Advertisement

ಮಾರ್ಗಸೂಚಿ ಇಲ್ಲದೆ ವಾಹನ ಚಾಲಕರ ಪರದಾಟ

11:50 AM Nov 15, 2018 | Team Udayavani |

ಕೈಕಂಬ: ಕೈಕಂಬ ಕೂಡು ರಸ್ತೆಯಲ್ಲಿ ಮಾರ್ಗಸೂಚಿ ಅಗತ್ಯ ಬೇಕಾಗಿದೆ. ಜಿಲ್ಲೆಯಲ್ಲಿ ಹಲವಾರು ಕೈಕಂಬ ಹೆಸರುಗಳು ಇವೆ. ಗುರುಪುರ ಕೈಕಂಬ, ಬಿಕರ್ನಕಟ್ಟೆ ಕೈಕಂಬ, ಕಾಟಿಪಳ್ಳ ಕೈಕಂಬ, ಬಿ.ಸಿ.ರೋಡ್‌ ಕೈಕಂಬ ಎಲ್ಲವೂ ಸಮೀಪದಲ್ಲಿಯೇ ಇದೆ. ಇದರಿಂದಾಗಿ ಅದರ ಜತೆ ಊರು ಕೂಡ ಹೇಳಬೇಕಾದ ಅನಿವಾರ್ಯತೆ ಇದೆ. ಇಲ್ಲದಿದ್ದಲ್ಲಿ ಯಾವ ಕೈಕಂಬ ಯಾವುದ ಅಂತ ಹೇಳಲು ಕಷ್ಟ. ಅದಕ್ಕೆ ಅಲ್ಲಿನ ಸಮೀಪದ ಊರುಗಳನ್ನು ಅದರ ಜತೆ ಹೇಳಲಾಗುತ್ತದೆ.

Advertisement

ಇಂತಹ ಮಾರ್ಗ ಸೂಚಿ ಇಲ್ಲದೇ ಪರದಾಡುವ ಪರಿಸ್ಥಿತಿ ಈಗ ಮಂಗಳೂರು -ಮೂಡಬಿದಿರೆ 169 ರಾಷ್ಟ್ರೀಯ ಹೆದ್ದಾರಿಯ ಗುರುಪುರ ಕೈಕಂಬದಲ್ಲಿ ವಾಹನಗಳಿಗೆ ಬಂದಿದೆ. ದೂರದ ಊರಿನಿಂದ ಬಂದ ವಾಹನ ಚಾಲಕರು ಯಾವ ಕಡೆಗೆ ಹೋಗಬೇಕೆಂಬುದು ತೋಚದ ಪರಿಸ್ಥಿತಿ ಇದೆ. ಇದಕ್ಕಾಗಿ ಇಲ್ಲಿನ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ಇಲಾಖೆಗೆ ಗುರುಪುರ-ಕೈಕಂಬ ಸರ್ಕಲ್‌ ನಲ್ಲಿ ಬ್ಯಾನರ್‌ ಹಾಕಿ ಮನವಿ ಮಾಡಿದ್ದಾರೆ.

ಮಾಹಿತಿ ಇಲ್ಲದೆ ಪರದಾಟ
ಕಾರ್ಕಳ, ಮೂಡಬಿದಿರೆಯಿಂದ ಬಂದ ವಾಹನಗಳಿಗೆ ಸುರತ್ಕಲ್‌, ಎಂಆರ್‌ ಪಿಎಲ್‌, ಮಂಗಳೂರು ವಿಮಾನ ನಿಲ್ದಾಣಕ್ಕೆ ಬರುವವರು ನೇರವಾಗಿ ಮಂಗಳೂರು ಕಡೆಗೆ ಹೋಗುತ್ತಿದ್ದಾರೆ. ಬಿ.ಸಿ.ರೋಡ್‌ ನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗಲು ಬಂದವರು ನೇರವಾಗಿ ಮೂಡ ಬಿದಿರೆ ಕಡೆಗೆ ಹೋದವರು ಇದ್ದಾರೆ. ಶಿವಮೊಗ್ಗದಿಂದ ತುರ್ತು ಚಿಕಿತ್ಸೆಯ ಬಗ್ಗೆ ಆ್ಯಂಬುಲೆನ್ಸ್‌ನಿಂದ ಬಂದವರು ಇಲ್ಲಿಗೆ ಬರುವಾಗ ರಸ್ತೆಯ ಬಗ್ಗೆ ಮಾಹಿತಿ ಇಲ್ಲದೇ ಪರದಾಡಿದ್ದು ಇದೆ.

