ಮಲ್ಪೆ: ಮಲ್ಪೆಯಲ್ಲಿ ಪಿಕಪ್ ವಾಹನ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಜು. 8ರಂದು ಖಚಿತ ಮಾಹಿತಿಯ ಮೇರೆಗೆ ಮಲ್ಪೆ ಪೊಲೀಸ್ ಠಾಣಾಧಿಕಾರಿ ದಾಮೋದರ್ ಕೆ. ನೇತೃತ್ವದ ತಂಡವು ಪೊಲೀಸ್ ವರಿಷ್ಠಾಧಿಕಾರಿ ಕೆ. ಟಿ. ಬಾಲಕೃಷ್ಣ ನಿರ್ದೇಶದಂತೆ, ವೃತ್ತ ನಿರೀಕ್ಷಕ ನವೀನ್‌ಚಂದ್ರ ಜೋಗಿ ಅವರ ಮಾರ್ಗದರ್ಶನದಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಬಳಿ ವಾಹನ ಸಹಿತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ದಾವಣಗೆರೆ ಜಿಲ್ಲೆ ಹರಪ್ಪಹನಹಳ್ಳಿಯ ರವಿ ನಾಯ್ಕ (32) ಮತ್ತು ಅದೇ ಜಿಲ್ಲೆ ಹರಿಹರ ಕಾಳಿದಾಸ ನಗರದ ಮೈಲಾರಿ (30) ಬಂಧಿತ ಆರೋಪಿಗಳು. ಅವರಿಂದ ಸುಮಾರು 8 ಲಕ್ಷ ರೂ. ಮೌಲ್ಯದ ಮಹೀಂದ್ರ ಪಿಕಪ್ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಜು. 6ರಂದು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ನಿಲ್ಲಿಸಲಾಗಿದ್ದ ಮಹಮ್ಮದ್ ಫರಾನ್ ಅವರ ಪಿಕಪ್ ವಾಹನವನ್ನು ರಾತ್ರಿ ಕಳವು ಮಾಡಲಾಗಿದ್ದು ಜು. 7 ರಂದು ಬೆಳಗ್ಗೆ ಮಲ್ಪೆ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ದೂರು ನೀಡಿದ 24 ಗಂಟೆಯೊಳಗೆ ವಾಹನವನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಇಬ್ಬರು ಆರೋಪಿಗಳು ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ಮೀನು ಹೋರುವ ಕೆಲಸವನ್ನು ಮಾಡುತ್ತಿದ್ದು, ಇವರಲ್ಲಿ ರವಿನಾಯ್ಕ ಎಂಬಾತ ಈ ಹಿಂದೆಯೂ ವಾಹನ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಕಾರ್ಯಾಚರಣೆಯಲ್ಲಿ ಮಲ್ಪೆ ಪೊಲೀಸ್ ಠಾಣಾ ಪ್ರೊಬೆಶನರಿ ಪಿಎಸ್‌ಐ ಮಧು ಬಿ., ಎಎಸ್‌ಐ ಸುಧಾಕರ ಬಿ., ಸಿಬ್ಬಂದಿಗಳಾದ ರಾಘವೇಂದ್ರ ಪ್ರದೀಪ್ ಕುಮಾರ್, ಪ್ರವೀಣ, ರಮೇಶ್, ಕೃಷ್ಣ ಶೇರಿಗಾರ, ನಾಗೇಶ್, ಪ್ರವೀಣ, ಮಧು ನಾಯ್ಕ ಪಾಲ್ಗೊಂಡಿದ್ದರು. ಆರೋಪಿಗಳನ್ನು ಉಡುಪಿ ನ್ಯಾಯಲಯಕ್ಕೆ ಹಾಜರು ಪಡಿಸಲಾಗಿದೆ.