Advertisement

ರಾಷ್ಟ್ರೀಯ ಹೆದ್ದಾರಿಯಲ್ಲಿ  ವಾಹನ ಸಂಚಾರ ಪ್ರಾಣ ಸಂಕಟ

07:55 AM Aug 13, 2017 | |

ಕಾಸರಗೋಡು: ಪ್ರಸ್ತುತ ವರ್ಷ ಮಳೆ ಪ್ರಮಾಣ ಕಡಿಮೆಯಾಗಿದ್ದರೂ ಕಾಸರಗೋಡು ನಗರದಲ್ಲೂ, ಪರಿಸರ ಬಹುತೇಕ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ ಗುಂಡಿ ಸೃಷ್ಟಿಯಾಗಿದ್ದು, ವಾಹನ ಚಾಲಕರಿಗೆ ಪ್ರಾಣ ಸಂಕಟ ಎಂಬಂತಾಗಿದೆ. ಹೊಂಡಗುಂಡಿಗಳಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರಿಗೆ ವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ.

Advertisement

ಕಾಸರಗೋಡು ಹೊಸ ಬಸ್‌ ನಿಲ್ದಾಣದಿಂದ ಆರಂಭಗೊಂಡು ಕುಂಬಳೆಯವರೆಗೆ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಕೆಟ್ಟು ಹೋಗಿದ್ದು, ದಿನಾ ವಾಹನ ದಟ್ಟಣೆಯಿಂದಾಗಿ ರಸ್ತೆ ತಡೆ ಉಂಟಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ಉಂಟಾಗುವುದರಿಂದ ಕಾಸರಗೋಡು ನಗರದ ಇತರೆಡೆಯೂ ಇದೇ ಪರಿಸ್ಥಿತಿಗೆ ಕಾರಣವಾಗುತ್ತಿದೆ. 

ಹೊಸ ಬಸ್‌ ನಿಲ್ದಾಣದಿಂದ ಆರಂಭಗೊಂಡು ಎರಿಯಾಲ್‌ ಚೌಕಿ ತನಕ ರಸ್ತೆಯಲ್ಲಿ ಹೊಂಡ ಗುಂಡಿ ಸೃಷ್ಟಿಯಾಗಿ ಲಘು ವಾಹನಗಳಿಗೂ ಸುಗಮವಾಗಿ ಸಾಗಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಹೊಸ ಬಸ್‌ ನಿಲ್ದಾಣ ಪರಿಸರದಲ್ಲಿ ಪರಿಸ್ಥಿತಿಯಂತೂ ವರ್ಣಿಸಲು ಸಾಧ್ಯವೇ ಇಲ್ಲ ಎಂಬಂತಾಗಿದೆ. ಇತ್ತೀಚೆಗಷ್ಟೇ ಹೊಸ ಬಸ್‌ ನಿಲ್ದಾಣ ಪ್ರವೇಶಿಸುವಲ್ಲಿ ಇಂಟರ್‌ಲಾಕ್‌ ಹಾಕಲಾಗಿದ್ದರೂ, ಅದರ ಅಂಚಿನಲ್ಲಿ ರಸ್ತೆ ತೀರಾ ಹದಗೆಟ್ಟಿದೆ. ಬಸ್‌ ನಿಲ್ದಾಣ ಪ್ರವೇಶಿಸಲು ಸಾಕಷ್ಟು ಸ್ಥಳಾವಕಾಶವಿದ್ದರೂ, ಬಹಳಷ್ಟು ಕಡಿಮೆ ಸ್ಥಳದಲ್ಲೇ ಸಾಗಬೇಕಾಗಿದೆ. ಉಳಿದ ಸ್ಥಳದಲ್ಲೆಲ್ಲಾ ಹೊಂಡಗುಂಡಿಗಳದ್ದೇ ಸಾಮ್ರಾಜ್ಯ. ಪಾದಚಾರಿಗಳು ಗಮನ ಹರಿಸದಿದ್ದಲ್ಲಿ ಅಪಾಯಕ್ಕೆ ತುತ್ತಾಗುವುದು ಖಚಿತ. ಹೊಸ ಬಸ್‌ ನಿಲ್ದಾಣ ಸಮೀಪದಲ್ಲಿ ಸುಮಾರು ಇಪ್ಪತ್ತೈದರಷ್ಟು ಹೊಂಡಗಳಿವೆ. ಒಟ್ಟಾರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನ ಸಂಚಾರ ಚಾಲಕರಿಗೆ ಸವಾಲಿನದ್ದೇ ಆಗಿದೆ.

