ಗಂಗೊಳ್ಳಿ: ಬೈಂದೂರು ವಲಯದಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಅತೀ ಹೆಚ್ಚು ಮಕ್ಕಳ ದಾಖಲಾತಿ ಹಾಗೂ ಶೈಕ್ಷಣಿಕ ಸಾಧನೆಗಳಿಂದ ರಾಜ್ಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಗುಜ್ಜಾಡಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯು ಈಗ ಮಕ್ಕಳಿಗೆ ಕಲಿಕೆಯ ಜತೆಗೆ ಕೃಷಿ ಪಾಠವನ್ನು ಸ್ವತಃ ಹೇಳಿಕೊಡುವ ಮೂಲಕ ಸುದ್ದಿಯಲ್ಲಿದೆ.
ಶಾಲೆಯ ವಠಾರದಲ್ಲಿ ಸುಮಾರು 10 ಸೆಂಟ್ಸ್ ಜಾಗದಲ್ಲಿ ಮಾಡಿರುವ ತರಕಾರಿ ತೋಟದಲ್ಲಿ ಉತ್ತಮ ಗುಣಮಟ್ಟದ ತರಕಾರಿ ಬೆಳೆಯಲಾಗಿದ್ದು, ಶಾಲೆಯ ಮಧ್ಯಾಹ್ನದ ಬಿಸಿಯೂಟಕ್ಕೆ ಇಲ್ಲಿ ಬೆಳೆದ ತರಕಾರಿಗಳನ್ನೇ ಬಳಸಿಕೊಳ್ಳಲಾಗುತ್ತಿದೆ. ಈಗ ಒಂದು ಕ್ವಿಂಟಾಲ್‌ಗೂ ಮಿಕ್ಕಿ ತರಕಾರಿ ಬೆಳೆದಿದೆ. ಇದು ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಹಾಗೂ ಊರವರ ಪ್ರಶಂಸೆಗೆ ಪಾತ್ರವಾಗಿದೆ.
ಎಸ್‌ಡಿಎಂಸಿ, ಪೋಷಕರ ಸಹಕಾರ ಸಾವಯವ ಕೃಷಿಗೆ ಉತ್ತೇಜನ ನೀಡುವ ಹಾಗೂ ಬಿಸಿಯೂಟಕ್ಕಾಗಿ ತರಕಾರಿ ಅಗತ್ಯ ಮನಗಂಡು ಶಾಲಾ ಎಸ್‌ಡಿಎಂಸಿ ಉಪಾಧ್ಯಕ್ಷೆ ಇಂದಿರಾ ಪೂಜಾರಿ, ಸದಸ್ಯೆ ಶಾಂತಾ ಹಾಗೂ ವಿದ್ಯಾರ್ಥಿ ಪೋಷಕರಾದ ಉಷಾ ಅವರು ಶಾಲಾ ವಠಾರದಲ್ಲಿ ಸುಮಾರು 10 ಸೆಂಟ್ಸ್ ಜಾಗದಲ್ಲಿ ತರಕಾರಿ ತೋಟ ಮಾಡಲು ಮುಂದಾದರು. ಸ್ಥಳೀಯ ಕೃಷಿಕ ಜಿ. ನರಸಿಂಹ ನಾಯಕ್ ಟ್ರಾಕ್ಟರ್ ಮೂಲಕ ಹದ ಮಾಡಿಕೊಟ್ಟಿದ್ದು, ಅದರಲ್ಲಿ ಸೌತೆ ಕಾಯಿ, ಹೀರೆಕಾಯಿ, ಬೆಂಡೆಕಾಯಿ, ಮುಳ್ಳುಸೌತೆ, ಬಸಳೆ ಮೊದಲಾದ ತರಕಾರಿ ಬೆಳೆಸಲಾಗಿದೆ. ಈಗ ತೋಟದಲ್ಲಿ ಉತ್ತಮ ಫಸಲು ಬಂದಿದೆ. ಇವರೊಂದಿಗೆ ಬಿ.ಕೆ. ರಮೇಶ್, ಮಹೇಶ ಆಚಾರಿ, ಅಮರ್ ಪೂಜಾರಿ ಹಾಗೂ ಸುಧಾಕರ ಪೂಜಾರಿ, ಮುಖ್ಯ ಶಿಕ್ಷಕ ಆನಂದ ಜಿ., ಶಿಕ್ಷಕ ವಿಶ್ವನಾಥ ಸಹಕರಿಸಿದ್ದಾರೆ.
ಶಾಲೆಯ ವಠಾರದಲ್ಲಿ ತರಕಾರಿ ತೋಟ ಮಾಡುವಲ್ಲಿ ವಿಶೇಷ ಶ್ರಮವಹಿಸಿದ ಶಾಲೆಯ ಎಸ್‌ಡಿಎಂಸಿ ಉಪಾಧ್ಯಕ್ಷೆ ಇಂದಿರಾ ಪೂಜಾರಿ, ಎಸ್‌ಡಿಎಂಸಿ ಸದಸ್ಯೆ ಶಾಂತಾ ಹಾಗೂ ವಿದ್ಯಾರ್ಥಿ ಪೋಷಕರಾದ ಉಷಾ ಹಾಗೂ ಈ ಕಾರ್ಯದಲ್ಲಿ ಕೈಜೋಡಿಸಿದ ಎಸ್‌ಡಿಎಂಸಿ ಸದಸ್ಯರು, ಪೋಷಕರು ಹಾಗೂ ಶಾಲೆಯ ಶಿಕ್ಷಕರನ್ನು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನಾರಾಯಣ ಕೆ. ಪ್ರಶಂಸಿಸಿದ್ದಾರೆ.
ಬಿಸಿಯೂಟಕ್ಕೆ ಬಳಕೆ: ಶಾಲೆಯ ವಠಾರದಲ್ಲಿ ಮಾಡಿರುವ ತರಕಾರಿ ಕೃಷಿಗೆ ಆದಷ್ಟು ಮನೆಯ ಗೊಬ್ಬರವನ್ನೇ ಬಳಸಲಾಗಿದ್ದು, ಈಗ ಶಾಲೆಯ ಮಧ್ಯಾಹ್ನದ ಬಿಸಿಯೂಟಕ್ಕೆ ಈ ತರಕಾರಿಗಳನ್ನೇ ಬಳಸಿಕೊಳ್ಳಲಾಗುತ್ತಿದೆ. ಒಂದು ಕ್ವಿಂಟಾಲ್‌ಗೂ ಮಿಕ್ಕಿ ತರಕಾರಿ ಬೆಳೆಯಲಾಗಿದೆ. ಎಸ್‌ಡಿಎಂಸಿ, ಊರವರು, ಪೋಷಕರ ಸಹಕಾರದಿಂದ ಇದು ಸಾಧ್ಯವಾಗಿದೆ. ಮಕ್ಕಳಿಗೂ ಪಾಠದೊಂದಿಗೆ ಕೃಷಿಯ ಬಗ್ಗೆಯೂ ಈ ಮೂಲಕ ತಿಳಿಸಿ ಕೊಡಲು ಇದು ನೆರವಾಗಿದೆ. – ಆನಂದ ಜಿ., ಮುಖ್ಯ ಶಿಕ್ಷಕ, ಗುಜ್ಜಾಡಿ ಸರಕಾರಿ ಹಿ.ಪ್ರಾ. ಶಾಲೆ