Advertisement

ಪೌರತ್ವ ತಿದ್ದುಪಡಿ ಮಸೂದೆ; ಈಶಾನ್ಯ ರಾಜ್ಯಗಳ ವಿರೋಧ ಯಾಕೆ? ಭುಗಿಲೆದ್ದ ಆಕ್ರೋಶ

10:07 AM Dec 11, 2019 | Nagendra Trasi |

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಯನ್ನು ವಿರೋಧಿಸಿ ಈಶಾನ್ಯ ರಾಜ್ಯಗಳಲ್ಲಿ ಉತ್ತರ ಈಶಾನ್ಯ ವಿದ್ಯಾರ್ಥಿ ಸಂಘಟನೆ 11ಗಂಟೆಗಳ ಬಂದ್ ಗೆ ಕರೆ ಕೊಟ್ಟಿದ್ದು, ಈ ಸಂದರ್ಭದಲ್ಲಿ ಕಲ್ಲು ತೂರಾಟ, ವಾಹನಕ್ಕೆ ಬೆಂಕಿ ಹಚ್ಚಿರುವ ಘಟನೆ ಮಂಗಳವಾರ ನಡೆದಿದೆ.

Advertisement

ಸೋಮವಾರ ಲೋಕಸಭೆಯಲ್ಲಿ ಸುದೀರ್ಘ ಚರ್ಚೆಯ ನಂತರ ವಿವಾದಿತ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿತ್ತು. ಏತನ್ಮಧ್ಯೆ ಪೌರತ್ವ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ಉತ್ತರ-ಈಶಾನ್ಯ ವಿದ್ಯಾರ್ಥಿ ಸಂಘಟನೆ ಇಂದು ಬೆಳಗ್ಗೆ 5ಗಂಟೆಯಿಂದ ರಾತ್ರಿವರೆಗೂ ಬಂದ್ ಗೆ ಕರೆ ನೀಡಿದ್ದವು.

ಬಹುತೇಕ ಅಂಗಡಿ ಮುಂಗಟ್ಟು, ಕಾಂಪ್ಲೆಕ್ಸ್ ಗಳೆಲ್ಲಾ ಬಂದ್ ಮಾಡಿದ್ದವು. ರಸ್ತೆಗಳಲ್ಲಿ ವಾಹನ ಸಂಚಾರ ವಿರಳವಾಗಿತ್ತು. ಮತ್ತೊಂದೆಡೆ ರಸ್ತೆಗಿಳಿದ ವಾಹನಗಳ ಮೇಲೆ ಪ್ರತಿಭಟನಾಕಾರರು ಕಲ್ಲು ತೂರಾಟ ನಡೆಸಿರುವುದಾಗಿ ವರದಿ ವಿವರಿಸಿದೆ.

ಚಾಬುವಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರತಿಭಟನಾಕಾರರು ಭದ್ರತಾ ಪಡೆಯ ಎರಡು ವಾಹನಗಳ ಮೇಲೆ ಕಲ್ಲು ತೂರಾಟ ನಡೆಸಿ ಜಖಂಗೊಳಿಸಿವೆ. ಅಲ್ಲದೇ ಎನ್ ಎಚ್ 37ರಲ್ಲಿ ನಿಲ್ಲಿಸಿದ್ದ ಸಿಆರ್ ಪಿಎಫ್ ವಾಹನದ ಮೇಲೆ ಕಲ್ಲು ತೂರಾಟ ನಡೆಸಿರುವುದಾಗಿ ವರದಿ ತಿಳಿಸಿದೆ.