ಕಾಸರಗೋಡು-ಕಾಂಞಂಗಾಡ್‌ ಚಂದ್ರಗಿರಿ ರಸ್ತೆಯಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಕಾಮಗಾರಿ ಪ್ರಗತಿಯಲ್ಲಿರುವ ಈ ರಸ್ತೆಯಲ್ಲಿ ಕಾಮಗಾರಿ ಪೂರ್ತಿಯಾಗಿರುವ ಸ್ಥಳಗಳಲ್ಲಿ ರಸ್ತೆ ಸಂಪೂರ್ಣ ಹೊಂಡಗುಂಡಿಗಳಿಂದ ಕೂಡಿದೆ. ಉದುಮ ಫ್ಲೆ$çಓವರ್‌ ಪ್ರದೇಶದಲ್ಲಿ ರಸ್ತೆ ಸಂಪೂರ್ಣ ಕೆಟ್ಟು ಹೋಗಿದೆ. ಉದುಮ ಪೆಟ್ರೋಲ್‌ ಬಂಕ್‌ ಮುಂಭಾಗದಲ್ಲೂ ರಸ್ತೆಯಲ್ಲಿ ಹೊಂಡಗಳದ್ದೇ ಸಾಮ್ರಾಜ್ಯ. ರಸ್ತೆಯಲ್ಲಿ ನಿರ್ಮಾಣವಾಗಿರುವ ಹೊಂಡಗಳನ್ನು ತಾತ್ಕಾಲಿಕವಾಗಿ ಮುಚ್ಚಲು ಸಂಬಂಧಪಟ್ಟವರು ಸಿಮೆಂಟ್‌ ತುಂಬಿಸುವ ಪ್ರಯತ್ನ ಮಾಡಿದ್ದರು. ಆದರೆ ಸ್ಥಳೀಯರು ತಾತ್ಕಾಲಿಕ ವ್ಯವಸ್ಥೆಯನ್ನು ತಡೆದಿದ್ದರು. ಈ ಕಾರಣದಿಂದ ಸಿಮೆಂಟ್‌ ತುಂಬುವ ಪ್ರಕ್ರಿಯೆ ಮೊಟಕುಗೊಂಡಿತ್ತು. 

ಕಾಸರಗೋಡಿನಿಂದ ಪಾಲಕುನ್ನಿನ ವರೆಗೆ ಹಾಕಲಾಗಿದ್ದ ಜೀಬ್ರಾಲೈನ್‌ ಮತ್ತು ರಸ್ತೆಯ ಅಂಚಿನ ಸುರಕ್ಷಾ ಲೈನ್‌ಕೆಲವೇ ತಿಂಗಳಲ್ಲಿ ಮಾಸಿ ಹೋಗಿದೆ. ಉದುಮ ಫ್ಲೆ$çಓವರ್‌ನಲ್ಲಿ ಮಳೆ ನೀರು ಕಟ್ಟಿನಿಂತಿದೆ. ಅಕ್ಟೋಬರ್‌ ತಿಂಗಳಲ್ಲಿ ಉದ್ಘಾಟನೆಗೆ ನಿರ್ಧರಿಸಿದ ಕಾಸರಗೋಡು-ಕಾಂಞಂಗಾಡ್‌ ರಾಜ್ಯ ಹೆದ್ದಾರಿಯ ಅವಸ್ಥೆಯಿದು. ರಸ್ತೆ ನಿರ್ಮಾಣದಲ್ಲಿ ನಡೆದ ಭಾರೀ ಭ್ರಷ್ಟಾಚಾರವೇ ರಸ್ತೆ ತೀರಾ ಹದಗೆಡಲು ಕಾರಣವೆಂದು ಸಾರ್ವತ್ರಿಕವಾಗಿ ಆರೋಪಗಳು ಕೇಳಿ ಬರುತ್ತಿವೆ.

Advertisement

ಕಾಸರಗೋಡಿನಿಂದ ತಲಪಾಡಿಯ ವರೆಗೆ ಅಲ್ಲಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ ಗುಂಡಿಗಳು ನಿರ್ಮಾಣವಾಗಿರುವುದರಿಂದ ದಿನಾ ವಾಹನ ಅಪಘಾತಗಳು ಸಾಮಾನ್ಯವೆಂಬಂತಾಗಿವೆ. ಕೆಲವೆಡೆಯಂತೂ ರಸ್ತೆಗಳೇ ಇಲ್ಲ. ಅಂತಹ ಸ್ಥಳದಲ್ಲಿ ಹೊಂಡಗಳೇ ಕಾಣಿಸುತ್ತವೆ. ದುರ್ಬಿಣಿಯಿಟ್ಟು ನೋಡಿದರೂ ರಸ್ತೆ ಕಾಣಸಿಗದು. ಘನ ವಾಹನಗಳು ಹೇಗೋ ಹೊಂಡದಲ್ಲಿ ಬಿದ್ದು ಎದ್ದು ಹೋಗುತ್ತಿದ್ದರೂ, ಲಘು ವಾಹನಗಳಾದ ಕಾರು, ದ್ವಿಚಕ್ರ, ತ್ರಿಚಕ್ರ ವಾಹನಗಳ ಗತಿ ಹೇಳತೀರದು. ಲಘು ವಾಹನಗಳು ಪದೇ ಪದೇ ಅಪಘಾತಕ್ಕೆ ತುತ್ತಾಗುತ್ತಿವೆ. ಮಳೆ ಸುರಿದಾಗ ರಸ್ತೆಯ ಹೊಂಡಗಳಲ್ಲಿ ನೀರು ತುಂಬಿ ವಾಹನ ಸಂಚಾರ ಮತ್ತಷ್ಟು ದುಸ್ತರವಾಗುತ್ತಿದೆ. ಅಪಘಾತವೂ ಹೆಚ್ಚುತ್ತದೆ.

