Advertisement

ಹುಬ್ಬಳ್ಳಿ : ವಾಹನ ಪ್ರಮಾಣೀಕರಣ ಕೇಂದ್ರ ಅಣಿ

07:14 PM Oct 04, 2021 | Team Udayavani |

ವರದಿ: ಹೇಮರಡ್ಡಿ ಸೈದಾಪುರ

Advertisement

ಹುಬ್ಬಳಿ: ಮಾನವ ಹಸ್ತಕ್ಷೇಪವಿಲ್ಲದೆ ಅತ್ಯಾಧುನಿಕ ತಂತ್ರಜ್ಞಾನದ ಮೂಲಕ ವಾಹನಗಳ ಸ್ಥಿತಿಗತಿ ಹಾಗೂ ಸಾಮರ್ಥ್ಯ ಅರಿಯುವ ವಾಹನ ತಪಾಸಣೆ ಹಾಗೂ ಪ್ರಮಾಣೀಕರಣ ಕೇಂದ್ರ ಉದ್ಘಾಟನೆಗೆ ಸಿದ್ಧವಾಗಿದೆ. ಪ್ರಾಯೋಗಿಕವಾಗಿ ಕಾರ್ಯಾರಂಭ ಮಾಡಿದ್ದು, ರಾಜ್ಯದ ಮೂರನೇ ಕೇಂದ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಸಾರಿಗೆ ಇಲಾಖೆ ಕಾರ್ಯಗಳಿಗೆ ತಾಂತ್ರಿಕ ಸ್ಪರ್ಶ ನೀಡುವ ನಿಟ್ಟಿನಲ್ಲಿ ಕೈಗೊಂಡಿರುವ ಯೋಜನೆಗಳ ಪೈಕಿ ವಾಹನ ತಪಾಸಣೆ ಹಾಗೂ ಪ್ರಮಾಣೀಕರಣ ಕೇಂದ್ರ ಒಂದಾಗಿದೆ. ಇಲ್ಲಿನ ರಾಯಾಪುರ ಕೈಗಾರಿಕೆ ಪ್ರದೇಶದಲ್ಲಿ ಸುಮಾರು 14 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾಗಿದೆ. ಈಗಾಗಲೇ ಶೇ.99 ಕಾರ್ಯಗಳು ಪೂರ್ಣಗೊಂಡಿವೆ. ಇದರ ಪಕ್ಕದಲ್ಲಿಯೇ ಸುಮಾರು 5.75. ಕೋಟಿ ವೆಚ್ಚದಲ್ಲಿ ಸ್ವಯಂ ಚಾಲಿತ ಚಾಲನಾ ಪರೀಕ್ಷಾ ಪಥ ಕೂಡ ಸಿದ್ಧವಾಗಿದೆ.

ಸುಮಾರು 10 ಎಕರೆ ವಿಸ್ತೀರ್ಣದಲ್ಲಿ ಎರಡು ಕೇಂದ್ರಗಳು ತಯಾರಾಗಿವೆ. ಈ ಕೇಂದ್ರಗಳಿಗೆ ಪೂರಕವಾಗಿ ಪ್ರತ್ಯೇಕವಾಗಿ ಆಡಳಿತ ಕಚೇರಿ, ಉಪಹಾರ ಕೇಂದ್ರ, ಶೌಚಾಲಯ, ವಿಶಾಲವಾದ ಪಾರ್ಕಿಂಗ್‌, ಜನರಿಗೆ ಕುಳಿತುಕೊಳ್ಳಲು ಆಸನ ಸೇರಿದಂತೆ ವ್ಯವಸ್ಥಿತವಾಗಿ ಸಿದ್ಧಗೊಂಡಿವೆ. ಉದ್ಘಾಟನೆಗೆ ಸಾರಿಗೆ ಇಲಾಖೆಗೆ ಸಿದ್ಧತೆ ನಡೆಸುತ್ತಿದೆ. ಪೂರ್ಣ ಪ್ರಮಾಣದಲ್ಲಿ ಕೇಂದ್ರಗಳು ಕಾರ್ಯಾರಂಭ ಮಾಡಿದರೆ ಧಾರವಾಡ ಪ್ರಾದೇಶಿಕ ಸಾರಿಗೆ ಇಲಾಖೆ ಕಚೇರಿಯ ಬಹುತೇಕ ಕಾರ್ಯಗಳು ಇಲ್ಲಿಗೆ ಸ್ಥಳಾಂತರಗೊಳ್ಳಲಿವೆ.

