Advertisement

ತರಕಾರಿ ಶಾಲೆ!

12:30 AM Jan 31, 2019 | |

ತರಕಾರಿ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಮೇಷ್ಟ್ರು “ಶ್ರದ್ಧೆ, ಭಕ್ತಿಯಿಂದ ಪ್ರಾರ್ಥಿಸಿದರೆ, ದೇವರು ಬೇಡಿದ ವರವನ್ನು ನೀಡುತ್ತಾನೆ’ ಎಂದು ಹೇಳಿದರು. ಎಳೆ ತರಕಾರಿಗಳಿಗೆಲ್ಲಾ ಖುಷಿಯಾಯಿತು. ಅವುಗಳು ಭಾನುವಾರದ ದಿನ ಒಂದಾಗಿ ಕುಳಿತು ದೇವರನ್ನು ಕುರಿತು ತಪಸ್ಸು ಮಾಡೋಣವೆಂದು ನಿರ್ಧರಿಸಿದವು. 

Advertisement

ಅಮಿತನಿಗೆ ದಿನಾಲೂ ಅವರಮ್ಮ ಚಂದಮಾಮನನ್ನು ತೋರಿಸುತ್ತಾ ಊಟ ಮಾಡಿಸುತ್ತಿದ್ದರು. ಊಟ ಮಾಡುವಾಗ ಅಮಿತನದು ಒಂದೇ ಹಟ. “ಕಥೆ ಹೇಳು’ ಎಂದು. ಹೀಗಾಗಿ ಅವನಮ್ಮ ದಿನಾಲೂ ಒಂದೊಂದು ಕಥೆ ಹೇಳಲು ಶುರುಮಾಡಿದರು. ಊಟದಲ್ಲಿ ತರಕಾರಿಯ ಕಂಡು ಅಮಿತ್‌ “ಅಮ್ಮ ತರಕಾರಿ ಕಥೆ ಹೇಳು’ ಎಂದು ದುಂಬಾಲು ಬಿದ್ದ. ಅಮ್ಮ ತರಕಾರಿ ಕಥೆ ಶುರು ಮಾಡಿದರು.

ಬಹಳ ಹಿಂದೆ ತರಕಾರಿಗಳೆಲ್ಲ ಒಗ್ಗಟ್ಟಾಗಿದ್ದವು. ಎಲ್ಲ ಒಟ್ಟಾಗಿ ಆಡುತ್ತಾ ಕುಣಿಯುತ್ತಲಿದ್ದವು. ಅವೆಲ್ಲಾ ಒಟ್ಟಿಗೆ ಇದ್ದರೂ ಒಂದೊಂದು ತರಕಾರಿಯದು ಒಂದೊಂದು ಸ್ವಭಾವ. ಈರುಳ್ಳಿಗೆ ಬಹಳ ಚಳಿಯಾಗುತ್ತಿತ್ತು, ಆಲೂಗಡ್ಡೆಗೆ ತುಂಬಾ ಸೆಕೆಯಾಗುತ್ತಿತ್ತು. ಬೆಳ್ಳುಳ್ಳಿಗೆ ತಾನು ಇನ್ನಷ್ಟು ದುಂಡಗೆ ಇರಬೇಕೆಂಬ ಆಶೆ.

ಎಳೆ ತರಕಾರಿಗಳೆಲ್ಲಾ ದಿನಾಲೂ ಬೆಳಿಗ್ಗೆ ಎದ್ದು ಹಲ್ಲುಜ್ಜಿ, ಸ್ನಾನ ಮಾಡಿ, ತಿಂಡಿ ತಿಂದು ಶಾಲೆಗೆ ಹೋಗುತ್ತಿದ್ದವು. ಅಲ್ಲಿ ಪ್ರಾರ್ಥನೆ ಮಾಡಿ, ಪಾಠ ಕೇಳುತ್ತಿದ್ದವು. ಸಂಜೆ ಮನೆಗೆ ಬಂದು ಹೋಂವರ್ಕ್‌ ಮುಗಿಸಿ ಊಟ ಮಾಡಿ ಮಲಗುತ್ತಿದ್ದವು. ಒಂದು ದಿನ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಮೇಷ್ಟ್ರು “ಶೃದ್ಧೆ, ಭಕ್ತಿಯಿಂದ ಪ್ರಾರ್ಥಿಸಿದರೆ, ದೇವರು ಬೇಡಿದ ವರವನ್ನು ನೀಡುತ್ತಾನೆ’ ಎಂದು ಹೇಳಿದರು. ಎಳೆ ತರಕಾರಿಗಳಿಗೆಲ್ಲಾ ಖುಷಿಯಾಯಿತು. ಅವುಗಳು ಭಾನುವಾರದ ದಿನ ಒಂದಾಗಿ ಕುಳಿತು ದೇವರನ್ನು ಕುರಿತು ತಪಸ್ಸು ಮಾಡೋಣವೆಂದು ನಿರ್ಧರಿಸಿದವು. 

