Advertisement
ಇವರೆಲ್ಲರ ಮಧ್ಯೆ ಆ ಒಂದು ಕೆಟಗರಿ ಜನ ಇದ್ದಾರೆ ಇವರು ಅಲ್ಪ ಬಂಡವಾಳದಲ್ಲಿ ಹೆಚ್ಚಿನ ಲಾಭ ಪಡೆಯಬೇಕು ಅಂತ ಇರೋರು, ಅಂದರೆ ಇವರು ತಮ್ಮ ಅಲ್ಪ ಬಂಡವಾಳದ ಜೊತೆ ತುಂಬಾ ರಿಸ್ಕ್ ಅನ್ನು ಇನ್ವೆಸ್ಟ್ ಮಾಡಿ ಗೂಡ್ಸ್ ಟ್ರಾನ್ಸ್ ಪೋರ್ಟೆಷನ್ ಅನ್ನೋ ಬಿಸಿನೆಸ್ ಶುರುಮಾಡುತ್ತಾರೆ ತಮ್ಮದೇ ಸ್ವಂತ ವಾಹನ ಖರೀದಿ ಮಾಡಿ. ವಾಹನ ಚಿಕ್ಕದಿರಲಿ ದೊಡ್ಡದಿರಲಿ ಇದಕ್ಕೆ ಯಾವುದೇ ವಿದ್ಯಾರ್ಹತೆ ಬೇಡ ಆದರೆ ಬುದ್ಧಿಯ ಅರ್ಹತೆ ಖಂಡಿತ ಅವಶ್ಯ. ಕೆಲವರು ಪರಂಪರಾಗತವಾಗಿ ಇನ್ನು ಕೆಲವರು ಅನಿವಾರ್ಯವಾಗಿ ಇನ್ನೂ ಕೆಲವರು ಮೇಲೆ ಹೇಳಿದಂತೆ ಸಾಧಿಸೋಕೆ ಈ ಫೀಲ್ಡಿಗೆ ಬರುತ್ತಾರೆ.
ನಾನೂ ಒಬ್ಬ ಡ್ರೈವರ್ ಅಥವಾ ನನಗೆ ಟ್ರಾನ್ಸ್ ಪೋರ್ಟೆಷನ್ ಮಾರ್ಕೆಟ್ ನಲ್ಲಿ ಕೆಲವರ ಪರಿಚಯ ಇದೆ ಅಥವಾ ನನ್ನ ಹತ್ತಿರ ಇರೋ 2-3 ಲಕ್ಷ ಹಣಕ್ಕೆ ಗೆಳೆಯ ಕೊಟ್ಟ ಸಲಹೆ ಅಂತ ಶುರುವಾಗುತ್ತೆ. ಇನ್ನು ಕೆಲವರಂತೂ ಅಪ್ಪ ಲಾರಿ ಮಾಡಿ ಹಾಳಾದ್ರು ನಾನು ಇದನ್ನು ಅಪ್ ಗ್ರೇಡ್ ಮಾಡಿ ಹಾಳಾಗ್ದೇನೆ ದುಡಿದು ತೋರಿಸ್ತೀನಿ ಅನ್ನೋರು. ಅನುಭವ ಬೇಕಾ…?
ಖಂಡಿತ ಅನುಭವ ಇಲ್ಲದೆ ಏನು ಸಾಧ್ಯವಿಲ್ಲ, ಹಾಗಾದ್ರೆ ಪ್ರಯತ್ನ ಪಡದೇನೆ ಅನುಭವ ಹೇಗೆ ಬರುತ್ತೆ..? ನಿಜ ಬಂಡವಾಳ ಹಾಕಿ ನಷ್ಟ ಆದ್ರೂ ಅದನ್ನೆಲ್ಲ ಮೀರಿ ಮತ್ತೆ ನಾರ್ಮಲ್ ಜೀವನ ನಡೆಸೋಕೆ ಸಾಧ್ಯವಿರುವಷ್ಟು ಮಾತ್ರ ಪ್ರಯತ್ನ ಸಾಕು ಅಥವಾ ಲಾರಿ ಇರುವ ಸಂಬಂಧಿಕರ, ಸ್ನೇಹಿತರ ಒಡನಾಟದಲ್ಲಿ ಕಲಿತರೆ ಸಾಕು.
