ಶಿವಮೊಗ್ಗ: ಈರುಳ್ಳಿ ದರ ಏರಿಕೆಯಿಂದಲೇ ಕಂಗಾಲಾಗಿದ್ದ ಗ್ರಾಹಕರು ಈಗ ಇತರೆ ದಿನಬಳಕೆ ತರಕಾರಿಗಳ ಬೆಲೆ ಹೆಚ್ಚಳದಿಂದ ದಿಕ್ಕು ತೋಚದಂತಾಗಿದ್ದಾರೆ. ಮದುವೆ ಇತರೆ ಶುಭ ಸಮಾರಂಭ ಮಾಡುವವರಿಗೆ ಬೆಲೆ ಏರಿಕೆ ಬಿಸಿ ತುಪ್ಪವಾಗಿ ಪರಿಣಮಿಸಿದೆ.
ಸಾಮಾನ್ಯವಾಗಿ ಮಳೆಗಾಲದ ನಂತರ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ತರಕಾರಿ ಬರುತ್ತದೆ. ಮಳೆಗಾಲದಲ್ಲಿ ಬಿತ್ತನೆಮಾಡಿದ ತರಕಾರಿ ಡಿಸೆಂಬರ್ ವೇಳೆಗೆ ಫಲ ಕೊಡಲಾರಂಭಿಸುತ್ತವೆ. ಆದರೆ ಈ ಬಾರಿ ಮಳೆ ಅಕ್ಟೋಬರ್‌ವರೆಗೂ ಮುಂದುವರಿದ ಕಾರಣ ತರಕಾರಿ ಬೆಳೆ ನಾಶವಾಗಿತ್ತು. ತಮಿಳುನಾಡು ಭಾಗದಲ್ಲಿ ನವೆಂಬರ್‌ನಲ್ಲಿ ಸುರಿದ ಮಳೆಗೂ ಭಾರಿ ಪ್ರಮಾಣದಲ್ಲಿ ಬೆಳೆ ನಾಶವಾಗಿತ್ತು. ಹೀಗಾಗಿ ಮಾರುಕಟ್ಟೆಗೆ ಆವಕ ಕಡಿಮೆಯಾಗಿದೆ.
ಬಟಾಣಿ, ಬಣ್ಣದ ಸೌತೆಕಾಯಿ, ಟೊಮ್ಯಾಟೋ ಹೊರತುಪಡಿಸಿದರೆ ಬೆಂಡೆಕಾಯಿ, ತೊಂಡೆಕಾಯಿ, ಮೂಲಂಗಿ, ಹಿರೇಕಾಯಿ, ಬಿಟ್ರೂಟ್, ಹಾಗಲಕಾಯಿ ಸೇರಿ ಎಲ್ಲ ತರಕಾರಿಗಳ ಬೆಲೆಯೂ ಕೆಜಿಗೆ 40 ರೂ. ಗಳಿಗಿಂತ ಹೆಚ್ಚಿದೆ. 200 ರೂ. ತಲುಪಿದ್ದ ಈರುಳ್ಳಿ ದರ ಈಗ 120 ರೂ.ಗಳಿಗೆ ಇಳಿದಿದ್ದು, ಜನ ಕೊಂಚ ನಿರಾಳರಾಗಿದ್ದಾರೆ.
ಚಳಿಗಾಲದಲ್ಲಿ ಇಳುವರಿ ಕಡಿಮೆ; ಚಳಿಗಾಲದಲ್ಲಿ ಮರಗಿಡಗಳ ಎಲೆ ಉದುರುವ ಕಾಲವಾಗಿದ್ದು, ಜತೆಗೆ ಚಳಿಗೆ ಹೂವು ಬಿಡುವುದಿಲ್ಲ. ಹೀಗಾಗಿ ಇಳುವರಿ ಕೂಡ ಕಡಿಮೆ ಇರುತ್ತದೆ. ಡಿ.17ರಿಂದ ಧನುರ್ಮಾಸ ಆರಂಭವಾಗುವುದರಿಂದ ಶುಭ ಮುಹೂರ್ತಗಳು ಇರುವುದಿಲ್ಲ. ನಂತರ ತರಕಾರಿ ಬೆಲೆ ಇಳಿಯುವ ನಿರೀಕ್ಷೆಯಲ್ಲಿದ್ದಾರೆ ವ್ಯಾಪಾರಿಗಳು.
ತರಕಾರಿ ದರ: ಕೆಜಿ ಈರುಳ್ಳಿ 100, ಟೊಮ್ಯಾಟೋ 10, ಬಿಟ್ರೋಟ್ 60, ಆಲೂಗಡ್ಡೆ 40, ಸೀಮೆ ಬದನೆ 40, ಮುಳುಗಾಯಿ 30, ಕ್ಯಾರೆಟ್ 80, ಬೆಂಡೆಕಾಯಿ 60, ಮೂಲಂಗಿ 40, ಬೀನ್ಸ್ 80, ಹಸಿ ಮೆಣಸು 40, ಹಿರೇಕಾಯಿ 60, ಗೆಡ್ಡೆಕೋಸು 40, ಹೂಕೋಸು 40, ಕ್ಯಾಪ್ಸಿಕ್‌ಂ 60, ಬಣ್ಣಸೌತೆ 20, ಬೆಳ್ಳುಳ್ಳಿ 200, ಎಲೆಕೋಸು 20, ತೊಂಡೆಕಾಯಿ 60, ಹಾಗಲಕಾಯಿ 60, ನುಗ್ಗೆ ಕಾಯಿ 400, ಕಾಳುಬೀನ್ಸ್ 100, ಅವರೆಕಾಯಿ 40, ಕುಂಬಳಕಾಯಿ 20, ಹಸಿ ಅರಿಷಿನ 100, ಬಾಳೆಕಾಯಿ 10 (1 ಪೀಸ್), ಬಟಾಣಿ 80, ನೆಲ್ಲಿಕಾಯಿ 60, ಸಿಹಿಗೆಣಸು 40, ಸುವರ್ಣಗೆಡ್ಡೆ 40 ರೂ. ಇದೆ.
-ಶರತ್ ಭದ್ರಾವತಿ