ಮಾರ್ಗಸೂಚಿ ಅಗತ್ಯ
ಈ ಹಿಂದೆ ಇಲ್ಲಿ ಮಾರ್ಗಸೂಚಿ ಫಲಕ ಇತ್ತು. ಇಲ್ಲಿ ಪೊಲೀಸ್‌ ಚೌಕಿ ನಿರ್ಮಾಣ ಮಾಡಿದ ಮೇಲೆ ಅದು ಇಲ್ಲದಾಗಿದೆ. ಮಾರ್ಗ ಸೂಚಿ ಅಳವಡಿಸಿ ವಾಹನ ಚಾಲಕರಿಗೆ ಸಹಾಯವಾಗಲಿ ಎಂದು ಸಾರ್ವಜನಿಕರು ಹೆದ್ದಾರಿ ಇಲಾಖೆಯ ಗಮನ ಸೆಳೆದಿದ್ದಾರೆ. ಇಲ್ಲಿನ ರಿಕ್ಷಾಚಾಲಕ-ಮಾಲಕ ಸಂಘ ದವರು ವಾಹನ ಚಾಲಕರ ಕಷ್ಟವನ್ನು ಅರಿತು ಈ ಮಾರ್ಗ ಸೂಚಿ ಅಳವಡಿಸಲು ಮುಂದೆ ಬಂದಿದ್ದರು. ಆದರೆ ರಾ.ಹೆ.169 ವಿಸ್ತರಣೆಯಾಗಲಿದೆ. ಈಗ ಮಾರ್ಗಸೂಚಿ ಹಾಕಿದ್ದಲ್ಲಿ ಅದು ಅಗಲೀಕರಣ ಜತೆ ಹೋಗಲಿದೆ ಎಂಬ ಕಾರಣದಿಂದ ಅವರು ಹಿಂದೆ ಸರಿದಿದ್ದಾರೆ ಎಂದು ರಿಕ್ಷಾ ಚಾಲಕ ಉದಯ್‌ ತಿಳಿಸಿದ್ದಾರೆ. ಪೊಲೀಸ್‌ ಚೌಕಿಯಲ್ಲಿ ಮಾರ್ಗಸೂಚಿಯನ್ನು ತೋರಿಸಬಹುದಾಗಿದೆ. ಇದರಿಂದ ಬಜಪೆ ಪೊಲೀಸ್‌ ಇಲಾಖೆಯೂ ಈ ಬಗ್ಗೆ ಚಿಂತಿಸಬಹುದಾಗಿದೆ. ರಾ. ಹೆ. ಇಲಾಖೆಯು ಈ ಬಗ್ಗೆ ಗಮನ ಹರಿಸಿದರೆ ವಾಹನ ಚಾಲಕರ ಪರದಾಟವನ್ನು ಕಡಿಮೆ ಮಾಡಬಹುದಾಗಿದೆ.

ಶೀಘ್ರದಲ್ಲೇ ಅಳವಡಿಕೆ
ಈ ಸರ್ಕಲ್‌ ಪಡುಪೆರಾರ, ಗಂಜಿಮಠ ಹಾಗೂ ಕಂದಾವರ ಗ್ರಾಮ ಪಂಚಾಯತ್‌ಗೆ ಸಂಬಂಧ ಪಟ್ಟಿರುತ್ತದೆ. ಸಾರ್ವಜನಿಕರಿಂದ ಬೇಡಿಕೆ ಹಾಗೂ ಅವರ ಹಿತಾಸಕ್ತಿಯಿಂದ ವಾಹನ ಚಾಲಕರು ಎದುರಿಸುವ ಹಾದಿ ಸಮಸ್ಯೆಗೆ ಪರಿಹಾರದ ನಿಟ್ಟಿಯಲ್ಲಿ ಕಂದಾವರ ಗ್ರಾಮ ಪಂಚಾಯತ್‌ನಿಂದ ಮಾರ್ಗಸೂಚಿ ಫಲಕವನ್ನು ಶೀಘ್ರದಲ್ಲೇ ಅಳವಡಿಸಲಾಗುವುದು.
– ವಿಜಯ ಗೋಪಾಲ ಸುವರ್ಣ,
  ಕಂದಾವರ ಗ್ರಾ.ಪಂ. ಅಧ್ಯಕ್ಷ

Advertisement
Advertisement

Udayavani is now on Telegram. Click here to join our channel and stay updated with the latest news.

Next