Related Articles
ಮೇಲೆ ಹೇಳಿದಂತೆ ಅತಿ ಕಡಿಮೆ ಬಂಡವಾಳ ಸಾಕು, ಹಾಗಾದ್ರೆ ಗೂಡ್ಸ್ ವೆಹಿಕಲ್ ಅಷ್ಟು ಕಡಿಮೆನಾ? ಇಲ್ಲ. ಈಗಿನ ಕಾಂಪಿಟೇಟಿವ್ ಫೈನಾನ್ಸ್ ಮಾರ್ಕೆಟ್ ನಲ್ಲಿ 95-100% ರಷ್ಟು ಲೋನ್ ಸಿಗುತ್ತೆ ಅದು ಕೂಡ ಸುಲಭ ತಿಂಗಳ ಕಂತುಗಳಲ್ಲಿ. ಒಟ್ಟು ವಾಹನ ಬೆಲೆಯ 5% ಹಣ ನಮ್ಮಲ್ಲಿದ್ದರೆ ಆಯ್ತು, ಅದಕ್ಕೆ ಹೇಳಿದ್ದು 5% ಬಂಡವಾಳ ಮತ್ತು 95% ರಿಸ್ಕ್ ಅಂತ.
Advertisement
ಎಲ್ಲರೂ ಯಶಸ್ವಿ ಆಗ್ತಾರಾ…?ಖಂಡಿತ ಇಲ್ಲ, ಸುಮಾರು 15-20% ಜನ ಇದರಲ್ಲಿ ಯಶಸ್ವಿ ಆದ್ರೆ. 80-85% ಜನ ಹೇಳ ಹೆಸರಿಲ್ಲದಂತೆ ಹೋಗ್ತಾರೆ. ಕಾರಣ ಹಲವಾರು ಇವೆ. ಎಲ್ಲಾ ವ್ಯವಹಾರದ ತರಹ ಏಕಾಗ್ರತೆ, ವ್ಯವಹಾರ ಚತುರತೆ, ಲೆಕ್ಕಾಚಾರ, ಅನುಭವ ಎಲ್ಲದರ ಜೊತೆ ಇನ್ನೂ ಅನೇಕ ಅಂಶಗಳು ಈ ವ್ಯವಹಾರಕ್ಕೆ ಅಗತ್ಯ. ಯಾಕೆ ಈ ಫೀಲ್ಡ್ ನಲ್ಲಿ ಫೇಲ್ ಆಗ್ತಾರೆ…?
