Advertisement

ಉದಯವಾಣಿ ವಿಶೇಷ : ಇಂದಿನಿಂದ ತೆರಿಗೆ ಪಾವತಿಯೂ ಸ್ಥಗಿತ

10:15 AM Apr 20, 2018 | Karthik A |

ಮಂಗಳೂರು: ಒಂದು ತಿಂಗಳಿನಿಂದ ‘ವಾಹನ-4’ ಸಾಫ್ಟ್ವೇರ್‌ ಅಳವಡಿಕೆಗಾಗಿ ಹೊಸ ವಾಹನ ನೋಂದಣಿ ಸ್ಥಗಿತಗೊಳಿಸಿರುವ ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಇಂದಿನಿಂದ ವಾಹನ ತೆರಿಗೆಯನ್ನೂ ಪಾವತಿಸಲಾಗದು. ಶುಕ್ರವಾರದಿಂದ (ಎ. 20) ವಾಹನ ತೆರಿಗೆ ಸಂಬಂಧ ಡಿ.ಡಿ.ಯ ರೂಪದಲ್ಲಿ ಸ್ವೀಕರಿಸುವುದನ್ನೂ ಸ್ಥಗಿತಗೊಳಿಸಲು ನಿರ್ಧರಿಸಿದೆ. ಹೊಸ ಸಾಫ್ಟ್ವೇ ರ್‌ ಪೂರ್ಣ ಅನುಷ್ಠಾನಗೊಳ್ಳುವವರೆಗೆ ತೆರಿಗೆಯನ್ನು ಇ-ಪೇಮೆಂಟ್‌ ಬದಲಿಗೆ ಡಿಡಿ ರೂಪದಲ್ಲಿ ಸಂದಾಯ ಮಾಡಬಹುದು ಎಂದು  ಉಪಸಾರಿಗೆ ಆಯುಕ್ತರು ತಿಳಿಸಿದ್ದರು. ಇದರಿಂದಾಗಿ ಬೆರಳೆಣಿಕೆ ವಾಹನಗಳ ನೋಂದಣಿಗೆ ಅವಕಾಶವಾಗಿತ್ತು. ಆದರೆ ಈಗಾಗಲೇ ಸ್ವೀಕರಿಸಿದ ಡಿಡಿಗಳನ್ನು ಖಜಾನೆ-2ರಲ್ಲಿ ಸಂದಾಯ ಮಾಡಬೇಕಾಗಿದ್ದು, ಒತ್ತಡ ಅಧಿಕಗೊಳ್ಳುವ ಸಾಧ್ಯತೆ ಇರುವುದರಿಂದ ಎ. 19ರಿಂದ ಡಿಡಿ ಕೂಡ ಸ್ವೀಕರಿಸಲಾಗದು ಎಂದು ಆರ್‌ಟಿಒ ಪ್ರಕಟಿಸಿದೆ.

Advertisement

RTO ಕಚೇರಿಯನ್ನು ಸಾರ್ವಜನಿಕ ಸ್ನೇಹಿ ಹಾಗೂ ಕಾಗದರಹಿತವನ್ನಾಗಿಸಲು ‘ವಾಹನ-4’ ಸಾಫ್ಟ್ವೇರ್‌ ಅಳವಡಿಸಲಾಗುತ್ತಿದೆ. ಮಂಗಳೂರು ಕಚೇರಿಯಲ್ಲಿ ಸಾಫ್ಟ್ವೇರ್‌ ಅಳವಡಿಕೆಗಾಗಿ ಮಾ. 19ರಂದು ಮಾತ್ರ RTO ಖಜಾನೆ ವಿಭಾಗವನ್ನು, ಆನ್‌ ಲೈನ್‌ ಅರ್ಜಿ ಸ್ವೀಕಾರವನ್ನು ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಲಾಗಿತ್ತು. ಆದರೆ ಈಗಾಗಲೇ ಒಂದು ತಿಂಗಳಾಗಿದ್ದರೂ ಸಾಫ್ಟ್ವೇರ್‌ ಮೇಲ್ದರ್ಜೆಗೇರಿಸುವ ಕೆಲಸ ಪೂರ್ಣಗೊಂಡಿಲ್ಲ. ಆದರೆ ಪಕ್ಕದ ಉಡುಪಿಯಲ್ಲಿ ಈಗಲೂ ‘ವಾಹನ 3’ ಪದ್ಧತಿ ಇರುವುದರಿಂದ ಯಾವುದೇ ಸಮಸ್ಯೆಗಳಿಲ್ಲ.


