗಾಗಿ ಎಸ್‌ಪಿಜಿ ತಂಡ ಆಗಮಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next