ಇದೇ ಬಹು ಮುಖ್ಯ ವಿಷಯ. ಒಬ್ಬ ತರಕಾರಿ ಮಾರುವವನು ಎಪಿಎಂಸಿ ನಲ್ಲಿ 100 ಕೆಜಿ ಟೊಮೇಟೊನ ಕೆಜಿಗೆ 10 ರು. ನಂತೆ ಖರೀದಿ ಮಾಡ್ತಾನೆ, ಅಂದ್ರೆ ಅವನ ಅಂದಿನ ಬಂಡವಾಳ 1000 ರೂ. ಬೆಳಗ್ಗೆಯಿಂದ ಅವನು ಕೆ.ಜಿಗೆ 25 ರೂ ಹೇಳಿ 20 ರೂಪಾಯಿಗೆ ಮಾತರ್ಾನೆ. ಮಧ್ಯಾನ್ಹ ಕೆಜಿಗೆ 20 ರೂ ಹೇಳಿ 15 ರೂಪಾಯಿಗೆ ಮಾರುತ್ತಾನೆ. ಸಾಯಂಕಾಲ ಕೆ.ಜಿಗೆ 15 ರೂ. ಹೇಳಿ 10 ರೂಪಾಯಿಗೆ ಮಾರುತ್ತಾನೆ. ಕೊನೆಗೆ ಮನೆಗೆ ಹೋಗೋ ಸಮಯಕ್ಕೆ ಕೆ.ಜಿಗೆ 5ರೂ. ಆದ್ರೂ ಸರಿ ಕೊಟ್ಟು ಮನೆಗೆ ಹೋಗ್ತಾನೆ, ಕಾರಣ ನಾಳೆಗೆ ಆ ಹಣ್ಣು ಕೆಟ್ಟು ಹೋಗುತ್ತೆ ಅಂತ. ಹಾಗಂತ ಅವರಿಗೆ ನಷ್ಟ ಆಗಿರಲ್ಲ. ಕೊನೆಯಲ್ಲಿ ಅವನ ಅಂದಿನ ಬಂಡವಾಳ ತೆಗೆದು 300-500 ರೂ. ದುಡಿದು ನೆಮ್ಮದಿಯ ನಿದ್ರೆ ಮಾಡ್ತಾನೆ. ಯಾಕೆ ಈ ಮಾತನ್ನ ಹೇಳ್ತಿದೀನಿ ಅಂದ್ರೆ, 1000 ರೂ. ಬಂಡವಾಳ ಹಾಕೋ ತರಕಾರಿ ಮಾರುವವರೂ ಕೂಡ ಮಾಡೋ ಯೋಚನೆ 30-40 ಲಕ್ಷ ಬಂಡವಾಳ ಹಾಕೋ ಲಾರಿ ಮಾಲೀಕ ಯೋಚಿಸೋದಿಲ್ಲ, ಯಾಕೆಂದರೆ ಅವನ ಕೈಯಿಂದ ಹಾಕಿರೋ ಹಣ ಕೇವಲ 1-2 ಲಕ್ಷ ಮಾತ್ರ. ಇಲ್ಲೇ ನಮ್ಮ ಜನ ಮೋಸ ಹೋಗೋದು. ನಾವು ಹಾಕಿದ ಬಂಡವಾಳ ಒಂದು ತಿಂಗಳಲ್ಲಿ ವಾಪಾಸ್ ಬರುತ್ತೆ ಉಳಿದಿರೋದ್ರಲ್ಲಿ ತುಂಬಾ ಗಳಿಸಬಹುದು ಅಂತ. ಆದ್ರೆ ಫೈನಾನ್ಸ್ ಕಂಪನಿ ಕೊಟ್ಟಿರೋ 95-100% ಸಾಲಕ್ಕೆ ಕನಿಷ್ಟ 35-40 ಸಾವಿರ ರೂ. ಬಡ್ಡಿ ಕಟ್ಟಬೇಕಾಗುತ್ತೆ ಜೊತೆಗೆ 50 ಸಾವಿರದಷ್ಟು ಅಸಲು ಸೇರಿಸಿ 80-90 ಸಾವಿರ ತಿಂಗಳ ಕಂತು ಇರುತ್ತೆ. ಅಲ್ಲದೇ ಈ ಕೆಳಗಿನ ಎಲ್ಲಾ ಅಂಶಗಳು ಖಂಡಿತ ಕಾರಣವಾಗುತ್ತೆ ಫೇಲ್ ಆಗೋಕೆ. ಡ್ರೈವರ್: ಈ ಕಾಂಪಿಟೇಷನಲ್ ಫೈನಾನ್ಸ್ ಸರ್ವೀಸ್ ನಲ್ಲಿ 1-2 ಲಕ್ಷ ಹಣ ಇರೋರೆಲ್ಲಾ ಲಾರಿ ಮಾಡ್ತಾರೆ, ಇದರಿಂದ ಡ್ರೈವರ್ ಅಭಾವ ಉಂಟಾಗುತ್ತೆ. ಜಾಸ್ತಿ ಸಂಬಳ ಕೊಟ್ರೂ ಡ್ರೈವರ್ ಸಿಗ್ತಾ ಇಲ್ಲ ಒಂದು ವೇಳೆ ಸಿಕ್ಕಿದರೂ ಒಳ್ಳೆ ಡ್ರೈವರ್ ಸಿಗ್ತಾನೆ ಅನ್ನೋ ಗ್ಯಾರಂಟಿ ಇಲ್ಲ. ಅತೀ ಮದ್ಯಪಾನ ವ್ಯಸನಿಗಳು, ಡೀಸೆಲ್ ಕಳ್ಳತನ ಮಾಡೋರು, ದಾರಿ ಲೆಕ್ಕದಲ್ಲಿ ಮೋಸ ಮಾಡೋರು ಇವರ ಮಧ್ಯೆ ಒಬ್ಬ ನಿಯತ್ತಾದ ಡ್ರೈವರ್ ಸಿಗಬೇಕೆಂದ್ರೆ ಲಾರಿ ಮಾಲೀಕ ಪುಣ್ಯ ಮಾಡಿರಬೇಕು. ಡೀಸೆಲ್: ಇದರ ಬಗ್ಗೆ ಹೇಳೋದೆ ಬೇಡ, ಗೊತ್ತಿರೋ ವಿಚಾರ ದಿನೇ ದಿನೇ ಹೆಚ್ಚಾಗ್ತಿರೋ ಬೆಲೆ ವಾಹನ ಮಾಲೀಕರಿಗೆ ಬರೆ. ಸರ್ಕಾರ ತೈಲ ಬೆಲೆನ ಪರಿಷ್ಕರಿಸೋ ರೀತಿ ಲಾರಿ ಬಾಡಿಗೆನ ಪರಿಷ್ಕರಿಸೋರು ಬೇಕಲ್ವಾ..? ಒಗ್ಗಟ್ಟು: ಈ ಫೈನಾನ್ಸ್ ನವರ ಬೆಂಬಲದಿಂದ ಎಲ್ಲರೂ ಲಾರಿ ಮಾಡೋರೆ, ಆದರೆ ದುಡಿಮೆ ಬೇಕಲ್ಲ ಸ್ವಾಮಿ. ಎಲ್ಲರಿಗೂ ತಮ್ಮ ಬಿಸಿನೆಸ್ ನಡಿಬೇಕು ಅನ್ನೋ ಸ್ವಾರ್ಥ ಅದಕ್ಕಾಗಿ 100 ರೂ. ಇರೋ ಬಾಡಿಗೇನ 95 ರೂ.