ನವೀಕರಣಕ್ಕೂ ತಾಂತ್ರಿಕ ಅಡಚಣೆ:
ತಾತ್ಕಾಲಿಕ ವಾಹನ ನೋಂದಣಿಗೆ 1 ತಿಂಗಳ ಕಾಲಾವಧಿ ಇದೆ. ಹೀಗಾಗಿ ಮಾ. 19ರ ಹೊತ್ತಿಗೆ ತಾತ್ಕಾಲಿಕ ವಾಹನ ನೋಂದಣಿ ಮಾಡಿದವರು ಖಾಯಂ ಮಾಡಲು ಏನು ಮಾಡಬೇಕೆಂಬ ಚಿಂತೆಯಲ್ಲಿ ತೊಡಗಿದ್ದಾರೆ. ವಾಹನ್‌-4 ತಂತ್ರಾಂಶ ಪ್ರಾರಂಭಿಕ ಹಂತದಲ್ಲಿದ್ದು, ಅರ್ಹತಾ ಪತ್ರ ನೀಡಿಕೆ, ನವೀಕರಣ, ರಹದಾರಿ ಶುಲ್ಕ ಪಾವತಿಯಂಥ ತಾಂತ್ರಿಕ ಅಡಚಣೆ ಮುಂದುವರಿದಿದೆೆ.

ಈ ತಿಂಗಳು ಬರೀ 30 ನೋಂದಣಿ: ಪ್ರಸ್ತುತ ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿ ವ್ಯಾಪ್ತಿಯಲ್ಲಿ ಮಂಗಳೂರು ಹಾಗೂ ಬಂಟ್ವಾಳ ತಾಲೂಕು ಸೇರಿವೆ. ದಿನವೊಂದಕ್ಕೆ 100-150ರಂತೆ ತಿಂಗಳಿಗೆ ಸುಮಾರು 3,000ಕ್ಕೂ ಹೆಚ್ಚು ದ್ವಿಚಕ್ರ ವಾಹನ, 800ರಷ್ಟು ಕಾರುಗಳು ನೋಂದಣಿಯಾಗುತ್ತಿತ್ತು. ಆದರೆ ಈಗ ಕೇವಲ 20ರಿಂದ 30ಕ್ಕೆ ಇಳಿದಿದೆ. ಹೀಗಾಗಿ ಇಲಾಖೆಯ ಆದಾಯವೂ ಕುಸಿತಗೊಂಡಿದೆ.

ಪುತ್ತೂರಿನಲ್ಲೂ ಸ್ಥಗಿತ: ಪುತ್ತೂರು RTO ಕಚೇರಿಯಲ್ಲೂ ಸಾಫ್ಟ್ವೇರ್‌ ಉನ್ನತೀಕರಣ ಮಾ. 27ಕ್ಕೆ ಪೂರ್ಣಗೊಳ್ಳಬೇಕಿದ್ದರೂ ಇನ್ನೂ ಮುಗಿದಿಲ್ಲ. ಹಾಲಿ ನೋಂದಣಿಗೆ ಸಂಬಂಧಿಸಿ ಇ ಪೇಮೆಂಟ್‌ ಪದ್ಧತಿಯನ್ನೂ ಎ.20ರಿಂದ ಸ್ಥಗಿತಗೊಳಿಸಲಾಗಿದೆ. ದಿನವೊಂದಕ್ಕೆ ಸರಾಸರಿ 50ಕ್ಕೂ ಮಿಕ್ಕಿ ವಾಹನ ನೋಂದಣಿಯಾಗುತ್ತವೆ.

