Advertisement

ವಾಹನ ವಿಮೆಯಲ್ಲಿ 3 ಹೊಸ ಸೌಲಭ್ಯ : ಇದರ ಉದ್ದೇಶ- ಸ್ವರೂಪಗಳ ಬಗ್ಗೆ ಮಾಹಿತಿ ಇಲ್ಲಿದೆ

11:44 PM Jul 07, 2022 | |

ದೇಶದ ವಾಹನ ವಿಮಾ ಕಂಪೆನಿಗಳಿಗೆ “ಪೇ ಆ್ಯಸ್‌ ಯೂ ಡ್ರೈವ್‌’, “ಪೇ ಹೌ ಯೂ ಡ್ರೈವ್‌’ ಹಾಗೂ “ಫ್ಲೋಟರ್‌ ವಿಮೆ’ ಎಂಬ ಮೂರು ಬಗೆಯ ಹೊಸ ಸೌಲಭ್ಯಗಳನ್ನು ಗ್ರಾಹಕರಿಗೆ ನೀಡಲು ಕೇಂದ್ರ ಸರಕಾರ ಅನುಮತಿ ನೀಡಿದೆ. ಇವುಗಳ ಉದ್ದೇಶ- ಸ್ವರೂಪಗಳ ಬಗ್ಗೆ ಮಾಹಿತಿ ಇಲ್ಲಿದೆ.

Advertisement

ಪೇ ಆ್ಯಸ್‌ ಯೂ ಡ್ರೈವ್‌
ಈ ಮಾದರಿಯ ವಿಮೆಯಲ್ಲಿ, ವಿಮೆದಾರರು ತಮ್ಮ ವಾಹನಗಳನ್ನು ಒಂದು ವರ್ಷದಲ್ಲಿ ಎಷ್ಟು ಬಳಸುತ್ತಾರೋ ಅದರ ಆಧಾರದಲ್ಲಿ ವಿಮಾ ಕಂತು ಕಟ್ಟಲು ಅವಕಾಶ ಇರಲಿದೆ. ಅಂದರೆ ವಾಹನದ ಮಾಲಕನೊಬ್ಬ ಒಂದು ವರ್ಷದಲ್ಲಿ ತನ್ನ ವಾಹನ ಎಷ್ಟು ಕಿಲೋ ಮೀಟರ್‌ ಓಡಬಹುದು ಎಂಬುದನ್ನು ಅಂದಾಜಿಸಿ, ವಿಮೆ ಪ್ರೀಮಿಯಂ ಕಟ್ಟುವಾಗ ಅದನ್ನು ಉಲ್ಲೇಖೀಸಬೇಕು. ಅದರ ಆಧಾರದಲ್ಲಿ ಆತ ಎಷ್ಟು ಪ್ರೀಮಿಯಂ ಕಟ್ಟಬಹುದು ಎಂಬುದನ್ನು ನಿರ್ಧರಿಸಲಾಗುತ್ತದೆ. ಆದರೆ ಪ್ರೀಮಿಯಂ ಪಾವತಿಸುವಾಗ ಈತ ಉಲ್ಲೇಖೀಸುವಷ್ಟೇ ಕಿಲೋಮೀಟರ್‌ವರೆಗೆ ಕಾರು ಓಡಿದೆಯೇ ಎಂಬುದನ್ನು ವಿಮಾ ಕಂಪೆನಿ ಪರೀಕ್ಷಿಸಲು ಅವಕಾಶವಿದೆ. ಅದಕ್ಕಾಗಿ, ಆ್ಯಪ್‌ಗ್ಳು, ವಾಹನದ ಬಳಕೆಯನ್ನು ದಾಖಲಿಸುವ ಉಪಕರಣವನ್ನು ವಾಹನಗಳಲ್ಲಿ ಅಳವಡಿಸಬಹುದು. ಆದರೆ ಇದು ಸೇರಿದಂತೆ ಈ ಮಾದರಿಯ ಪ್ರೀಮಿಯಂ ಪಾವತಿಗಳಲ್ಲಿ ಕ್ಲೇಮುಗಳನ್ನು ಬಗೆಹರಿಸುವುದು ಹೇಗೆ ಎಂಬುದಿನ್ನೂ ಸ್ಪಷ್ಟವಾಗಿಲ್ಲ.

ಪೇ ಹೌ ಯು ಡ್ರೈವ್‌
ಇದು ನೀವು ನಿಮ್ಮ ವಾಹನಗನ್ನು ಹೇಗೆ ಚಲಾಯಿಸುತ್ತೀರಿ ಎಂಬುದನ್ನು ಆಧರಿಸಿ ಕಟ್ಟಬೇಕಾದ ಪ್ರೀಮಿಯಂ. ನಿಯಮಿತ ವೇಗದಲ್ಲಿ ಚಲಿಸುವವರಿಗೆ ಇದು ಅನ್ವಯ. ಪ್ರೀಮಿಯಂ ಕಟ್ಟುವಾಗ ನಾನು ನಿಧಾನವಾಗಿಯೇ ವಾಹನ ಚಲಾಯಿಸುತ್ತೇನೆ ಎಂದು ಉಲ್ಲೇಖೀಸಿ ಕಡಿಮೆ ಪ್ರೀಮಿಯಂ ಕಟ್ಟಿದರೆ ಸಾಕಾಗಲ್ಲ. ನೀವು ಅದೇ ರೀತಿ ವಾಹನ ಓಡಿಸುತ್ತೀರಾ ಎಂಬುದನ್ನು ನಿಮ್ಮ ವಾಹನದಲ್ಲಿ ಒಂದು ಪರಿಕರವನ್ನು ಅಳವಡಿಸಿ ಅದರಲ್ಲಿ ನಿಮ್ಮ ವಾಹನ ಚಾಲನೆಯ ಶೈಲಿಯನ್ನು ದಾಖಲಿಸಲಾಗುತ್ತದೆ.

ಫ್ಲೋಟರ್‌ ವಿಮೆ
ಇದು ಒಂದಕ್ಕಿಂತ ಹೆಚ್ಚು ದ್ವಿಚಕ್ರ ವಾಹನಗಳನ್ನು ಅಥವಾ ಕಾರುಗಳನ್ನು ಅಥವಾ ದ್ವಿಚಕ್ರ ವಾಹನ- ಕಾರುಗಳನ್ನು ಹೊಂದಿರುವವರಿಗೆ ಏಕರೂಪದ ಪ್ರೀಮಿಯಂ ವ್ಯವಸ್ಥೆ. ಉದಾಹರಣೆಗೆ ಒಬ್ಬನೇ ವ್ಯಕ್ತಿ ತನ್ನ ಹೆಸರಿನಲ್ಲಿ ಒಂದು ದ್ವಿಚಕ್ರ ವಾಹನ, ಒಂದು ಕಾರು ಇದ್ದರೆ ಆತ ಆ ಎರಡೂ ವಾಹನಗಳಿಗೆ ಒಂದೇ ವಿಮೆ ಮಾಡಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next