ಗೆ ಹೋಗೋನು ಒಬ್ಬ ಆದ್ರೆ, ನನ್ನ ಲಾರಿ ನಿಲ್ಲಬಾರದು ಅಂತ 90ರೂ. ಗೆ ಹೋಗೋರು ಇದಾರೆ. ಮಾಲೀಕರಲ್ಲಿ ಒಗ್ಗಟ್ಟು ಇಲ್ಲ ಅಂತ ಗೊತ್ತಲ್ವಾ ಹಾಗಾಗಿ ದಿನೇ ದಿನೇ ಬಾಡಿಗೆನ ಕಡಿಮೆ ಮಾಡ್ತಾನೆ ಇದಾರೆ. ಸಂಘ ಸಂಸ್ಥೆಗಳು ಇವೆ ಆದ್ರೂ ಒಗ್ಗಟ್ಟು ಮಾತ್ರ ಇಲ್ಲ. ಟೋಲ್, ಪೊಲೀಸ್, RTO, Etc..: ಹೇಗೋ ಲಾರಿ ಲೋಡ್ ಆಯ್ತು ಅಂದ್ರೆ, ಅದಕ್ಕೆ ಲೋಡಿಂಗ್ ಚಾರ್ಜ್ ಲಾರಿ ಬಾಡಿಗೆಯಿಂದಾನೆ ಕೊಡ್ಬೇಕು. ಸರ್ಕಾರಕ್ಕೆ ರಸ್ತೆ ಟ್ಯಾಕ್ಸ್ ಕಟ್ಟಿದರೂ ಸಹ ಟೋಲ್ ಕಟ್ಟೋದು ತಪ್ಪಲ್ಲ, ಜೊತೆಗೆ ದಾರಿಯಲ್ಲಿ ಪೊಲೀಸ್, RTO ಗಳ ಹಗಲು ದರೋಡೆ ಬೇರೆ. ಇಷ್ಟೇ ಸಾಲದು ಅಂತ ಅನ್ಲೋಡಿಂಗ್ ಖರ್ಚು ಕೂಡಾ ಇದೇ ಬಾಡಿಗೆಯಿಂದಾನೆ. ಹಾಗಂತ ಬಾಡಿಗೆ ಏನು ತುಂಬಾ ಇರುತ್ತೆ ಅನ್ಕೋಬೇಡಿ, ಕೋತಿ ಮೊಸರು ತಿಂದು ಮೇಕೆ ಬಾಯಿಗೆ ಒರಸಿದ ಹಾಗೆ, ಎಲ್ಲರಿಗೂ ಕೊಟ್ಟು ಕೊಟ್ಟು ಕೊನೆಗೆ ಮಾಲೀಕನಿಗೆ ಉಳಿಯೋದು ಮಾತ್ರ ಇಷ್ಟೇನೆ. ಆದ್ರೂ ನೋಡೋರ ಕಣ್ಣಿಗೆ ಮೊಸರು ತಿಂದದ್ದು ಮಾತ್ರ ಮೇಕೆನೆ. ಕಮಿಷನ್ ಏಜೆಂಟ್ ಗಳ ಹಾವಳಿ: ಲಾರಿಗಳ ಕಾಂಪಿಟೇಷನ್ ಎನ್ ಕ್ಯಾಷ್ ಮಾಡಿಕೊಂಡು ಲಕ್ಷಾಂತರ ರೂಪಾಯಿ ಸಂಪಾದನೆ ಮಾಡ್ತಾರೆ. ಒಂದು ಲೋಡ್ ಗೆ ಹತ್ತಾರು ಏಜೆಂಟ್ ಗಳು ಮಾರ್ಕೆಟ್ ನಲ್ಲಿ ಇರ್ತಾರೆ. ಇತ್ತೀಚಿನ ದಿನಗಳಲ್ಲಿ ಆನ್ ಲೈನ್ ನಲ್ಲೂ ಕೂಡಾ ಈ ಕಮಿಷನ್ ಏಜೆಂಟ್ ಗಳ ಹಾವಳಿ ಶುರುವಾಗಿದೆ. ನಿರ್ವಹಣಾ ಕ್ರಮ: ಇನ್ನು ಈ ವಿಚಾರಕ್ಕೆ ಬಂದರೆ, ಹೊಸ ಲಾರಿ ಕೊಳ್ಳವಾಗ ಷೋ ರೂಂ ಸೇಲ್ಸ್ ನವರು 4 ವರ್ಷದಿಂದ 6 ವರ್ಷ ವಾರಂಟಿ ಕೊಟ್ಟಿರುತ್ತಾರೆ Terms and Conditions ಜೊತೆಗೆ. ಮಾಲೀಕ ವಾಹನ ಕೊಳ್ಳುವ ಖುಷಿಯಲ್ಲಿ ಈ Terms and Conditions ನ ಮರೆತೇ ಹೋಗಿರ್ತಾನೆ. ಮತ್ತು ಈ ವಾರಂಟಿ ಯಾವುದೇ ಲಿಖಿತ ರೂಪದಲ್ಲಿ ಇರೊಲ್ಲ. ಎಲ್ಲಾ ಕೆಡುಕಿಗೂ ಡ್ರೈವರ್ ಹಾಗು ರೋಡ್ ಕಂಡಿಷನ್ ಕಾರಣ ಅಂತ ಹೇಳಿ ಮಾಲೀಕನ ತಲೆ ಮೇಲೆ ಚಪ್ಪಡಿ ಕಲ್ಲು ಎಳಿತಾರೆ ಈ ಷೋ ರೂಂನವರು. ಜೊತೆಗೆ ನಮ್ಮ ರೋಡ್ ಕಂಡಿಷನ್ ಗೆ ಈ ಟೈಯರ್ ಗಳು ಅರ್ಧದಲ್ಲೇ ಕೈ ಕೊಡ್ತಾವೆ. ಹಾಗಂತ ಇದರಲ್ಲಿ ಡ್ರೈವರ್ ತಪ್ಪೇನು ಇಲ್ಲ ಅಂತ ಅಲ್ಲ. ಮೊದಲೇ ಹೇಳಿದಂತೆ ನುರಿತ, ನಿಯತ್ತಾದ ಡ್ರೈವರ್ ಸಿಗೋದು ಕಷ್ಟಾನೆ. ದಾಖಲೆಗಳು: ರೋಡ್ ಟ್ಯಾಕ್ಸ್, ಇನ್ಸುರೆನಸ್ಸ್, ಫಿಟ್ನೆಸ್, ನ್ಯಾಷನಲ್ ಫರ್ಮಿಟ್, ಸ್ಮೋಕ್ ಎಮಿಷನ್ ಟೆಸ್ಟ್ ಅಂತ ವರ್ಷಕ್ಕೆ 1.5-2 ಲಕ್ಷಕ್ಕೇನು ಕಡಿಮೆ ಖರ್ಚು ಬರೋಲ್ಲ. ಬೇರೆ ಫೀಲ್ಡ್ ನಲ್ಲಿ ಇರೋ ಹಾಗೆ ಸಬ್ಸಿಡಿ ಅಂತೂ ಇಲ್ಲವೇ ಇಲ್ಲ ಬಿಡಿ. ಆದರೂ ನಮ್ಮ ಮಾಲೀಕ ಮಹಾಶಯರು ಲಾರಿ ದುಡೀತಿದೆ ಅಂದ ತಕ್ಷಣ 10ರೂ. ಖರ್ಚು ಮಾಡೋನು 100ರೂ. ಖರ್ಚು ಮಾಡೋಕೆ ಶುರು ಮಾಡ್ತಾನೆ, ಯಾಕೆಂದರೆ ಲಾರಿ ಕೊಂಡಾಗಿನಿಂದ ಸುಮಾರು 1 ವರ್ಷ ಯಾವುದೇ maintenance ಇರೋಲ್ಲ ನೋಡಿ ಅದಕ್ಕೆ ತಾನು ತುಂಬಾ ದುಡಿತಿದೀನಿ ಅನ್ನೋ ಫೀಲಿಂಗ್. ಆದರೆ ಒಂದು ವರ್ಷದಲ್ಲಿ ಸಾಲದ ಕಂತು ಮುಗಿದಿರೋಲ್ಲ ಸ್ವಾಮಿ. 15-20% ಜನ ಹೇಗೆ ಸಕ್ಸಸ್ ಕಾಣ್ತಾರೆ…?