ದಿನಗಳ ಹಿಂದೆ ಕಾಸರಗೋಡು ಮೊಗ್ರಾಲ್‌ನಲ್ಲಿ ಮೊಗ್ರಾಲ್‌ಪುತ್ತೂರಿನ ಸುಬೈದಾ ಅವರು ಬೈಕ್‌ ಮಗುಚಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಮಗನ ಜೊತೆ ಬೈಕ್‌ನ ಹಿಂಭಾಗದಲ್ಲಿ ಕುಳಿತು ಸಂಚರಿಸುತ್ತಿದ್ದರು. ಮೊಗ್ರಾಲ್‌ಪುತ್ತೂರು ನಂತರ ಸಿಗುವ ಸೇತುವೆ ಬಳಿಯಲ್ಲಿ ನಿರ್ಮಾಣವಾಗಿರುವ ಹೊಂಡಗಳಿಗೆ ಬಿದ್ದು ಬೈಕ್‌ ಮಗುಚಿ ಬಿದ್ದಿತ್ತು.

ಕಾಸರಗೋಡಿನ ಚೆರ್ಕಳ – ಕಲ್ಲಡ್ಕ ರಸ್ತೆಯ ಪರಿಸ್ಥಿತಿಯೂ ಇದೇ ಆಗಿದೆ. ಅಂತಾರಾಜ್ಯ ಹೆದ್ದಾರಿಯಾಗಿರುವ ಈ ರಸ್ತೆಯ ಸುಮಾರು 29 ಕಿ.ಮೀ. ಉದ್ದಕ್ಕೆ ಅಲ್ಲಲ್ಲಿ ಹೊಂಡಗಳದ್ದೇ ಸಾಮ್ರಾಜ್ಯ. ಈ ರಸ್ತೆಯಲ್ಲಿ ಉಕ್ಕಿನಡ್ಕದಿಂದ ಅಡ್ಕಸ್ಥಳದ ವರೆಗಿನ 10 ಕಿ.ಮೀ. ಉದ್ದಕ್ಕೆ ಮಳೆಗೆ ಮುನ್ನ ದುರಸ್ತಿ ಮಾಡಲಾಗಿತ್ತು. ಆದರೆ ಚೆರ್ಕಳದಿಂದ ಉಕ್ಕಿನಡ್ಕದ ವರೆಗಿನ 19 ಕಿ.ಮೀ. ದೂರದ ರಸ್ತೆಯಲ್ಲಿ ಯಾವುದೇ ದುರಸ್ತಿ ಕಾಮಗಾರಿ ನಡೆಯಲಿಲ್ಲ. ಬಸ್‌, ಲಾರಿ ಸಹಿತ ನೂರಾರು ವಾಹನಗಳು ಸಾಗುವ ಈ ರಸ್ತೆಯನ್ನು ದುರಸ್ತಿಗೊಳಿಸಬೇಕೆಂದು ನಿರಂತರ ಬೇಡಿಕೆಯ ಹಿನ್ನೆಲೆಯಲ್ಲಿ ಎಡರಂಗ ಸರಕಾರ ಪ್ರಥಮ ಬಜೆಟ್‌ನಲ್ಲಿ 30 ಕೋಟಿ ರೂಪಾಯಿ ಮೆಕಡಾಂ ಟಾರಿಂಗ್‌ಗೆ ಕಾದಿರಿಸಿತ್ತು. ಆದರೆ ರಸ್ತೆ ನಿರ್ಮಾಣಕ್ಕೆ ಪ್ರಾಥಮಿಕ ಪ್ರಕ್ರಿಯೆಯೂ ನಡೆದಿಲ್ಲ.

ಪ್ರದೀಪ್‌ ಬೇಕಲ್‌

Advertisement

Udayavani is now on Telegram. Click here to join our channel and stay updated with the latest news.

Next