Advertisement

ಅಂಗಳದಲ್ಲೇ ತರಕಾರಿ ಬೆಳೆಯುವ ತಾತ

01:00 AM Mar 14, 2019 | Team Udayavani |

ಕಾರ್ಕಳ: ಕೃಷಿ ಭೂಮಿಯಿದ್ದರೂ ಕನಿಷ್ಟಪಕ್ಷ ಕುಟುಂಬಕ್ಕೆ ಬೇಕಾಗುವಷ್ಟು ತರಕಾರಿ ಬೆಳೆಯಲು ಹಿಂಜರಿಯುವ ಇಂದಿನ ಕಾಲದಲ್ಲಿ ಕಾಬೆಟ್ಟು ಪರಿಸರದ ತಾತ ಒಬ್ಬರು ಅಂಗಳದಲ್ಲೇ ತಮಗೆ ಬೇಕಾದ ತರಕಾರಿಯನ್ನು ಸಾವಯವವಾಗಿ ಬೆಳೆದು ಅನೇಕರಿಗೆ ಮಾದರಿಯಾಗಿದ್ದಾರೆ.

Advertisement

ಅವರೇ ರಘುನಾಥ ಶೆಣೈ. ಅಂಚೆ ಇಲಾಖೆಯ ನಿವೃತ್ತ ಅಧಿಕಾರಿಯಾಗಿರುವ ಇವರು ತಮ್ಮ ಮನೆ ಅಂಗಳದಲ್ಲೇ ತೊಂಡೆ, ಬದನೆ, ಮೆಣಸು ಬೆಳೆಸುತ್ತಾರೆ. ತರಕಾರಿಯನ್ನು ಸಾವಯವ ರೀತಿಯಲ್ಲೇ ಬೆಳೆಯುವ ಶೆಣೈ ಅವರು ತಮ್ಮ ಹತ್ತು ಸೆಂಟ್ಸ್‌ ಜಾಗದಲ್ಲಿ ಹತ್ತಾರು ಬಗೆಯ ಹೂವಿನ ಗಿಡಗಳನ್ನು ಬೆಳೆಸಿ ಖುಷಿ ಕಾಣುತ್ತಾರೆ.

ಹಚ್ಚ ಹಸುರೇ
ಅಂಗಳದಲ್ಲಿ ಹಚ್ಚ ಹಸುರಿನ ತೊಂಡೆ ಬಳ್ಳಿಯ ಚಪ್ಪರ ಆಕರ್ಷಕವಾಗಿದ್ದು, ಪರಿಸರದಲ್ಲಿ ತಂಪು ವಾತಾವರಣ ನಿರ್ಮಿಸಿದೆ. ಬಗೆ ಬಗೆಯ ಹೂವಿನ ಗಿಡಗಳು ಮಾತ್ರವಲ್ಲದೇ ಬಾಳೆ, ಚಿಕ್ಕು, ಸೇರಿದಂತೆ ಹಲವಾರು ಹಣ್ಣಿನ ಗಿಡಗಳನ್ನು ಬೆಳೆಸಿ ಪಕ್ಷಿಗಳಿಗೂ ಆಸರೆಯಾಗಿದ್ದಾರೆ. ಹೀಗಾಗಿ ಸುಂದರ ತಾಣದಲ್ಲಿ ಹಕ್ಕಿಗಳ ಕಲರವ, ಇಂಚರದ ಇಂಪು ಕೇಳಿಬರುತ್ತಿದೆ.

ಯುವಕರ ಲವಲವಿಕೆ
ವಯಸ್ಸಾದಂತೆ ಕೆಲಸದಲ್ಲಿ ಉತ್ಸಾಹ ವಿಲ್ಲ ಎನ್ನುವ ವಿಚಾರಕ್ಕೆ ರಘುನಾಥ ಶೆಣೈ ಅವರು ಅಪವಾದ. 76ರ ವಯಸ್ಸಿನಲ್ಲೂ ಯುವಕರನ್ನು ನಾಚಿಸುವ ಲವಲವಿಕೆ ತಾತನಲ್ಲಿದೆ.  

ಉದಯವಾಣಿ ಓದುಗ
ಓದು ತಾತನ ಹವ್ಯಾಸ. ಉದಯ ವಾಣಿ ಪತ್ರಿಕೆಯನ್ನು ಕಳೆದ 50 ವರ್ಷಗಳಿಂದ ಓದುತ್ತ ಬಂದಿದ್ದೇನೆ ಎನ್ನುವ ತಾತ, ರಾಜಕೀಯ, ಸಾಮಾಜಿಕ ವಿಚಾರಗಳ ಕುರಿತು ಅತ್ಯಂತ ವಿಶ್ಲೇಷಿಸುತ್ತಾರೆ. ಬಿಡುವಿನ ವೇಳೆ ತನ್ನ ಆಕ್ಟಿವಾದಲ್ಲಿ ಗ್ರಂಥಾಲಯಕ್ಕೆ ಹೋಗಿ ಕಾದಂಬರಿಗಳನ್ನು ತಂದು ಓದುತ್ತಿರುವುದೇ ಪುಸ್ತಕದ ಮೇಲೆ ತಾತನ ಪ್ರೀತಿಯನ್ನು ತೋರಿಸುತ್ತದೆ.

Advertisement

ಸ್ವತ್ಛತೆಗೆ ಆದ್ಯತೆ
ತಾತ ಮನೆ ಪರಿಸರವನ್ನು ದಿನಾಲೂ ಗುಡಿಸಿ ಸ್ವತ್ಛವಾಗಿಟ್ಟುಕೊಳ್ಳುತ್ತಾರೆ. ಒಂದೇ ಒಂದು ಪ್ಲಾಸ್ಟಿಕ್‌ ಆ ಪರಿಸರದಲ್ಲಿ  ಕಾಣಲು ಸಾಧ್ಯವಿಲ್ಲ. ಮನೆ ಪರಿಸರ ಮಾತ್ರವಲ್ಲ  ಸುತ್ತ ಮುತ್ತು ಸ್ವತ್ಛಗೊಳಿಸುತ್ತಿದ್ದು, ಸ್ಥಳೀಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಮನಸ್ಸಿಗೆ ನೆಮ್ಮದಿ 
ತರಕಾರಿ, ಹೂವು-ಹಣ್ಣಿನ ಗಿಡಗಳನ್ನು  ಬೆಳೆಯುವುದರಿಂದ ಒಂದು ರೀತಿಯ ಆನಂದ  ಸಿಗುವುದು. ಮನಸ್ಸಿಗೆ ನೆಮ್ಮದಿ ತರುವುದು. ಪತ್ನಿ ನಿಧನ ಹೊಂದಿದ ಬಳಿಕ, ಕೆಲಸ ಓದಿನಲ್ಲಿ ತಲ್ಲೀನನಾಗಿ ತೃಪ್ತಿ ಕಾಣುತ್ತಿದ್ದೇನೆ.
-ರಘುನಾಥ ಶೆಣೈ

Advertisement

Udayavani is now on Telegram. Click here to join our channel and stay updated with the latest news.

Next