ಭಾನುವಾರ ಬಂತು. ಅವರೆಲ್ಲರೂ ಆಡುವ ನೆಪದಿಂದ ಹೊರಬಂದು ಆಟದ ಬಯಲಿನಲ್ಲಿ ಸೇರಿದವು. ಒಂದು ಮರದಡಿ ತೆರಳಿ ದೇವರನ್ನು ಧ್ಯಾನಿಸುತ್ತಾ ಕುಳಿತವು. ಪ್ರಸನ್ನನಾದ ದೇವರು ಪ್ರತ್ಯಕ್ಷನಾದನು. “ಏನು ವರ ಬೇಕೆಂದು’ ಕೇಳಿದನು. ಈರುಳ್ಳಿಯು “ನಮ್ಮ ಮನೆಯಲ್ಲಿ ಚಳಿಗೆ ಹೊದ್ದು ಕೊಳ್ಳಲು ಕಂಬಳಿಯಿಲ್ಲ. ಮನೆಯವರೆಲ್ಲರಿಗೂ ಸಹಾಯ ಮಾಡಬೇಕು’ ಎಂದು ಕೇಳಿಕೊಂಡಿತು. ದೇವರು ತಥಾಸ್ತು ಎನ್ನಲು ಈರುಳ್ಳಿಗೆ ಮೈ ತುಂಬಾ ಹೊದಿಕೆಗಳು ಬಂದವು. ಅದರ ಜೊತೆಗೆ ಚಳಿಯನ್ನು ಬಿಡಿಸಲು ಪ್ರಯತ್ನಿಸಿದವರಿಗೆ ಕಣ್ಣಲ್ಲಿ ನೀರು ಬರಲಿ ಎಂದು ಆಶೀರ್ವದಿಸಿದ ದೇವರು.

Advertisement

ಆಲೂಗಡ್ಡೆ “ನನಗೆ ತುಂಬಾ ಸೆಕೆಯೆಂದು ಬಹಳ ತೆಳ್ಳಗಿನ ಬಟ್ಟೆ ಬೇಕು’ ಎಂದು ಕೇಳಿಕೊಂಡಿತು. ಒಡನೆಯೇ ದಪ್ಪ ಚರ್ಮದ ಆಲೂಗಡ್ಡೆಗೆ ತೆಳುವಾದ ಬಟ್ಟೆಯನ್ನು ದೇವರು ನೀಡಿದರು. ಬಟಾಟೆಯ ಅಣ್ಣ ಬಿಟ್‌ರೂಟ್‌ “ನಾನು ರಕ್ತಹೀನತೆಯಿಂದ ಬಳಲುತ್ತಿದ್ದೇನೆ.’ ಎನ್ನಲು ದೇವರು ಒಡನೆಯೇ ಮೈತುಂಬಾ ಕೆಂಪು ದ್ರವ ತುಂಬಿಕೊಳ್ಳುವಂತೆ ಆಶೀರ್ವದಿಸಿದನು. ಟೊಮ್ಯಾಟೊ ತಾನು ಸುಂದರವಾಗಿ ಕಾಣಬೇಕೆಂದೂ, ಮೂಲಂಗಿ ತಾನು ತೆಳ್ಳಗೆ ಬೆಳ್ಳಗೆ ಇರಬೇಕೆಂದೂ, ಕ್ಯಾರೆಟ್‌ ಕುಮಾರ್‌ ತನಗೆ ಕೇಸರಿ ಬಣ್ಣ ಬೇಕು ಎಂದು ಕೋರಿಕೊಳ್ಳಲು ದೇವರು ಎಲ್ಲರ ಬೇಡಿಕೆಗಳನ್ನೂ ಪೂರೈಸಿದನು.

ಅಷ್ಟರಲ್ಲಿ ತಡವಾಗಿ ಓಡಿ ಬಂದ ಬದನೆಕಾಯಿ ಏದುಸಿರು ಬಿಡುತ್ತಾ “ತನಗೆ ರಾಜನ ಕಿರೀಟ ಬೇಕು’ ಎಂದು ಕೇಳಿತು. ಒಡನೆಗೆ ಬದನೆಯ ತಲೆ ಮೇಲೆ ಕಿರೀಟವೊಂದು ಸೃಷ್ಟಿಯಾಯಿತು. ಹೀಗೆ ದೇವರು ಒಬ್ಬೊಬ್ಬರಿಗೆ ಒಂದೊಂದು ವರವನ್ನು ನೀಡಿ, ನಿಮ್ಮನ್ನು ಪೂಜಿಸಿ, ಸೇವಿಸುವವರಿದೆ ಆಯುರಾರೋಗ್ಯ ದೊರಕಲಿ ಎಂದು ಹೇಳಿ ಮಾಯವಾದನು. 

ಈ ಕಥೆ ಮುಗಿಯುವಷ್ಟರಲ್ಲಿ ಅಮಿತನ ಊಟವೂ ಮುಗಿದಿತ್ತು. ಕಥೆಯಿಂದ ಪ್ರೇರಿತನಾದ ಅಮಿತ ತಾನು ತಿನ್ನದೇ ಬಿಟ್ಟಿದ್ದ ತರಕಾರಿಗಳಷ್ಟು ಗಬ ಗಬನೆ ತಿಂದು ಮುಗಿಸಿದ. ಅದನ್ನು ನೋಡಿ ಅಮ್ಮನಿಗೆ ಖುಷಿಯಾಯಿತು.

ಸಾವಿತ್ರಿ ಶ್ಯಾನುಭಾಗ

Advertisement

Udayavani is now on Telegram. Click here to join our channel and stay updated with the latest news.

Next