ಮಾನವ ಹಸ್ತಕ್ಷೇಪವಿಲ್ಲ  :

Advertisement

ವಾಹನ ತಪಾಸಣಾ ಕೇಂದ್ರದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಉಪಕರಣಗಳನ್ನು ಅಳವಡಿಸಲಾಗಿದೆ. ಏಕಕಾಲಕ್ಕೆ ಮೂರು ವಾಹನಗಳನ್ನು ತಪಾಸಣೆ ಮಾಡಬಹುದಾಗಿದೆ. ಮೂರು ಟ್ರ್ಯಾಕ್‌ಗಳಲ್ಲಿ ಎರಡು ಭಾರೀ ವಾಹನಗಳು, ಒಂದರಲ್ಲಿ ಲಘು ವಾಹನ ಹಾಗೂ ಮೂರು ಚಕ್ರದ ವಾಹನಗಳ ಸಾಮರ್ಥ್ಯ ಪರೀಕ್ಷೆ ನಡೆಯಲಿದೆ. ಒಂದು ವಾಹನ ಮೂರು ಹಂತದಲ್ಲಿ ತಪಾಸಣೆ ನಡೆಯಲಿದೆ. ಮೊದಲನೆ ಹಂತದಲ್ಲಿ ವಾಯುಮಾಲಿನ್ಯ, ಶಬ್ದ ಮಾಲಿನ್ಯ; ಎರಡನೇ ಹಂತದಲ್ಲಿ ವಾಹನದ ಬ್ರೇಕ್‌, ವೇಗದ ಮಿತಿ, ಸ್ಪೀಡ್‌ ಗವರ್ನರ್‌; ಮೂರನೇ ಹಂತದಲ್ಲಿ ಹೆಡ್‌ ಲೈಟ್‌, ಇಂಡಿಕೇಟರ್‌, ಪಾರ್ಕಿಂಗ್‌ ಲೈಟ್‌, ಮಿರರ್‌, ವಾಹನದ ಕೆಳಭಾಗದ ಪರಿಶೀಲನೆ ನಡೆಯಲಿದೆ. ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಕಳಹಿಸುವಲ್ಲಿ ಆಪರೇಟರ್‌ಗಳು ಕೆಲಸ ಮಾಡುತ್ತಾರೆಯೇ ವಿನಃ ಸಾರಿಗೆ ಇಲಾಖೆ ನಿಗದಿಪಡಿಸಿರುವ ಅಂಶಗಳನ್ನು ತಂತ್ರಜ್ಞಾನ ಕೆಲಸ ನಿರ್ವಹಿಸುತ್ತದೆ.

ಹೇಗಿರುತ್ತೆ ಕಾರ್ಯನಿರ್ವಹಣೆ?

ಸಾರಿಗೆ ಇಲಾಖೆ ಅಧೀನದಲ್ಲಿ ಈ ಕೇಂದ್ರ ಕಾರ್ಯ ನಿರ್ವಹಿಸಲಿದೆ. ಎಫ್‌ಸಿ ಪಡೆಯಲು ಬಂದ ಒಂದು ವಾಹನ ಸಂಪೂರ್ಣ ಪರಿಶೀಲನೆಗೆ 15-20 ನಿಮಿಷ ಬೇಕು. ಮೂರು ಟ್ರ್ಯಾಕ್‌ಗಳಿರುವುದರಿಂದ ದಿನಕ್ಕೆ 50-60 ವಾಹನಗಳ ಸಾಮರ್ಥ್ಯ ತಪಾಸಣೆ ಮಾಡಬಹುದಾಗಿದೆ. ವಾಹನ ಸಂಪೂರ್ಣ ತಪಾಸಣೆ ಮುಗಿಯುತ್ತಿದ್ದಂತೆ ಸಂಬಂಧಿಸಿದ ಸಾರಿಗೆ ಇಲಾಖೆ ಅಧಿಕಾರಿಗೆ ಆನ್‌ ಲೈನ್‌ ಮೂಲಕವೇ ಮಾಹಿತಿ ರವಾನೆಯಾಗುತ್ತಿದೆ. ನಿಗದಿತ ಅಂಶಗಳು ಇಲ್ಲದಿದ್ದರೆ ನ್ಯೂನತೆಗಳನ್ನು ಸರಿಪಡಿಸಿಕೊಂಡು 90 ದಿನದೊಳಗೆ ಮರಳಿ ತಪಾಸಣೆಗೆ ಒಳಪಡಿಸಬಹುದಾಗಿದೆ. ಈ ಎಲ್ಲಾ ನಿರ್ವಹಣಾ ಕಾರ್ಯವನ್ನು ರೋಸ್‌ಮಾರ್ಟ್‌ ಟೆಕ್ನಾಲಜಿಸ್‌ ಕಂಪನಿ ನಿರ್ವಹಿಸಲಿದೆ. ಈ ಅತ್ಯಾಧುನಿಕ ವ್ಯವಸ್ಥೆಯಲ್ಲಿ ಮಾನವ ಹಸ್ತಕ್ಷೇಪವಿರುವುದಿಲ್ಲ. ಶೇ.100 ಕರಾರುವಕ್ಕಾಗಿ ವಾಹನಗಳ ಅರ್ಹತೆಯ ತಪಾಸಣೆ ಕಾರ್ಯವನ್ನು ಇದು ನೆರವೇರಿಸಲಿದೆ. ಹೀಗಾಗಿ ಅಪಘಾತಗಳು ಕೂಡ ಕಡಿಮೆಯಾಗಲಿವೆ.

Advertisement

Udayavani is now on Telegram. Click here to join our channel and stay updated with the latest news.

Next