Advertisement

ಬಂಟ್ವಾಳ: ಬೇರೆ ಸಮಸ್ಯೆ
ಬಂಟ್ವಾಳ ಸ. ಪ್ರಾ.ಸಾ. ಕಚೇರಿಯಲ್ಲಿ ಸಾಫ್ಟ್‌ವೇರ್‌ ಪೂರ್ಣ ಕಾರ್ಯಗತಗೊಂಡಿಲ್ಲ. ಬಂಟ್ವಾಳ ಕಚೇರಿಗೆ ಪುತ್ತೂರು, ಮಂಗಳೂರು ಕಚೇರಿ ವ್ಯಾಪ್ತಿಯ ನಿಗದಿತ ಪ್ರದೇಶಗಳ ಅಂಕಿ ಅಂಶ ಬೇರ್ಪಡಿಸಿ 3 ಕಚೇರಿಗಳ ಡಾಟಾ ಪೋರ್ಟಿಂಗ್‌ಗೆ ಕ್ರಮ ಕೈಗೊಳ್ಳಲಾಗಿದೆ. ಆದರೆ ಇದನ್ನು ಸಮರ್ಪಕಗೊಳಿಸದ ಕಾರಣ ವಾಹನ ಮಾಲಕರು ಮಂಗಳೂರು, ಬಂಟ್ವಾಳ ಕಚೇರಿಗೆ ಓಡಾಡಬೇಕಾಗಿದೆ.

ಪರಿಹರಿಸುವ ಪ್ರಯತ್ನ
ಸಾಫ್ಟ್ವೇರ್‌ ಇನ್ನೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನವಾಗಿಲ್ಲ. ಈಗಾಗಲೇ ತೆಗೆದುಕೊಂಡಿರುವ ಡಿಡಿಗಳನ್ನು ನಿಭಾಯಿಸುವ ಸಲುವಾಗಿ ಹೊಸ ಡಿಡಿ ಸ್ವೀಕಾರ ನಿಲ್ಲಿಸಲಾಗಿದೆ. ಒಂದೆರಡು ದಿನದೊಳಗೆ ಸಮಸ್ಯೆ ನಿವಾರಿಸಲು ಪ್ರಯತ್ನಿಸಲಾಗುವುದು ಹಾಗೂ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗುವುದು.
– ಸಿ.ಡಿ.ನಾಯ್ಕ, ಅಸಿಸ್ಟೆಂಟ್‌ ಆರ್‌ಟಿಒ, ಮಂಗಳೂರು

ಮಂಗಳೂರು ಭಾಗದ ಅಟೋಮೊಬೈಲ್‌ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಮಂಗಳೂರು RTO ಕಚೇರಿಯಲ್ಲಿ ಎದುರಾದ ಸಮಸ್ಯೆಗಳ ಬಗ್ಗೆ ಡಿಸಿ ಗಮನಕ್ಕೆ ತರಲಾಗಿದೆ. ಸೂಕ್ತ ಪರಿಹಾರ ಒದಗಿಸುವ ಬಗ್ಗೆ ಆಶ್ವಾಸನೆ ನೀಡಿದ್ದಾರೆ.
– ವತಿಕಾ ಪೈ, ಅಧ್ಯಕ್ಷರು, ಕೆನರಾ ವಾಣಿಜ್ಯ ಹಾಗೂ ಕೈಗಾರಿಕಾ ಸಂಸ್ಥೆ

— ದಿನೇಶ್‌ ಇರಾ

Advertisement

Udayavani is now on Telegram. Click here to join our channel and stay updated with the latest news.

Next