ಬೆಂಗಳೂರು: ವಾಹನಗಳ ಕಳ್ಳತನಕ್ಕೆ ಲಗಾಮು ಹಾಕುವ ಸಲುವಾಗಿ ಸ್ಯಾನ್ ಸಲ್ಯೂಷನ್ ಇಂಡಿಯಾ ಸಂಸ್ಥೆ, ಇದೀಗ “ಸೇಫ್ ಕೀ’, ಎಂಬ ವಾಹನ ಸುರಕ್ಷತಾ ಉಪಕರಣವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ಗುರುವಾರ ನಡೆದ ಕಾರ್ಯಕ್ರಮದಲ್ಲಿ ಎಡಿಜಿಪಿ ರಾಘವೇಂದ್ರ ಔರಾದ್‌ಕರ್ ಬಿಡುಗಡೆ ಮಾಡಿ ಬೈಕ್ ಮತ್ತು ಇನ್ನಿತರ ವಾಹನ ಕಳ್ಳತನಕ್ಕೆ ಕಡಿವಾಣ ಹಾಕಲು ಈ ಉಪಕರಣ ಬಹಳಷ್ಟು ಸಹಾಯವಾಗಲಿದೆ ಎಂದು ಹೇಳಿದರು.
ಈಗಾಗಲೇ ಮಾರುಕಟ್ಟೆಯಲ್ಲಿ ಇದೇ ರೀತಿ ಹಲವು ಉಪಕರಣಗಳಿವೆ. ಆದರೆ ಇದು ಅವುಗಳೆಲ್ಲಕ್ಕಿಂತಲೂ ವಿಭಿನ್ನವಾಗಿದ್ದು ವಾಹನ ಕಳ್ಳತನ ಪ್ರಕರಣಗಳನ್ನು ಕಡಿಮೆ ಮಾಡಲು ಸೇಫ್ ಕೀ ಉತ್ಪನ್ನ ಸಾರ್ವಜನಿಕರಿಗೆ ಸಹಾಯವಾಗಲಿದೆ ಎಂದು ತಿಳಿಸಿದರು.
ಯಾವುದೇ ಉತ್ಪನ್ನ ಮಾರುಕಟ್ಟೆಗೆ ಬಂದಾಗ ತೊಡಕುಗಳು ಇದ್ದೆ ಇರುತ್ತದೆ. ಹೀಗಾಗಿ ಸ್ಯಾನ್ ಸಲ್ಯೂಷನ್ ಇಂಡಿಯಾ ಸಂಸ್ಥೆ, ಸೇಫ್ಕೀ ಉತ್ಪನ್ನದ ಬಗ್ಗೆ ಗ್ರಾಹಕರಿಂದ ಅಭಿಪ್ರಾಯ ಪಡೆದು,ಮತ್ತಷ್ಟು ಉಪಯುಕ್ತವಾಗುವ ರೀತಿಯಲ್ಲಿ ಜನರಿಗೆ ತಲುಪಿಸಲಿ ಎಂದು ಸಲಹೆ ನೀಡಿದರು.
ಸ್ಯಾನ್ ಸಲ್ಯೂಷನ್ ಇಂಡಿಯಾ ಸಂಸ್ಥೆ ಸಿಇಒ ಸಿ.ಸಂತೋಷ್ ಕುಮಾರ್ ಮಾತನಾಡಿ, ವಾಹನ ಸುರಕ್ಷತೆಯ ಸಂಬಂಧ ಈ ತಂತ್ರಜ್ಞಾನವನ್ನು ಮಾರುಕಟ್ಟೆಗೆ ಪರಿಚಯಿಸಲಾಗಿದೆ. ಮೊಬೈಲ್ ಆ್ಯಪ್ ಮೂಲಕ ಇದು ಕಾರ್ಯನಿರ್ವಹಿಸಲಿದ್ದು, ರಿಮೋಟ್ ಲಾಕ್, ಆನ್ ಅಂಡ್ ಆಫ್ ಸ್ವಿಚ್ ಮತ್ತು ಬ್ಲೂಟೂತ್, ಜಿಪಿಎಸ್ ಸೇರಿದಂತೆ ಅನೇಕ ತಂತ್ರಾಂಶಗಳನ್ನು ಸೇಫ್ ಕೀ ಒಳಗೊಂಡಿದೆ. ವಾಹನಗಳ ಬ್ಯಾಟರಿಗೆ ಈ ಉಪಕರಣವನ್ನು ಅಳವಡಿಕೆ ಮಾಡಲಾಗುವುದು ಎಂದರು.
ವಾಹನಗಳಲ್ಲಿ ಈ ಉಪಕರಣ ಅಳವಡಿಕೆ ಮಾಡುವುದರಿಂದ ಯಾರಾದರೂ ವಾಹನ ಕಳ್ಳತನ ಮಾಡಿದರೆ ನಮ್ಮ ಫೋನ್‌ನಲ್ಲೇ ಅಲರಾಂ ಬಾರಿಸಲಿದೆ. ಇದರ ಜತೆಗೆ ಕಳ್ಳತನವಾಗಿರುವ ವಾಹನ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಬಗ್ಗೆಯೂ ಸಂಪೂರ್ಣ ಮಾಹಿತಿ ನಮಗೆ ನೀಡಲಿದೆ. ಕಳೆದ ಹಲವು ವರ್ಷಗಳಿಂದ ಈ ಮೊಬೈಲ್ ಆ್ಯಪ್ ಬಗ್ಗೆ ಶೋಧನೆ ನಡೆದಿತ್ತು. ಕೆಲಸ ಇದೀಗ ಕಾರ್ಯಗತಗೊಂಡಿದ್ದು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು.