Advertisement

ವಾಹನ ನಿಲುಗಡೆ ಸಮಸ್ಯೆ: ಪ್ರಯಾಣಿಕರ ಪರದಾಟ

07:26 AM Mar 15, 2019 | |

ಹೊಸಕೋಟೆ: ನಗರದ ಪ್ರವಾಸಿ ಮಂದಿರ ವೃತ್ತದಲ್ಲಿರುವ ಬಸ್‌ ನಿಲ್ದಾಣದಲ್ಲಿ ವಾಹನಗಳ ನಿಲುಗಡೆಗೆ ನಿರ್ದಿಷ್ಟ ಸ್ಥಳವಿಲ್ಲದೇ ಪ್ರಯಾಣಿಕರು ಪರದಾಡಬೇಕಾಗಿದೆ. ಈ ಬಗ್ಗೆ 2 ವರ್ಷಗಳ ಹಿಂದೆ ಕೆಇಬಿ ವೃತ್ತದಿಂದ ಬಸ್‌ ನಿಲ್ದಾಣವನ್ನು ಸ್ಥಳಾಂತರಿಸಿದ್ದು, ಇದುವರೆಗೂ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಗಮನ ಹರಿಸದಿರುವುದು ಸಮಸ್ಯೆಗೆ ಪ್ರಮುಖ ಕಾರಣವಾಗಿದೆ.  

Advertisement

ಮ್ಯಾಕ್ಸಿಕ್ಯಾಬ್‌ ಹಾವಳಿ: ಬೆಂಗಳೂರಿನಿಂದ ಕೋಲಾರ, ಚಿಂತಾಮಣಿ, ಮಾಲೂರು ಹಾಗೂ ಹೊರ ರಾಜ್ಯಗಳಿಗೆ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ ಹಾಗೂ ಖಾಸಗಿ ಬಸ್‌ಗಳು ರಸ್ತೆಯಲ್ಲಿಯೇ ನಿಲುಗಡೆಯಾಗುತ್ತಿರುವ ಕಾರಣ ಪ್ರಯಾಣಿಕರು ಬಿಸಿಲು, ಮಳೆಯನ್ನು ಲೆಕ್ಕಿಸದೆ ರಸ್ತೆಯಲ್ಲಿಯೇ ನಿಲ್ಲಬೇಕಾಗಿದೆ.

ಇದೇ ರೀತಿ, ಬೆಂಗಳೂರಿಗೆ ಸಂಚರಿಸುವ ರಾಜ್ಯ ರಸ್ತೆ ಸಾರಿಗೆ, ಬಿಎಂಟಿಸಿ ಬಸ್‌ಗಳೂ ಸಹ ಒಂದೇ ಸ್ಥಳದಲ್ಲಿ ನಿಲುಗಡೆ ಮಾಡುತ್ತಿರುವುದರಿಂದ ಕಾಡುಗೋಡಿ, ವೈಟ್‌ಫೀಲ್ಡ್‌ಗೆ ಸಂಚರಿಸುವ ಮ್ಯಾಕ್ಸಿಕ್ಯಾಬ್‌ಗಳ ಹಾವಳಿಯ ನಡುವೆ ಪ್ರಯಾಣಿಕರು ತೀವ್ರ ಸಮಸ್ಯೆ ಎದುರಿಸಬೇಕಾಗಿದೆ.  

ಅಪಘಾತಗಳು ಸಾಮಾನ್ಯ: ರಾ.ಹೆ.207ರಿಂದ ರಾ.ಹೆ.75ಕ್ಕೆ ಸಂಪರ್ಕಿಸುವ ತಿರುವಿನಲ್ಲಿಯೇ ಬಸ್‌ ನಿಲ್ದಾಣವಿರುವುದರಿಂದ ಇತರೇ ವಾಹನಗಳ ಸಂಚರಕ್ಕೂ ಅಡಚಣೆಯಾಗುತ್ತಿದೆ.  ಅಲ್ಲದೇ, ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗುತ್ತಿದೆ.  

ವಾಹನಗಳ ಭಯ: ರಸ್ತೆ ದಾಟಲು ಸಹ ಪ್ರಯಾಣಿಕರು ಹರಸಾಹಸ ಮಾಡಬೇಕಾಗಿದ್ದು, ರಸ್ತೆ ಉಬ್ಬುಗಳನ್ನು ನಿರ್ಮಿಸಿದಾಗ್ಯೂ ವಾಹನಗಳು ವೇಗವಾಗಿ ಸಂಚರಿಸುವುದರಿಂದ ವೃದ್ಧರು, ಶಾಲಾ ಮಕ್ಕಳು, ಮಹಿಳೆಯರು ಭೀತಿಯಿಂದಲೇ ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.  
ನಿರಾಶ್ರಿತರ ತಾಣವಾದ ತಂದುಗಾಣ: 1 ವರ್ಷದ ಹಿಂದೆ ಎರಡೂ ಬದಿಯ ಸರ್ವಿಸ್‌ ರಸ್ತೆಗಳಲ್ಲಿ ಪ್ರಯಾಣಿಕರ ತಂಗುದಾಣವನ್ನು ನಿರ್ಮಿಸಿದ್ದರೂ ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಯಾವುದೇ ವಾಹನಗಳು ತಂಗುದಾಣದ ಬಳಿ ನಿಲುಗಡೆಯಾಗದ ಕಾರಣ ನಿರಾಶ್ರಿತರ ವಸತಿ ತಾಣಗಳಾಗಿ ಮಾರ್ಪಟ್ಟಿವೆ.  

Advertisement

ಬಸ್‌ ಟರ್ಮಿನಲ್‌ ಕಾಮಗಾರಿ ಸ್ಥಗಿತ: ಪಟ್ಟಣದಲ್ಲಿ ಸುಸಜ್ಜಿತವಾದ ಬಸ್‌ ನಿಲ್ದಾಣ ಸೌಲಭ್ಯ ಒದಗಿಸಬೇಕೆಂಬ ಮಹತ್ವಾಕಾಂಕ್ಷಿ ಯೋಜನೆಯಾದ ಬಿಎಂಟಿಸಿ ಬಸ್‌ ಟರ್ಮಿನಲ್‌ ಕಾಮಗಾರಿ ಸ್ಥಗಿತಗೊಂಡಿದೆ. 2017ರ ಫೆಬ್ರವರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದ 20 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು 18 ತಿಂಗಳೊಳಗಾಗಿ ಪೂರ್ಣಗೊಳಿಸಲು ನಿಗದಿಪಡಿಸಲಾಗಿತ್ತು.

ಆದರೆ, ಇದೀಗ 24 ತಿಂಗಳಾದರೂ ಬಹಳಷ್ಟು ಕಾಮಗಾರಿ ಬಾಕಿ ಉಳಿದಿವೆ. ಸಧ್ಯದಲ್ಲಿ ಪ್ರಾರಂಭಗೊಳ್ಳುವ ಸೂಚನೆಗಳು ಕಂಡುಬರುತ್ತಿಲ್ಲ. ನಿಗದಿಪಡಿಸಿರುವ  ಹಣದಲ್ಲಿ ಇನ್ನೂ ಸುಮಾರು 6 ಕೋಟಿ ರೂ. ಬಾಕಿಯಿರುವ ಕಾರಣದಿಂದಾಗಿ ಗುತ್ತಿಗೆದಾರರಿಗೆ ಪಾವತಿಸಬೇಕಾಗಿದೆ. ಸರಕಾರದಿಂದ ಅನುದಾನ ಬಿಡುಗಡೆಯಾಗದಿರುವುದು ಬಿಎಂಟಿಸಿ ಹಣ ನೀಡಲು ಸಾಧ್ಯವಾಗುತ್ತಿಲ್ಲ.  

ಶೌಚಾಲಯ ವ್ಯವಸ್ಥೆ: ಬೆಂಗಳೂರು ಕಡೆಗೆ ಸಂಚರಿಸುವ ಪ್ರಯಾಣಿಕರು  ಕೋರ್ಟ್‌ ಮುಂಭಾಗದಲ್ಲಿ ಸಾರ್ವಜನಿಕ ಶೌಚಾಲಯವನ್ನು ಬಳಸಿಕೊಳ್ಳಬಹುದಾಗಿದೆ. ಆದರೆ, ಮತ್ತೂಂದೆಡೆ ಇರುವ ಕೋಲಾರ, ಚಿಂತಾಮಣಿಯಂತಹ ಸ್ಥಳಗಳಿಗೆ ಸಂಚರಿಸುವ ಪ್ರಯಾಣಿಕರಿಗೆ ಇಂತಹ ವ್ಯವಸ್ಥೆಯಿಲ್ಲದ ಕಾರಣ, ಕ್ರೀಡಾಂಗಣ ಹಾಗೂ ನಿವೇಶನಗಳಿಗಾಗಿ ನಿರ್ಮಿಸಿರುವ ಗೋಡೆಗಳೇ ಮೂತ್ರ ವಿಸರ್ಜನೆಗಾಗಿ ಬಳಕೆಯಾಗುತ್ತಿದೆ. 