ಅಸ್ಸಾಂನ ದಿಬ್ರುಗಢ್ ಯೂನಿರ್ವಸಿಟಿ ಸಮೀಪ ಉದ್ರಿಕ್ತ ಪ್ರತಿಭಟನಾಕಾರರು ಲಾರಿಯೊಂದಕ್ಕೆ ಬೆಂಕಿ ಹಚ್ಚಿದ್ದು, ಘಟನೆ ನಡೆದ ಕೂಡಲೇ ಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ದಳ ಆಗಮಿಸಿದ್ದು, ಬೆಂಕಿಯನ್ನು ನಂದಿಸಿರುವುದಾಗಿ ವರದಿ ವಿವರಿಸಿದೆ. ಎಡಪಕ್ಷ ಬೆಂಬಲಿತ ಎಸ್ ಎಫ್ ಐ, ಡಿವೈಎಫ್ ಐ, ಎಐಡಿಡಬ್ಲ್ಯುಎ, ಎಐಎಸ್ ಎಫ್, ಎಐಎಸ್ ಎ ಸಂಘಟನೆಗಳು ಬೆಂಬಲ ನೀಡಿವೆ.

Advertisement

ಈಶಾನ್ಯ ರಾಜ್ಯಗಳ ವಿರೋಧ ಯಾಕೆ?

ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರವಾಗಿದ್ದು, ರಾಜ್ಯಸಭೆಯಲ್ಲಿ ನಾಳೆ ಮಸೂದೆ ಮಂಡನೆಯಾಗಲಿದ್ದು, ಅಂಗೀಕಾರಗೊಳ್ಳಬೇಕಾಗಿದೆ. ಮಸೂದೆಗೆ ವಿಪಕ್ಷಗಳು ಹಾಗೂ ಈಶಾನ್ಯ ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಿವೆ. ಮಸೂದೆ ಧರ್ಮಾಧಾರಿತವಾಗಿದ್ದು, ಪ್ರಜಾಪ್ರಭುತ್ವ ವಿರೋಧಿಯಾಗಿದೆ ಎಂಬುದು ಕಾಂಗ್ರೆಸ್ ಆರೋಪವಾಗಿದೆ.

1985ರ ಅಸ್ಸಾಂ ಒಪ್ಪಂದದ ಪ್ರಕಾರ, 1971ರ ಮಾರ್ಚ್ 24ರ ಬಳಿಕ ವಲಸೆ ಬಂದ ಯಾವುದೇ ಧರ್ಮದವರನ್ನು ಅಕ್ರಮ ವಲಸಿಗರು ಎಂದೇ ಪರಿಗಣಿಸಲಾಗುತ್ತದ. ಇದೀಗ ತಿದ್ದುಪಡಿ ಮಾಡಲಾಗಿರುವ ಮಸೂದೆ ಈಶಾನ್ಯ ರಾಜ್ಯಗಳಲ್ಲಿ ಜಾರಿಯಾದರೆ ಆ ರಾಜ್ಯದ ಒಪ್ಪಂದ ಅರ್ಥ ಕಳೆದುಕೊಳ್ಳಲಿದೆ ಎಂಬುದು ಜನರ ವಾದವಾಗಿದೆ. ಮೇಘಾಲಯ, ಮಿಜೋರಾಂ ಸರ್ಕಾರಗಳು ಕೂಡಾ ಈ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿವೆ. ಅಸ್ಸಾಂನಲ್ಲಿ ಈಗಾಗಲೇ ಎನ್ ಆರ್ ಸಿ ಜಾರಿಯಾಗಿದೆ. ಎನ್ ಆರ್ ಸಿಯಲ್ಲಿ ಪೌರತ್ವ ಸಾಬೀತುಪಡಿಸಬೇಕಾಗಿದೆ. ಪೌರತ್ವ ತಿದ್ದುಪಡಿ ಧರ್ಮಾಧಾರಿತವಾಗಿದೆ. ಇದರಲ್ಲಿ ಮುಸ್ಲಿಮೇತರ ವಲಸಿಗ ನಿರಾಶ್ರಿತರಿಗೆ ಭಾರತದ ಪೌರತ್ವ ದೊರಕಲಿದೆ.

Advertisement

Udayavani is now on Telegram. Click here to join our channel and stay updated with the latest news.

Next