ಬೆಂಗಳೂರು: ಹೊಸ ವಾಹನಗಳ ನೋಂದಣಿ ಯನ್ನು ವಾಹನ ಮಾರಾಟಗಾರ (ಡೀಲರ್)ಗಳಿಗೆ ವಹಿಸಿ ಸಾರಿಗೆ ಇಲಾಖೆ ಅ.31ರಂದು ಹೊರಡಿಸಿರುವ ಅಧಿಸೂಚನೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಸಂಬಂಧ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಈ ಸಂಬಂಧ ನಿವೃತ್ತ ಸಾರಿಗೆ ಇಲಾಖೆ ಅಧಿಕಾರಿ ಮೊಹಮ್ಮದ್ ದಸ್ತಗೀರ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಯನ್ನು ಮುಖ್ಯ ನ್ಯಾ| ರಿತುರಾಜ್ ಅವಸ್ಥಿ ಅವರ ನೇತೃತ್ವದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.
ಸ್ವಲ್ಪ ಹೊತ್ತು ವಾದ ಆಲಿಸಿದ ನ್ಯಾಯಪೀಠ, ಅರ್ಜಿಗೆ ಸಂಬಂಧಿಸಿ ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಸಾರಿಗೆ ಆಯುಕ್ತರಿಗೆ ನೋಟಿಸ್ ಜಾರಿಗೊಳಿಸಿ, 2021ರ ಅ.31ರ ಅಧಿಸೂಚನೆ ಅಧರಿಸಿ ನಡೆಸಲಾದ ನೋಂದಣಿಗಳು ಈ ಅರ್ಜಿಗೆ ಸಂಬಂಧಿಸಿ ಹೈಕೋರ್ಟ್ ನೀಡುವ ಅಂತಿಮ ತೀರ್ಪಿಗೆ ಒಳಪಡುತ್ತವೆ ಎಂದು ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ರೇಷ್ಮೆ ಮಾರುಕಟ್ಟೆ ವಾರಣಾಸಿಗೆ ವಿಸ್ತರಿಸುವ ಚಿಂತನೆ: ಡಾ| ನಾರಾಯಣ ಗೌಡ
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ರಮೇಶ್ ಪುತ್ತಿಗೆ ವಾದ ಮಂಡಿಸಿ, ಹೊಸ ವಾಹನಗಳ ನೋಂದಣಿ ಮಾಡುವ ಜವಾಬ್ದಾರಿಯನ್ನು ವಾಹನ ಮಾರಾಟಗಾರರಿಗೆ ವಹಿಸಿ ಸಾರಿಗೆ ಇಲಾಖೆ ಅಧಿಸೂಚನೆ ಹೊರಡಿ ಸಿದೆ. ಇದು ಮೋಟಾರು ವಾಹನ ಕಾಯ್ದೆಗೆ ವಿರುದ್ಧವಾಗಿದ್ದು, ಸಾರ್ವಜನಿಕರ ಸುರಕ್ಷೆ ದೃಷ್ಟಿಯಿಂದಲೂ ಒಳ್ಳೆಯದಲ್ಲ. ಸಾರಿಗೆ ಇಲಾಖೆ ಕ್ರಮ ಟ್ರಾವೆಲ್ ಏಜೆನ್ಸಿಗಳಿಗೆ ಪಾಸ್‌ಪೋರ್ಟ್ ಹಾಗೂ ವೀಸಾ ವಿತರಿಸುವ ಹಕ್ಕು ನೀಡಿದಷ್ಟೇ ಅಪಾಯ ಕಾರಿಯಾಗಿದೆ. ಯಾರು ಯಾರಿಗೆ ಬೇಕಾದರೂ ವಾಹನ ನೋಂದಣಿ ಮಾಡಿಕೊಡುವ ಸಾಧ್ಯತೆ ಇದ್ದು, ಅಧಿಸೂಚನೆ ಯನ್ನು ರದ್ದುಪಡಿಸಬೇಕು ಎಂದು ಕೋರಿದರು.
ಸರಕಾರದ ಪರ ವಕೀಲರು ವಾದ ಮಂಡಿಸಿ, ಅರ್ಜಿಗೆ ಸಂಬಂಧಿಸಿ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಬೇಕು ಎಂದು ಮನವಿ ಮಾಡಿದರು. ನಾಲ್ಕು ವಾರಗಳಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ ನ್ಯಾಯಪೀಠ, ವಿಚಾರಣೆಯನ್ನು ಮುಂದೂಡಿತು.