ಶಿರಸಿ: ಕೊವಿಡ್ 19ರ ನಿಯಂತ್ರಣಕ್ಕಾಗಿ ಭಾರತ ಸರಕಾರದ ಜೊತೆಗೆ ರಾಜ್ಯ ಸರಕಾರ ಕೂಡ ಘೋಷಿಸಿದ ಲಾಕ್‌ಡೌನ್ ಹಿನ್ನಲೆಯಲ್ಲಿ ಆರ್‌ಟಿಒ ಕಚೇರಿಯನ್ನೂ ಬಂದ್ ಮಾಡಲಾಗಿತ್ತು. ತಂಬು, ನೊಂದಣಿ, ನವೀಕರಣ ಸೇರಿದಂತೆ ಯಾವುದೇ ಕಾರ್ಯವನ್ನೂ ಇಲಾಖೆ ಮಾಡುತ್ತಿರಲಿಲ್ಲ. ಏಪ್ರಿಲ್ ಕೊನೇ ವಾರದಲ್ಲಿ ಬಿಎಸ್4 ನೋಂದಣಿಗೆ ಅವಕಾಶ ನೀಡಿ ಕೆಲಸ ಮಾಡಿತ್ತು.
ಆದರೆ, ಮೇ ತಿಂಗಳಲ್ಲಿ ಆರಂಭಗೊಂಡ ಪ್ರಾದೇಶಿಕ ಸಾರಿಗೆ ಕಚೇರಿಗಳಿಗೆ ಬಿಎಸ್6 ಅಥವಾ ಕಚೇರಿ ಬಂದ್ ಆದ ಅವಧಿಯಲ್ಲಿ ವಾಹನಗಳ ನವೀಕರಣಕ್ಕೆ ಬಂದಿದ್ದರೆ ಅವುಗಳ ಮಾಲಕರು ವಿಳಂಬ ದಂಡ ಕಟ್ಟಬೇಕಾಗಿದೆ. ಕಚೇರಿಯೇ ಬಂದ್ ಆದ ಅವಧಿಯಲ್ಲಿ ಅವುಗಳ ನವೀಕರಣ ಅವಕಾಶ ಕೂಡ ಇರಲಿಲ್ಲ. ಆದರೆ, ಈಗ ಆರಂಭವಾದ ಕಚೇರಿಯಲ್ಲಿ ಲಾಕ್‌ಡೌನ್ ಬಂದ್ ಅವಧಿಯಲ್ಲಿ ಸವಾರರ, ಮಾಲಕರ ತಪ್ಪಿಲ್ಲದ ಕಾರ್ಯಕ್ಕೆ 100 ರೂ. ಅವಧಿ ಮೀರಿದ ದಂಡ ವಸೂಲಾತಿ ಆಗುತ್ತಿದೆ.
ಸರಕಾರ ಲಾಕ್‌ಡೌನ್ ಅವಧಿಯಲ್ಲಿ ಎಲ್ಲವನ್ನೂ ಮುಂದೂಡಿದ್ದರೂ ಕಂಪ್ಯೂಟರ್‌ನಲ್ಲಿ ಬದಲಾವಣೆ ಆಗದೇ ಇರುವುದರಿಂದ ಈ ಸಮಸ್ಯೆ ತಲೆದೋರಿದೆ. ಬಿಎಸ್6 ವಾಹನಗಳ ತಾತ್ಕಾಲಿಕ ನೊಂದಣಿ ಅವಧಿ ಮುಗಿದವರೂ 100 ರೂ. ದಂಡ ಕಟ್ಟುವುದು ಅನಿವಾರ್ಯವಾಗಿದೆ.
ಇನ್ನೂ ಆರ್‌ಟಿಓ ಕಚೇರಿಯಲ್ಲಿ ಚಾಲನಾ ಪರವಾನಗಿ ನೀಡುವ ಕಾರ್ಯ ಆರಂಭವಾಗಿಲ್ಲ. ಹೊಸ ಲೈಸನ್ಸ್ ಪಡೆಯುವವರ ಎಲ್‌ಎಲ್‌ಆರ್ ಅವಧಿ ಮುಗಿದರೂ, ಲೈಸನ್ಸ್ ಅವಧಿ ಮುಗಿದವರು ಪುನಃ ಚಾಲನಾ ಪರವಾನಗಿ ಪಡೆಯಲು ದಂಡ ನೂರು ರೂ. ಕಟ್ಟಬೇಕಾಗುತ್ತದೆ. ಲಾಕ್‌ಡೌನ್ ಅವಧಿಯಲ್ಲಿ ಸ್ಥಗಿತಗೊಳಿಸಲಾಗಿದ್ದ ಸೇವೆಯನ್ನು ಆರಂಭಿಸಿದಾಗ ದಂಡ ಕಟ್ಟುವ ಪ್ರಕ್ರಿಯೆ ಸರಿಯಲ್ಲ. ಕೋವಿಡ್ ಕಷ್ಟದಲ್ಲಿ ಬರೆ ಹಾಕುವುದು ತರವಲ್ಲ ಎಂದೂ ಅನೇಕ ನೋಂದಣಿಕಾರರು ಆಕ್ಷೇಪಿಸಿದ್ದಾರೆ. ಈ ಬಗ್ಗೆ ಕಂಪ್ಯೂಟರ್ ಸಾಫ್ಟ್‌ವೇರ್ ಬದಲಾಯಿಸಬೇಕು ಎಂಬ ಒತ್ತಾಯವನ್ನು ಸರಕಾರಕ್ಕೆ ಅಧಿಕಾರಿಗಳೂ ಮನವಿ ಮಾಡಿಕೊಂಡಿದ್ದರೂ ಪ್ರಯೋಜನ ಆಗಿಲ್ಲ.
ಈಗಗಲೇ ಮೇಲಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಆದರೆ, ಇನ್ನೂ ಸ್ಪಷ್ಟನೆ ಬಂದಿಲ್ಲ. ಕಂಪ್ಯೂಟರ್ ದಂಡ ಕೇಳುತ್ತಿದೆ.
ಹೆಸರು ಹೇಳದ ಅಧಿಕಾರಿ
ನನ್ನ ಬೈಕ್ ರಿನಿವಲ್‌ಗೆ ಬಂದಿದೆ. ಏಪ್ರೀಲ್ 4ಕ್ಕೆ ಆಗಬೇಕಿತ್ತು. ಆದರೆ, ಆಗ ಲಾಕ್‌ಡೌನ್. ಈಗ ಬಂದರೆ 100 ದಂಡ ಹೇಳುತ್ತಾರೆ. –
ಎಸ್.ಆರ್. ಹೆಗಡೆ, ವಾಹನ ಮಾಲೀಕ