Advertisement

ದಾಖಲೆ ಇಲ್ಲದೇ ರಸ್ತೆಗಿಳಿದರೆ ವಾಹನ ಜಪ್ತಿ

07:04 AM Jun 13, 2019 | Team Udayavani |

ಹುಣಸೂರು: ಹಳ್ಳಿ, ಕೇರಿ, ಶಾಲಾ ಕಾಲೇಜುಗಳಲ್ಲಿ ಸಂಚಾರ ನಿಯಮ ಕುರಿತು ಅರಿವು ಮೂಡಿಸಿದರೂ ಪ್ರಯೋಜನಕ್ಕೆ ಬಾರದಿದ್ದರಿಂದ ಅನಿವಾರ್ಯವಾಗಿ ಇದೀಗ ಪೊಲೀಸರು ಕಾನೂನು ಉಲ್ಲಂಘಿಸುವ, ವಿಮೆ ಇಲ್ಲದ ವಾಹನಗಳ ವಿರುದ್ಧ ಸಮರ ಸಾರಿದ್ದು, ಎರಡು ದಿನಗಳಲ್ಲಿ 36ಕ್ಕೂ ಹೆಚ್ಚು ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಇನ್ನು ಮುಂದೆ ಬೈಕ್‌ ಸೇರಿದಂತೆ ವಾಹನಗಳಿಗೆ ವಿಮೆ, ಡ್ರೈವಿಂಗ್‌ ಲೈಸನ್ಸ್‌, ಕುಡಿದು ವಾಹನ ಚಲಾಯಿಸಿದರೆ, ಮಾಲೀಕತ್ವದ ದಾಖಲೆ ಇಲ್ಲದೆ ರಸ್ತೆಗಿಳಿದರೆ, ಭಾರೀ ದಂಡ ಪಾವತಿಸಬೇಕಿದೆ. ಇಲ್ಲದಿದ್ದರೆ ವಾಹನ ಮುಟ್ಟುಗೋಲು ಹಾಕಿಕೊಳ್ಳುವುದು ಖಚಿತ.

ಹುಣಸೂರು ಗ್ರಾಮಾಂತರ ಠಾಣೆೆ ಎಸ್ಸೆ„ ಶಿವಪ್ರಕಾಶ್‌ ನೇತೃತ್ವದಲ್ಲಿ ಪೊಲೀಸರು ಒಂದೇ ದಿನ ನಗರದ ಹೊರವಲಯಗಳಲ್ಲಿ ತಪಾಸಣೆ ನಡೆಸಿ, ವಿಮೆ ಇಲ್ಲದ 24, ಕುಡಿದು ವಾಹನ ಚಲಾಯಿಸುತ್ತಿದ್ದ 12 ಮಂದಿ ಸೇರಿದಂತೆ 36 ದ್ವಿಚಕ್ರ ವಾಹನ ಹಾಗೂ 4 ಆಟೋಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ ಪ್ರಯಾಣಿಕರನ್ನು ಸಾಗಿಸುತ್ತಿದ್ದ 11 ಗೂಡ್ಸ್‌ ಆಟೋ ಚಾಲಕರ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.

ವಿಮೆ ಇಲ್ಲದ ವಾಹನಗಳ ವಶ: ತಾಲೂಕಿನ ವಿವಿಧೆಡೆ ನಡೆಸಿದ ತಪಾಸಣೆ ವೇಳೆ ವಿಮೆ ಹಾಗೂ ಕುಡಿದು ಚಲಾಯಿಸುವ ದ್ವಿಚಕ್ರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು ವಾಹನಕ್ಕೆ ವಿಮೆ ಮಾಡಿಸಿಕೊಂಡು ಬಂದ ನಂತರವೇ ತಲಾ 500 ರೂ ದಂಡ ವಿಧಿಸಿ, ಎಚ್ಚರಿಕೆ ನೀಡಿ ಬಿಡುಗಡೆಗೊಳಿಸಿದರು.

ಪ್ರಯಾಣಿಕರಿಗೆ ಅರಿವು: ಕುಡಿದು ವಾಹನ ಚಲಾಯಿಸುವ ಚಾಲಕರು ಹಾಗೂ ಗೂಡ್ಸ್‌ ವಾಹನಗಳಲ್ಲಿ ಜನರನ್ನು ಸಾಗಿಸುವ ಚಾಲಕರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು. ಅಲ್ಲಿ 1500 ರೂ. ಗಿಂತ ಹೆಚ್ಚು ದಂಡ ವಿಧಿಸಲಾಗುತ್ತಿದೆ. ಗೂಡ್ಸ್‌ ವಾಹನಗಳಲ್ಲಿ ಪ್ರಯಾಣಿಸುವವರನ್ನು ಕೆಳಗಿಳಿಸಿ ತಿಳಿವಳಿಕೆ ನೀಡಲಾಗುತ್ತಿದೆ.