ರಸ್ತೆ ಮಧ್ಯದಲ್ಲಿ ನಿಲ್ಲುವ ಸಂದರ್ಭದಲ್ಲಿ ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತಿದ್ದು, ಪ್ರಯಾಣಿಕರ ತಂಗುದಾಣದ ಬಳಿಯೇ ನಿಲುಗಡೆ ಮಾಡುವುದನ್ನು ಕಡ್ಡಾಯಗೊಳಿಸಬೇಕು. ಇದರಿಂದ ಅಪಘಾತಗಳು ಸಂಭವಿಸುವುದನ್ನು ಸಹ ತಡೆಗಟ್ಟಲು ಸಾಧ್ಯವಾಗಲಿದೆ. ಎರಡೂ ಬದಿಯ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಸಮರ್ಪಕ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು. 
-ನಾರಾಯಣಸ್ವಾಮಿ, ವಿದ್ಯಾರ್ಥಿ, ಹೊಸಕೋಟೆ. 

ರಸ್ತೆ ದಾಟಲು ಅನುವಾಗುವಂತೆ ಸೂಕ್ತ ಸಂಚಾರ ನಿಯಂತ್ರಣ ದೀಪಗಳನ್ನು ಅಳವಡಿಸಬೇಕು. ಬೆಂಗಳೂರು, ವೈಟ್‌ಫೀಲ್ಡ್‌, ವರ್ತೂರಿಗೆ  ಹೆಚ್ಚಾಗಿ ಬಿಎಂಟಿಸಿ ಬಸ್‌ಗಳು ಸಂಚರಿಸುತ್ತಿರುವ ಕಾರಣ ಪ್ರತ್ಯೇಕ ನಿಲುಗಡೆ ವ್ಯವಸ್ಥೆ ಮಾಡಬೇಕು. ಇದರಿಂದ ರಸ್ತೆ ಸಾರಿಗೆ ಬಸ್‌ಗಳಲ್ಲಿ ಪ್ರಯಾಣಿಸುವವರಿಗೆ ಅನುಕೂಲವಾಗಲಿದೆ. ಇತರೆ ವಾಹನಗಳ ಸಂಚಾರಕ್ಕೆ ಅಡ್ಡಿಪಡಿಸುವ ಮ್ಯಾಕ್ಸಿಕ್ಯಾಬ್‌ಗಳನ್ನು ನಿಯಂತ್ರಿಸಬೇಕು. 
-ದೇವೇಂದ್ರ, ಚಾಲಕ‌, ಹೊಸಕೋಟೆ. 

ವಾಹನ ನಿಲುಗಡೆಯನ್ನು ನಿಯಂತ್ರಿಸಲು ಈಗಾಗಲೇ ಎರಡೂ ಬದಿಯಲ್ಲೂ ಪೊಲೀಸರನ್ನು ನಿಯೋಜಿಸಲಾಗಿದೆ. ಸಂಚಾರ ಸುಗಮಗೊಳ್ಳಲು ಪ್ರಯಾಣಿಕರು ಸಹಕರಿಸಬೇಕು. ವಾಹನಗಳನ್ನು ನಿರ್ದಿಷ್ಟ ಸ್ಥಳದಲ್ಲಿಯೇ ನಿಲ್ಲಿಸಲು ಹಾಗೂ ಬಸ್‌ ನಿಲ್ದಾಣದಲ್ಲಿ ಶೌಚಾಲಯದಂತಹ ಅಗತ್ಯ ಸೌಲಭ್ಯಗಳನ್ನು ಒದಗಿಸಲು ಲ್ಯಾನ್ಕೊ ಸಂಸ್ಥೆಗೆ ಸೂಚಿಸಲು ಕ್ರಮ ಕೈಗೊಳ್ಳಲಾಗುವುದು. 
-ಶಿವರಾಜ್‌, ಸರ್ಕಲ್‌ ಇನ್‌ಸ್ಪೆಕ್ಟರ್‌, ಹೊಸಕೋಟೆ. 

* ಪ್ರಭುದೇವ

Advertisement

Udayavani is now on Telegram. Click here to join our channel and stay updated with the latest news.

Next