Advertisement

ವಾಹನೋದ್ಯಮಕ್ಕೆ ಉತ್ತೇಜನ ನೀಡಲು; ಮಾಸಾಂತ್ಯಕ್ಕೆ ಗುಜರಿ ನೀತಿ ಜಾರಿ: ಗಡ್ಕರಿ

11:58 PM Sep 05, 2020 | mahesh |

ಹೊಸದಿಲ್ಲಿ: ದೇಶದಲ್ಲಿ ವಾಹನೋದ್ಯಮದ ಉತ್ತೇಜನಕ್ಕೆ ಪೂರಕವಾಗಿ ಹಳೆಯ, ಮಾಲಿನ್ಯಕಾರಕ ವಾಹನಗಳ ವಿಲೇವಾರಿಗೆ “ಗುಜರಿ ನೀತಿ’ ಈ ತಿಂಗಳಾಂತ್ಯದಲ್ಲಿ ಜಾರಿಗೆ ಬರಲಿದೆ. ಹಳೆಯ ವಾಹನಗಳನ್ನು ಗುಜರಿಗೆ ಹಾಕಿದರೆ ಅದಕ್ಕೆ ಹಣಕಾಸಿನ ನೆರವು ನೀಡುವುದರ ಜತೆಗೆ ಹೊಸ ವಾಹನದ ಖರೀದಿಗೆ ಉತ್ತೇಜಿಸುವುದು ಈ ಯೋಜನೆಯ ಮೂಲ ಉದ್ದೇಶ.

Advertisement

ಕಳೆದ ಒಂದೂವರೆ ವರ್ಷದಿಂದ ಈ ಗುಜರಿ ನೀತಿಯ ಬಗ್ಗೆ ಹೇಳುತ್ತಲೇ ಇದ್ದೇನೆ. ಈಗ ಅದು ಅಂತಿಮ ಗೊಂಡಿದ್ದು, ಈ ತಿಂಗಳ ಅಂತ್ಯಕ್ಕೆ ಜಾರಿಯಾಗಲಿದೆ. ವಾಹನೋದ್ಯಮ ಸಂಕಷ್ಟದಲ್ಲಿದೆ ಎನ್ನುವುದು ಸರಕಾರಕ್ಕೆ ಗೊತ್ತಿದೆ. ನಿಮ್ಮ ನೆರವಿಗೆ ಸರಕಾರ ಬರಲಿದೆ ಎಂದು ಕೇಂದ್ರ ಸಚಿವ ನಿತಿನ್‌ ಗಡ್ಕರಿ ತಿಳಿಸಿದ್ದಾರೆ.

ಹಳೆಯ ಮತ್ತು ಮಾಲಿನ್ಯಕಾರಕ ವಾಹನಗಳನ್ನು ಗುಜರಿಗೆ ಹಾಕಿದರೆ, ಹೊಸ ವಾಹನಗಳಿಗೆ ಬೇಡಿಕೆ ಬರುತ್ತದೆ. ಆಗ ತನ್ನಿಂತಾನೇ ವಾಹನೋದ್ಯಮ ಚೇತರಿಸಿಕೊಳ್ಳುತ್ತದೆ. ಅದಕ್ಕಾಗಿ ಅಂತಹ ವಾಹನಗಳನ್ನು ಗುಜರಿಗೆ ಹಾಕುವ ನೀತಿ ಜಾರಿ ಮಾಡಬೇಕೆನ್ನುವುದು ವಾಹನೋದ್ಯಮಿಗಳ ಒತ್ತಾಯ.

ಗುಜರಿ ನೀತಿ ಜಾರಿಗೆ ಬಂದರೆ, 2020-21ರ ವಿತ್ತೀಯ ವರ್ಷದಲ್ಲಿ 90 ಲಕ್ಷ ವಾಹನಗಳು, 2025ರೊಳಗೆ 2.8 ಕೋಟಿ ವಾಹನಗಳು ಸಂಚಾರ ನಿಲ್ಲಿಸಲಿವೆ. ಈ ಹಳೆಯ ವಾಹನಗಳ ಬಿಡಿ ಉಪಕರಣ ಗಳನ್ನು ಮರುಬಳಕೆ ಮಾಡಲು ಅಗತ್ಯ ಘಟಕಗಳಿಗೆ ಉತ್ತೇಜನ ನೀಡಲಾಗುವುದು.

ಸಂಕಷ್ಟದಲ್ಲಿ ವಾಹನೋದ್ಯಮ
ಕಳೆದ ಎರಡು ವರ್ಷಗಳಿಂದ ದೇಶೀಯ ವಾಹನೋದ್ಯಮ ಸಂಕಷ್ಟದಲ್ಲಿದೆ. 2019-20ರಲ್ಲಿ ವಾಹನ ಮಾರಾಟ ಶೇ. 18ರಷ್ಟು ಕುಸಿದಿದೆ. ಇದು ಕಳೆದ ಎರಡು ದಶಕಗಳಲ್ಲೇ ಅತೀ ಕಳಪೆ. ಪ್ರಸಕ್ತ ವಿತ್ತೀಯ ವರ್ಷದಲ್ಲಿ ಶೇ. 26ರಿಂದ ಶೇ. 45ರಷ್ಟು ಕುಸಿಯುವ ನಿರೀಕ್ಷೆಯಿದೆ. ಅದರಲ್ಲೂ ವಾಹನೋದ್ಯಮದ ಆರ್ಥಿಕತೆಯ ಸ್ವಾಸ್ಥ್ಯ ನಿರ್ಧರಿಸುವ ಟ್ರಕ್‌ಗಳು, ಬಸ್‌ಗಳ ಮಾರಾಟ ತೀವ್ರವಾಗಿ ಕುಸಿದಿದೆ.

Advertisement

ಅಮೆರಿಕ ಮಾದರಿ ಅಮೆರಿಕದಲ್ಲಿ ಜಾರಿಯಲ್ಲಿರುವ “ಕ್ಯಾಷ್‌ ಫಾರ್‌ ಕ್ಲಂಕರ್ಸ್‌’ನ ಭಾರತೀಯ ರೂಪ ಇದು. ಯಾವುದೇ ವಾಹನದ ಆಯಸ್ಸು 15 ವರ್ಷ ಪೂರ್ಣಗೊಂಡರೆ ಅವುಗಳ ಮರುಮಾರಾಟ ಬೆಲೆ ಪರಿಪೂರ್ಣ ಕುಸಿದಿರುತ್ತದೆ. ಅವುಗಳನ್ನು ಗುಜರಿಗೆ ಹಾಕುವ ಈ ಯೋಜನೆಯಿಂದ ಎರಡು ಲಾಭ- ವಾಹನ ಮಾಲಕರಿಗೆ ಹಣಕಾಸಿನ ನೆರವು ಸಿಗುತ್ತದೆ ಮತ್ತು ಹೊಗೆ ಉಗುಳುವ ಇಂಥ ವಾಹನಗಳ ನಿವಾರಣೆಯಿಂದ ಪರಿಸರ ಶುದ್ಧವಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಹೊಸ ವಾಹನಗಳ ಖರೀದಿ ಹೆಚ್ಚುತ್ತದೆ.

2008-09ರಲ್ಲಿ ಅಮೆರಿಕ ಆರ್ಥಿಕ ಹಿಂಜರಿತದಿಂದ ಚೇತರಿಸಿಕೊಂಡ ಅನಂತರ ಈ ಯೋಜನೆ ಜಾರಿಗೊಳಿಸಿತ್ತು. ಹಳೆಯ ವಾಹನವನ್ನು ಗುಜರಿಗೆ ಹಾಕಿದರೆ 4,500 ಡಾಲರ್‌ ನೆರವನ್ನು ನೀಡುವುದರ ಜತೆಗೆ ಹೊಸ ವಾಹನ ಖರೀದಿಗೆ ಉತ್ತೇಜಿಸಿತ್ತು.

Advertisement

Udayavani is now on Telegram. Click here to join our channel and stay updated with the latest news.

Next