Advertisement

ದಂಡ ವಸೂಲಿ: ತಪಾಸಣೆ ವೇಳೆ ಸಂಚಾರ ನಿಯಮ ಉಲ್ಲಂಘನೆ ಮತ್ತಿತರ ಪ್ರಕರಣಗಳಲ್ಲಿ ಎರಡು ದಿನಗಳಲ್ಲಿ ಒಟ್ಟು 18 ಸಾವಿರೂ ದಂಡ ವಸೂಲಿ ಮಾಡಲಾಗಿದೆ. ಹೀಗಾಗಿ ಗ್ರಾಮಾಂತರ ಠಾಣೆ ಆವರಣದಲ್ಲಿ ದ್ವಿಚಕ್ರ ಸೇರಿದಂತೆ ವಾಹನಗಳ ಸಾಲೇ ಇದೆ.

ಎಲ್ಲೆಲ್ಲಿ ಎಷ್ಟು?: ಕಳೆದ ಎರಡು ದಿನಗಳಲ್ಲಿ ಹುಣಸೂರು ವೃತ್ತದ ಬಿಳಿಕೆರೆ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ 45 ಪ್ರಕರಣಗಳಲ್ಲಿ 8,100 ರೂ, ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ 36 ವಾಹನ ವಶದೊಂದಿಗೆ 18,000 ಸಾವಿರ ರೂ. ದಂಡ ಕಟ್ಟಿಸಿದ್ದಾರೆ. ನಗರಠಾಣೆಯಲ್ಲಿ 34 ಪ್ರಕರಣದಲ್ಲಿ 3,900 ರೂ. ದಂಡ, ವೃತ್ತ ನಿರೀಕ್ಷಕರ ಕಚೇರಿಯ ಪೊಲೀಸರು ವಾಹನಗಳನ್ನು ತಪಾಸಣೆ ನಡೆಸಿ 1800 ರೂ. ದಂಡ ಕಟ್ಟಿಸಿದ್ದಾರೆ.

ವಾಹನ ಮಾಲೀಕರು ಹಾಗೂ ಚಾಲಕರು ಕಡ್ಡಾಯವಾಗಿ ಮಾಲೀಕತ್ವದ ದಾಖಲಾತಿಯೊಂದಿಗೆ ವಿಮೆ, ಚಾಲನಾ ಪರವಾನಗಿ ಹೊಂದಿರಬೇಕು. ತ್ರಿಬಲ್‌ ರೈಡಿಂಗ್‌ ಮಾಡಬಾರದು, ಹೆಲ್ಮೆಟ್‌ ಧರಿಸಬೇಕು, ರಸ್ತೆ ನಿಯಮ ಪಾಲಿಸಬೇಕು, ಇನ್ನು ಬೈಕ್‌ ಓಡಿಸುವವರು ಕರ್ಕಶ ಶಬ್ದದ ಸೈಲೆನ್ಸರ್‌ ಅಳವಡಿಸಿಕೊಂಡಿದ್ದಲ್ಲಿ ಬೈಕ್‌ ವಶಕ್ಕೆ ಪಡೆಯಲಾಗುವುದು. ವಾಹನಗಳ ದಾಖಲಾತಿ, ವಿಮೆ ಇದ್ದಲ್ಲಿ ಮಾತ್ರ ಅಪಘಾತ ಸಂದರ್ಭದಲ್ಲಿ ನೊಂದವರ ನೆರವಿಗೆ ಬರಲಿದ್ದು, ಈ ಬಗ್ಗೆ ವಾಹನ ಮಾಲೀಕರು ಎಚ್ಚರವಹಿಸಬೇಕು.
-ಶಿವಪ್ರಕಾಶ್‌, ಗ್ರಾಮಾಂತರ ಠಾಣೆ ಎಸ್ಸೈ

ಈ ವರ್ಷದಲ್ಲೇ ಇಷ್ಟು ಪ್ರಕರಣ ದಾಖಲಿಸಿರುವುದು ಇದೇ ಮೊದಲು. ಇನ್ನು ಮುಂದೆ ನಿತ್ಯ ಎಲ್ಲಾ ವೃತ್ತಗಳಲ್ಲೂ ದಾಖಲಾತಿಗಳನ್ನು ಪರಿಶೀಲಿಸುವ ಜೊತೆಗೆ ಹೆಲ್ಮೆಟ್‌ ಕಡ್ಡಾಯದ ಬಗ್ಗೆ ಅರಿವು ಮೂಡಿಸಲಿದ್ದಾರೆ. 18 ವರ್ಷ ತುಂಬದ ಮಕ್ಕಳಿಗೆ ಯಾವುದೇ ವಾಹನ ಚಲಾಯಿಸಲು ನೀಡಿದಲ್ಲಿ ಮಾಲೀಕನ ವಿರುದ್ಧವೂ ಕಠಿಣ ಕ್ರಮ ಹಾಗೂ ದಾಖಲಾತಿ ಇಲ್ಲದ ವಾಹನಗಳನ್ನು ಜಪ್ತಿ ಮಾಡಲಾಗುವುದು.
-ಶಿವಕುಮಾರ್‌, ವೃತ್ತ ನಿರೀಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next