*ಮೊದಲನೆಯದಾಗಿ ಅವರು ಮಾರ್ಕೆಟ್ ಅನ್ನು ಅರ್ಥ ಮಾಡಿಕೊಳ್ತಾರೆ, ಅಂದರೆ ತಮ್ಮ ಭಾಗದಲ್ಲಿ ಯಾವ ವಾಹನ ಸರಿ ಹೊಂದುತ್ತೆ ಮತ್ತು ರೀ ಸೇಲ್ ವ್ಯಾಲ್ಯೂ ಇದೆಯಾ ಅಂತ ನೋಡಿ ಅದೇ ತರಹದ ವಾಹನ ತಗೋತಾರೆ. *ಗರಿಷ್ಠ ಪ್ರಮಾಣದ ಸಾಲದ ಗಡವು ತಗೋಳೋದ್ರಿಂದ ತಿಂಗಳ ಕಂತು ಕಡಿಮೆಯಾಗಿ ಕಟ್ಟಲು ಸಹಕಾರಿಯಾಗುತ್ತೆ ಮತ್ತು ಡಿಫಾಲ್ಟರ್ ಆಗೋದನ್ನ ತಪ್ಪಿಸುತ್ತೆ. *ಉತ್ತಮವಾದ ನೆಟ್ವರ್ಕ್ ಅಂದರೆ ಎರಡೂ ಕಡೆ ಹೋಗುವಾಗ ಮತ್ತು ಬರುವಾಗ ಲೋಡ್ ಸಿಗುವಂತೆ ಸಂಪರ್ಕ ಇರುತ್ತೆ. *ಹೆಚ್ಚಿನ ಸಂಬಳ ಕೊಟ್ಟು ಒಳ್ಳೆ ಡ್ರೈವರ್ ಇಟ್ಟುಕೊಳ್ಳುತ್ತಾರೆ ಮತ್ತು ಅವರ ಜೊತೆ ಸ್ನೇಹ ಸಂಬಂಧವನ್ನ ಉಳಿಸಿಕೊಳ್ತಾರೆ. *ಉತ್ತಮವಾದ ಬಾಡಿಗೆಗಳನ್ನು ಮಾತ್ರ ಆಯ್ಕೆ ಮಾಡ್ತಾರೆ. *100% ವಾಹನದ ಮೆಕಾನಿಕಲ್ ನಿರ್ವಹಣೆ ಮಾಡೋದು. *ಅನಿವಾರ್ಯತೆಗೆ ಸಾಲ ಮಾಡುವ ಬದಲು ತಮ್ಮ ಕೈಯಲ್ಲಿ ಸ್ವಲ್ಪ ಹಣ ಉಳಿಸಿಕೊಳ್ಳೋದು. *ಕೆಟ್ಟ ಚಟ, ಜೂಜು, ಅತಿಯಾದ ಮೋಜು ಮಸ್ತಿ ಮಾಡದಿರುವುದು. *ಪ್ರತಿ ಟ್ರಿಪ್ ನಲ್ಲೂ ಉಳಿತಾಯದ ಲೆಕ್ಕಾಚಾರ ಹಾಕುವುದು. *ಒಂದೇ ವಾಹನದ ಮೇಲೆ ಅವಲಂಬಿತರಾಗದೇ ಹಲವು ವಾಹನಗಳನ್ನ ಖರೀದಿಸುವುದು. ಇಷ್ಟೆಲ್ಲಾ ಮಾಡಿದರೂ ಸಹ ಯಾವುದೇ ಆಕಸ್ಮಿಕ, ಅಪಘಾತಗಳು ಜರುಗದಂತೆ ಅದೃಷ್ಠವೂ ಜೊತೆಯಲ್ಲೇ ಇರಬೇಕು. ಇದೆಲ್ಲಾ ಮಾಡಿದವರು ಸಕ್ಸಸ್ ಆಗಿದಾರೆ ಅಂತೇನಿಲ್ಲ. ಬಹುತೇಕ ಸಕ್ಸಸ್ ಕಂಡವರಲ್ಲಿ ಈ ಎಲ್ಲಾ ಅಭ್ಯಾಸಗಳು ಇದ್ದೇ ಇರುತ್ತವೆ. ಇದಿಷ್ಟು ಕಷ್ಟಗಳ ನಡುವೆ ಈ ಫೀಲ್ಡ್ ನಲ್ಲಿ ಯಶಸ್ಸು ಕಂಡರೆ ಅದು ಯುದ್ಧ ಗೆದ್ದು ಬಂದಂತೇ ಸರಿ. ದಿನೇಶ್.ಎಂ
ಲಾರಿ ಮಾಲೀಕರು
ವಿಜಯನಗರ ಜಿಲ್ಲಾ ಲಾರಿ ಮಾಲೀಕರ ಸಂಘ
ಹೊಸಪೇಟೆ